ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಡಳಿತದಲ್ಲಿ ಪಾರದರ್ಶಕತೆ ಕೊರತೆ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ದೇಶಪಾಂಡೆ ಬೇಸರ

Published 28 ಜೂನ್ 2024, 12:49 IST
Last Updated 28 ಜೂನ್ 2024, 12:49 IST
ಅಕ್ಷರ ಗಾತ್ರ

ಬೆಳಗಾವಿ: ‘ಸರ್ಕಾರಿ ಯೋಜನೆಗಳ ಪ್ರಯೋಜನ ದೊರೆಯಬೇಕಾದರೆ ಆಡಳಿತದಲ್ಲಿ ಸುಧಾರಣೆ ಅತ್ಯಗತ್ಯ. ಇತ್ತೀಚೆಗೆ ಆಡಳಿತದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ‌ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ. ಇದನ್ನು ನಿವಾರಿಸಬೇಕಿದೆ’ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.

ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಾಗರಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಸುಧಾರಣೆ ಪ್ರಕ್ರಿಯೆಯು ನಿರಂತರ ಆಗಿರಬೇಕು. ತಾಂತ್ರಿಕ ಯುಗದಲ್ಲಿ ಪ್ರತಿಕ್ಷಣವೂ ಅಮೂಲ್ಯವಾಗಿದ್ದು, ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ನ್ಯಾಯಬದ್ಧವಾದ ಆಡಳಿತ ದೊರಕಬೇಕು’ ಎಂದರು.

‘ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಸಲಹೆಗಳನ್ನು ಆಧರಿಸಿ ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ತರಲು ಅಗತ್ಯ ಸುಧಾರಣಾ ಕ್ರಮಗಳನ್ನು ತರಲು ಆಯೋಗವು ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.

ಗ್ರಾಮಸೌಧಗಳು ಆಡಳಿತ ಕೇಂದ್ರವಾಗಲಿ: ‘ಗ್ರಾಮ‌ ಪಂಚಾಯಿತಿ ಕಟ್ಟಡಗಳನ್ನೇ ಗ್ರಾಮಸೌಧ ಎಂದು ಪರಿವರ್ತಿಸಿ ಪಂಚಾಯತಿ ವ್ಯಾಪ್ತಿಯ 3–4 ಗ್ರಾಮಗಳ ಜನರಿಗೆ ಪ್ರತಿಯೊಂದು ಸೇವೆಯು ಅಲ್ಲೇ ದೊರಕುವಂತೆ ಕ್ರಮ ಕೈಗೊಳ್ಳಬೇಕಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.

‘ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ಗ್ರಾಮಸೌಧದಲ್ಲೇ ಇದ್ದು ಕೆಲಸ ಮಾಡಿಕೊಡಲು ಅನುಕೂಲ ಕಲ್ಪಿಸಬಹುದು. ಗ್ರಾಮ ಲೆಕ್ಕಾಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿ ಹಂತದವರೆಗೆ ಸಿಯುಜಿ ಮೊಬೈಲ್‌ ಸಂಖ್ಯೆ‌ ನೀಡುವುದರಿಂದ ನಾಗರಿಕರಿಗೆ ಅನುಕೂಲವಾಗಲಿದೆ’ ಎಂದರು.

‘ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳು ಹೊಸದಾಗಿ ರಚಿಸಲಾಗಿದೆ. ‘ರೆಕಾರ್ಡ್ ರೂಮ್’ ಇಲ್ಲದಿರುವುದರಿಂದ ಕಂದಾಯ ಇಲಾಖೆಯ ಪ್ರಮುಖ ದಾಖಲೆಗಳ ಸಂರಕ್ಷಣೆಗೆ ತೊಂದರೆಯಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಪ್ರತ್ಯೇಕ ವಿಚಕ್ಷಣಾ ವ್ಯವಸ್ಥೆ ಅಗತ್ಯ: ‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಅಕ್ರಮಗಳ ಪರಿಶೀಲನೆಗೆ ನರೇಗಾ ಓಂಬುಡ್ಸಮನ್ ಮಾದರಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪ್ರತ್ಯೇಕ ವಿಚಕ್ಷಣಾ ವ್ಯವಸ್ಥೆ ಸ್ಥಾಪಿಸುವ ಅಗತ್ಯವಿದೆ’ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸಲಹೆ ನೀಡಿದರು.

‘ಗಾಯರಾಣಾ ಜಮೀನಿನಲ್ಲಿರುವ ಮನೆಗಳ ಮಾಲೀಕತ್ವದ ಸಮಸ್ಯೆಯನ್ನು ಒಂದು‌ ಬಾರಿ ಪರಿಹರಿಸುವ ಮೂಲಕ ಗ್ರಾಮ ಪಂಚಾಯತಿ ಮಟ್ಟದ ಅನೇಕ ಗೊಂದಲಗಳಿಗೆ ತೆರೆ ಎಳೆಯಬಹುದು’ ಎಂದರು.

‘ಹಾರನಹಳ್ಳಿ ರಾಮಸ್ವಾಮಿ ಆಯೋಗ ನೀಡಿರುವ ವರದಿಯಲ್ಲಿರುವ 256 ಅಂಶಗಳನ್ನು ಜಾರಿಗೆ ತರಲಾಗಿದೆ.

ಅದೇ ರೀತಿ ನಿವೃತ್ತ ಅಧಿಕಾರಿ ವಿಜಯಭಾಸ್ಕರ್ ಅವರ ಅಧ್ಯಕ್ಷತೆಯ ಸುಧಾರಣಾ ಆಯೋಗವು 7 ವರದಿ ನೀಡಿದ್ದು, ಅವುಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಸುಧಾರಣಾ ಆಯೋಗದ ಸಲಹೆಗಾರರಾದ ಪ್ರಸನ್ನ ಕುಮಾರ್ ಅವರು ತಿಳಿಸಿದರು.

ಶಾಸಕ ಬಾಬಾಸಾಹೇಬ್ ಪಾಟೀಲ, ಮೇಯರ್ ಸವಿತಾ ಕಾಂಬಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡರು.

‘ಇಬ್ಬರು ಎಡಿಸಿ ನೇಮಿಸಿ’

‘ಪೊಲೀಸ್ ಇಲಾಖೆಯಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಲಾಗಿದೆ. ಅದೇ ಮಾದರಿಯಲ್ಲಿ ಬೆಳಗಾವಿಯಂಥ ದೊಡ್ಡ ಜಿಲ್ಲೆಗೆ ಇಬ್ಬರು ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ನೇಮಿಸುವುದರಿಂದ ಆಡಳಿತದಲ್ಲಿ ಇನ್ನಷ್ಟು ಸುಧಾರಣೆ‌ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.

‘ಎಲ್ಲ ಇಲಾಖೆಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾವತಿಗೆ ವ್ಯವಸ್ಥೆ‌ ಕಲ್ಪಿಸುವುದರಿಂದ ಸಮಯ ಉಳಿತಾಯವಾಗಲಿದೆ. ಸಿಂಧುತ್ವ ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತಿಯೊಂದು ಅರ್ಜಿಯು ಜಿಲ್ಲಾಧಿಕಾರಿ ಲಾಗಿನ್‌ನಲ್ಲಿ ಪೆಂಡಿಂಗ್ ತೋರಿಸುತ್ತದೆ. ಆದ್ದರಿಂದ ಆಯಾ ಹಂತದ ಅಧಿಕಾರಿಗಳ ಬಳಿ‌ ಪೆಂಡಿಂಗ್ ಇರುವ ಬಗ್ಗೆ ತೋರಿಸುವಂತಾಗಬೇಕು’ ಎಂದರು.

‘ಪೊಲೀಸ್‌ ಸಿಬ್ಬಂದಿ ಕೊರತೆ‌ ನೀಗಿಸಿ’

‘ಜಿಲ್ಲೆಯಲ್ಲಿ ನಾಗರಿಕರು ಮತ್ತು ಪೊಲೀಸರ ನಡುವಿನ ಅನುಪಾತವು ತೀರ ಕಡಿಮೆಯಾಗಿದೆ. ಪ್ರತಿ ಲಕ್ಷ ಜನರಿಗೆ ಕೇವಲ 52 ಜನ ಪೊಲೀಸರಿದ್ದಾರೆ. ಇದರಿಂದ ನಿರ್ವಹಣೆ ಕಷ್ಟದಾಯಕವಾಗಿದೆ. ಆದ್ದರಿಂದ ಕನಿಷ್ಠ ನಿಗದಿಪಡಿಸಿದ ಅನುಪಾತದಂತೆ ಸಿಬ್ಬಂದಿ ನೇಮಿಸುವುದು ಸೂಕ್ತ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸಲಹೆ ನೀಡಿದರು.

‘ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗುವಂತೆ ವಸತಿಗೃಹ ಸೌಲಭ್ಯವನ್ನು ಹೆಚ್ಚಿಸಬೇಕು; ವಸತಿಗೃಹ ದುರಸ್ತಿಗೆ ಪ್ರತಿವರ್ಷ ಅನುದಾನ ಬಿಡುಗಡೆ ಮಾಡಬೇಕು; ವಿತ್ತೀಯ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT