ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲೆಕ್ಟ್ರಿಕ್‌ ಬೈಕ್‌ಗಳಿಗೆ ಕಡಿವಾಣ ಹಾಕಲು ತಂಡ

ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ಮೇಲೆ ತಂಡ ರಚಿಸಿದ ಅಧಿಕಾರಿಗಳು
Published 4 ಜುಲೈ 2024, 21:23 IST
Last Updated 4 ಜುಲೈ 2024, 21:23 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲೆಕ್ಟ್ರಿಕ್‌ ಬೈಕ್‌ಗಳಿಗೆ ಕಡಿವಾಣ ಹಾಕುವುದೂ ಸೇರಿದಂತೆ ಹಿಂದೆ ನೀಡಿದ್ದ ಭರವಸೆ ಈಡೇರಿಸಿಲ್ಲ. ಕಾನೂನು ಮಾರ್ಪಾಡು ಮಾಡಿದ್ದರೂ ಅನುಷ್ಠಾನ ಮಾಡಿಲ್ಲ’ ಎಂದು ಆರೋಪಿಸಿ ಸಾರಿಗೆ ಸಂಘಟನೆಗಳ ಒಕ್ಕೂಟ ಗುರುವಾರ ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದೆ. ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಬಾಡಿಗೆ ಸೇವೆ ಒದಗಿಸುತ್ತಿರುವ ಎಲೆಕ್ಟ್ರಿಕ್‌ ಬೈಕ್‌ಗಳ ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ತಂಡಗಳನ್ನು ರಚಿಸಿದೆ.

ಸಾವಿರಾರು ಆಟೊ, ಕ್ಯಾಬ್‌ಗಳನ್ನು ಚಾಲಕರು ಶಾಂತಿನಗರದ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕಬ್ಬಿಣದ ತಡೆಗಳನ್ನು ಮುರಿದು ಕಚೇರಿ ಒಳಗೆ ನುಗ್ಗಿದರು. ಪೋಲಿಸರು ತಡೆಯಲು ಪ್ರಯತ್ನಿಸಿದರೂ ಅವರನ್ನು ತಳ್ಳಿ ಪ್ರತಿಭಟನಕಾರರು ಮುಂದಕ್ಕೆ ಹೋದರು. 

ರಾಜ್ಯ ಸರ್ಕಾರ ಫೆಬ್ರುವರಿಯಲ್ಲಿಯೇ ‘ಒಂದು ನಗರ ಒಂದು ದರ’ ಆದೇಶವನ್ನು ಹೊರಡಿಸಿತ್ತು. ಓಲಾ, ಉಬರ್‌ ಸೇರಿದಂತೆ ಅಗ್ರಿಗೇಟರ್ ಕಂಪನಿಗಳು ಆದೇಶವನ್ನು ಪಾಲನೆ ಮಾಡುತ್ತಿಲ್ಲ. ಪ್ರಯಾಣಿಕರಿಂದ ಅಧಿಕ ದರ ಪಡೆಯುತ್ತಿವೆ. ಆರ್​ಟಿಒ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಎಲೆಕ್ಟ್ರಿಕ್‌ ಬೈಕ್‌ಗಳಲ್ಲಿ ಬಾಡಿಗೆ ಸೇವೆ ಒದಗಿಸುವುದನ್ನು ನಿಷೇಧಿಸಿದ್ದರೂ ಅವು ಪ್ರಯಾಣಿಕರನ್ನು ಕರೆದೊಯ್ಯವುದನ್ನು ನಿಲ್ಲಿಸಿಲ್ಲ. ಬಾಡಿಗೆ ವಾಹನಗಳನ್ನು ಇಟ್ಟುಕೊಂಡು ನಿಯತ್ತಾಗಿ ದುಡಿಯವವರಿಗೆ ನಷ್ಟವಾಗಿದೆ’ ಎಂದು ದೂರಿದರು.

ಕಾನೂನು ಕ್ರಮ: ನಗರದ ಹತ್ತು ಪ್ರಾದೇಶಿಕ ಸಾರಿಗೆ ಕಚೇರಿಗಳ ವ್ಯಾಪ್ತಿಯಲ್ಲಿ ವಿಶೇಷ ತಂಡಗಳನ್ನು ರಚಿಸಿ, ಎಲೆಕ್ಟ್ರಿಕ್‌ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸಹಾಯಕ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಸ್ಕೂಲ್ ಕ್ಯಾಬ್ ಪರ್ಮಿಟ್‌, ಅಗ್ರಿಗೇಟರ್ ಕಂಪನಿಗಳ ಕಮಿಷನ್ ದಂಧೆಗೆ ಕಡಿವಾಣ, ಆನ್‌ಲೈನ್ ಸ್ಪೆಷಲ್ ಪರ್ಮಿಟ್ ವ್ಯವಸ್ಥೆ, ‘ಒಂದು ನಗರ ಒಂದು ದರ’ ಮುಂತಾದ ಬೇಡಿಕೆಯನ್ನು ಈಡೇರಿಸಬೇಕು ಎಂಬುದು ಸೇರಿದಂತೆ ಒಕ್ಕೂಟದ ಮುಖಂಡರು 30 ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ದರು.

‘ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ಕಾನೂನಿನಲ್ಲಿ ಮಾರ್ಪಾಡು ಮಾಡಿರುವುದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

ಒಕ್ಕೂಟದಲ್ಲಿರುವ 32 ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

11 ತಂಡ ರಚನೆ

ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿಗಳು ಸೇರಿದಂತೆ ಅನಧಿಕೃತ ಟ್ಯಾಕ್ಸಿಗಳ ವಿರುದ್ಧ ಕ್ರಮ ವಹಿಸಲು 11 ತಂಡಗಳನ್ನು ರಚಿಸಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್‌ ಆದೇಶ ಹೊರಡಿಸಿದ್ದಾರೆ. ಕೇಂದ್ರ ಪಶ್ಚಿಮ ಪೂರ್ವ ಉತ್ತರ ದಕ್ಷಿಣ ಪ್ರಾದೇಶಿಕ ಕಚೇರಿಗಳು ಜ್ಞಾನಭಾರತಿ ಕೆ.ಆರ್‌.ಪುರ ಎಲೆಕ್ಟ್ರಾನಿಕ್‌ ಸಿಟಿ ಯಲಹಂಕ ಚಂದಾಪುರ ದೇವನಹಳ್ಳಿ ಪ್ರಾದೇಶಿಕ ಕಚೇರಿಗಳ ವ್ಯಾಪ್ತಿಯಲ್ಲಿ ಈ ತಂಡಗಳು ಶುಕ್ರವಾರದಿಂದಲೇ ಕಾರ್ಯಾಚರಣೆ ನಡೆಸಲಿವೆ.

ಹೋರಾಟ ನಿರಂತರ

‘ನಗರದಲ್ಲಿ ಸುಮಾರು 30 ಸಾವಿರ ಎಲೆಕ್ಟ್ರಿಕ್‌ ಬೈಕ್ ಟ್ಯಾಕ್ಸಿಗಳು ಅನಧಿಕೃತವಾಗಿ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಇವೂ ಸೇರಿದಂತೆ ಎಲ್ಲ ಅನಧಿಕೃತ ವಾಹನಗಳಿಗೆ ಸಂಪೂರ್ಣ ನಿಯಂತ್ರಣ ಹಾಕುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ’ ಎಂದು ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ ತಿಳಿಸಿದ್ದಾರೆ. ಸಾರಿಗೆ ಸಚಿವರು ಅಧಿಕಾರಿಗಳು ಒಕ್ಕೂಟಕ್ಕೆ ನೀಡಿದ ಭರವಸೆಯನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT