ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ವಿಭಜನೆ: ನೀವೇನನ್ನುತ್ತೀರಿ?

Published 26 ಜೂನ್ 2024, 7:21 IST
Last Updated 26 ಜೂನ್ 2024, 7:21 IST
ಅಕ್ಷರ ಗಾತ್ರ

‘ವಿಭಜನೆ ಬಿಟ್ಟು ಚುನಾವಣೆ ನಡೆಸಿ’

ಬಿಬಿಎಂಪಿ ಚುನಾವಣೆ ನಡೆಸಿ ಎಂದರೆ ಬೆಂಗಳೂರನ್ನು ಭಾಗ ಮಾಡುತ್ತೇವೆ ಎಂದು ಹೊರಟಿರುವುದು ಅತ್ಯಂತ ಶೋಚನೀಯ ಸಂಗತಿ. ದಯಮಾಡಿ ಇಂತಹ ವಿಚಾರಗಳನ್ನು ತೆಗೆದುಹಾಕಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಒಂದೇ ಎಂದು ತಿಳಿದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಇನ್ನಾದರೂ ಮುಂದಾಗಬೇಕು.

– ಎಸ್.ಟಿ. ದಾಸಪ್ಪ, ರಾಮಕೃಷ್ಣ ಹೆಗಡೆನಗರ

‘ಬಿಬಿಎಂಪಿ ವಿಭಜನೆ ಖಂಡನೀಯ’

ಬಿಬಿಎಂಪಿಯಲ್ಲಿ ಈಗಿರುವ ವಾರ್ಡ್‌ಗಳಲ್ಲಿ ಸರಿಯಾಗಿ ಕೆಲಸಗಳು ಆಗುತ್ತಿಲ್ಲ. ಕುಂದು ಕೊರತೆಗಳ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ದೂರು ನೀಡಿದರೂ ಕಣ್ಣು ಮುಚ್ಚಿಕೊಂಡು ಹೋಗುತ್ತಾರೆ. ಏನೇ ಕೆಲಸ ಮಾಡಲು ಕೇಳಿದರೂ, ಅಧಿಕಾರಿಗಳು ಸರ್ಕಾರದಲ್ಲಿ ಹಣ ಇಲ್ಲ ಎನ್ನುತ್ತಾರೆ. ಇನ್ನು ವಿಭಜನೆಗೆ ಒಂದಷ್ಟು ಹಣ ವೆಚ್ಚವಾಗಲಿದೆ. ವಿಭಜನೆ ಖಂಡನೀಯ.

– ವೈ. ಮುನಿಯಪ್ಪ, ಕೂಡ್ಲು

‘ಬೆಂಗಳೂರಿಗೆ ವಿಭಜನೆಯ ಅವಶ್ಯ ಇದೆ’

ಕಾಂಗ್ರೆಸ್‌ನ ಚಿತ್ತ ಬಿಬಿಎಂಪಿ ವಿಭಜನೆಯತ್ತ. ಇದು ಉತ್ತಮ ನಿರ್ಧಾರವಾಗಬಹುದು. ಸಾಗರದಂತ ಬೆಂಗಳೂರಿಗೆ ವಿಭಜನೆಯ ಅವಶ್ಯ ಇದೆ. ಅಧಿಕಾರಿಗಳಿಗೆ ಕೆಲಸದ ಹೊರೆ ಕಡಿಮೆ ಆಗಲಿದೆ ಮತ್ತು ನಿಗದಿತ ಸಮಯದಲ್ಲಿ ಕೆಲಸಗಳು ಅಂದುಕೊಂಡಂತೆ ಮಾಡಬಹುದು. ಅಧಿಕಾರಿಗಳು ಒಳ್ಳೆಯ ಆಡಳಿತ ಮಾಡಿದರೆ ಒಂದು ವಾರ್ಡ್ ಇನ್ನೊಂದು ವಾರ್ಡ್‌ಗೆ ಮಾದರಿ ಆಗಬಹುದು. ಆದರೆ, ವಿಭಜನೆಯ ಹಿಂದಿರುವ ಬುದ್ಧಿವಂತ ರಾಜಕಾರಣಿಯ ‘ರಾಜಕೀಯ ಯೋಚನೆ’ ಅರ್ಥವಾಗುವುದು ವಿಭಜನೆ ಆದ ನಂತರವೇ.

– ಉದಯ್‌ ಬಿ ಸಿ, ರಾಜಾಜಿನಗರ

‘ವಿಭಜನೆ ಮಾರಕವಾಗದಿರಲಿ’

ಇಂದಿನ ಡಿಜಿಟಲ್ ಯುಗದಲ್ಲಿ ಆಡಳಿತಾತ್ಮಕ ಕಾರ್ಯ ಭಾರವೆಂದಿಗೂ ಬಿಬಿಎಂಪಿಗೆ ಹೊರೆಯಾಗಲಾರದು. ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಉಸ್ತುವಾರಿಯಲ್ಲಿ ಸಕಾಲಕ್ಕೆ ಚುನಾವಣಾ ಪ್ರಕ್ರಿಯೆಗಳು ನಡೆಯಬೇಕು. ತನ್ನ ವ್ಯಾಪ್ತಿಯ ನೇಮಕಾತಿಗಳಿಗೆ ಚಾಲನೆ ನೀಡಿ ತನ್ನದೇ ಆದ ಅಸ್ತಿತ್ವ, ಅಸ್ಮಿತೆ ಹೊಂದಿರುವ ಬೆಂಗಳೂರು ಜನತೆಗೆ ಮೂಲಸೌಕರ್ಯ ನೀಡಬೇಕು. ತ್ಯಾಜ್ಯ ವಿಲೇವಾರಿಯಂತಹ ಕೆಲವು ಸೇವೆಗಳಲ್ಲಿ ವ್ಯತ್ಯಯ ತೋರಿದೆಯೇ ಹೊರತು ಸಂಪೂರ್ಣ ಸೇವಾ ರಹಿತವಾಗಿಲ್ಲ. ಸುಂದರ, ಸಮಗ್ರ ಬೆಂಗಳೂರು ಕಲ್ಪನೆಗೆ ವಿಭಜನೆ ಮಾರಕವಾಗದಿರಲಿ.

– ಬಿ. ಎಂ. ಪ್ರಮೀಳ, ಕಲ್ಯಾಣ ನಗರ

‘ಪಾಲಿಕೆ ಸದಸ್ಯರಿಂದ ಉತ್ತಮ ಆಡಳಿತ’

ರಾಜಕೀಯ ದುರುದ್ದೇಶದಿಂದ ಬಿಬಿಎಂಪಿಯನ್ನು ಆಗಾಗ ವಿಭಜಿಸುವ ಕೂಗು ಕೇಳಿಬರುತ್ತಿದೆ. ಬೆಂಗಳೂರನ್ನು ಒಡೆದು ಮೂರು–ನಾಲ್ಕು ಭಾಗ ಮಾಡುವುದರಿಂದ ಬೆಂಗಳೂರು ಅಭಿವೃದ್ಧಿ ಆಗುವುದಿಲ್ಲ. ಯಾವುದೇ ಕಾರಣಕ್ಕೂ ಬೆಂಗಳೂರನ್ನು ತುಂಡುತುಂಡಾಗಿ ವಿಭಜನೆ ಮಾಡುವುದು ಸರಿಯಲ್ಲ. ಮೊದಲು ಬಿಬಿಎಂಪಿಗೆ ಚುನಾವಣೆ ನಡೆಸಿ. ಚುನಾಯಿತ ಪಾಲಿಕೆ ಸದಸ್ಯರ ಉತ್ತಮ ಆಡಳಿತದಿಂದ ಬೆಂಗಳೂರು ಅಭಿವೃದ್ಧಿ ಸಾಧ್ಯ.

– ಎಂ.ಚಂದ್ರಶೇಖರ್, ಹನುಮಂತನಗರ

‘ಬೆಂಗಳೂರಿನಲ್ಲಿ ಕನ್ನಡಿಗರು ಉಳಿಯಲಿ’

ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸಿ, 400 ವಾರ್ಡ್‌ ಗಳನ್ನಾಗಿ ಮಾಡಿದರೆ ಇದು ಪುರಸಭೆ, ಗ್ರಾಮ ಪಂಚಾಯಿತಿ ಯಂತಾಗುತ್ತದೆ. ಹೆಚ್ಚಿನ ಆದಾಯವಿರುವ ಪಾಲಿಕೆ ಅಭಿವೃದ್ದಿ ಯಾದರೆ ಇನ್ನೊಂದು ಆದಾಯದಲ್ಲಿ ಕಡಿಮೆ ಆಗಿ ಕುಸಿಯುತ್ತದೆ‌. ಆಗ ಮೇಲು, ಕೀಳು‌ ಎಂಬ ತಾರತಮ್ಯ ಉದ್ಬವಿಸುವ ಸಂಭವವೇ ಹೆಚ್ಚು. ದೆಹಲಿಯಲ್ಲಿ ಪಾಲಿಕೆ ವಿಭಜನೆ ಹೀನಾಯವಾಗಿ ವಿಫಲವಾಗಿದ್ದು ಇದಕ್ಕೊಂದು ಜ್ವಲಂತ ನಿದರ್ಶನ. ಇನ್ನು ಐದು ಪಾಲಿಕೆಗಳಾದರೆ ಅಲ್ಲಿ ಭಾಷಾವಾರು ಸಂಘರ್ಷಗಳಾಗುವ ಆತಂಕವೇ ಹೆಚ್ಚು. ಈ ವಿಭಜನೆ ಮಾರಕವಾಗುವ ಬದಲು ಈಗಿರುವ ವ್ಯವಸ್ಥೆಯೇ ಮುಂದುವರಿಯಲಿ. ಬೆಂಗಳೂರಿನಲ್ಲಿ ಕನ್ನಡಿಗರು ಉಳಿಯಲಿ.

– ವೈ.ಬಿ.ಎಚ್. ಜಯದೇವ್, ಟಿ. ದಾಸರಹಳ್ಳಿ

‘ವಿಭಜನೆಗಿಂತ ಅಭಿವೃದ್ಧಿ ಯೋಜನೆ ಬೇಕು’

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನ ಜೀವನಾಡಿಯಾಗಿದ್ದು, ಅಭಿವೃದ್ಧಿಯಲ್ಲಿ ಮುಂದೆ ಸಾಗುವುದು ಅಷ್ಟೇ ಮುಖ್ಯವಾಗಿದೆ. ಅದರಲ್ಲೂ ನಗರ ಅಭಿವೃದ್ಧಿಗಾಗಿ ಆಡಳಿತ ನಿಷ್ಪಕ್ಷಪಾತ ನಿಷ್ಠೆ, ಭ್ರಷ್ಟಾಚಾರ ಮುಕ್ತವಾಗಿ ಕಾರ್ಯನಿರ್ವಹಿಸಿದರೆ ಉತ್ತಮವಾದ ಅಭಿವೃದ್ಧಿ ಮಾಡಬಹುದು. ಜನರಿಗೆ ಮತ್ತು ಅದರಲ್ಲೂ ಬಡವರಿಗೆ ಹೆಚ್ಚಿನ ಆದ್ಯತೆಯನ್ನು ಮೀಸಲಿಟ್ಟು ಅಭಿವೃದ್ಧಿಯಲ್ಲಿ ಉತ್ಕೃಷ್ಟತೆಯನ್ನು ಕಾಣುವುದು ಸಾಧ್ಯ. ಬಿಬಿಎಂಪಿಯಲ್ಲಿ ವಿಭಜನೆ ಬದಲು ಅಭಿವೃದ್ಧಿಗಾಗಿ ಯೋಜನೆ ಬೇಕಿದೆ.

– ಸಿದ್ದೇಶ್, ಕೋರಮಂಗಲ

‘ಚುನಾವಣೆ ನಡೆಸದಿರುವುದು ನಾಚಿಕೆಗೇಡು’

ಆಡಳಿತಾರೂಢ ಸರ್ಕಾರಗಳು ತಮ್ಮ ಪ್ರಭುತ್ವವೇ ಇರಲಿ ಎನ್ನುವ ಉದ್ದೇಶದಿಂದ ಬಿಬಿಎಂಪಿಗೆ ಚುನಾವಣೆ ನಡೆಸದಿರುವುದು ನಾಚಿಕೆಗೇಡು. 80 ವಾರ್ಡ್‌ಗಳ 5 ವಿಭಾಗಗಳಾಗಿ ವಿಭಜಿಸುವ ಪ್ರಸ್ತಾವನೆ ಇಟ್ಟಿರುವುದೂ ಈಗಿನ ಸರ್ಕಾರಕ್ಕೆ ಸದ್ಯದಲ್ಲಿ ಚುನಾವಣೆ ನಡೆಸುವ ಇಚ್ಛಾಶಕ್ತಿ ಇಲ್ಲವೆಂಬುದನ್ನು ಸ್ಪಷ್ಟಪಡಿಸುತ್ತದೆ. 400 ಕಾರ್ಪೊರೇಟರ್‌ ಗಳಾದರೆ ಮಂತ್ರಿಗಳಂತೆ, ಶಾಸಕರಂತೆ ಬಹುಮಟ್ಟಿನ ಬಿಬಿಎಂಪಿ ಸದಸ್ಯರೂ ಜನಸೇವೆಯಲ್ಲಿ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಆಸಕ್ತಿಯಿಲ್ಲದ ಬಿಳಿಯಾನೆ ಗಳಾಗುತ್ತಾರೆ.

– ಬೈರಮಂಗಲ ರಾಮೇಗೌಡ, ಪುಷ್ಪಗಿರಿನಗರ, ಹೊಸಕೆರೆಹಳ್ಳಿ

‘ಭ್ರಷ್ಟಾಚಾರವಿಲ್ಲದ ಆಡಳಿತ ಬೇಕು’

ಆಡಳಿತಕ್ಕೆ ಅನುಕೂಲವಾಗುವಂತೆ ಬಿಬಿಎಂಪಿಯನ್ನು ಐದು ಪಾಲಿಕೆಯನ್ನಾಗಿ ಮಾಡಿಕೊಳ್ಳುವ ಯೋಜನೆ ಸರಿಯಾಗಿದೆ. ಇದರಿಂದ ಬೆಂಗಳೂರು ನಗರ ಮತ್ತು ಸುತ್ತಲೂ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯತಿ ವ್ಯಾಪ್ತಿಗಳು ಹೆಚ್ಚು ಶಕ್ತಿ ಪಡೆಯುತ್ತವೆ. ಅಲ್ಲಿನ ನಾಗರಿಕರ ಮೂಲಸೌಕರ್ಯ ಗಳೂ ವೃದ್ದಿಯಾಗುತ್ತವೆ. ಚಿಕ್ಕ ಚೊಕ್ಕ ಭ್ರಷ್ಟಾಚಾರ ರಹಿತ ಆಡಳಿತ ಮಾಡಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯೇ ಪ್ರಭುತ್ವದ ಭೂಷಣ. ಆದಷ್ಟು ಬೇಗನೆ ಬಿಬಿಎಂಪಿ ಚುನಾವಣೆ ನಡೆಯಲಿ.

–ತಾ.ಸಿ.ತಿಮ್ಮಯ್ಯ, ಮಲ್ಲತ್ತಹಳ್ಳಿ

‘ಅಧಿಕಾರಿಗಳನ್ನು ದಂಡಿಸಬಹುದು’

ವಲಸಿಗರಿಂದ ಬೆಂಗಳೂರು ಬೆಳೆದಿರುವುದರಿಂದ ವಿಭಜನೆ ಮಾಡಲೇಬೇಕಾಗುತ್ತದೆ. ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ಈಗಿನ ಪರಿಸ್ಥಿತಿಯಲ್ಲಿ ಸರಿಯಾದ ಸಂಪರ್ಕ ಇಲ್ಲ. ವಿಭಜನೆಯಾದಲ್ಲಿ ಸಂಬಂಧಪಟ್ಟ ವಾರ್ಡ್‌ನ ಜನಪ್ರತಿನಿಧಿ ಮತ್ತು ಅಧಿಕಾರಿಗಳನ್ನು  ಸ್ಥಳೀಯ ನಿವಾಸಿಗಳು ನೇರವಾಗಿ ದಂಡಿಸಬಹುದು. ಮೂಲ ಸೌಕರ್ಯಗಳು ಮನೆ ಬಾಗಿಲಿಗೆ ಮುಟ್ಟಬೇಕಾದರೆ ಮೂರು ‌ಅಥವಾ ನಾಲ್ಕು ಮೇಯರ್ ಆಗಲೇಬೇಕಾಗುತ್ತದೆ

– ಎಸ್. ಕುಮಾರ್ ಪದ್ಮಶಾಲಿ, ಕಾಟನ್ ಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT