ಬೆಂಗಳೂರು: ‘ಕನ್ನಡ ಕಾವ್ಯದಲ್ಲಿ ಹೊಸ ಪಾತಳಿಯನ್ನೇ ಸೃಷ್ಟಿಸಿದವರು ಗಂಗಾಧರ ವಿ. ಚಿತ್ತಾಲರು. ಬದುಕಿನ ಘಟನೆಗಳಿಗೆ, ಮೂಲಭೂತ ಪ್ರಶ್ನೆಗಳಿಗೆ ಕಾವ್ಯದ ಮೂಲಕ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದವರು ಚಿತ್ತಾಲರು. ಹಾಗಾಗಿ ಇವರ ಕಾವ್ಯದ ಓದು ಎಂದೆಂದಿಗೂ ಪ್ರಸ್ತುತ’ ಎಂದು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಶನಿವಾರ ನಡೆದ ಗಂಗಾಧರ ವಿ. ಚಿತ್ತಾಲರ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ಅವರ ಕಾವ್ಯ–ಕೃತಿಗಳ ಕುರಿತು ಚರ್ಚಿಸಿದರು.

ಆದಿ ಮತ್ತು ಅಂತ್ಯದ ಬಗ್ಗೆ ಅರಿವಿಲ್ಲದ ಮನುಷ್ಯನ ಮಧ್ಯಂತರದಲ್ಲಿ ನಡೆಯುವ ಘಟನೆಗಳ ಬಗ್ಗೆಯೇ ಚಿತ್ತಾಲರು ಎತ್ತಿರುವ ಪ್ರಶ್ನೆಗಳು ಬಹಳ ಸಹಜವಾಗಿವೆ. ಅದು ಸ್ವಾನುಭವದಿಂದ ಕೂಡಿವೆ ಎಂದು ವಿಶ್ಲೇಷಿಸಿದರು.

ಒಂದು ಕಡೆ ಮನುಷ್ಯ ಪ್ರಯತ್ನವೇ ಮುಖ್ಯ ಎಂದು ಪ್ರತಿಪಾದಿಸಿದ ಚಿತ್ತಾಲರು ಎಲ್ಲವನ್ನೂ ಮೀರಿದ ವಿಧಿಯ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಅರ್ಥವಾಗದೇ ಇರುವ, ವಿನಾಕಾರಣವಾಗಿರುವ ನೋವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು. ಸಾಮಾಜಿಕ ಎನಿಸುವ ಪದ್ಯಗಳನ್ನೂ ಅವರು ಬರೆದಿದ್ದಾರೆ. ತಮ್ಮ ಹೆಂಡತಿಯ ಕುರಿತ ಪದ್ಯ, ಆಧುನಿಕ ಬ್ಯುರೋಕ್ರಸಿಯನ್ನು ಬಿಂಬಿಸುವ ‘ಫೈಲುಗಳು’ ಎನ್ನುವ ಪದ್ಯ – ಹೀಗೆ ನಾನಾ ಜೀವಾನುಭವಗಳನ್ನು ಕಾವ್ಯಕ್ಕೆ ಧಾರೆಯೆರೆದರು ಎಂದು ತಿಳಿಸಿದರು.

ಚೆನ್ನಿ ಅವರ ಮಾತಿಗೆ ದನಿಗೂಡಿಸಿದ ಕತೆಗಾರ ಎಸ್. ದಿವಾಕರ್, ‘ಗಂಗಾಧರ ಚಿತ್ತಾಲರ ಕಾವ್ಯದಲ್ಲಿ ಅಪರೂಪಕ್ಕೆ ವಸ್ತುಪ್ರತಿರೂಪವಿತ್ತು. ಅನುಭವಕ್ಕೆ ತೀರಾ ಬದ್ಧರಾಗಿದ್ದರು. ಅನುಭವವೆಂಬ ವಾಸ್ತವವನ್ನು ಇಟ್ಟುಕೊಂಡು ಕಾವ್ಯ ರಚಿಸಿದರು’ ಎಂದು ಹೇಳಿದರು.

ತಮ್ಮ ನೋವನ್ನು ಓದುಗರೂ ಅನುಭವಿಸುವಷ್ಟು ತೀವ್ರವಾಗಿ ಬರೆದರು. ಅವರು ತಮ್ಮ ಕೆಲವು ಕವಿತೆಗಳಲ್ಲಿಯೇ ಬೃಹತ್ ವಿಶ್ವವನ್ನು ತೆರೆದಿಟ್ಟರು. ಅದು ನೋವಿನ ವಿಶ್ವ. ಈ ಬದುಕಿಗೆ ಅರ್ಥವೇನು? ಅದು ಹೇಗೆ ಕೊನೆ ಮುಟ್ಟುತ್ತದೆ. ಮುಟ್ಟಬೇಕೇ? ಎನ್ನುವ ಜಿಜ್ಞಾಸೆಯಲ್ಲಿಯೇ ಪದ್ಯರಚನೆ ಮಾಡಿದರು. ಅವರ ಕಾವ್ಯದ ಜೀವಾಳವೇ ಮನುಷ್ಯನ ಪಾಡು ಮತ್ತು ನೋವು. ಅವುಗಳ ಮೂಲಕವೇ ಜೀವನದರ್ಶನವನ್ನು ಹುಡುಕುತ್ತಿದ್ದರು’ ಎಂದು ಬಣ್ಣಿಸಿದರು.

‘ಚಿತ್ತಾಲ ಕಾವ್ಯ ಭಾಷೆಯ ಬಗ್ಗೆ ಮಾತನಾಡುವುದಾದರೆ ಅದು ಗ್ರಾಂಥಿಕವಾಗಿದೆ. ಕವನದ ಒಟ್ಟು ಆಶಯಕ್ಕೆ ತಕ್ಕಂತೆ ಲಯವೈವಿಧ್ಯ, ಧ್ವನಿ ವೈವಿಧ್ಯಗಳನ್ನು ತಂದಿದ್ದಾರೆ. ಆದರೆ, ಅವರ ಕವಿತೆಗಳು ವ್ಯಂಗ್ಯಕ್ಕೆ ವಿಮುಖವಾಗಿಯೇ ಇವೆ. ವ್ಯಂಗ್ಯದ ಗೈರುಹಾಜರಿಯೇ ಅವರ ಕಾವ್ಯದ ಅನನ್ಯತೆಯನ್ನು ತೆರೆದಿಡುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.