ಬೆಂಗಳೂರು: ನಗರದಾದ್ಯಂತ ನಕಲಿ ವೈದ್ಯರ ಜಾಲ ವಿಸ್ತರಣೆಯಾಗಿದ್ದು, ಆರೋಗ್ಯ ಇಲಾಖೆ ಕಳೆದೊಂದು ವರ್ಷದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 81 ನಕಲಿ ವೈದ್ಯರು ಪತ್ತೆಯಾಗಿದ್ದಾರೆ.

ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ) ಕಾಯ್ದೆಯಡಿ ಆರೋಗ್ಯಾಧಿಕಾರಿಗಳ ತಂಡವು ವಿವಿಧ ಆಸ್ಪತ್ರೆಗಳು, ಕ್ಲಿನಿಕ್ಗಳು ಹಾಗೂ ಪ್ರಯೋಗಾಲಯಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದೆ. ಈ ಪರಿಶೀಲನೆ ವೇಳೆ ವೈದ್ಯಕೀಯ ವೃತ್ತಿ ನಡೆಸಲು ಅಗತ್ಯ ವಿದ್ಯಾರ್ಹತೆ ಇಲ್ಲದಿದ್ದರೂ, ಪರವಾನಗಿ ಹೊಂದಿರದಿದ್ದರೂ ಅನಧಿಕೃತವಾಗಿ ಕ್ಲಿನಿಕ್ಗಳು ಮತ್ತು ಪ್ರಯೋಗಾಲಯಗಳನ್ನು ನಡೆಸುತ್ತಿರುವುದು ಅಧಿಕಾರಿಗಳ ತಂಡದ ಗಮನಕ್ಕೆ ಬಂದಿದೆ. ಅಂತಹವರನ್ನು ನಕಲಿ ವೈದ್ಯರ ಪಟ್ಟಿಗೆ ಸೇರಿಸಿ, ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗಿದೆ.

ಗುರುತಿಸಲಾದ ನಗರದ ಬಹುತೇಕ ನಕಲಿ ವೈದ್ಯರ ಕ್ಲಿನಿಕ್ಗಳಿಗೆ ನೋಟಿಸ್ ನೀಡಿ, ಬಂದ್ ಮಾಡಲಾಗಿದೆ. ಕೆ.ಪಿ. ಅಗ್ರಹಾರ, ದಾಸನಪುರ, ಸುಂಕದಕಟ್ಟೆ, ವಿಲ್ಸನ್ ಗಾರ್ಡನ್, ಹೆಬ್ಬುಗೋಡಿ, ಅನಂತನಗರ, ತಿರುಪಾಳ್ಯ, ಗೊಲ್ಲಹಳ್ಳಿ, ವೀರಸಂದ್ರ, ಯಲಹಂಕ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ಕಾಮಾಕ್ಷಿಪಾಳ್ಯ, ಚಿಕ್ಕಜಾಲ, ದೊಡ್ಡತೊಗುರು, ಕೊಡತಿ, ಹೆಬ್ಬಗೋಡಿ, ಜೆ.ಪಿ. ನಗರ, ಪೀಣ್ಯ 2ನೇ ಹಂತ, ಕೆ.ಆರ್. ಪುರ, ನಾಗವಾರ ಸೇರಿ ವಿವಿಧೆಡೆ ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಹೆಚ್ಚಿನವರು ನಗರದ ಹೊರವಲಯದಲ್ಲಿ ಕ್ಲಿನಿಕ್ಗಳನ್ನು ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.

ಕ್ಲಿನಿಕ್ಗಳು ಬಂದ್: ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಅಧಿಕಾರಿಗಳ ತಂಡವು ಪರಿಶೀಲನೆಯನ್ನು ಚುರುಕುಗೊಳಿಸಿದೆ. ಅರ್ಹತೆ ಹಾಗೂ ಪರವಾನಗಿ ಹೊಂದಿರದ ಕಾರಣ 50ಕ್ಕೂ ಅಧಿಕ ಕ್ಲಿನಿಕ್ಗಳ ವೈದ್ಯರಿಗೆ ನೋಟಿಸ್ ನೀಡಿ, ಅವರು ನಡೆಸುತ್ತಿದ್ದ ಕ್ಲಿನಿಕ್ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. 10ಕ್ಕೂ ಅಧಿಕ ಕ್ಲಿನಿಕ್ಗಳನ್ನು ಶಾಶ್ವತವಾಗಿ ಮುಚ್ಚಿಸಲಾಗಿದೆ.

‘ಅನಧಿಕೃತ ಆಸ್ಪತ್ರೆಗಳು, ಕ್ಲಿನಿಕ್ಗಳು, ಪ್ರಯೋಗಾಲಯಗಳು ಹಾಗೂ ನಕಲಿ ವೈದ್ಯರ ಮೇಲೆ ಕೆಪಿಎಂಇ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ನಕಲಿ ಕ್ಲಿನಿಕ್ಗಳ ಮತ್ತು ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ವಿವಿಧ ಸ್ಕ್ಯಾನಿಂಗ್ ಕೇಂದ್ರಗಳಿಗೂ ದಿಢೀರ್ ಭೇಟಿ ನೀಡಿ, ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ (ಪಿಸಿಪಿಎನ್ಡಿಟಿ) ಅಡಿ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸದ ಕೇಂದ್ರಗಳಿಗೆ ಬೀಗ ಹಾಕಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಹೋಮಿಯೋಪತಿ ವೈದ್ಯರ ಮೇಲೂ ಕ್ರಮ

ಗುರುತಿಸಲಾದ ನಕಲಿ ವೈದ್ಯರ ಪಟ್ಟಿಯಲ್ಲಿ ಅಲೋಪತಿ ವೈದ್ಯರ ಜತೆಗೆ ಹೋಮಿಯೋಪತಿ ಆಯುರ್ವೇದ ನ್ಯಾಚುರೋಪತಿ ಯುನಾನಿ ಹಾಗೂ ಸಿದ್ಧ ವೈದ್ಯರೂ ಸೇರಿದ್ದಾರೆ. ಜಕ್ಕಸಂದ್ರ ವಿಲ್ಸನ್ ಗಾರ್ಡನ್ ವೀರಸಂದ್ರ ಬನ್ನೇರುಘಟ್ಟ ಸೇರಿ ವಿವಿಧೆಡೆ ಹೋಮಿಯೋಪತಿ ಕ್ಲಿನಿಕ್ಗಳನ್ನು ನಡೆಸುತ್ತಿದ್ದ ನಕಲಿ ವೈದ್ಯರನ್ನು ಗುರುತಿಸಿ ಅವರ ಕ್ಲಿನಿಕ್ಗಳನ್ನು ಬಂದ್ ಮಾಡಲಾಗಿದೆ.

‘ನಕಲಿ ವೈದ್ಯರ ಪತ್ತೆಗೆ ಭಾರತೀಯ ವೈದ್ಯಕೀಯ ಸಂಘದಿಂದಲೂ (ಐಎಂಎ) ಉಪಸಮಿತಿಯನ್ನು ರಚಿಸಲಾಗಿದೆ. ಆಯುರ್ವೇದ ಪದ್ಧತಿಯಡಿ ಸೇವೆ ನೀಡುತ್ತಿರುವವರ ಅರ್ಹತೆ ಗುರುತಿಸುವುದು ಕಷ್ಟ. ವೈದ್ಯರ ಬಳಿ ಕೆಲಸ ಮಾಡುವ ಕೆಲವರು ಅರ್ಹ ಪದವಿ ಹೊಂದಿರದಿದ್ದರೂ ಪ್ರತ್ಯೇಕ ಕ್ಲಿನಿಕ್ಗಳನ್ನು ಪ್ರಾರಂಭಿಸುತ್ತಿದ್ದಾರೆ. ಅಂತಹವರು ವೈರಾಣು ಜ್ವರದಂತಹ ಸಾಮಾನ್ಯ ಸಮಸ್ಯೆಗಳಿಗೆ ಮಾತ್ರೆಗಳನ್ನು ನೀಡುತ್ತಿದ್ದಾರೆ. ಕೆಪಿಎಂಇ ಕಾಯ್ದೆಯು ನಕಲಿ ವೈದ್ಯರ ಪತ್ತೆಗೆ ಸಹಕಾರಿಯಾಗಿದೆ’ ಎಂದು ಐಎಂಎ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಎಸ್. ಶ್ರೀನಿವಾಸ್ ತಿಳಿಸಿದರು.

ನಕಲಿ ವೈದ್ಯರ ಜಾಲವನ್ನು ಹತ್ತಿಕ್ಕಲು ನಾವು ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುತ್ತೇವೆ. ಕೆಪಿಎಂಇ ಕಾಯ್ದೆಯಡಿ ನಕಲಿ ವೈದ್ಯರನ್ನು ಗುರುತಿಸಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು.
ಡಾ.ಎಸ್. ಶ್ರೀನಿವಾಸ್, ಐಎಂಎ ಕರ್ನಾಟಕ ಶಾಖೆಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.