ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಪಾಲಿಶ್‌ ನೆಪದಲ್ಲಿ ಚಿನ್ನ ಕಳವು: ಅಕ್ಕಸಾಲಿಗನ ಬಂಧನ

Published : 8 ಅಕ್ಟೋಬರ್ 2024, 14:43 IST
Last Updated : 8 ಅಕ್ಟೋಬರ್ 2024, 14:43 IST
ಫಾಲೋ ಮಾಡಿ
Comments

ಬೆಂಗಳೂರು: ಪಾಲಿಶ್ ಹಾಗೂ ಹರಳು ಕೂರಿಸುವ ನೆಪದಲ್ಲಿ ಒಂದೂವರೆ ಕೆ.ಜಿ ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿಯನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಅಂಕುರ್ ಕುಮಾರ್ ಡಂಗರವಾಲ್(32) ಬಂಧಿತ.

ಆರೋಪಿಯಿಂದ ₹38 ಲಕ್ಷ ಮೌಲ್ಯದ 384 ಗ್ರಾಂ ಚಿನ್ನದ ಗಟ್ಟಿ ಹಾಗೂ ₹10.99 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

‘ಆರೋಪಿ ನಗರ್ತಪೇಟೆಯಲ್ಲಿ ವಾಸವಾಗಿದ್ದರು. ಅಕ್ಕಸಾಲಿಗನಾಗಿ ಕೆಲಸ ಮಾಡಿಕೊಂಡಿದ್ದರು. ಪರಿಚಯಸ್ಥರ ಆಭರಣಗಳ ಅಂಗಡಿಗಳಿಂದ ಚಿನ್ನಾಭರಣಗಳನ್ನು ತಂದು ಪಾಲಿಶ್ ಮಾಡುವುದು ಹಾಗೂ ಹರಳು ಕೂರಿಸಿ ವಾಪಸ್ ಕೊಡುತ್ತಿದ್ದರು. ನಗರ್ತಪೇಟೆಯಲ್ಲಿ ಚಿನ್ನಾಭರಣ ಅಂಗಡಿ ಮಾಲೀಕರೊಬ್ಬರಿಂದ ಮೇ ತಿಂಗಳಲ್ಲಿ 1 ಕೆ.ಜಿ 277 ಗ್ರಾಂ ಚಿನ್ನಾಭರಣಗಳನ್ನು ಒಂದು ತಿಂಗಳಲ್ಲೇ ಪಾಲಿಶ್ ಮತ್ತು ಹರಳುಗಳನ್ನು ಕೂರಿಸಿ ಕೊಡುವುದಾಗಿ ಭರವಸೆ ನೀಡಿ ತೆಗೆದುಕೊಂಡು ಹೋಗಿದ್ದರು. ಆದರೆ, ಚಿನ್ನಾಭರಣ ವಾಪಸ್‌ ನೀಡಿರಲಿಲ್ಲ. ಅನುಮಾನಗೊಂಡಿದ್ದ ಮಾಲೀಕರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ತಿಳಿಸಿದರು.

ರಾಜಸ್ಥಾನದ ಬಿಲ್ವಾರ್ ಜಿಲ್ಲೆಯ ಕಲಿಯಾಸ್ ಗ್ರಾಮದ ಮನೆಯಲ್ಲಿದ್ದ ವೇಳೆ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಆರೋಪಿ ಅಂಕುರ್ ಕುಮಾರ್ ಅವರು ಚಿನ್ನಾಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಮಾರ್ಪಡಿಸಿ ನಗರದ ವಿವಿಧ ಆಭರಣ ಅಂಗಡಿಗಳಿಗೆ ಮಾರಾಟ ಮಾಡಿದ್ದರು. ಜ್ಯೂವೆಲ್ಲರಿ ಅಂಗಡಿಗಳಿಂದ 384 ಗ್ರಾಂ ಚಿನ್ನಾಭರಣ ಮತ್ತು ₹10.99 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರೇಯಸಿಯೊಂದಿಗೆ ಸುತ್ತಾಟ:

‘ನಗರದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂ ಯುವತಿಯನ್ನು ಆರೋಪಿ ಪ್ರೀತಿಸುತ್ತಿದ್ದರು. ದೋಚಿದ್ದ ಚಿನ್ನಾಭರಣ ಮಾರಾಟ ಮಾಡಿ ಜ್ಯೂವೆಲ್ಲರಿ ಮಾಲೀಕರಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದ ಆರೋಪಿ, ಪ್ರೇಯಸಿ ಜೊತೆಗೆ ಮುಂಬೈ, ಗೋವಾ, ರಾಜಸ್ಥಾನ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ವಿಮಾನದಲ್ಲೇ ಪ್ರಯಾಣಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT