ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್ಫೊಸಿಸ್ ಪ್ರಶಸ್ತಿ: ಗರಿಷ್ಠ ವಯೋಮಿತಿ ಇಳಿಕೆ

ಜನವರಿಯಲ್ಲಿ ಇನ್ಫೊಸಿಸ್‌ ಸೈನ್ಸ್ ಫೌಂಡೇಷನ್‌ನಿಂದ ಪ್ರಶಸ್ತಿ ಪ್ರದಾನ
Published 15 ಮೇ 2024, 14:44 IST
Last Updated 15 ಮೇ 2024, 14:44 IST
ಅಕ್ಷರ ಗಾತ್ರ

ಬೆಂಗಳೂರು: ವಿಜ್ಞಾನ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಂಶೋಧನೆಗೆ ನೀಡುವ ‘ಇನ್ಫೊಸಿಸ್ ಪ್ರಶಸ್ತಿ’ಯ ಗರಿಷ್ಠ ವಯೋಮಿತಿಯನ್ನು 50 ವರ್ಷದಿಂದ 40 ವರ್ಷಕ್ಕೆ ಇನ್ಫೊಸಿಸ್‌ ಸೈನ್ಸ್ ಫೌಂಡೇಷನ್‌ ಇಳಿಕೆ ಮಾಡಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಷನ್‌ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ‘ವಿಜ್ಞಾನ ಕ್ಷೇತ್ರದ ಸಾಧನೆಗೆ ಸಂಬಂಧಿಸಿದಂತೆ ಇನ್ನು ಮುಂದೆ 40ಕ್ಕಿಂತ ಕಡಿಮೆ ವಯಸ್ಸಿನ ಅಸಾಮಾನ್ಯ ಪ್ರತಿಭಾವಂತರನ್ನು ಗುರುತಿಸಿ, ಗೌರವಿಸಲಾಗುತ್ತದೆ. ಯುವ ಸಂಶೋಧಕರಿಗೆ ಅನ್ವೇಷಣೆಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದು ಈ ಕ್ರಮದ ಉದ್ದೇಶವಾಗಿದೆ. ವೃತ್ತಿಯ ಮಧ್ಯಭಾಗದಲ್ಲಿ ಇರುವವರನ್ನು ಗುರುತಿಸಿ, ಗೌರವಿಸುವುದಕ್ಕಿಂತ ವೃತ್ತಿಯ ಆರಂಭಿಕ ಹಂತಗಳಲ್ಲಿ ಇರುವವರನ್ನು ಗುರುತಿಸಿ ಗೌರವಿಸುವುದು ಉತ್ತಮವೆಂದು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ಮಾನವ ಕುಲಕ್ಕೆ ಪ್ರಯೋಜನಕಾರಿಯಾಗುವ ಅತ್ಯುತ್ತಮ ಸಂಶೋಧನೆಗಳನ್ನು ಗುರುತಿಸುವುದು, ಯುವ ಸಂಶೋಧಕರು ಮತ್ತು ವಿಜ್ಞಾನಿಗಳಾಗುವ ಬಯಕೆ ಹೊಂದಿರುವವರಿಗೆ ಮಾದರಿ ವ್ಯಕ್ತಿಗಳನ್ನು ಸೃಷ್ಟಿಸಿಕೊಡುವ ಪ್ರಶಸ್ತಿಯ ಮೂಲಭೂತ ಗುರಿಯಲ್ಲಿ ಯಾವುದೇ ಬದಲಾವಣೆಯಿಲ್ಲ’ ಎಂದರು.

ದೇಶದಲ್ಲಿ ಇರಲು ಮನವಿ: ಇನ್ಫೊಸಿಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಇನ್ಫೊಸಿಸ್‌ ಸೈನ್ಸ್ ಫೌಂಡೇಷನ್‌ ಟ್ರಸ್ಟಿ ಎನ್.ಆರ್. ನಾರಾಯಣ ಮೂರ್ತಿ, ‘ಪ್ರಶಸ್ತಿಗೆ ಭಾಜನರಾಗುವ ಭಾರತದ ಹೊರಗಡೆಯ ವ್ಯಕ್ತಿಗಳು ತಾವೇ ಆಯ್ಕೆ ಮಾಡಿಕೊಂಡ ಇಲ್ಲಿನ ಸಂಸ್ಥೆಯಲ್ಲಿ ಗರಿಷ್ಠ ಎರಡು ಭೇಟಿಯಲ್ಲಿ 30 ದಿನಗಳನ್ನು ಕಳೆಯುವಂತೆ ಮನವಿ ಮಾಡಲಾಗುತ್ತದೆ. ಸಂಸ್ಥೆಗಳಲ್ಲಿನ ಸಂಶೋಧನಾ ತಂಡಗಳ ಜತೆಗೆ ಸಮನ್ವಯ ಸಾಧಿಸಲು, ಸಮಾನ ಮನಸ್ಕರ ಒಂದು ಜಾಲವನ್ನು ರೂಪಿಸಲು ಇದರಿಂದ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘15 ವರ್ಷಗಳಲ್ಲಿ 92 ಮಂದಿಗೆ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು ಚಿನ್ನದ ಪದಕ, ಪ್ರಶಸ್ತಿ ಪತ್ರ ಮತ್ತು 1 ಲಕ್ಷ ಅಮೆರಿಕನ್ ಡಾಲರ್‌ ಹೊಂದಿದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ನವೆಂಬರ್‌ನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರನ್ನು ಘೋಷಿಸಲಾಗುತ್ತದೆ. ಜನವರಿ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದು ವಿವರಿಸಿದರು.

ಸಂಸ್ಥೆಯ ಟ್ರಸ್ಟಿಯೂ ಆಗಿರುವ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು.

ಅರ್ಥಶಾಸ್ತ್ರಕ್ಕೆ ಪ್ರತ್ಯೇಕ ವಿಭಾಗ

‘ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಅರ್ಥಶಾಸ್ತ್ರವು ಒಂದು ಪ್ರತ್ಯೇಕ ವಿಭಾಗವಾಗಿ ಗುರುತಿಸಿಕೊಳ್ಳಲಿದೆ. ಈ ಮೊದಲು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಯನ್ನು ಸಮಾಜ ವಿಜ್ಞಾನ ವಿಭಾಗದಲ್ಲಿ ನೀಡಲಾಗುತ್ತಿತ್ತು. 2024ನೇ ಸಾಲಿನಿಂದ ಅರ್ಥಶಾಸ್ತ್ರ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ಮಾನವಿಕ ಮತ್ತು ಸಮಾಜ ವಿಜ್ಞಾನ ಜೀವ ವಿಜ್ಞಾನ ಗಣಿತ ವಿಜ್ಞಾನ ಹಾಗೂ ಭೌತವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ’ ಎಂದು ನಾರಾಯಣ ಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT