ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಭಾರಿ ಮಳೆ: ಮರಗಳು ಉರುಳಿ ಹಾನಿ, ಮನೆಗಳು ಜಲಾವೃತ

Published : 6 ಅಕ್ಟೋಬರ್ 2024, 7:03 IST
Last Updated : 6 ಅಕ್ಟೋಬರ್ 2024, 7:03 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಉರುಳಿ ಬಿದ್ದಿವೆ. ಬಿನ್ನಿ ಪೇಟೆ ಸಹಿತ ಬೇರೆ ಬೇರೆ ಸ್ಥಳಗಳಲ್ಲಿ ಕಾಂಪೌಂಡ್ ಗೋಡೆಗಳಿಗೆ ಹಾನಿಯಾಗಿದೆ. ಹಲವು ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಹಲವು ಮನೆಗಳು ಜಲಾವೃತಗೊಂಡಿವೆ.

ಒಟ್ಟು 15 ಮರಗಳು‌ ಹಾಗೂ 44 ಮರದ ರೆಂಬೆ-ಕೊಂಬೆಗಳು ಧರೆಗುರುಳಿದಿದ್ದು ಪಾಲಿಕೆಯ ನಿಯಂತ್ರಣ ಕೊಠಡಿ ತಂಡಗಳು ಹಾಗೂ ಮರ ತೆರವು ತಂಡಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪಶ್ಚಿಮ ವಲಯದ ಪಾರ್ಕ್ ವ್ಯೂವ್ ಅಪಾರ್ಟ್ಮೆಂಟ್‌ನ 7 ಅಡಿ ಎತ್ತರದ ಕಾಂಪೌಂಡ್ ಗೋಡೆ, ಸುಮಾರು 10 ಅಡಿ ಅಷ್ಟು ಉದ್ದದ ಗೋಡೆ ಬಿದ್ದಿದೆ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪಾಲಿಕೆ ಹಾಗೂ ಅಪಾರ್ಟ್ಮೆಂಟ್‌ನ ಸಿಬ್ಬಂದಿ ಸೇರಿ ಗೋಡೆಯ ಭಗ್ನಾವಶೇಷಗಳ ತೆರವು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

ಇಟಿಎ ಮಾಲ್ ಬಳಿ ಕಾಪೌಂಡ್ ಗೋಡೆ ಕುಸಿದಿದ್ದು, ಅವಶೇಷಗಳನ್ನು ತೆರವುಗೊಳಿಸಿ ನಿವಾಸಿಗಳಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ.

ಯಲಹಂಕ ವಲಯದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್‌ನ ಸುಮಾರು 50 ಅಡಿ ಕಾಂಪೌಂಡ್ ಗೋಡೆ ಕುಸಿದು ಬಿದ್ದಿರುವ ಕಾರಣ, ಯಲಹಂಕ ಕೆರೆ ಹಾಗೂ ಅಪಾರ್ಟ್ಮೆಂಟ್ ಮಧ್ಯೆಯಿರುವ ಖಾಲಿ ಜಾಗದಲ್ಲಿ ನಿಂತಿದ್ದ ನೀರು ಏಕಾಕಾಕಿ ಅಪಾರ್ಟ್ಮೆಂಟ್ ಒಳಗೆ ನುಗ್ಗಿದೆ. ರಾತ್ರಿ ಸುಮಾರು 4 ಅಡಿ ನೀರು ನಿಂತಿದ್ದು, ಪಾಲಿಕೆಯ ಗ್ಯಾಂಗ್ ಮ್ಯಾನ್ ತಂಡ, ಎಸ್.ಡಿ.ಆರ್.ಆಫ್, ಅಗ್ನಿಶಾಮಕ ತಂಡಗಳ ಸದಸ್ಯರು ಪಂಪ್ ಸೆಟ್‌ಗಳ ಮೂಲಕ ನೀರು ಹೊರಹಾಕುವ ಕೆಲಸ ಮಾಡುತ್ತಿದ್ದಾರೆ.

ಯಲಹಂಕ ಕೆರೆಗೆ ಸುಮಾರು 10 ಕೆರೆಗಳ ನೀರು ಬರುತ್ತದೆ, ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ನೀರು ಹೋಗುತ್ತದೆ. ಕೆರೆ ಭಾಗದಿಂದ 25 ಅಡಿ ತಗ್ಗಿನಲ್ಲಿ ಅಪಾರ್ಟ್ಮೆಂಟ್ ಇದೆ. ಅದರ ಗೋಡೆ ಕುಸಿದಿರುವ ಕಾರಣ ನೀರು ನಿಂತು ಜಲಾವೃತವಾಗಿದೆ.

ಗೋಡೆ ಕುಸಿದಿರುವ ಭಾಗದಲ್ಲಿ ಸ್ಯಾಂಡ್ ಬ್ಯಾಗ್‌ಗಳನ್ನು ಅಳವಡಿಸಲಾಗುತ್ತಿದೆ. ಅಪಾರ್ಟ್ಮೆಂಟ್‌ನಲ್ಲಿ ವಾಸಿಸುವ ನಿವಾಸಿಗಳಿಗೆ ತಿಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಬಿಬಿಎಂಪಿ ಯಲಹಂಕ ವಲಯದ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ದಕ್ಷಿಣ ವಲಯ ವಿಜಯನಗರದ ಮಧುವನದ ಬಳಿ ರಾಜಕಾಲುವೆಯ ಬಳಿಯಿದ್ದ ಸ್ಯಾನಿಟರಿ ಲೈನ್‌ನಲ್ಲಿ ನೀರು ಉಕ್ಕಿ ಹರಿದಿದ್ದು, ಸುಮಾರು 10 ಮನೆಗಳಿಗೆ ನೀರು ನುಗ್ಗಿದೆ.

ಪಾಲಿಕೆ ವ್ಯಾಪ್ತಿಯ ಯಲಹಂಕ ವಲಯ, ಪಶ್ಚಿಮ ವಲಯ ಹಾಗೂ ದಕ್ಷಿಣ ವಲಯಗಳಲ್ಲಿ ಮಳೆಯಿಂದ ತೀವ್ರ ಸಮಸ್ಯೆಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT