ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿದ್ರೆ ಮಾಡುವುದನ್ನು ಕಲಿಯಲೂ ಇಂಟರ್ನ್‌ಶಿಪ್‌: ₹9 ಲಕ್ಷ ಗೆದ್ದ ಬೆಂಗಳೂರು ಯುವತಿ

Published : 30 ಸೆಪ್ಟೆಂಬರ್ 2024, 11:45 IST
Last Updated : 30 ಸೆಪ್ಟೆಂಬರ್ 2024, 11:45 IST
ಫಾಲೋ ಮಾಡಿ
Comments

ಬೆಂಗಳೂರು: ಹೆಚ್ಚು ಕಾಲ ನಿದ್ರಿಸುವುದನ್ನು ಕಲಿಯಲು ತರಗತಿಗೆ ತೆರಳಿದ್ದನ್ನೇ ಗಳಿಕೆಯ ಮಾರ್ಗವಾಗಿ ಬದಲಿಸಿಕೊಂಡ ಬೆಂಗಳೂರು ಮೂಲದ ಇನ್ವೆಸ್ಟ್‌ಮೆಂಟ್‌ ಬ್ಯಾಂಕರ್‌ ಒಬ್ಬರು ಬರೋಬ್ಬರಿ ₹9 ಲಕ್ಷ ಗೆದ್ದಿದ್ದಾರೆ. ಆ ಮೂಲಕ ಸಾಯೀಶ್ವರಿ ಪಾಟೀಲ್ ಅವರು ‘ಸ್ಲೀಪ್‌ ಚಾಂಪಿಯನ್‌’ ಎಂಬ ಹೆಸರಿಗೆ ಭಾಜನರಾಗಿದ್ದಾರೆ.

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ವೇಕ್‌ಫಿಟ್‌ ಅವರು ಸ್ಲೀಪ್‌ ಇಂಟರ್ನ್‌ಶಿಪ್‌ ಕಾರ್ಯಕ್ರಮದ ಮೂರನೇ ಆವೃತ್ತಿ ಇತ್ತೀಚೆಗೆ ನಡೆಸಿದ್ದರು. ಸಾಯೀಶ್ವರಿ ಪಾಟೀಲ್ ಸೇರಿ ಒಟ್ಟು 12 ಜನ ಇದರಲ್ಲಿ ಪಾಲ್ಗೊಂಡಿದ್ದರು. ನಿದ್ರೆಯನ್ನು ಬಹುವಾಗಿ ಇಷ್ಟಪಡುತ್ತಿದ್ದರೂ, ಅದನ್ನು ಪಡೆಯಲು ಹೆಣಗಾಡುತ್ತಿದ್ದವರಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗಿತ್ತು.

ಈ ಸ್ಪರ್ಧೆಯಲ್ಲಿ, ರಾತ್ರಿ ವೇಳೆ 8ರಿಂದ 9 ಗಂಟೆ ಕಾಲ ಮಲಗಬೇಕು. ಹಗಲಿನಲ್ಲಿ 20 ನಿಮಿಷಗಳ ಕಾಲ ನಿದ್ರೆ ಮಾಡಲು ಅವಕಾಶವಿತ್ತು. ಇವರಿಗೆ ಪ್ರೀಮಿಯಂ ಗುಣಮಟ್ಟದ ಹಾಸಿಗೆಯನ್ನು ನೀಡಲಾಗಿತ್ತು. ಜತೆಗೆ ಕಾಂಟೆಕ್ಟ್‌ಲೆಸ್‌ ಸ್ಲೀಪ್‌ ಟ್ರ್ಯಾಕರ್‌ ಎಂಬ ನಿದ್ರೆಯ ಗುಣಮಟ್ಟ ಅಳೆಯುವ ಸಾಧನವನ್ನು ಅಳವಡಿಸಲಾಗಿತ್ತು. ನಿದ್ರೆಯ ಗುಣಮಟ್ಟ ಹೆಚ್ಚಿಸುವುದು ಹೇಗೆ ಎಂದು ಸಲಹೆ ನೀಡುವ ಸಮಾಲೋಚಕರನ್ನೂ ನಿಯೋಜಿಸಲಾಗಿತ್ತು ಎಂದು ‘ದಿ ಹಿಂದು’ ವರದಿ ಮಾಡಿದೆ.

ಕಳೆದ ಮೂರು ಆವೃತ್ತಿಯಿಂದ ನಡೆದುಕೊಂಡು ಬರುತ್ತಿರುವ ಈ ‘ಸ್ಲೀಪ್ ಚಾಲೆಂಜ್‌’ನಲ್ಲಿ ಪಾಲ್ಗೊಳ್ಳಲು ಒಂದು ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆಯಂತೆ. 51 ಇಂಟರ್ನ್‌ಗಳಿಗೆ ಅವಕಾಶ ಸಿಕ್ಕಿದೆ. ₹63 ಲಕ್ಷ ಬಹುಮಾನ ಈವರೆಗೂ ವಿತರಿಸಲಾಗಿದೆ ಎಂದು ವರದಿಯಾಗಿದೆ.

2024ರ ಆವೃತ್ತಿಯ ವೇಕ್‌ಫಿಟ್ ಗ್ರೇಟ್ ಇಂಡಿಯನ್ ಸ್ಲೀಪ್‌ನಲ್ಲಿ ಪತ್ತೆಯಾದ ಅಂಶವೆಂದರೆ, ಶೇ 50ರಷ್ಟು ಭಾರತೀಯರು ಸುಸ್ತಾಗಿ ನಿದ್ರೆಯಿಂದ ಎಚ್ಚರಗೊಳ್ಳುವವರೇ ಹೆಚ್ಚು ಎಂಬ ಅಂಶ ಪತ್ತೆಯಾಗಿದೆ. ಇದಕ್ಕೆ ಕಾರಣಗಳೆಂದರೆ ದೀರ್ಘ ಕಾಲ ಕೆಲಸ ಮಾಡುವುದು, ನಿದ್ರೆ ಮಾಡುವ ಕೋಣೆಯು ಸಮರ್ಪಕವಾಗಿ ಇಲ್ಲದಿರುವುದು, ಒತ್ತಡ ಹಾಗೂ ದೈಹಿಕ ಶ್ರಮವಿಲ್ಲದಿರುವುದು ಎಂದು ಅಂದಾಜಿಸಲಾಗಿದೆ. ಈ ಸ್ಲೀಪ್ ಇಂಟರ್ನ್‌ಶಿಪ್ ಮೂಲಕ ಉತ್ತಮ ನಿದ್ರೆ ಪಡೆಯುವ ಮಾರ್ಗಗಳನ್ನು ತಿಳಿಸಿಕೊಡಲಾಗುತ್ತಿದೆ ಎಂದು ವೆಕ್‌ಫಿಟ್‌ನ ಮುಖ್ಯಸ್ಥ ಕುನಾಲ್ ದುಬೇ ತಿಳಿಸಿದ್ದಾರೆ.

ನಿದ್ರೆಯ ಚಾಂಪಿಯನ್ ಆಗಿ ಹೊರಹೊಮ್ಮಿರುವ ಸಾಯೀಶ್ವರಿ ಪಾಟೀಲ್ ಪ್ರತಿಕ್ರಿಯಿಸಿ, ‘ಉತ್ತಮ ನಿದ್ರೆಯನ್ನು ಪಡೆಯಬೇಕೆಂದರೆ, ಸರಿಯಾದ ಸಮಯಕ್ಕೆ ಮಲಗುವುದು ಹಾಗೂ ಏಳುವುದನ್ನು ಮೊದಲು ರೂಢಿಸಿಕೊಳ್ಳಬೇಕು. ತಡರಾತ್ರಿಯ ಕಾರ್ಯಾಚರಣೆಗಳನ್ನು ಆದಷ್ಟು ತಗ್ಗಿಸಬೇಕು. ಸಿನಿಮಾ, ಸಾಮಾಜಿಕ ಮಾಧ್ಯಮಗಳನ್ನು ಅತಿಯಾಗಿ ನೋಡುವುದರಿಂದ ನಿದ್ರೆಗೆ ತೊಂದರೆಯಾಗಲಿದೆ. ಇದನ್ನು ಪಾಲಿಸುವುದು ಕಷ್ಟ. ಆದರೆ ಅತ್ಯಂತ ಲಾಭದಾಯಿಕ’ ಎಂದಿದ್ದಾರೆ.

‘ಕೋವಿಡ್ ಸಂದರ್ಭದಲ್ಲಿ ನನ್ನ ನಿದ್ರೆಯ ಅಭ್ಯಾಸದಲ್ಲಿ ಭಾರೀ ವ್ಯತ್ಯಾಸವಾಗಿತ್ತು. ಲೆಕ್ಕಪರಿಶೋಧಕಿಯಾಗಿ ಸಾಕಷ್ಟು ಕೆಲಸ ಮಾಡಬೇಕಿತ್ತು. ಹೀಗಾಗಿ ಸಮರ್ಪಕ ನಿದ್ರೆ ಆಗುತ್ತಿರಲಿಲ್ಲ. ಆದರೆ, ಈ ಇಂಟರ್ನ್‌ಶಿಪ್‌ನಲ್ಲಿ ಶಿಸ್ತುಬದ್ಧ ನಿದ್ದೆ ಮಾಡುವುದು ಹೇಗೆ ಎಂಬುದನ್ನು ಕಲಿಸಲಾಯಿತು’ ಎಂದರು.

‘ನಿದ್ರೆ ಮಾಡುವ ಈ ಚಾಲೆಂಜ್‌ ವಿಷಯವನ್ನು ಕೇಳಿಯೇ ನನಗೆ ಅಚ್ಚರಿಯಾಗಿತ್ತು. ಹೀಗಾಗಿ ನಾನು ನನ್ನ ಸ್ನೇಹಿತೆ ಅರ್ಜಿ ಸಲ್ಲಿಸಿದ್ದೆವು. ಈ ಸ್ಪರ್ಧೆಯನ್ನು ಗೆಲ್ಲಲೇಬೇಕು ಎಂಬ ಸವಾಲು ಕೂಡಾ ಒತ್ತಡ ಸೃಷ್ಟಿಸಿ ನಿದ್ದೆ ಕಸಿಯುವ ಅಪಾಯ ಇದ್ದೇ ಇತ್ತು. ಆದರೆ ಅಂತಿಮ ಸುತ್ತಿನಲ್ಲಿ, ಮನಸ್ಸನ್ನು ಹೆಚ್ಚು ಒತ್ತಡ ರಹಿತವಾಗಿಡುವುದು ಹಾಗೂ ನಿರಾಳವಾಗಿರಬೇಕು ಎಂದು ಸಂಕಲ್ಪ ಮಾಡಿದೆ.  ಈಗ ಒಳ್ಳೆಯ ನಿದ್ರೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ. ಬೈಕ್‌ ಮೇಲೆ ಕೂತರೂ ನಾನು ನಿದ್ರೆ ಮಾಡಬಲ್ಲೆ’ ಎಂದು ಪಾಟೀಲ್ ಹೇಳಿದ್ದಾರೆ.

‘ದೈಹಿಕ ದುರಸ್ತಿಗೆ ಆಳವಾದ ನಿದ್ರೆ ಅತ್ಯಗತ್ಯ. ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ನಿದ್ರೆಯ ಹಲವು ವಿಧಗಳನ್ನು ನಾನು ಈ ಇಂಟರ್ನ್‌ಶಿಪ್‌ನಲ್ಲಿ ಕಲಿತೆ. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿದೆ. ಮಿದುಳಿನಿಂದ ಕಲ್ಮಶಗಳೂ ಹೊರಹೋಗಿದೆ. ನೆನಪಿನಶಕ್ತಿ ಹಾಗೂ ಭಾವನಾತ್ಮಕವಾಗಿಯೂ ನಿಯಂತ್ರಣ ಸಾಧ್ಯವಾಗಿದೆ. ಈ ನಿದ್ರೆಯ ವೈಜ್ಞಾನಿಕ ಜಗತ್ತಿನ ಮಾಹಿತಿಯನ್ನು ಇತರರೊಂದಿಗೂ ಹಂಚಿಕೊಂಡು ನೆರವಾಗಲು ಬಯಸುತ್ತೇನೆ’ ಎಂದು ಸಾಯೀಶ್ವರಿ ಪಾಟೀಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT