ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ವೇಳೆಗೆ ‘ಕಾವೇರಿ ಆರತಿ’ಗೆ ಚಿಂತನೆ: ಎನ್. ಚಲುವರಾಯಸ್ವಾಮಿ

Published : 20 ಸೆಪ್ಟೆಂಬರ್ 2024, 23:48 IST
Last Updated : 20 ಸೆಪ್ಟೆಂಬರ್ 2024, 23:48 IST
ಫಾಲೋ ಮಾಡಿ
Comments

ಹರಿದ್ವಾರ: ಗಂಗಾ ನದಿಗೆ ಮಾಡುವ ‘ಗಂಗಾ ಆರತಿ’ ಮಾದರಿಯಲ್ಲಿ ಕಾವೇರಿ ನದಿಗೆ ‘ಕಾವೇರಿ ಆರತಿ’ಯನ್ನು ದಸರಾ ಆರಂಭಕ್ಕೂ ಮುನ್ನವೇ ನಡೆಸಲು ಯೋಚಿಸಲಾಗಿದೆ ಎಂದು ಕೃಷಿ ಸಚಿವ ಹಾಗೂ ಕಾವೇರಿ ಆರತಿ ಅಧ್ಯಯನ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ತಿಳಿಸಿದರು.‌

ಹಳೇ ಮೈಸೂರು ಭಾಗದ ಶಾಸಕರ ನಿಯೋಗದೊಂದಿಗೆ ಹರಿದ್ವಾರದಲ್ಲಿ ಶುಕ್ರವಾರ ಸಂಜೆ ಗಂಗಾ ಆರತಿ ವೀಕ್ಷಣೆ ಜತೆಗೆ ಪೂಜೆಯಲ್ಲಿ ಭಾಗಿಯಾದ ಬಳಿಕ‌ ಅವರು ಮಾತನಾಡಿದರು.

‘ಕಾವೇರಿ ಆರತಿಗೆ ಎರಡು, ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಅಂತಿಮಗೊಂಡ ಸ್ಥಳದಲ್ಲಿ ಆರತಿಗಾಗಿ ಸೋಪಾನೆಕಟ್ಟೆ ನಿರ್ಮಿಸಲಾಗುವುದು. ಹರಿದ್ವಾರದಲ್ಲಿ ನಿತ್ಯ ಗಂಗಾ ಆರತಿ ನಡೆಯುತ್ತಿದೆ. ರಾಜ್ಯದಲ್ಲಿ ವಾರದಲ್ಲಿ ಎರಡು ಅಥವಾ ಮೂರು ದಿನ ಆರತಿ ಮಾಡಬೇಕೆ? ನಿತ್ಯ ಆರತಿ ನಡೆಸಬೇಕೇ ಎಂಬುದರ ಬಗ್ಗೆ ಸಮಿತಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದರು.

ಆರಂಭದಲ್ಲಿ ಹರಿದ್ವಾರ ಮತ್ತು ವಾರಾಣಸಿಯ ಸಾಧು, ಸಂತರನ್ನು ಆಹ್ವಾನಿಸಿ ಅವರಿಂದ ಕಾವೇರಿ ಆರತಿ ನಡೆಸಲಾಗುತ್ತದೆ. ಬಳಿಕ ಅವರಿಂದಲೇ ಸ್ಥಳೀಯ ವೈದಿಕರಿಗೆ ತರಬೇತಿ ಕೊಡಿಸಿ ಕಾವೇರಿ ಆರತಿ ಮುಂದುವರಿಸಲಾಗುವುದು ಎಂದರು.

ಹರಿದ್ವಾರದ ಗಂಗಾ‌ ಮಹಾಸಭಾದ ಸಮಿತಿಯ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಗಂಗಾ ಆರತಿ ಇತಿಹಾಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಶನಿವಾರ ವಾರಾಣಸಿಗೆ ತೆರಳಿ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ ವೀಕ್ಷಿಸಲಾಗುವುದು. ಭಾನುವಾರ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವುದರ ಜೊತೆಗೆ ಘಾಟ್‌ನಲ್ಲಿ ಸಂಚರಿಸಿ, ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.

ಹರಿ ಕಿ ಪೌಡಿಯ ಗಂಗಾ ಮಹಾಸಭಾ ಅಧ್ಯಕ್ಷ ನಿತಿನ್ ಗೌತಮ್, ಮಹಾಮಂತ್ರಿ ತನ್ಮಯ್ ವಶಿಷ್ಠ, ಸ್ವಾಗತ ಮಂತ್ರಿ ಡಾ.ಸಿದ್ದಾರ್ಥ್ ಚಕ್ರಪಾಣಿ, ಗಂಗಾ ಸೇವಾ ಸಚಿವ ಉಜ್ವಲ್ ಪಂಡಿತ್ ಅವರನ್ನು ಒಳಗೊಂಡ ತಂಡವು ಕರ್ನಾಟಕದ ನಿಯೋಗವನ್ನು ಬರಮಾಡಿಕೊಂಡು ಪೂಜಾ ಕಾರ್ಯ ನೆರವೇರಿಸಿತು.

ಮಂಡ್ಯದ ಬೂದನೂರು ಉತ್ಸವ ಸಂದರ್ಭದಲ್ಲಿ ಶಾಸಕ ರವಿ ಗಣಿಗ ಅವರು ಗಂಗಾ ಆರತಿ ಮಾದರಿಯಲ್ಲಿ ವಾರಾಣಸಿಯಿಂದ ವೈದಿಕರ ತಂಡವನ್ನು ಕರೆಸಿ ಬೂದನೂರು ಗ್ರಾಮದ ಕಾಶಿ ವಿಶ್ವನಾಥ ದೇವರಿಗೆ ಆರತಿ ನೆರವೇರಿಸಿ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಕೂಡ ಗಂಗಾ ಆರತಿ ಮಾದರಿಯಲ್ಲೇ ಮಂಡ್ಯ ಜಿಲ್ಲೆಯಲ್ಲೂ ಕಾವೇರಿ ಆರತಿ ಕಾರ್ಯಕ್ರಮ ನಡೆಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದರು.

ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್, ಕೆ.ಎಂ.ಉದಯ್, ದಿನೇಶ್ ಗೂಳಿಗೌಡ, ಎನ್‌.ಸಿ.ಬಾಲಕೃಷ್ಣ, ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಕೆ.ಎಂ. ಶಿವಲಿಂಗೇಗೌಡ, ಎ.ಆರ್. ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕರು ಗಂಗಾ ಆರತಿ ಪೂಜೆಯಲ್ಲಿ ಭಾಗವಹಿಸಿದ್ದರು
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕರು ಗಂಗಾ ಆರತಿ ಪೂಜೆಯಲ್ಲಿ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT