ಶುಕ್ರವಾರ, 5 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಶುಕ್ರವಾರದಿಂದ 105 ರಸ್ತೆಗಳ ವೈಟ್‌ ಟಾಪಿಂಗ್‌ ಕಾಮಗಾರಿ

ಬಿಬಿಎಂಪಿಯ ಬಹುತೇಕ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ; ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ
Published 3 ಜುಲೈ 2024, 1:24 IST
Last Updated 3 ಜುಲೈ 2024, 1:24 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿನ 105 ಪ್ರಮುಖ ರಸ್ತೆಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಶುಕ್ರವಾರ ಆರಂಭವಾಗಲಿದೆ.

ವೈಟ್‌ಟಾಪಿಂಗ್ ಕಾಮಗಾರಿ ನಡೆಸಲು ಭೂಮಿಪೂಜೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್  ಮಂಗಳವಾರ ಸೂಚಿಸಿದ್ದಾರೆ.

ಜಲಮಂಡಳಿಯ ನೀರು ಹಾಗೂ ಒಳಚರಂಡಿ ಮಾರ್ಗ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಂಸ್ಥೆಯ ಕೇಬಲ್‌ಗಳು, ಗೇಲ್ ಗ್ಯಾಸ್ ಪೈಪ್‌ಲೈನ್‌ಗಳ ಬದಲಾವಣೆಗಳನ್ನು ಮಾಡಿಕೊಳ್ಳಲು ಇಲಾಖೆಗಳ ಸಮನ್ವಯ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

15 ಪ್ಯಾಕೇಜ್‌ಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಪೈಕಿ 13 ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಇನ್ನೆರಡು ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದ ಕಡತ ಸರ್ಕಾರದ ಹಂತದಲ್ಲಿದ್ದು, ಶೀಘ್ರವೇ ಅನುಮೋದನೆ ದೊರೆಯಲಿದೆ ಎಂದು ತುಷಾರ್‌ ಗಿರಿನಾಥ್‌ ಸುದ್ದಿಗಾರರಿಗೆ ತಿಳಿಸಿದರು.

ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಯಾವುದಾದರೂ ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಿದ್ದಲ್ಲಿ, ತಕ್ಷಣವೇ ಸಮೀಕ್ಷೆ ನಡೆಸಿ, ಕೋರಿಕೆ ಸಲ್ಲಿಸಬೇಕು. ವೈಟ್‌ ಟಾಪಿಂಗ್ ಕಾಮಗಾರಿ ನಡೆಸುವ ವೇಳೆಯೇ ಬದಲಾವಣೆಗಳಿದ್ದಲ್ಲಿ ಮಾಡಿಕೊಳ್ಳಬೇಕು. ಜಲಮಂಡಳಿಯಿಂದ ರಸ್ತೆಯ ಎರಡೂ ಬದಿ ಕೊಳವೆಗಳನ್ನು ಅಳವಡಿಸಿಕೊಳ್ಳಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಯಾವುದೇ ಕಾರಣಕ್ಕೂ ರಸ್ತೆ ಅಗೆಯಲು ಅಥವಾ ಕತ್ತರಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದರು.

ಸೌಲಭ್ಯಗಳಿಗೆ ಸಮಗ್ರ ವ್ಯವಸ್ಥೆ:

ವೈಟ್‌ ಟಾಪಿಂಗ್ ಕಾಮಗಾರಿ ನಡೆಯುವ ರಸ್ತೆಗಳ ಎರಡೂ ಬದಿ ಪಾದಚಾರಿ ಮಾರ್ಗದಲ್ಲಿ ‘ಯುಟಿಲಿಟಿಗಾಗಿ ಡಕ್ಟ್ಸ್’ ಅಳವಡಿಕೆಗೆ ಸಮಗ್ರ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಸಂಬಂಧ ಸಂಬಂಧಪಟ್ಟ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಚಾರ ಮಾರ್ಗ ಬದಲಾವಣೆ: 

ವೈಟ್‌ ಟಾಪಿಂಗ್ ಕಾಮಗಾರಿ ನಡೆಯುವ ರಸ್ತೆಗಳ ಪ್ರದೇಶದಲ್ಲಿ ಸಂಚಾರ ಪೊಲೀಸ್ ವಿಭಾಗದ ಜೊತೆ ಸಮನ್ವಯ ಸಾಧಿಸಿ ಮಾರ್ಗ ಬದಲಾವಣೆ ಮಾಡಿಕೊಳ್ಳಬೇಕು. ಕಾಲಮಿತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಾಮಗಾರಿಯ ವೇಳೆ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಹಂತ ಹಂತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್ ಮಾತನಾಡಿ, ‘ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುವ ರಸ್ತೆಗಳ ಬದಲು ಪರ್ಯಾಯ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಚಾರ ಪೊಲೀಸರಿಗೆ ಮನವಿ ಮಾಡಿಕೊಳ್ಳಲಾಗಿದೆ. ಹಗಲು-ರಾತ್ರಿ ಕಾಮಗಾರಿ ನಡೆಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು.

ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್, ಜಲಮಂಡಳಿ ಮುಖ್ಯ ಎಂಜಿನಿಯರ್‌ಗಳಾದ ಗಂಗಾಧರ್, ವೆಂಕಟೇಶ್, ದೇವರಾಜ್, ಸಂಚಾರ ಪೊಲೀಸರು, ಕೆಪಿಟಿಸಿಎಲ್, ಬೆಸ್ಕಾಂ, ಜಲಮಂಡಳಿ, ಭಾರತೀಯ ಅನಿಲ ಪ್ರಾಧಿಕಾರದ (ಗೇಲ್‌) ಅಧಿಕಾರಿಗಳು ಉಪಸ್ಥಿತರಿದ್ದರು.

₹1700 ಕೋಟಿ; 15 ಪ್ಯಾಕೇಜ್‌ಗಳ ಒಟ್ಟು ವೆಚ್ಚ

₹105; ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ

157 ಕಿಲೋಮೀಟರ್‌; ರಸ್ತೆಗಳ ಒಟ್ಟು ಉದ್ದ

11 ತಿಂಗಳು; ಕಾಮಗಾರಿ ಪೂರ್ಣಗೊಳಿಸಲು ಗಡುವು

ಯಾವ ಪ್ರದೇಶದಲ್ಲಿ ವೈಟ್‌ ಟಾಪಿಂಗ್?

ಟ್ಯಾನರಿ ರಸ್ತೆ ಡಿಜೆ ಹಳ್ಳಿ ಮುಖ್ಯರಸ್ತೆ ಹೆಣ್ಣೂರು 80 ಅಡಿರಸ್ತೆ ನಾಗವಾರ ಮುಖ್ಯರಸ್ತೆ ಮಹಾತ್ಮ ಗಾಂಧಿ ರಸ್ತೆ ವೆಸ್ಟ್‌ ಆಫ್‌ ಕಾರ್ಡ್ ರಸ್ತೆ ಗೋವಿಂದರಾಜನಗರ ಮುಖ್ಯರಸ್ತೆ ಜಕ್ಕೂರು ರಸ್ತೆ ಉತ್ತರಹಳ್ಳಿ ಮುಖ್ಯರಸ್ತೆ ಕಂಠೀರವ ಸ್ಟುಡಿಯೊ ರಸ್ತೆ ಮಲ್ಲಸಂದ್ರ ಮುಖ್ಯರಸ್ತೆ ಬಸವನಗುಡಿ ರಸ್ತೆ ಚಾಮರಾಜಪೇಟೆ 2 5 7ನೇ ಮುಖ್ಯರಸ್ತೆ ಬಿಟಿಎಂ ಲೇಔಟ್‌ 29ನೇ ಮುಖ್ಯರಸ್ತೆ ಬಳ್ಳಾರಿ ರಸ್ತೆ ದಿಣ್ಣೂರು ಮುಖ್ಯರಸ್ತೆ ಗಾಂಧಿನಗರ ಕ್ಲಸ್ಟರ್‌ ರಸ್ತೆಗಳು ರೇಸ್‌ಕೋರ್ಸ್‌ ರಸ್ತೆ ಸೇರಿದಂತೆ 43 ರಸ್ತೆಗಳನ್ನು ಬಿಬಿಎಂಪಿಯ ಕೇಂದ್ರ ಯೋಜನಾ ವಿಭಾಗದ ವತಿಯಿಂದ ವೈಟ್‌ ಟಾಪಿಂಗ್‌ ಮಾಡಲಾಗುತ್ತದೆ. ಪೂರ್ವ ಪಶ್ಚಿಮ ದಕ್ಷಿಣ ಯಲಹಂಕ ರಾಜರಾಜೇಶ್ವರಿನಗರ ವಲಯಗಳ 62 ರಸ್ತೆಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT