ಬೀದರ್: ಗೌರಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ ನಗರದ ಗುರುದ್ವಾರದಲ್ಲಿ ಸಂಭ್ರಮ ಮನೆ ಮಾಡುತ್ತದೆ.

ಪ್ರತಿ ವರ್ಷ ಗೌರಿ ಹುಣ್ಣಿಮೆಯ ದಿನದಂದೇ ಸಿಖ್ ಧರ್ಮ ಸಂಸ್ಥಾಪಕ ಗುರುನಾನಕರ ಜಯಂತಿ ಆಚರಿಸಲಾಗುತ್ತದೆ. ಶುಕ್ರವಾರ (ನ.15) ಎಲ್ಲೆಡೆ ಪೌರ್ಣಿಮೆ ಮತ್ತು ಗೌರಿ ಹುಣ್ಣಿಮೆ ಆಚರಿಸಿದರೆ ಗುರುದ್ವಾರದಲ್ಲಿ ನಾನಕರ ಜಯಂತಿಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಇಡೀ ಗುರುದ್ವಾರ ಹಾಗೂ ಅದರ ಪರಿಸರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಮಾರ್ಗದುದ್ದಕ್ಕೂ ಸಿಖ್ ಧರ್ಮ ಧ್ವಜಗಳನ್ನು ಕಟ್ಟಲಾಗುತ್ತದೆ. ರಾತ್ರಿ ವೇಳೆಯಂತೂ ವಿದ್ಯುತ್ ದೀಪಗಳಿಂದ ಝಗಮಗಿಸುತ್ತದೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಹಾಗೂ ಗೌರಿ ಹುಣ್ಣಿಮೆಗೆ ವರ್ಷದಲ್ಲಿ ಎರಡು ಸಲ ಮಾತ್ರ ಗುರುದ್ವಾರದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ. ಅದರಲ್ಲೂ ಗುರುನಾನಕರ ಜಯಂತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಸಲ ಗುರುನಾನಕರ 555ನೇ ಜನ್ಮದಿನ ಆಚರಿಸಲಾಗುತ್ತಿದೆ. ಇದಕ್ಕಾಗಿ ಗುರುದ್ವಾರ ಪ್ರಬಂಧಕ ಸಮಿತಿಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೊರಗಿನಿಂದ ಬರುವ ಭಕ್ತರಿಗೆ ವಸತಿ, ಹಗಲು– ರಾತ್ರಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

ಸಿಖ್ ಧರ್ಮ ಗ್ರಂಥ ‘ಗುರುಗ್ರಂಥ ಸಾಹಿಬ್’ ಪಠಣದೊಂದಿಗೆ ಶುಕ್ರವಾರ ಬೆಳಿಗ್ಗೆ ಧಾರ್ಮಿಕ ಕೈಂಕರ್ಯಗಳು ಆರಂಭಗೊಳ್ಳುತ್ತವೆ. ಸಂಜೆ ಸಾಲಂಕೃತ ವಾಹನದಲ್ಲಿ ಧರ್ಮ ಗ್ರಂಥದ ಮೆರವಣಿಗೆ ಜರುಗುತ್ತದೆ. ಮೆರವಣಿಗೆಗೂ ಮುನ್ನ ಖಡ್ಗ ಹಿಡಿದು ಸಿಖ್ ಯುವಕರು ಗುರುದ್ವಾರ ಗೇಟ್ ವರೆಗೆ ಓಡುತ್ತ ಬರುವ ದೃಶ್ಯ ರೋಮಾಂಚನಗೊಳಿಸುತ್ತದೆ. ಗುರುದ್ವಾರದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ಮಾಡಲಾಗುತ್ತದೆ. ‘ಜೋ ಬೋಲೇ ಸೋ ನಿಹಾಲ್’, ‘ವಾಹೆ ಗುರು ಕಾ ಖಾಲ್ಸಾ’, ‘ವಾಹೆ ಗುರು ಕಾ ಫತೇಹ್’, ‘ಸತ್ಶ್ರೀ ಅಕಾಲ್’ ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತವೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಮೆರವಣಿಗೆಯಲ್ಲಿ ಸಂಭ್ರಮದಿಂದ ಹೆಜ್ಜೆ ಹಾಕುತ್ತಾರೆ.

ಇನ್ನು, ಗುರುದ್ವಾರದ ಪರಿಸರದಲ್ಲಿರುವ ‘ಲಂಗರ್’ (ದಾಸೋಹ) ಸಾಮಾನ್ಯ ದಿನಗಳಲ್ಲೂ ಹಗಲು ರಾತ್ರಿ ನಡೆಯುತ್ತದೆ. ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲದೇ ಯಾರೇ ಬಂದರೂ ಉಣಬಡಿಸುತ್ತಾರೆ. ಗುರುನಾನಕರ ಜಯಂತಿ ಸಂದರ್ಭದಲ್ಲಿ ವಿಶೇಷ ಖಾದ್ಯಗಳನ್ನು ಮಾಡಿ ಬಡಿಸುತ್ತಾರೆ.

ಸಿಖ್ ಧರ್ಮೀಯರ ಪವಿತ್ರ ಕ್ಷೇತ್ರಗಳಲ್ಲಿ ಬೀದರ್ ಗುರುದ್ವಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಸಿಖ್ ಧರ್ಮೀಯರು ಅವರ ಜೀವಮಾನದಲ್ಲಿ ಅವರ ಧರ್ಮಕ್ಕೆ ಸೇರಿದ ಧಾರ್ಮಿಕ ಸ್ಥಳಗಳಿಗೆ ಒಮ್ಮೆಯಾದರೂ ಭೇಟಿ ಕೊಡಬೇಕೆಂಬ ನಂಬಿಕೆ ಇದೆ. ಆ ನಂಬಿಕೆಯಲ್ಲಿ ಬೀದರ್ ಗುರುದ್ವಾರಕ್ಕೂ ಸ್ಥಾನವಿದೆ. ಬೀದರ್ನಿಂದ 177 ಕಿ.ಮೀ ದೂರದ ಮಹಾರಾಷ್ಟ್ರದ ನಾಂದೇಡ್ನಲ್ಲಿ ‘ಸಚ್ಖಂಡ್ ಗುರುದ್ವಾರ’ ಇದೆ. ಸಿಖ್ ಧರ್ಮಗ್ರಂಥ ಗುರುಗ್ರಂಥ ಸಾಹಿಬ್ಗೆ ಪಟ್ಟ ಕಟ್ಟಿದ ಸ್ಥಳ ಇದಾಗಿರುವುದರಿಂದ ಅದಕ್ಕೆ ಹೆಚ್ಚಿನ ಮಹತ್ವ ಇದೆ. ಅಲ್ಲಿಗೆ ಭೇಟಿ ಕೊಡುವವರು ಬೀದರ್ಗೂ ಬಂದು ಹೋಗುತ್ತಾರೆ. ವರ್ಷವಿಡೀ ದೇಶದ ವಿವಿಧ ಭಾಗಗಳಿಂದ ಸಿಖ್ರು ಇಲ್ಲಿಗೆ ಬಂದು ಹೋಗುತ್ತಾರೆ. ಲಾರಿ, ಟೆಂಪೊ, ಕಾರು ಹೀಗೆ ವಿಧ ವಿಧವಾದ ವಾಹನಗಳಲ್ಲಿ ಬರುತ್ತಾರೆ. ಆದರೆ, ಗುರುನಾನಕರ ಜಯಂತಿ ಸಂದರ್ಭದಲ್ಲಿ ಈ ಸಂಖ್ಯೆ ಸ್ವಲ್ಪ ಹೆಚ್ಚೇ ಇರುತ್ತದೆ.

ಸ್ವಚ್ಛತೆಗೆ ಹೆಸರು

ಬೀದರ್ ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿಯೇ ಅತಿ ಸ್ವಚ್ಛವಾಗಿರುವ ಸ್ಥಳವೆಂದರೆ ಅದು ಸಿಖ್ ಧರ್ಮೀಯರ ಪವಿತ್ರ ಕ್ಷೇತ್ರ ಗುರುದ್ವಾರ. ಇಡೀ ಪರಿಸರದಲ್ಲಿ ಒಂದು ಕಾಗದದ ತುಂಡು ಸಹ ಸಿಗುವುದಿಲ್ಲ. ಅಷ್ಟರಮಟ್ಟಿಗೆ ಸ್ವಚ್ಛತೆ ಕಾಪಾಡುತ್ತಾರೆ. ಅಸ್ವಚ್ಛತೆಗೆ ಅವಕಾಶ ನೀಡದಂತೆ ನಿರಂತರವಾಗಿ ಜನರ ಮೇಲೆ ನಿಗಾ ವಹಿಸುತ್ತಾರೆ. ಪ್ರಶಾಂತ ಸ್ಥಳದಲ್ಲಿ ನೆಲೆಸಿರುವ ಗುರುದ್ವಾರದ ಸುತ್ತಲೂ ಹಚ್ಚ ಹಸಿರಿನ ಪರಿಸರವಿದೆ. ನಿರಂತರವಾಗಿ ಇಲ್ಲಿ ಗುರುಗ್ರಂಥ ಸಾಹಿಬ್ ಪಠಣ ನಡೆಯುತ್ತದೆ. ಗುರುದ್ವಾರದೊಳಗೆ ತೆರಳಿ ದರ್ಶನ ಪಡೆಯಬೇಕಾದರೆ ಕಡ್ಡಾಯವಾಗಿ ತಲೆಯ ಮೇಲೆ ಕರವಸ್ತ್ರ ಕಟ್ಟಿಕೊಳ್ಳಬೇಕು. ಜನರ ಬಳಿ ಕರವಸ್ತ್ರ ಇರದಿದ್ದರೆ ಗುರುದ್ವಾರದವರೇ ಕೊಡುತ್ತಾರೆ. ಗುಟಕಾ ಪಾನಬೀಡಾ ಮದ್ಯಪಾನ ಧೂಮಪಾನ ಕಟ್ಟುನಿಟ್ಟಾಗಿ ನಿರ್ಬಂಧಿಸಿದ್ದಾರೆ. ಅಂಥಹವರು ಕಂಡು ಬಂದರೆ ಗುರುದ್ವಾರದ ಪರಿಸರದೊಳಗೂ ಬಿಟ್ಟುಕೊಡುವುದಿಲ್ಲ.

ಔಷಧೀಯ ಗುಣದ ನೀರು

ಗುರುದ್ವಾರದ ಪರಿಸರದಲ್ಲಿ ‘ಅಮೃತ ಕುಂಡ’ ಹೆಸರಿನ ನೀರಿನ ಝರಿ ಇದೆ. ಅದನ್ನು ಪವಿತ್ರ ತೀರ್ಥ ಎಂದು ಭಾವಿಸಲಾಗುತ್ತದೆ. ಅದರಲ್ಲಿ ಔಷಧೀಯ ಗುಣವಿದೆ ಎಂಬ ಭಾವನೆಯೂ ದಟ್ಟವಾಗಿದೆ. ಹೀಗಾಗಿಯೇ ನಗರ ಸೇರಿದಂತೆ ಬೇರೆ ಬೇರೆ ಭಾಗದ ಜನ ನಿತ್ಯ ಕ್ಯಾನ್ಗಳಲ್ಲಿ ನೀರು ತುಂಬಿಕೊಂಡು ಹೋಗುತ್ತಾರೆ. ಗುರುನಾನಕರು ದಕ್ಷಿಣ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೀದರ್ಗೂ ಬಂದಿದ್ದರು ಎಂಬ ಪ್ರತೀತಿ ಇದೆ.

ಅವರು ಬಂದಾಗ ಬೀದರ್ನಲ್ಲಿ ಭೀಕರ ಬರವಿತ್ತು. ಅದನ್ನು ಕಂಡ ಗುರುನಾನಕರು ಗುಡ್ಡದ ತಳಭಾಗದ ಕಲ್ಲನ್ನು ತಮ್ಮ ಪಾದದಿಂದ ಸರಿಸಿದಾಗ ನೀರಿನ ಝರಿ ಉಕ್ಕಿ ಹರಿಯಿತು ಎಂಬ ನಂಬಿಕೆ ಇದೆ. ಹೀಗಾಗಿಯೇ ಇದಕ್ಕೆ ‘ಗುರುನಾನಕ ಝೀರಾ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇನ್ನು ಗುರುದ್ವಾರದಲ್ಲಿ ದರ್ಶನ ಮುಗಿಸಿಕೊಂಡು ಹೋಗುವವರಿಗೆ ತುಪ್ಪ ರವೆ ಕೇಸರಿ ಸಕ್ಕರೆಯಿಂದ ತಯಾರಿಸಿದ ಪ್ರಸಾದ ನೀಡಲಾಗುತ್ತದೆ. ಜೊತೆಗೆ ‘ಲಂಗರ್’ನಲ್ಲಿ ಪ್ರಸಾದದ ವ್ಯವಸ್ಥೆಯೂ ಇರುತ್ತದೆ. ಗುರುದ್ವಾರಕ್ಕೆ ಭೇಟಿ ಕೊಡುವವರಿಗೆ ಯಾವುದೇ ಶುಲ್ಕ ಇಲ್ಲ.

ಜಿಲ್ಲೆಗೆ ಸಿಖ್ರ ಕೊಡುಗೆ ದೊಡ್ಡದು

ಬೀದರ್ ಜಿಲ್ಲೆಯಲ್ಲಿ ಸಿಖ್ರು ಬಹಳ ಸೀಮಿತ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಹೆಚ್ಚಿನವರು ಗುರುದ್ವಾರದ ಪರಿಸರದಲ್ಲೇ ನೆಲೆಸಿದ್ದಾರೆ. ಸೀಮಿತ ಸಂಖ್ಯೆಯಲ್ಲಿದ್ದರೂ ಜಿಲ್ಲೆಗೆ ಅವರ ಕೊಡುಗೆ ದೊಡ್ಡದಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಪಿಯು ಎಂಜಿನಿಯರಿಂಗ್ ನರ್ಸಿಂಗ್ ಆಸ್ಪತ್ರೆ ಕಲ್ಯಾಣ ಮಂಟಪ ಹೋಟೆಲ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ವರ್ಷಗಳಿಂದ ಈಚೆಗೆ ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಆರಂಭಗೊಂಡಿವೆ. ಆದರೆ ಯಾವುದೇ ಹೆಚ್ಚಿನ ಸೌಕರ್ಯ ಇರದ ಕಾಲದಲ್ಲೇ ಅವರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಈ ಭಾಗದ ಜನರಿಗೆ ಗುಣಮಟ್ಟದ ಶಿಕ್ಷಣ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.