ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ನೀಟ್‌’ನಲ್ಲಿ ಬೀದರ್‌ ನಗರಕ್ಕೆ 3ನೇ ಸ್ಥಾನ

ಕರ್ನಾಟಕದ ಪ್ರಮುಖ ನಗರಗಳನ್ನು ಹಿಂದಿಕ್ಕಿ ಮೇಲೇರಿದ ಕೋಟೆ ನಗರಿ
Published 25 ಜುಲೈ 2024, 6:04 IST
Last Updated 25 ಜುಲೈ 2024, 6:04 IST
ಅಕ್ಷರ ಗಾತ್ರ

ಬೀದರ್‌: ‘ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ’ಯಲ್ಲಿ (ನೀಟ್‌) ಬೀದರ್‌ ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ಮಾಡುತ್ತಿದೆ.

ಈ ವರ್ಷ ಒಂದು ಹೆಜ್ಜೆ ಮುಂದೆ ಹೋಗಿರುವ ನಗರ, ರಾಜ್ಯದಲ್ಲಿ ಮೂರನೇ ಸ್ಥಾನಕ್ಕೇರಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ರಾಜ್ಯದಲ್ಲಿ ಒಟ್ಟು 4,302 ವಿದ್ಯಾರ್ಥಿಗಳು 600ರಿಂದ 720ರೊಳಗೆ ನೀಟ್‌ ಪರೀಕ್ಷೆಯಲ್ಲಿ ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ. ಇದರಲ್ಲಿ ಬೀದರ್‌ ನಗರದ 309 ವಿದ್ಯಾರ್ಥಿಗಳಿರುವುದು ವಿಶೇಷ. ಬೆಂಗಳೂರು ನಗರದ 1,457 ಮತ್ತು ಮಂಗಳೂರಿನ 621 ವಿದ್ಯಾರ್ಥಿಗಳಿದ್ದಾರೆ. ಕ್ರಮವಾಗಿ ಎರಡೂ ನಗರದವರು ಪ್ರಥಮ, ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.

‘ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ’ಯು ಆಯಾ ಪರೀಕ್ಷಾ ಕೇಂದ್ರವಾರು ನೀಟ್‌ ಫಲಿತಾಂಶದ ವಿವರಗಳನ್ನು ಬಿಡುಗಡೆಗೊಳಿಸಿದೆ. ವಿದ್ಯಾರ್ಥಿಗಳು ಮೂಲತಃ ಎಲ್ಲಿನವರು ಎಂಬ ವಿವರವನ್ನು ಏಜೆನ್ಸಿ ಬಿಡುಗಡೆಗೊಳಿಸಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಬರೆದ ಕೇಂದ್ರಗಳನ್ನು ಆಧರಿಸಿ ಈ ವಿವರಗಳನ್ನು ಬಿಡುಗಡೆ ಮಾಡಿದೆ.

ಬೆಣ್ಣೆ ನಗರಿ ಎಂದೇ ಹೆಸರಾಗಿರುವ ದಾವಣಗೆರೆಯ 266 ಮತ್ತು ತೊಗರಿ ಕಣಜ ಕಲಬುರಗಿಯ 215 ವಿದ್ಯಾರ್ಥಿಗಳು ನೀಟ್‌ನಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದು, ಕ್ರಮವಾಗಿ ಎರಡೂ ನಗರಗಳು ನಾಲ್ಕು ಮತ್ತು ಐದನೇ ಸ್ಥಾನ ಹಂಚಿಕೊಂಡಿವೆ.

ಉಡುಪಿಯ 163, ಬೆಳಗಾವಿಯ 151, ಮೈಸೂರಿನ 136 ಮತ್ತು ಹುಬ್ಬಳ್ಳಿಯ 111 ವಿದ್ಯಾರ್ಥಿಗಳು ನೀಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ರಾಜ್ಯದಲ್ಲಿ ಒಟ್ಟು 134 ವಿದ್ಯಾರ್ಥಿಗಳು 700ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಬೆಂಗಳೂರು ನಗರದಿಂದ 74, ಮಂಗಳೂರಿನ 17, ಬೆಳಗಾವಿ ಮತ್ತು ದಾವಣಗೆರೆಯ ತಲಾ 8, ಮೈಸೂರು ಹಾಗೂ ಬೀದರ್‌ ನಗರದ ತಲಾ 6, ಹುಬ್ಬಳ್ಳಿಯ ನಾಲ್ವರು ಇದರಲ್ಲಿ ಸೇರಿದ್ದಾರೆ.

‘ಪರೀಕ್ಷಾ ಕೇಂದ್ರಗಳನ್ನು ಆಧರಿಸಿ ಎನ್‌ಟಿಎ ನೀಟ್‌ನಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಗಳ ವಿವರ ಬಿಡುಗಡೆಗೊಳಿಸಿದೆ. ಬೆಂಗಳೂರು ನಗರ ಜಿಲ್ಲೆ ಸಹಜವಾಗಿಯೇ ರಾಜ್ಯದಲ್ಲಿ ದೊಡ್ಡದಾಗಿದೆ. ಅತಿ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ಒಳಗೊಂಡಿರುವುದರಿಂದ ನಿರೀಕ್ಷಿತ ಫಲಿತಾಂಶ ಬಂದಿದೆ. ಮಂಗಳೂರು ಮೊದಲಿನಿಂದಲೂ ನೀಟ್‌ನಲ್ಲಿ ಉತ್ತಮ ಸಾಧನೆ ತೋರುತ್ತಿದ್ದು, ಈ ಸಲವೂ ಅದನ್ನು ಮುಂದುವರೆಸಿಕೊಂಡು ಹೋಗಿದೆ. ಹಿಂದುಳಿದ ಬೀದರ್‌ ಜಿಲ್ಲೆ ಶೈಕ್ಷಣಿಕ ಹಬ್‌ ಆಗಿ ಬದಲಾಗುತ್ತಿರುವುದು ಪ್ರಮುಖ ಬೆಳವಣಿಗೆ. ಈ ಹಿಂದೆ ಬೀದರ್‌ನವರು ಬೇರೆ ಕಡೆಗಳಿಗೆ ಹೋಗಿ ತರಬೇತಿ ಪಡೆದು, ಬೇರೆ ನಗರಗಳಲ್ಲಿಯೇ ಪರೀಕ್ಷೆಗಳನ್ನು ಬರೆಯುತ್ತಿದ್ದರು. ಈಗ ಸ್ಥಳೀಯವಾಗಿಯೇ ಉತ್ತಮ ತರಬೇತಿ ಪಡೆದು ಸಾಧನೆ ಮಾಡುತ್ತಿದ್ದಾರೆ. ಇದು ಮಹತ್ವದ ಬೆಳವಣಿಗೆ’ ಎನ್ನುತ್ತಾರೆ ಸ್ಥಳೀಯ ಶಿಕ್ಷಣ ತಜ್ಞರು.

‘ವೃತ್ತಿಪರ ಕೋರ್ಸ್‌ಗಳಿಗೆ ಒತ್ತು ಕೊಟ್ಟ ಪರಿಣಾಮ’
‘ಇತ್ತೀಚಿನ ದಿನಗಳಲ್ಲಿ ವೃತ್ತಿಪರ ಕೋರ್ಸ್‌ಗಳ ಬಗ್ಗೆ ಅರಿವು ಹೆಚ್ಚಾಗಿದೆ. ಅನುದಾನ ರಹಿತ ಕಾಲೇಜುಗಳು ಲಾಭ ಗಳಿಕೆಗೆ ಕೆಲಸ ಮಾಡುತ್ತಿದ್ದರೂ ಅವುಗಳ ಪರಿಶ್ರಮದಿಂದ ವೃತ್ತಿಪರ ಕೋರ್ಸ್‌ಗಳ ಅರಿವು ಮೂಡಿದೆ. ಹಿಂದಿಗೆ ಹೋಲಿಸಿದರೆ ಈಗ ಬೀದರ್ ಫಲಿತಾಂಶ ಉತ್ತಮವಾಗಿ ಬರುತ್ತಿದೆ. ಹಿಂದೆ ಕೋಚಿಂಗ್‌ ಸೆಂಟರ್‌ಗಳ ಮೂಲಕ ವಿಶೇಷ ತರಬೇತಿ ಕೊಡುತ್ತಿದ್ದವರೂ ಈಗ ಕಾಲೇಜುಗಳನ್ನು ನಡೆಸುತ್ತಿದ್ದಾರೆ. ವೃತ್ತಿಪರ ಕೋರ್ಸ್‌ಗಳನ್ನೇ ಮುಖ್ಯವಾಗಿಟ್ಟುಕೊಂಡು ತರಬೇತಿ ಕೊಡುತ್ತಿದ್ದಾರೆ. ಬೇಸಿಕ್‌ ಸೈನ್ಸ್‌ಗಿಂತ ವೃತ್ತಿಪರ ಕೋರ್ಸ್‌ಗಳಿಗೆ ಯಾವ ರೀತಿ ಸೀಟುಗಳನ್ನು ಪಡೆಯಬೇಕು ಎನ್ನುವುದಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಇದರ ಒಟ್ಟಾರೆ ಪರಿಣಾಮವಾಗಿ ಸ್ಥಳೀಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಕಾರಣರಾಗಿದ್ದಾರೆ’ ಎನ್ನುತ್ತಾರೆ ನಿವೃತ್ತ ಕಾಲೇಜು ಪ್ರಾಚಾರ್ಯ ವಿಠ್ಠಲದಾಸ ಪ್ಯಾಗೆ.
 ವಿಠ್ಠಲದಾಸ ಪ್ಯಾಗೆ

 ವಿಠ್ಠಲದಾಸ ಪ್ಯಾಗೆ

‘ಉತ್ತಮ ತರಬೇತಿಯಿಂದ ಉತ್ತಮ ಫಲಿತಾಂಶ’
‘ನೀಟ್‌’ ಪರೀಕ್ಷೆಯಲ್ಲಿ ಬೀದರ್‌ ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳು ಈ ಸಲ ಉತ್ತಮ ಸಾಧನೆ ತೋರಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಸಿಗುತ್ತಿರುವುದರ ಪರಿಣಾಮ ಇದು. ಈ ಭಾಗದ ಮಕ್ಕಳು ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಯಾವುದರಲ್ಲೂ ಕಡಿಮೆ ಇಲ್ಲ. ಆದರೆ ಕೆಲವರು ನಮ್ಮ ಮಕ್ಕಳನ್ನು ಕಡಿಮೆ ಎಂಬಂತೆ ಬಿಂಬಿಸಿದ್ದಾರೆ. ಆದರೆ ಅದಕ್ಕೆಲ್ಲ ನೀಟ್‌ ಫಲಿತಾಂಶ ಉತ್ತರ ಕೊಟ್ಟಿದೆ. ಈ ಸಲ ನಮ್ಮ ಸಂಸ್ಥೆಯ 80 ಮಕ್ಕಳು ನೀಟ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ದೂರದೃಷ್ಟಿಯಿಂದ ಗಡಿಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ತಮ್ಮ ಸಾಧನೆ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ’ ಎಂದು ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ಪ್ರಾಚಾರ್ಯ ಬಸವರಾಜ ಮೊಳಕೀರೆ ಅಭಿಪ್ರಾಯ ಪಟ್ಟಿದ್ದಾರೆ.
ಬಸವರಾಜ ಮೊಳಕೀರೆ
ಬಸವರಾಜ ಮೊಳಕೀರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT