ಬೀದರ್‌ನ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಮ್ಮೇಳನದ ಸರ್ವಾಧ್ಯಕ್ಷೆ ಪೂರ್ಣಿಮಾ ಜಾರ್ಜ್ ಸಾಹಿತಿ ಕುಂ. ವೀರಭದ್ರಪ್ಪ ಹಾಗೂ ಇತರರು ಸಮ್ಮೇಳನದ ಕಿರು ಹೊತ್ತಿಗೆ ಬಿಡುಗಡೆಗೊಳಿಸಿದರು
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಸಕ್ತರು
ಸಮ್ಮೇಳನದ ಸರ್ವಾಧ್ಯಕ್ಷೆ ಪೂರ್ಣಿಮಾ ಜಾರ್ಜ್ ಅವರನ್ನು ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಗೌರವಿಸಿದರು
‘ಸ್ವರ್ಗದ ಬಾಗಿಲು ಎನ್ನುವುದು ಮುಠ್ಠಾಳತನ’
‘ಸಂಸ್ಕೃತ ಭಾಷೆಯಲ್ಲಿ ಓದಿದರೆ ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುವುದು ಮುಠ್ಠಾಳತನ. ಇದು ಸರಿಯಾದ ಧೋರಣೆ ಅಲ್ಲ ಎಂದು ಸಾಹಿತಿ ಕುಂ.ವೀರಭದ್ರಪ್ಪ ಖಾರವಾಗಿ ನುಡಿದರು. ‘ಮನುಷ್ಯ ವಿರೋಧಿ ಪುರೋಹಿತಶಾಹಿ ವ್ಯವಸ್ಥೆಯನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ. ನಮ್ಮ ಮಕ್ಕಳಿಗೆ ನಾವು ಹೆಸರಿಡುವ ಸ್ವಾತಂತ್ರ್ಯವಿಲ್ಲ. ಅದಕ್ಕಾಗಿ ಪುರೋಹಿತಶಾಹಿಯನ್ನು ನೆಚ್ಚಿಕೊಂಡಿದ್ದೇವೆ. ಅತ್ಯಂತ ಅಪಾಯಕಾರಿ ಜಾತಿ ವ್ಯವಸ್ಥೆ ನಮ್ಮಲ್ಲಿದೆ. ಅಸಂಖ್ಯ ಜಾತಿಗಳು ನಮ್ಮಲ್ಲಿವೆ. ಸಂಸ್ಕೃತ ನಮ್ಮ ಭಾಷೆ ಕೊಲ್ಲುತ್ತಿದೆ. ಈ ಎಚ್ಚರದೊಂದಿಗೆ ಕನ್ನಡ ಉಳಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಭಾಷಾ ಮಾಧ್ಯಮ ಮುಖ್ಯವಲ್ಲ, ಮನಸ್ಸು ಕಟ್ಟಿ
‘ಮಕ್ಕಳು ಕಲಿಯುವ ಭಾಷೆಯ ಮಾಧ್ಯಮ ಯಾವುದು ಎಂಬುದು ಮುಖ್ಯವಲ್ಲ. ಮನಸ್ಸು ಕಟ್ಟುವ ಕೆಲಸ ಮಾಡಬೇಕಿದೆ’ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಪೂರ್ಣಿಮಾ ಜಾರ್ಜ್ ಅಭಿಪ್ರಾಯಪಟ್ಟರು. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರಲ್ಲಿ ಮಾನವೀಯತೆ ಇರುವುದಿಲ್ಲ ಎಂಬ ಮಾತು ಸರಿಯಾದುದಲ್ಲ. ನಾನು ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ಹೊರದೇಶದ ವಿದ್ಯಾರ್ಥಿಗಳಿದ್ದು ಅವರಿಗೆ ಕನ್ನಡ ಭಾಷೆ ಕೂಡ ಕಲಿಸುತ್ತಿದ್ದೇವೆ’ ಎಂದು ಹೇಳಿದರು. ನಮ್ಮ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಬೇಕು. ಶಿಕ್ಷಕರನ್ನು ಆಡಳಿತಾತ್ಮಕ ಕೆಲಸಗಳಿಗೆ ಬಳಸಿಕೊಳ್ಳಬಾರದು. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. 500ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಪ್ರಾಂಶುಪಾಲರೇ ಇಲ್ಲ ಅದನ್ನು ನೀಗಿಸಬೇಕು. ಶೌಚಾಲಯಗಳಲ್ಲಿ ಕನಿಷ್ಠ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶೌಚಾಲಯಗಳ ನಿರ್ವಹಣೆಗೆ ಅಗತ್ಯ ಹಣ ನೀಡಬೇಕು. ಐಐಟಿ ಎಐಐಎಂಎಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಈ ಭಾಗಕ್ಕೆ ತರಲು ರಾಜಕಾರಣಿಗಳು ಶ್ರಮಿಸಬೇಕು. ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಭವನದ ವಿವಾದ ಬಗೆಹರಿಸುವೆ: ಖಂಡ್ರೆ
‘ಜಿಲ್ಲಾ ಕನ್ನಡ ಭವನದ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಚರ್ಚಿಸಿ ನಾನು ಬಗೆಹರಿಸುವೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ನೀಡಿದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅದ್ಯಕ್ಷ ಸುರೇಶ ಚನಶೆಟ್ಟಿ ಜಿಲ್ಲಾ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಕ್ಕೆ ವಹಿಸಬೇಕು. ಈ ಬಗ್ಗೆ ಸಚಿವ ಖಂಡ್ರೆಯವರು ವಿಶೇಷ ಮುತುವರ್ಜಿ ವಹಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ್ ಕಂಬಳಿವಾಲೆ ಹೆಸರಲ್ಲಿ ಪ್ರತಿಷ್ಠಾನ ರಚಿಸಬೇಕು ಎಂದು ಬೇಡಿಕೆ ಮಂಡಿಸಿದರು. ಅದಕ್ಕೆ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.
‘ಭಾಷೆ ಇಲ್ಲದಿದ್ದರೆ ಮನುಷ್ಯ ಮೃಗ’
‘ಒಂದು ವೇಳೆ ಈ ಜಗತ್ತಿನಲ್ಲಿ ಭಾಷೆ ಇಲ್ಲದಿದ್ದರೆ ಮನುಷ್ಯ ಮೃಗವಾಗುತ್ತಿದ್ದ. ಎಲ್ಲ ಅಭಿವೃದ್ಧಿಗೆ ಭಾಷೆಯೇ ಮೂಲಾಧಾರವಾಗಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟರು. ಕನ್ನಡಕ್ಕೆ ಅದರದೇ ಆದ ಶ್ರೇಷ್ಠ ಇತಿಹಾಸ ಪರಂಪರೆ ಇದೆ. ಪಂಪ ರನ್ನ ಜನ್ನ ರಾಘವಾಂಕ ಹರಿಹರ ಹೀಗೆ ಅನೇಕರು ಕೊಡುಗೆ ಕೊಟ್ಟಿದ್ದಾರೆ. ದಾಸ ಸಾಹಿತ್ಯ ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳು. ಜಗತ್ತಿಗೆ ಪ್ರಥಮ ಸಂಸತ್ತು ಕೊಟ್ಟಿರುವುದು ಬೀದರ್ ಎಂದರು.