ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧಸಿರಿ ಕಾರ್ಖಾನೆ ಪುನರಾರಂಭಕ್ಕೆ ಯತ್ನಾಳ್ ಒತ್ತಡ ತಂತ್ರ ಸರಿಯಲ್ಲ: ಖಂಡ್ರೆ

Published : 17 ಸೆಪ್ಟೆಂಬರ್ 2024, 7:44 IST
Last Updated : 17 ಸೆಪ್ಟೆಂಬರ್ 2024, 7:44 IST
ಫಾಲೋ ಮಾಡಿ
Comments

ಬೀದರ್: ‘ಚಿಂಚೋಳಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಸೇರಿದ ಸಿದ್ಧಸಿರಿ ಸಕ್ಕರೆ ಮತ್ತು ಡಿಸ್ಟಿಲರಿ ಕಾರ್ಖಾನೆ ಪ್ರಕರಣ ಪ್ರಸ್ತುತ ಸುಪ್ರೀಂಕೋರ್ಟ್‌ನಲ್ಲಿದೆ. ಈ ಹಂತದಲ್ಲಿ ರೈತರಿಂದ ಪ್ರತಿಭಟನೆ ಮಾಡಿಸಿ, ಒತ್ತಡ ಹೇರುವುದು ಸರಿಯಾದ ಕ್ರಮವಲ್ಲ’ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಬಿಜೆಪಿ ಶಾಸಕರಿಗೆ ನ್ಯಾಯಾಲಯದ ಮೇಲೆ ಗೌರವ ಇದ್ದರೆ ತೀರ್ಪು ಬರುವ ತನಕ ಕಾಯಬೇಕು. ಸುಪ್ರೀಂಕೋರ್ಟ್ ಕಾರ್ಖಾನೆಗೆ ಅನುಮತಿ ನೀಡುವಂತೆ ಸೂಚಿಸಿದರೆ ಸರ್ಕಾರ ಅನುಮತಿ ನೀಡುತ್ತದೆ. ಇದರಲ್ಲಿ ರಾಜಕೀಯ ದ್ವೇಷದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅವರು ನಗರದಲ್ಲಿ ಮಂಗಳವಾರ ಪ್ರಕಟಣೆ ಹೊರಡಿಸಿ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಯತ್ನಾಳ್ ಅವರಿಗೆ ಸೇರಿದ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಗಮ (ಎಸ್ಎಸ್ಎಸ್ಎನ್) ಕಾನೂನು, ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ಮಾಡಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ, ಬಿಜೆಪಿ ಶಾಸಕರಿಗೆ ಪ್ರತ್ಯೇಕ ಕಾನೂನು ಇಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯಾಚರಣೆ ಸಮ್ಮತಿ ಪತ್ರ (ಸಿ.ಎಫ್.ಓ.) ಪಡೆಯದೆ ಕೈಗಾರಿಕೆ ನಡೆಸಿರುವುದು ಕಾನೂನು ಬದ್ಧವೇ ಎಂದು ಪ್ರಶ್ನಿಸಿರುವ ಖಂಡ್ರೆ, ಕಾರ್ಖಾನೆ ಪೂರ್ವಾನುಮತಿ ಇಲ್ಲದೆ ತನ್ನ ಸಾಮರ್ಥ್ಯ ವಿಸ್ತರಣೆ ಮಾಡಿ ಕಾನೂನು ಬಾಹಿರವಾಗಿ ಕಾರ್ಯಾಚರಣೆ ನಡೆಸಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಇಲಾಖೆಯೇ ₹1.58 ಕೋಟಿ ದಂಡ ವಿಧಿಸಿದೆ ಎಂದಿದ್ದಾರೆ.

ಕಾನೂನು ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಲಯದ ಮೊರೆ ಹೋಗುವುದರಲ್ಲಿ ತಪ್ಪೇನೂ? ಜೊತೆಗೆ ನದಿಗೆ ಕೈಗಾರಿಕಾ ತ್ಯಾಜ್ಯ ಹರಿಯಬಿಟ್ಟಿರುವ ಆರೋಪವೂ ಈ ಕೈಗಾರಿಕೆಯ ಮೇಲಿದೆ. ರೈತರೇ ಈ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ. ಇದು ಜಲ ಕಾಯ್ದೆ ಮತ್ತು ಪರಿಸರ ಸಂರಕ್ಷಣಾ ಕಾಯ್ದೆ ಉಲ್ಲಂಘನೆ. ಪರಿಸರ ಸಚಿವನಾಗಿ ಪ್ರಕೃತಿ, ಪರಿಸರ ಉಳಿಸುವ ಜವಾಬ್ದಾರಿ ನಿರ್ವಹಣೆ ಮಾಡಲೇ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿಯಮ ಉಲ್ಲಂಘಿಸುವ ಒಬ್ಬರಿಗೆ ಪೂರ್ವಾನ್ವಯವಾಗಿ ಸಿಎಫ್ಒ ಪಡೆಯಲು ಅನುಮತಿಸಿದರೆ, ಅದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ. ಕೆ.ಎಸ್.ಪಿ.ಸಿ.ಬಿ. ಕಾನೂನು ರೀತ್ಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ದ್ವೇಷದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದೆಲ್ಲವೂ ಕಪೋಲಕಲ್ಪಿತ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT