ಬೀದರ್‌ನ ಹರಳಯ್ಯಾ ವೃತ್ತದಲ್ಲಿ ಗುರುವಾರ ಬಿಜೆಪಿ ರೋಡ್ ಶೋ ನಡೆದಾಗ ಮುಖಂಡರು ಕಾರ್ಯಕರ್ತರ ಮೇಲೆ ಜೆಸಿಬಿ ಮೂಲಕ ಹೂಮಳೆಗರೆಯಲಾಯಿತು – ಪ್ರಜಾವಾಣಿ ಚಿತ್ರಗಳು
ಪಾಪನಾಶ ಶಿವಲಿಂಗಕ್ಕೆ ಖೂಬಾ ಪೂಜೆ
ಓಡೋಡಿ ಹೋಗಿ ನಾಮಪತ್ರ ಸಲ್ಲಿಕೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ನಗರದಲ್ಲಿ ಗುರುವಾರ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಪಾಪನಾಶ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ನಗರದ ಗಣೇಶ ಮೈದಾನದಲ್ಲಿ ಏರ್ಪಡಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅವರ ಭಾಷಣ ಮುಗಿದಾಗ ಮಧ್ಯಾಹ್ನ 2.45 ಆಗಿತ್ತು. ಕೆಲಕಾಲ ರೋಡ್ ಶೋನಲ್ಲಿ ಭಾಗವಹಿಸಿದ ಅವರು ನಾಮಪತ್ರ ಸಲ್ಲಿಕೆಯ ಅವಧಿ ಮುಗಿಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ತೆರೆದ ವಾಹನದಿಂದ ಕೆಳಗಿಳಿದು ಚುನಾವಣಾಧಿಕಾರಿ ಕಚೇರಿಗೆ ಓಡೋಡಿ ಹೋಗಿ ನಾಮಪತ್ರ ಸಲ್ಲಿಸಿದರು. ಖೂಬಾ ಅವರಿಗಿಂತ ಮೊದಲೇ ಅಲ್ಲಿಗೆ ತೆರಳಿದ ಬಿಜೆಪಿ ಮುಖಂಡರಾದ ಈಶ್ವರ ಸಿಂಗ್ ಠಾಕೂರ್ ಪ್ರಕಾಶ ಖಂಡ್ರೆ ಸುಭಾಷ ಗುತ್ತೇದಾರ್ ಜೆಡಿಎಸ್ ಮುಖಂಡರಾದ ಬಂಡೆಪ್ಪ ಕಾಶೆಂಪುರ್ ರಮೇಶ ಪಾಟೀಲ ಸೋಲಪೂರ ಅವರು ಖೂಬಾ ಅವರ ಅನುಪಸ್ಥಿತಿಯಲ್ಲಿ ಅವರ ಹೆಸರಿನ ನಾಮಪತ್ರ ಸಲ್ಲಿಸಿದರು. ಆನಂತರ ಖೂಬಾ ಅವರು ಅಲ್ಲಿಗೆ ಹೋಗಿ ಅವರ ಪಕ್ಷದ ಶಾಸಕರು ಮುಖಂಡರೊಂದಿಗೆ ಇನ್ನೆರಡು ಪ್ರತಿ ನಾಮಪತ್ರ ಸಲ್ಲಿಸಿದರು. ಗುರುವಾರ ಒಂದೇ ದಿನ ಒಟ್ಟು ಮೂರು ನಾಮಪತ್ರ ಸಲ್ಲಿಸಿದರೆ ಏ.15ರಂದು ಒಂದು ಪ್ರತಿ ನಾಮಪತ್ರ ಸಲ್ಲಿಸಿದ್ದರು.
ಭರ್ಜರಿ ರೋಡ್ ಶೋ; ಜೆಸಿಬಿಯಿಂದ ಹೂಮಳೆ
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಬೀದರ್ ನಗರದಲ್ಲಿ ಗುರುವಾರ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಗಣೇಶ ಮೈದಾನದಲ್ಲಿ ಬಹಿರಂಗ ಪ್ರಚಾರ ಮುಗಿದ ನಂತರ ಖೂಬಾ ಹಾಗೂ ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷಗಳ ಮುಖಂಡರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಪ್ರಚಾರ ಸಭೆ ಮಧ್ಯಾಹ್ನ 2.45ಕ್ಕೆ ಮುಗಿದಿತ್ತು. ಮಧ್ಯಾಹ್ನ 3ರೊಳಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇತ್ತು. ಕೆಲಕಾಲ ರೋಡ್ ಶೋ ನಡೆಸಿದ ಖೂಬಾ ಅವರು ಸಮಯ ಮೀರಿದ ವಿಷಯ ತಿಳಿದು ಅರ್ಧಕ್ಕೆ ವಾಹನದಿಂದ ಇಳಿದು ಹೋದರು. ಅವರ ಅನುಪಸ್ಥಿತಿಯಲ್ಲಿ ಮುಖಂಡರು ರೋಡ್ ಶೋ ನಡೆಸಿದರು. ರೋಡ್ ಶೋ ಹಾದು ಹೋಗುವ ಮಾರ್ಗದ ಹರಳಯ್ಯಾ ವೃತ್ತದಲ್ಲಿ ಜೆಸಿಬಿಗಳ ಮೇಲೆ ನಿಂತು ಮುಖಂಡರು ಕಾರ್ಯಕರ್ತರ ಮೇಲೆ ಹೂಮಳೆಗರೆಯಲಾಯಿತು. ನಾಮಪತ್ರ ಸಲ್ಲಿಕೆಗೆ ಹೆಚ್ಚಿನ ಸಮಯವಿರದ ಕಾರಣ ಗಣೇಶ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್ ಶೋ ನಡೆಸಿದರು. ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
‘ಸುಳ್ಳು ಹೇಳುವುದರಲ್ಲಿ ತಂದೆ ಮಗ ನಿಸ್ಸೀಮರು’
‘ಸುಳ್ಳು ಹೇಳುವುದರಲ್ಲಿ ತಂದೆ (ಈಶ್ವರ ಖಂಡ್ರೆ) ಮಗ (ಸಾಗರ್ ಖಂಡ್ರೆ) ನಿಸ್ಸೀಮರು. ಸಾಕಷ್ಟು ಕೆಲಸ ಮಾಡಿರುವ ನನಗೆ ಬಹಿರಂಗ ಸವಾಲು ಚರ್ಚೆಗೆ ಕರೆದಿದ್ದಾರೆ. ನನಗೆ ಜನಸೇವೆಯಷ್ಟೇ ಗೊತ್ತು. ಈಶ್ವರ ಖಂಡ್ರೆಯವರು ನುಡಿದಂತೆ ನಡೆಯಬೇಕು ಎಂದು ಹೇಳುತ್ತಾರೆ. ಆದರೆ ಕಪಟ ರಾಜಕಾರಣ ಹೊರತುಪಡಿಸಿ ಅವರಿಗೆ ಬೇರೇನೂ ಗೊತ್ತಿಲ್ಲ’ ಎಂದು ಭಗವಂತ ಖೂಬಾ ಟೀಕಿಸಿದರು.
‘ಹುಮನಾಬಾದ್‌ಗೆ ಸ್ವಾತಂತ್ರ್ಯ ಸಿಕ್ಕಿದೆ’
‘ಹುಮನಾಬಾದ್ ಹಾಳಾಗುತ್ತಿದೆ ಎಂದು ವಿರೋಧಿಗಳು ಆರೋಪಿಸಿದ್ದಾರೆ. ಆದರೆ ಹುಮನಾಬಾದ್‌ಗೆ ಸ್ವಾತಂತ್ರ್ಯ ಸಿಕ್ಕಿದೆ. ಹುಮನಾಬಾದ್‌ನಲ್ಲಿ ಯಾರಾದರೂ ಹೊಸ ಬಟ್ಟೆ ಹಾಕಿಕೊಂಡಿದ್ದರೆ ಕಾಂಗ್ರೆಸ್‌ನವರು ಸ್ಕ್ಯಾನ್ ಮಾಡಿ ನೋಡುತ್ತಿದ್ದರು. ಈಗ ಪರಿಸ್ಥಿತಿ ಹಾಗಿಲ್ಲ. ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕಿದೆ. ಕಾಂಗ್ರೆಸ್ ಮುಖಂಡರಿಗೆ ಹುಚ್ಚು ಹಿಡಿದಿದೆ’ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಅವರು ಹುಮನಾಬಾದ್ ಪಾಟೀಲ ಕುಟುಂಬದವರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
‘ಸಮಾಜವಾದಿಯಲ್ಲ ಮಜಾವಾದಿ’
‘ಪ್ರಧಾನಿ ನರೇಂದ್ರ ಮೋದಿಯವರು ವಿಲಾಸಿ ಜೀವನ ನಡೆಸುತ್ತಿದ್ದಾರೆ ಎಂದು ಸಮಾಜವಾದಿಯೊಬ್ಬರು ಹೇಳಿದ್ದಾರೆ. ಆದರೆ ಅವರು ಸಮಾಜವಾದಿಯಲ್ಲ ಮಜಾವಾದಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಅವರು ಆಳಂದ ಶಾಸಕ ಬಿ.ಆರ್. ಪಾಟೀಲ ಅವರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು. ‘ಕಾಂಗ್ರೆಸ್ ಕಾಲದಲ್ಲಿ ಭಾರತ ಬಡ ದೇಶವಾಗಿತ್ತು. ಈಗ ಭಾರತ ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ಐದನೇ ಸ್ಥಾನದಲ್ಲಿದೆ. ಮೂಲಸೌಕರ್ಯ ಹೆಚ್ಚಾಗಿದೆ. ಅರ್ಧ ದೆಹಲಿಯಲ್ಲಿ ಕಾಂಗ್ರೆಸ್‌ನವರ ಸಮಾಧಿಗಳಿವೆ. ಆದರೆ ಮೋದಿಯವರು ಹೊಸ ಸಂಸತ್ತು ಅನುಭವ ಮಂಟಪ ಮಾದರಿಯಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಮೋದಿಯವರಿಗೆ ಸಂಸಾರವಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಇಡೀ ದೇಶವೇ ಪರಿವಾರ’ ಎಂದು ತಿರುಗೇಟು ನೀಡಿದರು.