ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಸರ್ವರ್‌ ಸಮಸ್ಯೆ; ಸಿಗದ ‘ಯುವನಿಧಿ’

ಜಿಲ್ಲೆಯಲ್ಲಿ ಐದು ಸಾವಿರ ವಿದ್ಯಾರ್ಥಿಗಳಷ್ಟೇ ಹೆಸರು ನೋಂದಣಿ
Published : 24 ಸೆಪ್ಟೆಂಬರ್ 2024, 6:15 IST
Last Updated : 24 ಸೆಪ್ಟೆಂಬರ್ 2024, 6:15 IST
ಫಾಲೋ ಮಾಡಿ
Comments

ಬೀದರ್‌: ಸರ್ವರ್‌ ಸಮಸ್ಯೆಯಿಂದ ನಿರುದ್ಯೋಗಿ ಪದವೀಧರರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಯುವನಿಧಿ’ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

‘ಯುವನಿಧಿ’ ಯೋಜನೆಯ ಲಾಭ ಪಡೆಯಲು ಡಿಪ್ಲೊಮಾ ಹಾಗೂ ಪದವಿ ಪೂರ್ಣಗೊಳಿಸಿದವರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಸಬೇಕು. ಈಗಾಗಲೇ ಹೆಸರು ನೋಂದಣಿ ಮಾಡಿಸಿದ್ದರೆ ಪ್ರತಿ ತಿಂಗಳ 25ನೇ ತಾರೀಖಿನೊಳಗೆ ಉದ್ಯೋಗ ಸಿಕ್ಕರೆ ಸಿಕ್ಕಿದೆ, ಅಥವಾ ಸಿಗದಿದ್ದರೆ ಸಿಕ್ಕಿಲ್ಲ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಸ್ವಯಂ ಘೋಷಿಸಿಕೊಂಡರೆ ಮಾತ್ರ ಯೋಜನೆಯಡಿ ನಿಗದಿಪಡಿಸಿದ ಮೊತ್ತ ಅಭ್ಯರ್ಥಿಗಳ ಖಾತೆಗೆ ಜಮೆ ಆಗುತ್ತದೆ. ಡಿಪ್ಲೊಮಾ ಮುಗಿಸಿದವರಿಗೆ ಮಾಸಿಕ ₹1,500 ಸಾವಿರ, ಪದವೀಧರರಿಗೆ ₹3 ಸಾವಿರ ನೇರ ಖಾತೆಗೆ ಹೋಗುತ್ತದೆ.

ಆದರೆ, ಸೆಪ್ಟೆಂಬರ್‌ ತಿಂಗಳ ಆರಂಭದಿಂದಲೂ ಸಮಸ್ಯೆ ಉದ್ಭವಿಸಿದೆ. ಸ್ವಯಂ ಘೋಷಣೆಗೆ ಅಭ್ಯರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸ್ವಯಂ ಘೋಷಣೆ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೆರಡೇ ದಿನಗಳು ಉಳಿದಿವೆ. ಒಂದು ವೇಳೆ ಈ ಎರಡು ದಿನಗಳಲ್ಲಿ ಮಾಡದಿದ್ದರೆ ಸರ್ಕಾರ ನಿಗದಿಪಡಿಸಿದ ಮೊತ್ತ ಖಾತೆಗೆ ಜಮೆ ಆಗುವುದಿಲ್ಲ. ಈ ಸಂಬಂಧ ಅನೇಕ ಯುವಕ/ಯುವತಿಯರು ನಗರದ ಮೈಲೂರ್‌ ಸಮೀಪದ ಉದ್ಯೋಗ ವಿನಿಮಯ ಕಚೇರಿಗೆ ಭೇಟಿ ಕೊಟ್ಟು ಸಮಸ್ಯೆ ಹೇಳಿಕೊಂಡಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ ಎಂದು ಗೊತ್ತಾಗಿದೆ.

‘ನಾನು ಯುವನಿಧಿ ಪ್ರಾರಂಭವಾದ ದಿನದಿಂದಲೂ ಅದರ ಫಲಾನುಭವಿ. ಮೊದಲ ಎರಡು ತಿಂಗಳು ಎಲ್ಲವೂ ಸರಿಯಾಗಿ ನಡೆಯಿತು. ಆನಂತರ ಈಗ ಯಾವುದೂ ಸರಿ ಇಲ್ಲ. ಮೂರನೇ ತಿಂಗಳಿಗೆ ಕೆಲ ದಾಖಲೆಗಳನ್ನು ಪಡೆದುಕೊಂಡರು. ಇನ್ನೇನು ಸರಿ ಹೋಯಿತು ಎನ್ನುವಷ್ಟರಲ್ಲಿ ಪದೇ ಪದೇ ಸರ್ವರ್ ಸಮಸ್ಯೆ ಉಂಟಾಗುತ್ತಿದೆ’ ಎಂದು ಪದವೀಧರೆ ಅನಿತಾ ಗೋಳು ತೋಡಿಕೊಂಡಿದ್ದಾರೆ.

‘ಈ ಸಂಬಂಧ ಉದ್ಯೋಗ ವಿನಿಮಯ ಕಚೇರಿಗೆ ವಿಚಾರಿಸಲು ಅನೇಕ ಸಲ ಹೋಗಿದ್ದೆ. ಅಲ್ಲಿಗೆ ಯಾವಾಗ ಹೋದರೂ ಅಧಿಕಾರಿಯೇ ಇರುವುದಿಲ್ಲ. ನಮ್ಮ ಸಮಸ್ಯೆ ಯಾರಿಗೆ ಹೇಳಿಕೊಳ್ಳಬೇಕು. ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬಂತೆ ನಮ್ಮ ಪರಿಸ್ಥಿತಿ ಆಗಿದೆ. ಈ ಹಿಂದಿನ ಎರಡೂ ತಿಂಗಳು ಸ್ವಯಂ ಘೋಷಣೆ ದೃಢೀಕರಣ ಮಾಡಿದ್ದರೂ ಖಾತೆಗೆ ಹಣ ಜಮೆ ಆಗಿಲ್ಲ. ನನ್ನಂತೆ ಜಿಲ್ಲೆಯಲ್ಲಿ ಅನೇಕರಿಗೆ ಹಣ ಬಂದಿಲ್ಲ’ ಎಂದು ಹೇಳಿದ್ದಾರೆ.

‘ಒಂದನೇ ತಾರೀಖಿನಿಂದ 25ನೇ ತಾರೀಖಿನೊಳಗೆ ಯಾವಾಗ ಬೇಕಾದರೂ ಸ್ವಯಂ ಘೋಷಣೆ ದೃಢೀಕರಣಕ್ಕೆ ಕಾಲಾವಕಾಶ ನೀಡಲಾಗಿದೆ. ಆದರೆ, ಸೆಪ್ಟೆಂಬರ್‌ ತಿಂಗಳ ಮೊದಲ ವಾರದಿಂದ ಪ್ರಯತ್ನಿಸುತ್ತಿರುವೆ. ಸಿಸ್ಟಂ ಪದೇ ಪದೇ ಹ್ಯಾಂಗ್‌ ಆಗುತ್ತಿದೆ. ನನ್ನ ಸಿಸ್ಟಿಂನಲ್ಲೇ ಏನೋ ಸಮಸ್ಯೆ ಇರಬಹುದು ಎಂದು ಸ್ನೇಹಿತರು, ಸೈಬರ್‌ ಕೇಂದ್ರಗಳಲ್ಲಿ ವಿಚಾರಿಸಿದಾಗ ಎಲ್ಲೆಡೆ ಸಮಸ್ಯೆ ಇರುವುದು ಗೊತ್ತಾಗಿ ಸುಮ್ಮನಾದೆ. ಸರ್ಕಾರ ಯೋಜನೆ ಘೋಷಿಸಿ ಸುಮ್ಮನಾದರೆ ಸರಿಯಲ್ಲ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅದರ ಹೆಸರಲ್ಲಿ ಪುಕ್ಕಟ್ಟೆ ಪ್ರಚಾರ ಪಡೆಯಬಾರದು’ ಎಂದು ಪದವೀಧರ ರಾಜೇಶ್‌ ಅಸಮಾಧಾನದಿಂದ ನುಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಅಧಿಕಾರಿ ಬಸವರಾಜ ಅವರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಇಡೀ ರಾಜ್ಯದಲ್ಲೇ ‘ಯುವನಿಧಿ’ ಯೋಜನೆಯಡಿ ನಿರುದ್ಯೋಗಿಗಳ ನೋಂದಣಿ ಸಂಖ್ಯೆ ಬಹಳ ಕಡಿಮೆಯಾಗಿದೆ. ಯೋಜನೆ ಕುರಿತು ಕಾಲೇಜುಗಳಲ್ಲಿ ಹೆಚ್ಚಿನ ಪ್ರಚಾರ ಕೈಗೊಂಡು, ಅದರ ಪ್ರಯೋಜನ ಹೆಚ್ಚಿನವರಿಗೆ ತಲುಪಿಸಲು ಸೂಚಿಸಲಾಗಿತ್ತು. ಹೀಗಿದ್ದರೂ ಬದಲಾವಣೆ ಕಂಡಿಲ್ಲ. 

ಮೂಲಗಳ ಪ್ರಕಾರ, ಬೀದರ್‌ ಜಿಲ್ಲೆಯೊಂದರಲ್ಲಿ ಕಳೆದ ಸಾಲಿನಲ್ಲಿ ಪದವಿ, ಡಿಪ್ಲೊಮಾ ಪೂರ್ಣಗೊಳಿಸಿ, ಉದ್ಯೋಗದ ನಿರೀಕ್ಷೆಯಲ್ಲಿ 12 ರಿಂದ 15 ಸಾವಿರ ಯುವಕ/ಯುವತಿಯರಿದ್ದಾರೆ. ಆದರೆ, ಯೋಜನೆಯಡಿ ಐದು ಸಾವಿರಕ್ಕೂ ಕಡಿಮೆ ನೋಂದಣಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT