ಯಳಂದೂರು: ತಾಲ್ಲೂಕಿನ ಅಗರ-ಮಾಂಬಳ್ಳಿ ಗ್ರಾಮದ ಹಿಂಡಿ ಮಾರಮ್ಮ ದೀಪಾವಳಿ ಕೊಂಡೋತ್ಸವ ಬುಧವಾರ ಸಂಜೆ ಅಪಾರ ಭಕ್ತರ ಜನಸ್ತೋಮದ ಜಯ ಘೋಷಗಳ ನಡುವೆ ಅದ್ದೂರಿಯಾಗಿ ಜರುಗಿತು.

ಸಂಜೆ ಸೂರ್ಯನ ಹೊಂಗಿರಣ ಜಾರುವ ಸಮಯದಲ್ಲಿ ಉತ್ಸವದ ಸಡಗರ-ಸಂಭ್ರಮ ಗ್ರಾಮದಲ್ಲಿ ಪ್ರತಿಧ್ವನಿಸಿತು. ಮಾರಮ್ಮನ ಉತ್ಸವ ಮೂರ್ತಿ ಹಾಗೂ ದೇವರ ಸತ್ತಿಗೆ ಕೊಂಡ ಸ್ಪರ್ಶಿಸುತ್ತಿದ್ದಂತೆ ಭಕ್ತರು ಧೂಪ ತೂರಿ ಕೊಂಡದ ಹಾದಿಯಲ್ಲಿ ಸುಗಂಧ ತುಂಬಿದರು. ನಂತರ ನೂರಾರು ದೈವಗಳು ಸಾಲಾಗಿ ಸಾಗುತ್ತಿದ್ದಂತೆ ಭಕ್ತರು ಶ್ರದ್ಧಾ ಭಕ್ತಿಯಿಂದ ಕೊಂಡದ ಭಸ್ಮವನ್ನು ಹಣೆಗೆ ಬಳಿದುಕೊಂಡರು.

ದೇವಳದಲ್ಲಿ ಮುಂಜಾನೆಯಿಂದ ಕೊಂಡೋತ್ಸವ ಪೂರ್ವದ ದೈವಿಕ ಪೂಜಾ ಕೈಂಕರ್ಯಗಳನ್ನು ಪೂರ್ಣಗೊಳಿಸಲಾಗಿತ್ತು. ಬಣ್ಣಬಣ್ಣದ ಹೂಗಳಿಂದ ಸತ್ತಿಗೆ, ಸೂರಿಪಾನಿ ಅಲಂಕರಿಸಿ ಜಾತ್ರೋತ್ಸವಕ್ಕೆ ಸಿದ್ಧತೆ ಮಾಡಲಾಗಿತ್ತು. ಜೇಷ್ಠ ನಕ್ಷತ್ರ ಕಾರ್ತಿಕ ಮಾಸದಲ್ಲಿ ಜರುಗುವ ಉತ್ಸವಕ್ಕೆ ನಾಡು ದೇಶದ ಪುರ ಪ್ರಮುಖರು ಮತ್ತು ರಾಜ್ಯದ ವಿವಿಧ ಭಾಗಗಳಿಂದ ಆಪಾರ ಭಕ್ತರು ಸೇರಿ, ಹಬ್ಬಕ್ಕೆ ಮೆರಗು ತುಂಬಿದ್ದರು.

ಮಧ್ಯಾಹ್ನ ಆಲಯದ ಮುಂಭಾಗ ಮಂಗಳವಾದ್ಯ ಮೊಳಗಿಸಿ ಮಾರಮ್ಮ ಉತ್ಸವ ಮೂರ್ತಿಯ ಪಲ್ಲಕ್ಕಿ ಹಾಗೂ ಸತ್ತಿಗೆಗೆ ಪೂಜೆ ಸಲ್ಲಿಸಲಾಯಿತು. ಹರಕೆ ಹೊತ್ತ ಭಕ್ತರು ಹಳದಿ ವಸ್ತ್ರ, ಹೂ ಧರಿಸಿ, ಅರಿಸಿನ, ಚಂದನ ಲೇಪಿಸಿಕೊಂಡು ಬಾಯಿಗೆ ಬೀಗ ಹಾಕಿಕೊಳ್ಳುವ ಸಂಪ್ರದಾಯ ಪೂರೈಸಿದರು. ಸಂಬಂಧಿಗಳು ಕಬ್ಬಿಣದ ಸನಿಕೆ ಚುಚ್ಚುವಾಗ ಭಕ್ತರಿಗೆ ನೆರವಾದರು. ಈ ಸಮಯದಲ್ಲಿ ನವ ದುರ್ಗೆಯರನ್ನು ಸ್ಮರಿಸಿ, ವ್ರತಾಚರಣೆ ಪೂರ್ಣಗೊಳಿಸಿದರು.

ತಮಿಳುನಾಡಿನ ಭಕ್ತರು ಸುವರ್ಣಾವತಿ ನದಿಯಲ್ಲಿ ಮಿಂದು, ಮಡಿಯುಟ್ಟು ವಿಶೇಷವಾಗಿ ಅಲಂಕರಿಸಿದ ಸಪ್ತ ಮಾತೃಕೆಯರ ದರ್ಶನ ಪಡೆದರು. ಸ್ಥಳೀಯರು ದೇವಿಗೆ ನಿಂಬೆಹಣ್ಣಿನ ದೀಪ ಬೆಳಗಿ, ಹರಕೆ ಒಪ್ಪಿಸಿದರು. ಸರತಿ ಸಾಲಿನಲ್ಲಿ ನಿಂತ ಭಕ್ತರು ಶ್ರದ್ಧಾ ಭಕ್ತಿಯಿಂದ ಫಲಪುಷ್ಪ ಎಳನೀರು, ಸಮರ್ಪಿಸಿದರು. ಸಮಂಗಲಿಯರು ದೇವಿಗೆ ತಂಪಿನಾರತಿ ಬೆಳಗಿದರು. ರಾತ್ರಿ ಪೂರ ಸಾಗಿದ ಮೆರವಣಿಗೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡರು. ಗುರುವಾರ ದೂಳ್ ಉತ್ಸವದೊಂದಿಗೆ ಹಬ್ಬ ಸಂಪನ್ನಗೊಳ್ಳಲಿದೆ ಎಂದು ಗ್ರಾಮಸ್ಥರು ಹೇಳಿದರು.

ಹಬ್ಬದ ಅಂಗವಾಗಿ ಯಳಂದೂರು-ಕೊಳ್ಳೇಗಾಲ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬೇರೆ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖಂಡರು ಮತ್ತು ಜನ ಪ್ರತಿನಿಧಿಗಳು ವಿಶೇಷ ದರ್ಶನ ಪಡೆದರು. ಅಗರ ಠಾಣಾ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಕೊಂಡಕ್ಕೆ ಬಿದ್ದು ಇಬ್ಬರಿಗೆ ಗಾಯ

ಕೊಂಡೋತ್ಸವದ ಸಂದರ್ಭದಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ಇಬ್ಬರು ಗಾಯಗೊಂಡರು. ಒಬ್ಬರನ್ನು ಅಗರ ಗ್ರಾಮದ ಮಹದೇವ ಎಂದು ಗುರುತಿಸಲಾಗಿದೆ. ಮತ್ತೊಬ್ಬರ ವಿವರ ಗೊತ್ತಾಗಿಲ್ಲ. ಈ ಸಂದರ್ಭದಲ್ಲಿ ಉಂಟಾದ ತಳ್ಳಾಟದಲ್ಲಿ ಇನ್ನೂ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಹದೇವ ಮತ್ತು ಮತ್ತೊಬ್ಬರಿಗೆ ಅಗರ–ಮಾಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.