ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆ ದಾಟಲು ಜೀವ ಪಣಕ್ಕಿಡಬೇಕು !

ಗರ್ಭಿಣಿ, ಬಾಣಂತಿಯರಿಗೆ ಜಿಲ್ಲಾ ಆಸ್ಪತ್ರೆಯ ಪ್ರವೇಶವೇ ಪ್ರಯಾಸ; ಮೈಮೇಲೆ ಎರಗಿ ಬರುವ ವಾಹನಗಳು; ರಸ್ತೆ ಮೇಲೆ ಸಂಚರಿಸುವ ಅನಿವಾರ್ಯತೆ
Published : 15 ಸೆಪ್ಟೆಂಬರ್ 2024, 5:56 IST
Last Updated : 15 ಸೆಪ್ಟೆಂಬರ್ 2024, 5:56 IST
ಫಾಲೋ ಮಾಡಿ
Comments

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಚಿಕಿತ್ಸೆ ಪಡೆಯಲು ಬರುವ ಗರ್ಭಿಣಿಯರು, ಬಾಣಂತಿಯರು, ರೋಗಿಗಳು ಹಾಗೂ ಮಕ್ಕಳು ಜೀವ ಕೈಲಿಡಿದು ರಸ್ತೆ ದಾಟಬೇಕಾಗಿದೆ.

ರಸ್ತೆಯ ಎರಡೂ ಕಡೆಗಳಲ್ಲಿ ಶರವೇಗದಲ್ಲಿ ನುಗ್ಗುವ ವಾಹನಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ರಸ್ತೆ ದಾಟಿ ಜಿಲ್ಲಾ ಆಸ್ಪತ್ರೆಗೆ ಪ್ರವೇಶ ಪಡೆಯಲು ರೋಗಿಗಳು ಜೀವವನ್ನೇ ಪಣಕ್ಕಿಡಬೇಕು. ನಡೆಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಗರ್ಭಿಣಿ, ಬಾಣಂತಿಯರ ಸಹಿತ ಪ್ರಪಂಚವನ್ನೇ ನೋಡದ ಕಂದಮ್ಮಗಳ ಜೀವಕ್ಕೆ ಕಂಟಕ ಎದುರಾಗುವುದು ಖಚಿತ.

ಸಮಸ್ಯೆಗೆ ಕಾರಣ:

ಜಿಲ್ಲಾ ಆಸ್ಪತ್ರೆಯ ಮುಂಭಾಗದ ಪಾದಚಾರಿ ಮಾರ್ಗ ಸಂಪೂರ್ಣವಾಗಿ ಅತಿಕ್ರಮಣವಾಗಿದೆ. ಮಕ್ಕಳ ಬಟ್ಟೆ, ಹಾಸಿಗೆ, ಸೊಳ್ಳೆಪರದೆ, ಬೆಡ್‌ಶೀಟ್‌ ಹಾಗೂ ಹಣ್ಣುಗಳನ್ನು ಮಾರಾಟ ಮಾಡುವವರು ಒತ್ತುವರಿ ಮಾಡಿಕೊಂಡಿದ್ದಾರೆ. ಆಸ್ಪತ್ರೆಯ ಮುಂಭಾಗದ ರಸ್ತೆಯ ಬಹುಪಾಲು ಜಾಗ ದ್ವಿಚಕ್ರ ವಾಹನಗಳ ನಿಲುಗಡೆಗೆ ಬಳಕೆಯಾಗಿದೆ.

ವ್ಯಾಪಾರಿಗಳು ಹಾಗೂ ಸವಾರರು ಬಳಕೆ ಮಾಡಿಕೊಂಡು ಬಿಟ್ಟಿರುವ ಕಿರಿದಾದ ರಸ್ತೆಯಲ್ಲಿ ರೋಗಿಗಳು ಹಾಗೂ ವಾಹನಗಳು ಜೊತೆಯಲ್ಲಿಯೇ ಸಂಚರಿಸಬೇಕಾಗಿದೆ. ಇಷ್ಟೆಲ್ಲ ಅಧ್ವಾನಗಳು ಕಣ್ಣಿಗೆ ರಾಚುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಸಮಸ್ಯೆಯನ್ನು ಪರಿಹಾರ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಮೇಲೆ ಹಳ್ಳಿಗಾಡಿನ ಜನರು ಹೆಚ್ಚು ಅವಲಂಬಿತರಾಗಿದ್ದಾರೆ. ಬಡ ಹಾಗೂ ಕೆಳ ಮಧ್ಯಮ ವರ್ಗದವರ ಪಾಲಿಗೆ ಆಧಾರವಾಗಿರುವ ಜಿಲ್ಲಾ ಆಸ್ಪತ್ರೆಗೆ ದೂರದ ಊರುಗಳಿಂದ ನೂರಾರು ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ. ಗ್ರಾಮೀಣ ಭಾಗಗಳು ಸೇರಿದಂತೆ, ನಗರ, ಪಟ್ಟಣಗಳ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಬರುತ್ತಾರೆ.

ಹೀಗೆ ಬರುವ ರೋಗಿಗಳು ಆಸ್ಪತ್ರೆಯ ಆವರಣ ತಲುಪುವುದೇ ಸವಾಲು. ಯಮಸ್ವರೂಪಿಯಾಗಿ ನುಗ್ಗುವ ವಾಹನಗಳ ನಡುವೆ ತುಂಬು ಗರ್ಭಿಣಿಯರು ರಸ್ತೆ ದಾಟುವುದನ್ನು ನೋಡಿದಾಗ ಎಂಥವರ ಮೈ ಜುಮ್ಮೆನಿಸುತ್ತದೆ. ಗರ್ಭಿಣಿಯರು ಒಂದು ಕೈನಲ್ಲಿ ವೈದ್ಯರು ಬರೆದುಕೊಟ್ಟ ಔಷಧಗಳ ಚೀಟಿ, ಎಕ್ಸ್‌ರೇ ಸಹಿತ ದಾಖಲೆಗಳ ಕವರ್‌ ಹಿಡಿದುಕೊಂಡು, ಮತ್ತೊಂದು ಕೈನಲ್ಲಿ ಚಿಕ್ಕ ಮಗುವನ್ನು ಹಿಡಿದು ಪ್ರಯಾಸದಿಂದ ಹೆಜ್ಜೆ ಹಾಕುವ ದೃಶ್ಯಗಳು ಭಯ ಹುಟ್ಟಿಸುತ್ತವೆ.

ಆಸ್ಪತ್ರೆಯ ಆವರಣ ಪ್ರವೇಶಿಸಲು ಮೈತುಂಬ ಕಣ್ಣಾಗಿರಬೇಕು. ರಸ್ತೆಯ ಎರಡೂ ಬದಿಗಳನ್ನು ನೋಡಿಕೊಂಡೇ ರಸ್ತೆ ದಾಟಬೇಕು. ಇಲ್ಲವಾದರೆ ಏಕಮುಖವಾಗಿ (ಒನ್‌ ವೇ) ಸಂಚರಿಸುವ ವಾಹನಗಳು ಬಂದು ಡಿಕ್ಕಿ ಹೊಡೆಯುತ್ತವೆ.

ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗುವ ರೋಗಿಗಳಿಗೆ ನಿತ್ಯ ಬೆಳಿಗ್ಗೆ ಕಾಫಿ, ತಿಂಡಿ, ಜ್ಯೂಸ್‌ ತರಲು, ವೈದ್ಯರು ಬರೆದುಕೊಟ್ಟ ಔಷದಗಳನ್ನು ತರಲು, ಖಾಸಗಿ ಲ್ಯಾಬೋರೇಟರಿಗಳಿಂದ ವರದಿಗಳನ್ನು ಪಡೆಯಲು, ದಾಖಲೆಗಳನ್ನು ಝೆರಾಕ್ಸ್‌ ಮಾಡಿಸಲು ರೋಗಿಗಳ ಸಂಬಂಧಿಗಳಿಗೆ ರಸ್ತೆ ದಾಟುವ ಅನಿವಾರ್ಯತೆ ಇರುವುದರಿಂದ ನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಪಘಾತದಲ್ಲಿ ಪೆಟ್ಟುಮಾಡಿಕೊಂಡವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಸಾಮಾನ್ಯವಾಗಿಬಿಟ್ಟಿದೆ ಎನ್ನುತ್ತಾರೆ ಸ್ಥಳೀಯರಾದ ವೆಂಕಟೇಶ್‌.

ಚಾಮರಾಜನಗರ ಜೋಡಿ ರಸ್ತೆ ದಾಟಿಕೊಂಡು ಜಿಲ್ಲಾ ಆಸ್ಪತ್ರೆ ಪ್ರವೇಶಿಸುತ್ತಿರುವುದು
ಚಾಮರಾಜನಗರ ಜೋಡಿ ರಸ್ತೆ ದಾಟಿಕೊಂಡು ಜಿಲ್ಲಾ ಆಸ್ಪತ್ರೆ ಪ್ರವೇಶಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT