ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮನ್‌ ಕಿ ಬಾತ್‌’ನಲ್ಲಿ ಚಾಮರಾಜನಗರದ ಮಹಿಳೆ ವರ್ಷಾ ಸಾಧನೆ ಪ್ರಸ್ತಾಪಿಸಿದ ಮೋದಿ

ಕಸದಿಂದ ರಸ: ಬಾಳೆದಿಂಡಿನಿಂದ ಗೊಬ್ಬರ, ಕರಕುಶಲ ವಸ್ತುಗಳ ತಯಾರಿಕೆ
Published 26 ನವೆಂಬರ್ 2023, 13:14 IST
Last Updated 26 ನವೆಂಬರ್ 2023, 13:14 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ನಡೆಸಿಕೊಡುವ ‘ಮನ್‌ ಕಿ ಬಾತ್‌’ನ ಈ ಬಾರಿಯ ಸಂಚಿಕೆಯಲ್ಲಿ, ಬಾಳೆ ದಿಂಡಿನಿಂದ ಗೊಬ್ಬರ, ಅದರ ನಾರಿನಿಂದ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸುತ್ತಿರುವ ಜಿಲ್ಲೆಯ ಉಮ್ಮತ್ತೂರಿನ ವರ್ಷಾ ಅವರ ಹೆಸರನ್ನು ಪ್ರಸ್ತಾಪಿಸಿ, ಅವರು ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದ್ದಾರೆ. 

ಎರಡು ವರ್ಷಗಳ ಹಿಂದೆ ಮೋದಿಯವರು ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಅಂಶಗಳಿಂದ ಪ್ರೇರಣೆಗೊಂಡು, ಎಂಟೆಕ್‌ ಪದವೀಧರೆ ವರ್ಷಾ ಅವರು ಆಕೃತಿ ಇಕೊ ಫ್ರೆಂಡ್ಲಿ ಎಂಟರ್‌ಪ್ರೈಸಸ್‌ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಬಾಳೆ ದಿಂಡಿನಿಂದ ನಾರು ತೆಗೆದು ಅದರಿಂದ ಅಲಂಕಾರಿಕ ಮತ್ತು ಮನೆಯಲ್ಲಿ ಬಳಸಬಹುದಾದ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.  

ಭಾನುವಾರ ಪ್ರಸಾರವಾದ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಮನ್‌ ಕಿ ಬಾತ್‌ ಕಾರ್ಯಕ್ರಮ ಹಲವರಿಗೆ ಪ್ರೇರಣೆಯಾಗಿದೆ’ ಎಂದು ಹೇಳುತ್ತಾ, ವರ್ಷಾ ಮಾಡುತ್ತಿರುವ ಕೆಲಸವನ್ನು ವಿವರಿಸಿದರು. 

‘ವರ್ಷಾ ಅವರು ಬಾಳೆದಿಂಡಿನಿಂದ ಜೈವಿಕ ಗೊಬ್ಬರ ತಯಾರಿಸಲು ಆರಂಭಿಸಿದರು. ಪ್ರಕೃತಿಯ ಬಗ್ಗೆ ತುಂಬಾ ಪ್ರೀತಿ ಹೊಂದಿರುವ ವರ್ಷಾ ಅವರ ಈ ಕೆಲಸ, ಇತರರಿಗೆ ಉದ್ಯೋಗ ಅವಕಾಶ ನೀಡಿದೆ’ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.   

ಸಂತಸ: ಪ್ರಧಾನಿ ಮೋದಿ ಅವರು ತಮ್ಮ ಕೆಲಸವನ್ನು ಗುರುತಿಸಿರುವುದಕ್ಕೆ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ವರ್ಷಾ, ‘ಬಾಳೆ ಗೊನೆ ಕಟಾವಿನ ನಂತರ ತ್ಯಾಜ್ಯ ಎಂದು ಎಸೆಯಲಾಗುವ ಬಾಳೆ ದಿಂಡಿನಿಂದ ವಿವಿಧ ವಸ್ತುಗಳನ್ನು ತಯಾರಿಸುತ್ತಿದ್ದೇನೆ. ನನ್ನ ಈ ಕಾರ್ಯಕ್ಕೆ ಮನ್‌ ಕೀ ಬಾತ್‌ ಕಾರ್ಯಕ್ರಮ ಪ್ರೇರಣೆ. ಪ್ರಧಾನಿಯವರು ಅದನ್ನು ಗುರುತಿಸುತ್ತಾರೆ ಎಂದು ನಿರೀಕ್ಷಿರಲಿಲ್ಲ. ತುಂಬಾ ಖುಷಿಯಾಗಿದೆ’ ಎಂದರು. 

ಒಂದೂವರೆ ವರ್ಷದ ಹಿಂದೆ ಸ್ಥಾಪನೆ

ಎಂ.ಟೆಕ್‌ ಓದಿರುವ ವರ್ಷಾ ಅವರು ತಮ್ಮ ಪತಿ ಶ್ರೀಕಂಠಸ್ವಾಮಿ ಸಹಕಾರದೊಂದಿಗೆ ತಾಲ್ಲೂಕಿನ ಉಮ್ಮತ್ತೂರು ಬಳಿ ಇರುವ ತಮ್ಮ ಜಮೀನಿನಲ್ಲಿ ಒಂದೂವರೆ ವರ್ಷದ ಹಿಂದೆ ಪುಟ್ಟ ಘಟಕ ಆರಂಭಿಸಿದ್ದಾರೆ. ಎಂಟು ಜನರಿಗೆ ಉದ್ಯೋಗ ನೀಡಿದ್ದಾರೆ. 

ಬಾಳೆಗೊನೆ ಕಟಾವಿನ ನಂತರ ಅನುಪಯುಕ್ತವಾಗುವ ಬಾಳೆ ದಿಂಡಿನ ಕಾಂಡದಿಂದ ನಾರು ಸಂಗ್ರಹಿಸಿ, ಅದರಿಂದ ಚಾಪೆ, ಮ್ಯಾಟ್‌, ಕೈಚೀಲ, ಗಡಿಯಾರ ಸೇರಿದಂತೆ ವಿವಿಧ ಕರ ಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ತಾವು ತಯಾರಿಸಿದ ಉತ್ಪನ್ನಗಳನ್ನು ಆನ್‌ಲೈನ್‌ ವೇದಿಕೆ, ಇ–ಶಾಪಿಂಗ್‌ ತಾಣಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ.  

‘ದೀರ್ಘ ಸಮಯ ಅಧ್ಯಯನ ನಡೆಸಿದ ನಂತರ, ಸಣ್ಣ ಪ್ರಮಾಣದಲ್ಲಿ ಘಟಕ ಆರಂಭಿಸಿದ್ದೆವು. ಈಗ ಎಂಟು ಜನರು ಕೆಲಸ ಮಾಡುತ್ತಿದ್ದಾರೆ. ಜನರ ಸ್ಪಂದನೆ ಉತ್ತಮವಾಗಿದೆ. ಕಸದಿಂದ ರಸ ತೆಗೆಯುತ್ತಿರುವ ಖುಷಿಯೂ ನಮಗಿದೆ’ ಎಂದು ವರ್ಷಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT