ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಅದ್ದೂರಿ ಸ್ವಾಗತ; ಶಾಲೆಗಳಲ್ಲಿ ಚಿಣ್ಣರ ಸಂಭ್ರಮ

Published : 31 ಮೇ 2024, 15:57 IST
Last Updated : 31 ಮೇ 2024, 15:57 IST
ಫಾಲೋ ಮಾಡಿ
Comments
ಚಾಮರಾಜನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು
ಚಾಮರಾಜನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು
ಜಿಲ್ಲೆಯಲ್ಲಿ ಶೇ 50ರಷ್ಟು ಹಾಜರಾತಿ ಶಿಕ್ಷಕಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗು ಕೊಡುಗೆ ಬ್ಯಾಂಡ್ ಸೆಟ್ ಜೊತೆ ಅಬ್ಬರದ ಮೆರವಣಿಗೆ
ಎಲ್ಲ ಶಾಲೆಗಳಲ್ಲಿ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಎರಡು ಜೊತೆ ಸಮವಸ್ತ್ರ ಪಠ್ಯಪುಸ್ತಕಗಳನ್ನೂ ವಿತರಿಸಿದ್ದೇವೆ
ರಾಮಚಂದ್ರ ರಾಜೇ ಅರಸ್‌ ಡಿಡಿಪಿಐ
ಚಂದಕವಾಡಿ: ಇ–ಕಲಿಕೆ ಕೇಂದ್ರ ಉದ್ಘಾಟನೆ
ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಪಬ್ಲಿಕ್‌ ಶಾಲೆಯಲ್ಲಿ ನಡೆದ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್‌ ಅವರು ಇ–ಕಲಿಕಾ ಕೇಂದ್ರ ಮತ್ತು ದಾಖಲಾತಿ ಆಂದೋಲನವನ್ನು ಉದ್ಘಾಟಿಸಿದರು.  ನಂತರ ಮಾತನಾಡಿದ ಅವರು ‘ಶಿಕ್ಷಕರು ಮಕ್ಕಳನ್ನು ಅರಿತು ಪಾಠ ಮಾಡಿದರೆ  ಗುಣಮಟ್ಟದ ಫಲಿತಾಂಶ ಬರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದರು.  ‘ಜಿಲ್ಲೆಯಲ್ಲಿ ಚಂದಕವಾಡಿ ಶಾಲೆ ದೊಡ್ಡ ಶಾಲೆಯಾಗಿದೆ. ಇಲ್ಲಿ ಹಿಂದುಳಿದ ಮತ್ತು ಬಡವರ್ಗದ ಮಕ್ಕಳೇ ಹೆಚ್ಚಾಗಿ ಬರುತ್ತಾರೆ. ಸರ್ಕಾರಿ ಶಾಲೆಯನ್ನೇ ನಂಬಿದ್ದಾರೆ. ಹಾಗಾಗಿ ಶಾಲೆಗೆ ಶಿಕ್ಷಕರು ಮತ್ತು ಶೌಚಾಲಯದ ಕೊರತೆ ಇದ್ದರೆ ತಕ್ಷಣದಲ್ಲೇ  ಸಮಸ್ಯೆ ಬಗೆಹರಿಸಲಾಗುವುದು. ಈ ಶಾಲೆಯನ್ನು ದತ್ತು ಮಾದರಿಯಲ್ಲಿ ಗಮನಹರಿಸುತ್ತೇನೆ. ಸರ್ಕಾರ ಆರಂಭದಲ್ಲೇ ಕೊರತೆಯಾಗದಂತೆ ಎರಡು ಜೊತೆ ಸಮವಸ್ತ್ರ ಪಠ್ಯ ಪುಸ್ತಕ ಶೂ ಸಾಕ್ಸ್‌ ಬಿಸಿ ಊಟ ನೀಡುತ್ತಿದೆ’ ಎಂದರು.  ‘ವಿದ್ಯಾರ್ಥಿಗಳು ನಿರಂತರವಾಗಿ ಶಾಲೆಗೆ ಬರಬೇಕು. ಓದಿನಲ್ಲಿ ಶ್ರಮಹಾಕಬೇಕು ಇದರಿಂದ ಯಾವ ಶಾಲೆಲೂ ಸೋಲುವುದಿಲ್ಲ’ ಎಂದು ಕಿವಿ ಮಾತು ಹೇಳಿದರು.  ಪ್ರಾಂಶುಪಾಲ ಎಚ್.ಎನ್.ಸ್ವಾಮಿ ಉಪ ಪ್ರಾಂಶುಪಾಲ ಚಂದ್ರಶೇಖರ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ್ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಮಸ್ವಾಮಿ ಬಿ.ಆರ್.ಪಿ ಮಹದೇವಯ್ಯ ರಮೇಶ್ ಸಿಆರ್.ಪಿ. ಬಸವಣ್ಣ ಶಾಂತಮೂರ್ತಿ ಸುಬ್ರಹ್ಮಣ್ಯ ಶಿವರಾಜು ಎಂ.ಬಸವರಾಜು ಮಹದೇವಸ್ವಾಮಿ ಬಿ. ಶಿವಣ್ಣ ಬಸವರಾಜು ಕೆ.ಬಿ. ನಾಗರಾಜು ನಾಗ ರತಮ್ಮ ಶೈಲ ಕೋಮಲ ಶಾಲಾಭಿವೃದ್ದಿ ಸಮಿತಿ ಸದಸ್ಯ ಮಲ್ಲು ಇದ್ದರು.
ಚಿಣ್ಣರಲ್ಲಿ ಮೇರೆ ಮೀರಿದ ಉತ್ಸಾಹ
ಗುಂಡ್ಲುಪೇಟೆ: ಎರಡು ತಿಂಗಳು ಬೇಸಿಗೆ ರಜೆಯಲ್ಲಿ ಕಳೆದಿದ್ದ ಮಕ್ಕಳು ಶುಕ್ರವಾರ ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು.   ಬುಧವಾರ ಮತ್ತು ಗುರುವಾರವೇ ಶಿಕ್ಷಕರು ಶಾಲಾ ಕೊಠಡಿಗಳು ಶೌಚಾಲಯ ಅಡುಗೆ ಮನೆ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಮಕ್ಕಳನ್ನು ಸ್ವಾಗತಿಸಲು ಸಿದ್ಧಗೊಳಿಸಿದ್ದರು. ಶುಕ್ರವಾರ ಬೆಳಿಗ್ಗೆ ಶಾಲೆಗೆ ಆಗಮಿಸಿದ ಮಕ್ಕಳಿಗೆಶಿಕ್ಷಕರು ಶಾಲೆಯ ಪ್ರವೇಶ ಭಾಗದಲ್ಲೇ ಸಿಹಿ ತಿನಿಸು ಲೇಖನಿ ಸಾಮಗ್ರಿ ಹೂವು ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು. ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಹಬ್ಬದ ಸಂಭ್ರಮ ಕಂಡುಬಂತು. ಪಾಠ ಪ್ರವಚನ ಕೇಳುವ ಉತ್ಸಾಹದಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ಶಾಲೆಗೆ ಹಾಜರಾದರು. ಹೊಸ ತರಗತಿಗೆ ಕುಳಿತುಕೊಳ್ಳುವ ಸಂಭ್ರಮವೂ ಮಕ್ಕಳ ಮುಖದಲ್ಲಿತ್ತು. ತಾಲ್ಲೂಕಿನ ಮದ್ದೂರು ವಾಲ್ಮೀಕಿ ಆಶ್ರಮ ಶಾಲೆ ನವವಧುವಿನಂತೆ ಶೃಂಗಾರಗೊಳಿಸಲಾಗಿತ್ತು.  ‘ಮೊದಲ ದಿನವನ್ನು ಉತ್ಸವದ ರೀತಿಯಲ್ಲಿ ಆಯೋಜಿಸಲಾಗಿತ್ತು. ಬೆಳಿಗ್ಗೆ ತಿಂಡಿಗೆ  ಉಪ್ಪಿಟ್ಟು ಮತ್ತು ಕೇಸರಿಬಾತ್ ನೀಡಲಾಗಿತ್ತು. ಮಧ್ಯಾಹ್ನ ಬಿಸಿಯೂಟಕ್ಕೆ ವಾಂಗಿಬಾತ್ ಮತ್ತು  ಪಾಯಸ ಮಾಡಿ ಮಕ್ಕಳಿಗೆ  ಉಣಬಡಿಸಲಾಯಿತು’ ಎಂದು ಶಾಲೆಯ ಮುಖ್ಯ ಶಿಕ್ಷಕ ಸ್ವಾಮಿ ಹೇಳಿದರು.  ತಾಲ್ಲೂಕಿನ ಕಾಡಂಚಿನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಂಗಹಳ್ಳಿಯಲ್ಲಿ ಹತ್ತಾರು ಎತ್ತಿನಗಾಡಿಗಳನ್ನು ಶೃಂಗಾರ ಮಾಡಿ ಮಕ್ಕಳನ್ನು ಕೂರಿಸಿ ಊರಿನ ಬೀದಿಗಳಲೆಲ್ಲಾ ಮೆರವಣಿಗೆ ಮಾಡಿದರು.  ನಂತರ ಎಲ್ಲ ಮಕ್ಕಳಿಗೂ ವಿವೇಕಾಂದ ರಾಮಕೃಷ್ಣ ಪರಹಂಸ ಶಾರದಾ ಮಾತೆಯರ ಭಾವಚಿತ್ರವಿರುವ ಸ್ಟಿಕ್ಕರ್ ಹಾಗೂ ಉಚಿತ ಪಠ್ಯ ಪುಸ್ತಕ ಹಾಗೂ ಎರಡು ಜೊತೆ ಸಮವಸ್ತ್ರ ನೀಡಿ ಸ್ವಾಗತ ಕೋರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT