ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹನೂರು: ಕಚೇರಿ ಕೆಲಸಕ್ಕೆ ಎಂಟೇ ಮಂದಿ

ಸಿಬ್ಬಂದಿ ಕೊರತೆಗೆ ನಲುಗಿದ ಪಟ್ಟಣ ಪಂಚಾಯಿತಿ; ಆದಾಯಕ್ಕೂ ಕುತ್ತು
ಫಾಲೋ ಮಾಡಿ
Comments

ಹನೂರು: ಇಲ್ಲಿನ ಪಟ್ಟಣ ಪಂಚಾಯಿತಿಯನ್ನು ಸಿಬ್ಬಂದಿ ಕೊರತೆ ಬಾಧಿಸುತ್ತಿದ್ದು, ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಇರುವ ಅಲ್ಪ ಸಿಬ್ಬಂದಿಯೇ ಎಲ್ಲ ಕೆಲಸಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಪಂಚಾಯಿತಿಗೆ 40 ಸಿಬ್ಬಂದಿ ಮಂಜೂರಾಗಿದೆ. ಮುಖ್ಯಾಧಿಕಾರಿ, ಒಬ್ಬ ಬಿಲ್ ಕಲೆಕ್ಟರ್, ಒಬ್ಬರು ದ್ವಿತೀಯ ದರ್ಜೆ ಸಹಾಯಕ ಹಾಗೂ 11 ಪೌರಕಾರ್ಮಿಕರು ಇದ್ದಾರೆ.ಗುತ್ತಿಗೆ ಆಧಾರದಲ್ಲಿ ಒಬ್ಬರು ಡಾಟಾ ಎಂಟ್ರಿ ಆಪರೇಟರ್‌ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಕಂಪ್ಯೂಟರ್‌ ಜ್ಞಾನ ಹೊಂದಿರುವ ನಾಲ್ವರು ನೀರುಗಂಟಿಗಳು ಕಚೇರಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದಾರೆ. ಹಾಗಾಗಿ, ಇಡೀ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕೆಲಸ ಮಾಡುವವರು ಎಂಟೇ ಮಂದಿ. ಉಳಿದಂತೆಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕ, ಸಮುದಾಯ ಸಂಘಟನಾಧಿಕಾರಿ, ಎಂಜಿನಿಯರ್‌, ಆರೋಗ್ಯ ನಿರೀಕ್ಷಕ ಸೇರಿದಂತೆ 26 ಹುದ್ದೆಗಳು ಖಾಲಿ ಇವೆ. ಇರುವ ಮೂವರು ಸಿಬ್ಬಂದಿಯೇ (ಪೌರ ಕಾರ್ಮಿಕರನ್ನು ಬಿಟ್ಟು) ಎಲ್ಲ ಕೆಲಸಗಳನ್ನು ಮಾಡಬೇಕಾದ ಪರಿಸ್ಥಿತಿ ಇದೆ.

ಅಧಿಕಾರಿಗಳು ಸಾರ್ವಜನಿಕ ಕೆಲಸಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿ ಪಟ್ಟಣ ಪಂಚಾಯಿತಿ ಸದಸ್ಯರು ಮಂಗಳವಾರ ಕಚೇರಿ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರು.

‘ಕಚೇರಿಯಲ್ಲೇ ಇರುವುದೇ ಕೆಲವೇ ಸಿಬ್ಬಂದಿ. ಆದರೂ ಎಲ್ಲರನ್ನೂ ಸರಿದೂಗಿಸಿಕೊಂಡು ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಚೇರಿಯಲ್ಲಿ ಸಿಬ್ಬಂದಿ ಸರಿಯಾಗಿದ್ದರೆ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿದ್ದವು. ಆದರೆ ಶೇ 60ರಷ್ಟು ಸಿಬ್ಬಂದಿ ಕೊರತೆ ಇರುವುದರಿಂದ ಸಮಸ್ಯೆಯಾಗುತ್ತಿದೆ’ ಎಂದು ಹೇಳುತ್ತಾರೆ ಮುಖ್ಯಾಧಿಕಾರಿ ಮೂರ್ತಿ ಅವರು.

₹95 ಲಕ್ಷ ಬಾಡಿಗೆ ಹಣ ಬಾಕಿ: ಆರೋಗ್ಯ ನಿರೀಕ್ಷಕ ಹುದ್ದೆ ಖಾಲಿಯಾಗಿರುವುದರಿಂದ ಇದುವರೆಗೆ ₹95 ಲಕ್ಷ ಬಾಡಿಗೆ ಹಣ ವಸೂಲಾತಿ ಬಾಕಿ ಉಳಿದಿದೆ. ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಿರುವ 24 ಅಂಗಡಿ ಮಳಿಗೆಗಳಿಂದ ₹80 ಲಕ್ಷ ಬಾಡಿಗೆ ಹಣ ಬಾಕಿ ವಸೂಲಾತಿಯಾಗಿಲ್ಲ. ಇದಲ್ಲದೇ ಉದ್ದಿಮೆ ಪರವಾನಿಗೆ ನೀಡಿರುವ 450 ಅಂಗಡಿಗಳಿಂದ ₹15 ಲಕ್ಷ ಹಣ ವಸೂಲಾಗಿಲ್ಲ.

1,500 ಅಕ್ರಮ ನಲ್ಲಿ ಸಂಪರ್ಕ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 1,500 ಅಕ್ರಮ ನಲ್ಲಿ ಸಂಪರ್ಕ ಪಡೆದುಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಕೂಡಲೇ ಅವರೆರೆಲ್ಲರಿಗೂ ಒಂದು ಕಾಲಾವಕಾಶದೊಳಗೆ ಅವುಗಳನ್ನು ಸಕ್ರಮ ಮಾಡಿಕೊಳ್ಳುವಂತೆ ಸೂಚಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ ತಿಳಿಸಿದರು.

ಪೌರಕಾರ್ಮಿಕರ ಕೊರತೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗ 11 ಜನ ಪೌರಕಾರ್ಮಿಕರಿದ್ದಾರೆ. 700 ಜನರಿಗೆ ಒಬ್ಬ ಪೌರಕಾರ್ಮಿಕ ಇರಬೇಕು ಎಂಬುದು ನಿಯಮ. 2011ರ ಜನಗಣತಿಯಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 11,066 ಜನಸಂಖ್ಯೆಯಿದೆ. ಇದರನ್ವಯ 16 ಜನ ಪೌರಕಾರ್ಮಿಕರಿರಬೇಕು. ಈಗ ಪಂಚಾಯಿತಿ ವ್ಯಾಪ್ತಿಯಲ್ಲಿ 18,000 ಜನಸಂಖ್ಯೆಯಿದೆ ಎಂದು ಅಂದಾಜಿಸಲಾಗಿದೆ. ನಿಯಮದಂತೆ 25 ಜನ ಪೌರಕಾರ್ಮಿಕರಿರಬೇಕು. ಆದರೆ, 11 ಜನರೇ ಇರುವುದರಿಂದ ಪಟ್ಟಣದ ಸ್ವಚ್ಛತೆಯ ಮೇಲೆ ಪರಿಣಾಮ ಬೀರುತ್ತಿದೆ.

ತೆರಿಗೆ ವಸೂಲಿ ಬಾಕಿ

ಕಂದಾಯ ನಿರೀಕ್ಷಕರು ಇಲ್ಲದಿರುವುದರಿಂದ ತೆರಿಗೆ ವಸೂಲಾತಿಯೂ ಸರಿಯಾಗಿ ಆಗುತ್ತಿಲ್ಲ.

ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ತೆರಿಗೆ ವರ್ಷಕ್ಕೆ ₹15 ಲಕ್ಷ ವಸೂಲಿಯಾಗಬೇಕು. ನೀರಿನ ಹಳೆಯ ಬಾಕಿ ₹22 ಲಕ್ಷ ತೆರಿಗೆ ವಸೂಲಾತಿಯೂ ಬಾಕಿ ಇದೆ. ಇದುವರೆಗೆ ₹1.7 ಲಕ್ಷ ತೆರಿಗೆ ಮಾತ್ರ ಸಂಗ್ರಹವಾಗಿದೆ.

ಮನೆ, ನಿವೇಶನ ತೆರಿಗೆ ವರ್ಷಕ್ಕೆ ₹30 ಲಕ್ಷ ಸಂಗ್ರಹವಾಗಬೇಕು. ಹಿಂದಿನದ್ದು ₹13.39 ಲಕ್ಷ ಬಾಕಿ ಇದೆ.ಇವರೆಡೂ ಸೇರಿ ಈ ವರ್ಷ ₹44.14 ಲಕ್ಷ ತೆರಿಗೆ ಸಂಗ್ರಹವಾಗಬೇಕು. ಆದರೆ, ಇಲ್ಲಿಯವರೆಗೆ ₹20.45 ಲಕ್ಷ ತೆರಿಗೆ ಹಣ ವಸೂಲಾತಿಯಾಗಿದೆ.

ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಕಾರ್ಯಗಳಿಗೆ ಅಡಚಣೆಯುಂಟಾಗುತ್ತಿರುವುದು ಒಂದೆಡೆಯಾದರೆ ಆದಾಯವೂ ಇಲ್ಲದಂತಾಗಿದೆ. ಈ ನಡುವೆ ಇ-ಸ್ವತ್ತು ಮಾಡಿಸಲು ಬರುವ ನಾಗರಿಕರಿಂದ ತೆರಿಗೆ ವಸೂಲಾತಿ ಮಾಡಿದ ಪರಿಣಾಮ ಅಷ್ಟು ಪ್ರಮಾಣದ ತೆರಿಗೆ ವಸೂಲು ಮಾಡಲು ಸಾಧ್ಯವಾಗಿದೆ. ಸಾಧ್ಯವಾಯಿತು. ಸಿಬ್ಬಂದಿ ಕೊರತೆಯನ್ನು ನೀಗಿಸುವ ಸಲುವಾಗಿ 15 ನೀರುಗಂಟಿಗಳ ಪೈಕಿ ಕಂಪ್ಯೂಟರ್ ಜ್ಞಾನವಿರುವ ನಾಲ್ವರನ್ನು ಕಚೇರಿಗೆ ಕೆಲಸಕ್ಕೆ ಬಳಸಿಕೊಂಡು ಸಿಬ್ಬಂದಿ ಕೊರತೆ ಸರಿದೂಗಿಸಲು ಪ್ರಯತ್ನವನ್ನೂ ಅಧಿಕಾರಿಗಳು ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT