ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ | ಮಕ್ಕಳು, ವೃದ್ಧರಿಗೆ ನಾಯಿಗಳೇ ಕಂಟಕ

Published 26 ಜುಲೈ 2024, 5:36 IST
Last Updated 26 ಜುಲೈ 2024, 5:36 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದಾದ್ಯಂತ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ.

ಸಾರ್ವಜನಿಕರು ಹಾಗೂ ವಾಹನ ಸವಾರರು ಬೀದಿಗಳಲ್ಲಿ ತಿರುಗಾಡುವಾಗ ಬೀದಿ ನಾಯಿಗಳ ಹಿಂಡು ಸಾಮೂಹಿಕವಾಗಿ ಮೇಲೆ ದಾಳಿ ಮಾಡುತ್ತವೆ. ಬೈಕ್‌, ಕಾರುಗಳ ಹಿಂದೆ ನಾಯಿಗಳು ಅಟ್ಟಿಸಿಕೊಂಡು ಬರುತ್ತಿರುವ ಪರಿಣಾಮ ವಾಹನ ಸವಾರರಿಗೆ ನಡುಕ ಶುರುವಾಗಿದೆ. ಆತಂಕದಿಂದ ಹಲವರು ವಾಹನಗಳಿಂದ ಬಿದ್ದು ಪೆಟ್ಟುಮಾಡಿಕೊಂಡಿದ್ದಾರೆ.

ಬೀದಿ ನಾಯಿಗಳ ಹಾವಳಿಯಿಂದ ರಸ್ತೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ಒಂದೇ ಸಮನೆ ಬೊಗಳುವ ನಾಯಿಗಳು ನಿವಾಸಿಗಳ ನಿದ್ದೆ ಗೆಡಿಸುತ್ತಿದ್ದು ಹಲವು ಬಡಾವಣೆಗಳಲ್ಲಿ ಶ್ವಾನಗಳ ಉಪಟಳದಿಂದ ಸಾರ್ವಜನಿಕರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗಿದೆ.

ಬೀದಿ ನಾಯಿಗಳ ಹಾವಳಿ ಬಗ್ಗೆ ಹಲವುಬಾರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದರೂ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲದಿರುವುದು ಸಾರ್ವಜನಿಕರ ಬೇಸರಕ್ಕೆ ಕಾಣವಾಗಿದೆ. ನೆಪಕ್ಕೆ ಸಭೆಯಲ್ಲಿ ಚರ್ಚೆ ನಡೆಸುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಸಾರ್ವಜನಿಕರ ಹಿತ ಕಾಯುವಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ ಎಂಬ ಟೀಕೆಗಳು ಸಾಮಾನ್ಯವಾಗಿವೆ.

ಮಕ್ಕಳ ಮೇಲೆ ದಾಳಿ: ನಗರದ ನೂರ್ ಮೊಹಲ್ಲಾ, ವಿದ್ಯಾನಗರ, ಕುರುಬರ ಬೀದಿ, ದೊಡ್ಡ ನಾಯಕರ ಬೀದಿ, ಚಿಕ್ಕ ನಾಯಕರ ಬೀದಿ, ಭೀಮ ನಗರ, ಆನಂದ ಜ್ಯೋತಿ ಕಾಲೋನಿ ಬಡಾವಣೆ, ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ, ಡಾ.ರಾಜಕುಮಾರ್ ವಿಷ್ಣುವರ್ಧನ್ ರಸ್ತೆಗಳಲ್ಲಿ ಬೀದಿನಾಯಿಗಳು
ಹೆಚ್ಚಾಗಿವೆ.

ಮಾಂಸದಂಗಡಿಗಳು ಇರುವ ಕಡೆಗಳಂತೂ ನಾಯಿಗಳು ಹಿಂಡು ಹಿಂಡಾಗಿ ಸಂಚರಿಸುತ್ತಿದ್ದು ನಾಗರಿಕರು ಭೀತಿಯಿಂದ ಓಡಾಡುವಂತಾಗಿದೆ. ಹಲವು ಬಾರಿ ಮಾಂಸ ಖರೀದಿ ಮಾಡಲು ಹೋಗುವವರ ಮೇಲೆ ಎರಗಿದ ಘಟನೆಗಳು ನಡೆದಿವೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಾರೆ ಸಾರ್ವಜನಿಕರು.

ಶಾಲೆಗೆ ಮಕ್ಕಳು ಹೋಗಲು ರಸ್ತೆಯಲ್ಲಿ ಭಯದಿಂದ ಹೋಗುವಂತಾಗಿದೆ. ಒಂದು ವಾರದ ಹಿಂದೆ ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳು 8ಕ್ಕೂ ಹೆಚ್ಚು ಮಕ್ಕಳು ಮೇಲೆ ದಾಳಿ ನಡೆಸಿದೆ. ಮಕ್ಕಳನ್ನು ಶಾಲೆಗೆ ಕಳಿಸುವಾಗ, ಹೊರಗೆ ಕಳಿಸುವಾಗ ಪೋಷಕರು ಆತಂಕಗೊಳ್ಳುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಕೂಡಲೇ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ನಾಗರಿಕರಾದ ರಾಜೇಂದ್ರ
ಒತ್ತಾಯಿಸಿದರು.

ಕ್ರಮ ಕೈಗೊಳ್ಳದ ಅಧಿಕಾರಿಗಳು: ನಿವಾಸಿಗಳು ಹಲವು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ನಗರಸಭೆಗೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನಗರಸಭೆ ಇದ್ದೂ ಇಲ್ಲದಂತೆ ವರ್ತಿಸುತ್ತಿದೆ. ಜನರಿಂದ ಆಯ್ಕೆಯಾದ ವಾರ್ಡ್‌ ಸದಸ್ಯರು ಕೂಡ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮುಂದೆ ಬೀದಿನಾಯಿಗಳಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅನಾಹುತಗಳು ಸಂಭವಿಸಿದರೆ ನಗರಸಭೆ ಅಧಿಕಾರಿಗಳೇ ಹೊಣೆ ಹೊರಬೇಕು ಎಂದು ಹೇಳುತ್ತಾರೆ ಉಷಾ.

ನಿದ್ರೆಹಾಳು: ರಾತ್ರಿಯಾದರೆ ಬೀದಿ ನಾಯಿಗಳು ಜೋರಾಗಿ ಬೊಗಳಲು ಶುರು ಮಾಡುವುದರಿಂದ ಬಡಾವಣೆಗಳ ನಿವಾಸಿಗಳ ನೆಮ್ಮದಿ ಹಾಳಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕಚೇರಿ ಕೆಲಸ ಮುಗಿಸಿ ಮನೆಗೆ ಬರುವವರು ರಾತ್ರಿ ವೇಳೆ ನೆಮ್ಮದಿಂದ ನಿದ್ರೆಮಾಡಲು ಸಾಧ್ಯವಾಗುತ್ತಿಲ್ಲ. ಮನೆಯ ಮುಂದೆಯೇ ನಾಯಿಗಳು ಹೂಳಿಡುತ್ತವೆ. ಮನೆಯ ಮುಂದೆ ಬಿಡುವ ಚಪ್ಪಲಿ ಹಾಗೂ ಹೊರಗೆ ಹಾಕುವ ಬಟ್ಟೆಗಳನ್ನು ಕಚ್ಚಿ ಹಾಳು ಮಾಡುತ್ತಿದೆ. ಕೆಲವು ಬಡಾವಣೆಗಳಲ್ಲಿ ಬೀದಿನಾಯಿಗಳು ಮರಿಗಳು ರಸ್ತೆಯಲ್ಲೆಲ್ಲಾ ತಿರುಗುತ್ತಿದ್ದು ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ ಎನ್ನುತ್ತಾರೆ ಕುರುಬರ ಬೀದಿಯ ನಿವಾಸಿ ಗಿರೀಶ್.

ಡಾವಣೆಯಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು.

-ರಾಜಪ್ಪ,ಹಿರಿಯ ಮುಖಂಡ

ನಾಯಿ ಹಾವಳಿ ನಿಯಂತ್ರಣ ಕುರಿತು ಸಭೆ ನಡೆಸಲಾಗಿದೆ. ಪಶು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು

-ರಮೇಶ್, ನಗರಸಭೆ ಪೌರಾಯುಕ್ತ

ರಸ್ತೆ ಚರಂಡಿಗೆ ಕೊಳೆತ ಮಾಂಸ ತ್ಯಾಜ್ಯ

ನಗರದ ಹಲವೆಡೆ ಕೋಳಿ ಮಾಂಸದ ತ್ಯಾಜ್ಯವನ್ನು ಚರಂಡಿಗಳಿಗೆ ತಂದು ಸುರಿಯಲಾಗುತ್ತದೆ. ನಾಯಿಗಳು ತ್ಯಾಜ್ಯವನ್ನು ರಸ್ತೆಯ ಮೇಲೆ ತಂದು ಬಿಸಾಡುತ್ತಿವೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಅಸಹ್ಯಪಟ್ಟುಕೊಳ್ಳಬೇಕಾಗಿದೆ. ಕೊಳೆತ ತ್ಯಾಜ್ಯಗಳ ವಾಸನೆಯಿಂದ ಪರಿಸರ ಗಬ್ಬು ನಾರುತ್ತಿದೆ. ಚಿಕನ್ ಹಾಗೂ ಮಾಂಸದ ಅಂಗಡಿಯವರು ತ್ಯಾಜ್ಯವನ್ನು ನಗರಸಭೆಗೆ ನೀಡದೆ ಚರಂಡಿಗಳಿಗೆ ಸುರಿಯುತ್ತಿರುವುದು ಸಮಸ್ಯೆಗೆ ಕಾರಣ ಎಂದು ದೂರುತ್ತಾರೆ ಸಾರ್ವಜನಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT