ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹನೂರು: ತಟ್ಟೆವಾದ್ಯ ಕಲೆಯ ಪ್ರವೀಣ ಗೋವಿಂದನಾಯ್ಕ

ನಾಲ್ಕು ದಶಕಗಳಿಂದ ಕಲಾ ಪೋಷಣೆ; 8 ಮಂದಿಗೆ ಕಲಾ ತರಬೇತಿ
Published 19 ಜೂನ್ 2024, 5:28 IST
Last Updated 19 ಜೂನ್ 2024, 5:28 IST
ಅಕ್ಷರ ಗಾತ್ರ

ಹನೂರು: ವಿಶಿಷ್ಟ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳನ್ನು ಜತನದಿಂದ ತಲೆಮಾರಿನಿಂದ ತಲೆಮಾರಿಗೆ ಉಳಿಸಿ ಬೆಳೆಸಿಕೊಂಡು ಬಂದಿರುವ ಲಂಬಾಣಿ (ಬಂಜಾರ) ಸಮುದಾಯದಲ್ಲಿ ತಟ್ಟೆವಾದ್ಯ (ಖಾಜಾ-ಭಾಜ) ವಿಶೇಷ ಜಾನಪದ ಕಲೆಯಾಗಿ ಗುರುತಿಸಿಕೊಂಡಿದೆ.

ತಾಲ್ಲೂಕಿನ ವಿವಿಧೆಡೆ ಚದುರಿ ಹೋಗಿರುವ ಬಂಜಾರ ಸಮುದಾಯ ತಮ್ಮ ಮೂಲ ಸಂಪ್ರದಾಯಗಳನ್ನು ಪೋಷಿಸಿಕೊಂಡು ಬಂದಿದ್ದು ಸಮುದಾಯದ ವಿಶಿಷ್ಟ ಜಾನಪದ ಕಲೆ ಎಂದೇ ಪರಿಗಣಿತವಾಗಿರುವ ತಟ್ಟೆವಾದ್ಯ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯದಲ್ಲಿ ನಿರತವಾಗಿದೆ.

ಈ ನಿಟ್ಟಿನಲ್ಲಿ ತಾಲ್ಲೂಕಿನ ದೊಮ್ಮನಗದ್ದೆ ಗ್ರಾಮದ ಗೋವಿಂದನಾಯ್ಕ ತಟ್ಟೆವಾದ್ಯ ಕಲೆಯನ್ನು ಕರಗತ ಮಾಡಿಕೊಂಡಿದ್ದು ಕಲೆ ಉಳಿಸುವ ಕೈಂಕರ್ಯಕ್ಕ ಕೈಜೋಡಿಸಿದ್ದಾರೆ.

ಏನಿದು ತಟ್ಟೆ ವಾದ್ಯ:

ಪ್ರತಿ ಸಮುದಾಯವೂ ವಿಶಿಷ್ಟ ಜಾನಪದ ಕಲೆಗಳನ್ನು ಕರಗತ ಮಾಡಿಕೊಂಡಂತೆ ಬಂಜಾರ ಸಮುದಾಯ ಕೂಡ ತಟ್ಟೆಕಲೆಯಲ್ಲಿ ನೈಪುಣ್ಯತೆ ಹೊಂದಿದೆ. ಅತ್ಯಂತ ವಿಶೇಷವಾದ ಜಾನಪದ ಕಲೆ ಇದಾಗಿದ್ದು ಕಲಾ ಪ್ರದರ್ಶನಕ್ಕೆ ನಿರ್ದಿಷ್ಟ ಪರಿಕರಗಳನ್ನು ಬಳಸಲಾಗುತ್ತದೆ.

ಲಂಬಾಣಿ ಸಮುದಾಯದಲ್ಲಿ ಕಲೆಯನ್ನು ಪ್ರದರ್ಶಿಸಲು ಕಂಚಿನ ತಟ್ಟೆಯನ್ನು ಉಪಯೋಗಿಸಲಾಗುತ್ತದೆ. ಕತೆ, ಹಾಡುಗಾರಿಕೆ, ಲಾವಣಿ, ತತ್ವಪದಗಳನ್ನು ಹೇಳುವಾಗ ಕಂಚಿನ ತಟ್ಟೆ ಬಳಸುವುದು ವಿಶೇಷ.

ಸಮುದಾಯದ ನಾಯಕರಾದ ಸಂತ ಸೇವಾಲಾಲರು ಸಹ ಕಂಚಿನ ತಟ್ಟೆಯನ್ನೇ ಬಳಸಿ ಲಾವಣಿಗಳ ಮೂಲಕ ಸಮುದಾಯದ ಜನರನ್ನು ಜಾಗೃತಿಗೊಳಿಸುತ್ತಿದ್ದರಂತೆ. ಸೇವಾಲಾಲರ ಪರಂಪರೆಯಾಗಿ ಇಂದಿಗೂ ಕಂಚಿನ ತಟ್ಟೆ ಬಳಸುತ್ತಾ ಬರಲಾಗಿದೆ. ಹಿರಿಯರಿಂದ ಬಳುವಳಿಯಾಗಿ ಬಂದ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಕಲಾವಿದರಾದ ಗೋವಿಂದನಾಯ್ಕ.

ಕಲಾವಿದ ಗೋವಿಂದ ನಾಯ್ಕ ತಟ್ಟೆವಾದ್ಯ ಕಲೆಯತ್ತ ಆಕರ್ಷಿತರಾಗಿದ್ದು ವಿಶೇಷ. ಗ್ರಾಮದಲ್ಲಿ ತಂದೆಯ ಸ್ನೇಹಿತ ಪಿರಿಯನಾಯ್ಕ ಪ್ರದರ್ಶಿಸುತ್ತಿದ್ದ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಗೋವಿಂದ ನಾಯ್ಕ ಬಾಲ್ಯದಿಂದಲೇ ಕಲೆಯನ್ನು ಕರಗತ ಮಾಡಿಕೊಂಡರು.

ಓದಿದ್ದು ಒಂದನೇ ತರಗತಿಯಾದರೂ ಗ್ರಾಮದ 8 ಮಂದಿಗೆ ತಟ್ಟೆವಾದ್ಯ ಕಲೆಯನ್ನು ಧಾರೆ ಎರೆಯುವ ಗುರುವಾಗಿದ್ದಾರೆ ಗೋವಿಂದನಾಯ್ಕ. 8 ಜನರ ಪೈಕಿ ಮೂವರು ಯುವಕರು ಎಂಬುದು ವಿಶೇಷ. ಇವರ ಕಲೆಯನ್ನು ಗುರುತಿಸಿ 2018-19ರಲ್ಲಿ ಕೊಪ್ಪಳದಲ್ಲಿ ತಾಂಡಾಭಿವೃದ್ಧಿ ನಿಗಮದಿಂದ ಆಯೋಜಿಸಿದ್ದ ಬಂಜಾರ ಕಲಾಮೇಳದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಗೋವಿಂದನಾಯ್ಕ ತಟ್ಟೆವಾದ್ಯ ಕಲಾವಿದ
ಗೋವಿಂದನಾಯ್ಕ ತಟ್ಟೆವಾದ್ಯ ಕಲಾವಿದ

ಬಂಜಾರ ಸಮುದಾಯದ ವಿಶಿಷ್ಟ ಕಲೆ ತಟ್ಟೆವಾದ್ಯ ತಟ್ಟೆವಾದ್ಯ ಕಲೆ ಗೋವಿಂದನಾಯ್ಕರಿಗೆ ಕರಗತ ಅನಕ್ಷರಸ್ಥರಾದರೂ ಗ್ರಾಮದ 8 ಮಂದಿಗೆ ಕಲೆಯ ತರಬೇತಿ

‘ಶ್ರೀಮಂತ ಕಲಾ ಪರಂಪರೆ’

ಆಧುನಿಕತೆ ಹಾಗೂ ತಂತ್ರಜ್ಞಾನದ ಪ್ರಭಾವದ ಮಧ್ಯೆಯೂ ಹಳ್ಳಿಗಳಲ್ಲಿ ಬಂಜಾರ ಸಮುದಾಯದ ಆಚರಣೆ ಸಂಸ್ಕೃತಿಗಳು ಇಂದಿಗೂ ಜೀವಂತವಾಗಿವೆ. ಪೂರ್ವಜರಿಂದ ಕಲಿತ ಕಲೆಯನ್ನು ಸಮುದಾಯದ ಮುಖಂಡರು ಹೊಸ ತಲೆಮಾರಿಗೆ ಪರಿಚಯಿಸುತ್ತಿದ್ದು ಸಮುದಾಯದ ಜಾನಪದ ಕಲೆಗಳಲ್ಲಿ ಪ್ರಸಿದ್ಧವಾದ ತಟ್ಟೆವಾದ್ಯವನ್ನೂ ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ.

‘ಕಲೆ ಉಳಿಸುವುದು ಎಲ್ಲರ ಜವಾಬ್ದಾರಿ’

ತಾಲ್ಲೂಕಿನ ದಿನ್ನಳ್ಳಿ ದೊಮ್ಮನಗದ್ದೆ ಮಾರ್ಟಳ್ಳಿ ನಾಲರೋಡ್ ಕೋಟೆಪೋದೆ ಪಿ.ಜಿ. ಪಾಳ್ಯ ಮಹಾಲಿಂಗನಕಟ್ಟೆ ಜಾಗೇರಿ ಕೆ.ಗುಂಡಾಪುರ ಭಾಗಗಳಲ್ಲಿ ವಾಸವಿರುವ ಬಂಜಾರ ಸಮುದಾಯ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಕೊಡುವ ಅಲ್ಪಸ್ವಲ್ಪ ಹಣವನ್ನೇ ಎಲ್ಲರೂ ಹಂಚಿಕೊಳ್ಳುತ್ತೇವೆ  ತಟ್ಟೆವಾದ್ಯ ಕಲೆ ಬದುಕು ನಡೆಸಲಿಕ್ಕಾಗಿ ಕಲಿತ ಕಲೆಯಲ್ಲ ಕುತೂಹಲಕ್ಕಾಗಿ ಕಲಿತ ಕಲೆ. ಸಮುದಾಯದ ಅತ್ಯಂತ ಮಹತ್ವವಾಗಿರುವ ಕಲೆಯನ್ನು ಉಳಿಸಿ ಪೋಷಿಸಬೇಕಾದ ಜವಾಬ್ದಾರಿ ಇಂದು ಪ್ರತಿಯೊಬರ ಮೇಲಿದೆ ಎನ್ನುತ್ತಾರೆ ಗೋವಿಂದನಾಯ್ಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT