ಮಂಗಳವಾರ, 20 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ‘ರಂಗು’ ಕಳೆದುಕೊಂಡ ರಂಗಮಂದಿರಗಳು

ಸೊರಗಿದ ಜನಪದ, ರಂಗಭೂಮಿ ಕ್ಷೇತ್ರ; ಕಲಾ ಪ್ರದರ್ಶನಗಳಿಗಿಲ್ಲ ಸೂಕ್ತ ವೇದಿಕೆ
Published 15 ಜುಲೈ 2024, 7:58 IST
Last Updated 15 ಜುಲೈ 2024, 7:58 IST
ಅಕ್ಷರ ಗಾತ್ರ

ಚಾಮರಾಜನಗರ: ಜನಪದೀಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆಯಲ್ಲಿ ಜನಪದ ಹಾಗೂ ರಂಗ ಕಲೆಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಹಾಗೂ ಸೌಲಭ್ಯಗಳು ಇಲ್ಲದಿರುವುದು ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲಾಕೇಂದ್ರ ಚಾಮರಾಜನಗರದಲ್ಲಿ 2022ರಲ್ಲಿ ₹ 6.5 ಕೋಟಿ ವೆಚ್ಚದಲ್ಲಿ ವರನಟ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರ ನಿರ್ಮಾಣ ಮಾಡಲಾಗಿದ್ದರೂ ಕಲಾಪ್ರದರ್ಶನಕ್ಕೆ ಪೂರಕವಾದ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ. ಬಾಹ್ಯನೋಟಕ್ಕೆ ಭವ್ಯವಾಗಿ ಕಾಣುವ ರಂಗಮಂದಿರ ವಾಸ್ತವವಾಗಿ ಸೌಲಭ್ಯಗಳಿಲ್ಲದೆ ಕಳೆಗುಂದಿದಂತೆ ಕಾಣುತ್ತದೆ.

ವಿಶಾಲವಾದ ಸಭಾಂಗಣ, ಕೂರಲು ಆಸನಗಳು, ವೇದಿಕೆ, ಸಾಮಾನ್ಯ ಧ್ವನಿವರ್ಧಕ ವ್ಯವಸ್ಥೆ ಹೊರತಾಗಿ ಇತರ ಸೌಲಭ್ಯಗಳು ಇಲ್ಲದಿರುವುದರಿಂದ ಜಿಲ್ಲಾ ರಂಗಮಂದಿರ ಕೇವಲ ಸರ್ಕಾರಿ ಕಾರ್ಯಕ್ರಮಗಳು, ಜಯಂತಿ ಹಾಗೂ ಸಂಘ ಸಂಸ್ಥೆಗಳ ಸಮಾರಂಭಗಳ ಆಯೋಜನೆಗೆ ಸೀಮಿತವಾಗಿದೆ ಎನ್ನುತ್ತಾರೆ ಕಲಾವಿದರು.

ಏನೆಲ್ಲ ಸೌಲಭ್ಯಗಳಿರಬೇಕು: ಜಿಲ್ಲಾ ರಂಗಮಂದಿರದಲ್ಲಿ ಪ್ರಮುಖವಾಗಿ ಧ್ವನಿ ಹಾಗೂ ಬೆಳಕಿನ ವ್ಯವಸ್ಥೆ ಇರಬೇಕು. ಜತೆಗೆ ಕುಡಿಯುವ ನೀರು, ಶೌಚಾಲಯ, ಭದ್ರತೆ ಸೇರಿದಂತೆ ಮೂಲಸೌಕರ್ಯಗಳೂ ಇರಬೇಕು. ಆದರೆ ಜಿಲ್ಲಾ ರಂಗಮಂದಿರದಲ್ಲಿ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ.

ಸಿಬ್ಬಂದಿ ಕೊರತೆ: ರಂಗಮಂದಿರ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ. ಭವನದ ಸ್ವಚ್ಛತೆಗೆ ಹಾಗೂ ಭದ್ರತೆಗೆ ಒಬ್ಬ ಸಿಬ್ಬಂದಿಯೂ ಇಲ್ಲ. ಪರಿಣಾಮ ರಂಗಮಂದಿರದ ಅಲ್ಲಲ್ಲಿ ಅನೈರ್ಮಲ್ಯ ಎದ್ದು ಕಾಣುತ್ತದೆ. ಕಾವಲುಗಾರ ಇಲ್ಲದಿರುವುದರಿಂದ ರಾತ್ರಿಯ ಹೊತ್ತು ಮೋಜು ಮಸ್ತಿಯ ತಾಣವಾಗಿ ಬಳಕೆಯಾಗುತ್ತಿದೆ. ಕಳ್ಳಕಾಕರ ಭೀತಿಯೂ ಇದೆ.

ಶುದ್ಧ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಕಾರ್ಯಕ್ರಮಗಳು ನಡೆಯುವಾಗ ವಿದ್ಯುತ್ ಕೈಕೊಟ್ಟರೆ ಜನರೇಟರ್ ವ್ಯವಸ್ಥೆ ಇಲ್ಲ. ಭವನಕ್ಕೆ ಲಿಫ್ಟ್‌ ವ್ಯವಸ್ಥೆ ಇಲ್ಲದಿರುವುದರಿಂದ ಎರಡನೇ ಮಹಡಿಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಿರಿಯ ಕಲಾವಿದರು ಏದುಸಿರು ಬಿಡುತ್ತಾ ಮೆಟ್ಟಿಲು ಹತ್ತಿ ಹೋಗಬೇಕು.

ಉಳಿದಂತೆ ಜಿಲ್ಲಾ ಅಂಬೇಡ್ಕರ್ ಭವನ ಹಾಗೂ ವಾಲ್ಮೀಕಿ ಭವನಗಳು ಖಾಸಗಿ ಹಾಗೂ ಸಮುದಾಯದ ಕಾರ್ಮಕ್ರಮಗಳಿಗೆ ಸೀಮಿತವಾಗಿವೆ.

20 ವರ್ಷ ಕಳೆದರೂ ಮುಗಿಯದ ಕಾಮಗಾರಿ: ಕೊಳ್ಳೇಗಾಲ ತಾಲ್ಲೂಕಿನಲ್ಲಿ ಬರೋಬ್ಬರಿ 20 ವರ್ಷಗಳು ಕಳೆದರೂ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಮುಗಿದಿಲ್ಲ. ಎರಡು ದಶಕಗಳ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹ 1 ಕೋಟಿ ವೆಚ್ಚದ ಅಂದಾಜು ಮಾಡಲಾಗಿತ್ತು. ಕಾಮಗಾರಿ ವಿಳಂಬದಿಂದ ಪ್ರಸ್ತುತ ಐದಾರು ಕೋಟಿ ಖರ್ಚಾದರೂ ಕಾಮಗಾರಿ ಮುಕ್ತಾಯವಾಗಿಲ್ಲ. ಪೂರ್ಣಗೊಳ್ಳಲು 3 ಕೋಟಿಗೂ ಹೆಚ್ಚು ಹಣ ಬೇಕಾಗಿದೆ ಎನ್ನುತ್ತಾರೆ ಕೆಆರ್‌ಐಡಿಎಲ್ ಅಧಿಕಾರಿಗಳು.

ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರು ಕಾಮಗಾರಿಗೆ ಹೆಚ್ಚುವರಿ ₹ 3 ಕೋಟಿ ಅನುದಾನ ಕೋರಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಮನವಿ ಮಾಡಿದ್ದಾರೆ. ಸಚಿವರು ಭರವಸೆ ನೀಡಿದ್ದು ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಶಾಸಕರು ಪ್ರಜಾವಾಣಿಗೆ ತಿಳಿಸಿದರು.

ಗಡಿ ಭವನವೂ ಸ್ಥಗಿತ: ನಗರದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 14 ವರ್ಷದ ಹಿಂದೆ ಆರಂಭವಾದ ಗಡಿ ಭವನ ಕಾಮಗಾರಿಯೂ ಮುಕ್ತಾಯವಾಗಿಲ್ಲ. ಜನಪದ ಕಲೆಗಳ ತವರೂರಿನಲ್ಲಿ ಜನಪದ ಕಲೆಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಇಲ್ಲದಿರುವ ಬಗ್ಗೆ ಕಲಾಸಕ್ತರು ಹಾಗೂ ಕಲಾವಿದರಲ್ಲಿ ದೊಡ್ಡ ಅಸಮಾಧಾನವಿದೆ. ತಾಲ್ಲೂಕಿನಲ್ಲಿ ಇಂತಹ ಹಲವು ಭವನಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ.

ಸಮುದಾಯ ಭವನ ಭಣಭಣ: ಯಳಂದೂರು ತಾಲ್ಲೂಕಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ವಾಲ್ಮೀಕಿ, ಭಗೀರಥ, ಬಸವೇಶ್ವರ, ಕನಕ ಮತ್ತು ಕಲಾ ಭವನಗಳ ನಿರ್ಮಾಣ ಮಾಡಲಾಗಿದ್ದು ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಶೌಚಾಲಯ, ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್ ವ್ಯವಸ್ಥೆ ಇಲ್ಲ. ನಿರ್ವಹಣೆ ಸಮಸ್ಯೆ ಎದುರಾಗಿದೆ. ಭವನಗಳ ಸುತ್ತಲೂ ಗಿಡಗಂಟಿಗಳು ಬೆಳೆದು ಭವನಗಳ ಅಂದವನ್ನು ಮಸುಕಾಗಿಸಿದೆ.

ಕೆಲವೆಡೆ ದಶಕಗಳಿಂದಲೂ ಭವನ ಪೂರ್ಣಗೊಂಡಿಲ್ಲ. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ತೆರೆದುಕೊಂಡಿದೆ. ಸಮೀಪದ ವಾಲ್ಮೀಕಿ ಭವನ ಕಾಯಕಲ್ಪಕ್ಕೆ ಕಾದಿದೆ. ಉಳಿದ ಗ್ರಾಮಗಳಲ್ಲಿ ಸಮುದಾಯ ಭವನಗಳು ಬಣಗುಟ್ಟುತ್ತಿವೆ.

ಭವನ ಸರ್ವರಿಗೂ ಮುಕ್ತಗೊಳ್ಳಲಿ: ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಭವನಗಳು ಜನ ಸಮುದಾಯದ ಬಳಕೆಗೆ ಸಿಗುತ್ತಿಲ್ಲ. ಸರ್ಕಾರ ಇಂತಹ ಅಮೂಲ್ಯ ಕಟ್ಟಡಗಳನ್ನು ಸರ್ವರ ಬಳಕೆಗೂ ಮುಕ್ತಗೊಳಿಸಲು ಕ್ರಮವಹಿಸಬೇಕು. ಶೈಕ್ಷಣಿಕ, ಸಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬಳಕೆ ಮಾಡಲಿ.

ನಿರ್ವಹಣೆ: ಬಾಲಚಂದ್ರ ಎಚ್‌, ಪೂರಕ ಮಾಹಿತಿ: ಅವಿನ್ ಪ್ರಕಾಶ್‌, ನಾ.ಮಂಜುನಾಥಸ್ವಾಮಿ, ಮಹದೇವ್ ಹೆಗ್ಗವಾಡಿಪುರ

ನಿರ್ವಹಣೆ ಕೊರತೆಯಿಂದ ಜಿಲ್ಲಾ ರಂಗಮಂದಿರದಲ್ಲಿ ಕಂಡುಬಂದ ಅನೈರ್ಮಲ್ಯ
ನಿರ್ವಹಣೆ ಕೊರತೆಯಿಂದ ಜಿಲ್ಲಾ ರಂಗಮಂದಿರದಲ್ಲಿ ಕಂಡುಬಂದ ಅನೈರ್ಮಲ್ಯ
ಎಕರೆ 20 ಗುಂಟೆಯಲ್ಲಿ ಜಿಲ್ಲಾ ರಂಗಮಂದಿರ ಸ್ಥಾಪನೆ ₹ 6.50 ಕೋಟಿ ವೆಚ್ಚದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ ಜಿಲ್ಲಾರಂಗಮಂದಿರಕ್ಕೆ ವರನಟ ಡಾ.ರಾಜ್‌ಕುಮಾರ್ ಹೆಸರು 2 ವರ್ಷಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳು; 105 ಸರ್ಕಾರಿ ಕಾರ್ಯಕ್ರಮ, ಜಯಂತಿಗಳಿಗೆ ಸೀಮಿತವಾದ ಜಿಲ್ಲಾ ರಂಗಮಂದಿರ
‘2 ದಶಕವಾದರೂ ಉದ್ಘಾಟನೆ ಭಾಗ್ಯ ಇಲ್ಲ’
ಮಾಜಿ ರಾಜ್ಯಪಾಲರು ಹಾಗೂ ರಾಜಕೀಯ ಮುತ್ಸದ್ದಿಗಳೂ ಆಗಿದ್ದ ದಿ.ಬಿ.ರಾಚಯ್ಯ ಅವರ ಹೆಸರಿನಲ್ಲಿ ಸಂತೇಮರಹಳ್ಳಿಯಲ್ಲಿ ರಂಗಮಂದಿರ ನಿರ್ಮಿಸಿ 2 ದಶಕಗಳು ಕಳೆದರೂ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಅಂದಿನ ಸಂಸದರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅನುದಾನದಲ್ಲಿ ₹ 5 ಲಕ್ಷ ವೆಚ್ಚದಲ್ಲಿ ಭೂ ಸೇನಾ ನಿಗಮದ ವತಿಯಿಂದ ನಿರ್ಮಿಸಲಾಗಿರುವ ರಂಗಮಂದಿರ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಉದ್ಘಾಟನೆಯಾಗದೆ ನನೆಗುದಿಗೆ ಬಿದ್ದಿದೆ.

ಹಣ ಬಂದ ಕೂಡಲೇ ಕಾಮಗಾರಿ ಸರ್ಕಾರದಿಂದ ಮೂರು ಕೋಟಿ ಅನುದಾನದ ಭರವಸೆ ಸಿಕ್ಕಿದೆ. ಹಣ ಖಜಾನೆಗೆ ಬಂದ ನಂತರ ಕೆಲಸ ಆರಂಭಿಸಿ ಶೀಘ್ರ ಕಾಮಗಾರಿ ಮುಗಿಸುತ್ತೇವೆ.

–ಚಿಕ್ಕಲಿಂಗಯ್ಯ ಕೆಆರ್‌ಐಡಿಎಲ್ ಎಇಇ 

‘ಬಳಕೆಗೆ ಸಿಗಲಿ’ ಡಾ.ಬಿ.ಆರ್.ಅಂಬೇಡ್ಕರ್ ಭವನ ಸೇರಿದಂತೆ ಹಲವು ಸಮುದಾಯ ಭವನಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು.

–ತೇಜು ಕೊಳ್ಳೇಗಾಲ

ಕಾಮಗಾರಿ ಮುಗಿಸಿ ಭವನಗಳ ಕಾಮಗಾರಿ ವಿಳಂಬದಿಂದ ಗುಣಮಟ್ಟ ಕುಸಿಯುವ ಅಪಾಯ ಇದೆ. ಹಾಗಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಭವನಗಳ ಕಾಮಗಾರಿ ಪೂರ್ಣಗೊಳಿಸಿ.

–ಆರ್. ರಂಗರಾಜು ಅಂಬಳೆ ನಿವಾಸಿ

‘ಸರ್ವರಿಗೂ ಮುಕ್ತವಾಗಲಿ’ ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಭವನಗಳು ಜನ ಸಮುದಾಯದ ಬಳಕೆಗೆ ಸಿಗುತ್ತಿಲ್ಲ. ಸರ್ವರ ಬಳಕೆಗೂ ಮುಕ್ತಗೊಳಿಸಲು ಸರ್ಕಾರ ಕ್ರಮವಹಿಸಬೇಕು. ಶೈಕ್ಷಣಿಕ ಸಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಭವನಗಳು ಬಳಕೆಯಾಗಲಿ.

–ವೆಂಕಟೇಶ್ ಹೊನ್ನೂರು ನಿವಾಸಿ

ಸಂತೆಮರಹಳ್ಳಿ ರಂಗಮಂದಿರಕ್ಕೆ ಉದ್ಘಾಟನೆ ಮಾಡದಿರುವುದು ದಿ.ಬಿ.ರಾಚಯ್ಯ ಅವರಿಗೆ ಅಪಮಾನ ಮಾಡಿದಂತಾಗಿದೆ.

– ಉಮ್ಮತ್ತೂರು ಬಸವರಾಜು.

ರಂಗಭೂಮಿ ಕಲಾವಿದ ‘ಮೂಲಸೌಕರ್ಯಗಳಿಲ್ಲ’ ಜಿಲ್ಲಾ ರಂಗಮಂದಿರದಲ್ಲಿ ಕಲಾ ಪ್ರದರ್ಶನಕ್ಕೆ ಸಮರ್ಪಕ ಧ್ವನಿ ಬೆಳಕಿನ ವ್ಯವಸ್ಥೆ ಇಲ್ಲ.  ಬಾಡಿಗೆಯೂ ದುಬಾರಿಯಾಗಿದ್ದು ಬಡ ಕಲಾವಿದರ ಕೈಗೆಟುಕುವಂತಿಲ್ಲ. ಎಲ್ಲ ಸೌಲಭ್ಯಗಳನ್ನು ಬಾಡಿಗೆ ಪಡೆದೇ ಬಳಸುವ ಪರಿಸ್ಥಿತಿ ಇರುವುದರಿಂದ ರಂಗ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

–ಸಿ.ಎಂ.ನರಸಿಂಹ ಮೂರ್ತಿ ಜನಪದ ಕಲಾವಿದ

‘ನಾಮಕಾವಸ್ತೆ ರಂಗಮಂದಿರ’ ಸಾಂಸ್ಕೃತಿಕ ಕೇಂದ್ರವಾಗಿ ಮೆರೆಯಬೇಕಿದ್ದ ಜಿಲ್ಲಾ ರಂಗಮಂದಿರ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ. ಕಲಾ ಪ್ರದರ್ಶನಕ್ಕೆ ಕನಿಷ್ಠ ಸೌಲಭ್ಯಗಳು ಇಲ್ಲ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಸಿಬ್ಬಂದಿ ಕೊರತೆ ಇದೆ ನಾಮಕಾವಸ್ತೆಗೆ ನಿರ್ಮಿಸಲಾಗಿದೆ.

–ವೆಂಕಟರಾಜು ರಂಗಕರ್ಮಿ

‘1.91 ಕೋಟಿ ಪ್ರಸ್ತಾವ ಸಲ್ಲಿಕೆ’
ಜಿಲ್ಲಾ ರಂಗಮಂದಿರಕ್ಕೆ ಧ್ವನಿಬೆಳಕಿನ ವ್ಯವಸ್ಥೆ ವೇದಿಕೆಗೆ ಸೈಡ್‌ ವಿಂಗ್ ಪರದೆ ಎಲ್‌ಇಡಿ ಸ್ಪಾಟ್‌ ಜೂಮ್ ಲೈಟ್‌ ವೈರಿಂಗ್ ಕಾಮಗಾರಿ ಸೇರಿದಂತೆ ₹ 1.91 ಕೋಟಿ ವೆಚ್ಚದ ಕಾಮಗಾರಿಗೆ ಅನುದಾನ ಕೋರಿ ನಿರ್ಮಿತಿ ಕೇಂದ್ರ ಸಲ್ಲಿಸಿದ ಪ್ರಸ್ತಾವವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಸರ್ಕಾರದಿಂದ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಜಿಲ್ಲಾ ರಂಗಮಂದಿರ ನಿರ್ವಹಣೆಗೆ ಹುದ್ದೆಗಳ ಸೃಜನೆ ಪ್ರಸ್ತಾವವೂ ಸಿದ್ಧವಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ರಂಗಮಂದಿರ ನಿರ್ವಹಣಾ ಸಮಿತಿ ಸಭೆ ನಡೆಸಿ ನಿರ್ವಹಣೆಗೆ ಸಿಬ್ಬಂದಿ ಕಾವಲುಗಾರರ ನೇಮಕಕ್ಕೆ ಒಪ್ಪಿಗೆ ಪಡೆಯಲಾಗುವುದು. –ಸುದರ್ಶನ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT