ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುರುಗಮಲ್ಲ: ಮಾನಸಿಕ ಆರೋಗ್ಯ ಕೇಂದ್ರಕ್ಕೆ ಚಾಲನೆ

Published : 5 ಅಕ್ಟೋಬರ್ 2024, 14:50 IST
Last Updated : 5 ಅಕ್ಟೋಬರ್ 2024, 14:50 IST
ಫಾಲೋ ಮಾಡಿ
Comments

ಚಿಂತಾಮಣಿ: ‘ತಾಲ್ಲೂಕಿನ ಮುರುಗಮಲ್ಲ ಗ್ರಾಮದ ದರ್ಗಾ ಆವರಣದಲ್ಲಿ ‘ದವಾ-ದುವಾ’ ಹೆಸರಿನಲ್ಲಿ ಇಡೀ ರಾಜ್ಯದಲ್ಲೇ ಪ್ರಥಮ ಬಾರಿಗೆ ಮಾನಸಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮುರುಗಮಲ್ಲ ಗ್ರಾಮದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಾನಸಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

‘ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕೇಂದ್ರ ಆರಂಭಿಸಲಾಗಿದೆ. ಮಾನಸಿಕ ಒತ್ತಡ, ಮಾನಸಿಕ ರೋಗ ಇರುವವರಿಗೆ ಗುಣಪಡಿಸುವ ವಿಶೇಷವಾದ ಕೇಂದ್ರ. ದರ್ಗಾ ಒಳಗಡೆ ಇರುವುದರಿಂದ ಒಂದೆಡೆ ದೇವರ ಪ್ರಾರ್ಥನೆ ಮತ್ತು ರಕ್ಷಣೆ, ಮತ್ತೊಂದೆಡೆ ಆರೋಗ್ಯ ಇಲಾಖೆಯಿಂದ ಔಷಧಿಗಳು ಮತ್ತು ವೈಜ್ಞಾನಿಕ ಚಿಕಿತ್ಸೆ ದೊರೆಯುತ್ತದೆ’ ಎಂದರು.

‘ವಿಜ್ಞಾನ ಮತ್ತು ಧರ್ಮ ಎರಡನ್ನು ಕೂಡಿಸಿ ಜನರಿಗೆ ಪರಿಹಾರ ನೀಡುವುದು ಹಾಗೂ ಗುಣಪಡಿಸುವ ನೂತನ ವ್ಯವಸ್ಥೆ. ರಾಜ್ಯದಲ್ಲೇ ಈ ಯೋಜನೆ ಪ್ರಥಮವಾಗಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನ, ಚರ್ಚ್, ದರ್ಗಾಗಳಲ್ಲಿ ದವಾ-ದುವಾ ಯೋಜನೆಯನ್ನು ವಿಸ್ತರಿಸುವ ಚಿಂತನೆ ಇದೆ’ ಎಂದರು.

‘ದರ್ಗಾಗೆ ಮಾನಸಿಕ ಒತ್ತಡ, ಖಿನ್ನತೆ, ಬೇರೆ ಬೇರೆ ಮಾನಸಿಕ ರೋಗಿಗಳು ಬರುತ್ತಾರೆ. ದೇವರ ಸಾನ್ನಿಧ್ಯದಲ್ಲಿ ಶಕ್ತಿ ಪಡೆದುಕೊಳ್ಳಲು ಬರುತ್ತಾರೆ. ಜತೆಗೆ ಅವರಿಗೆ ವೈಜ್ಞಾನಿಕವಾಗಿಯೂ ಚಿಕಿತ್ಸೆ ನೀಡಿದರೆ ಗುಣಪಡಿಸಲು ಅನುಕೂಲವಾಗುತ್ತದೆ ಎನ್ನುವುದು ಆರೋಗ್ಯ ಇಲಾಖೆಯ ಉದ್ದೇಶ’ ಎಂದರು.

‘ಮಾನಸಿಕ ಕೇಂದ್ರದಲ್ಲಿ ಮಾನಸಿಕ ಕಾಯಿಲೆಗಳ ತಜ್ಞರು, ಫಾರ್ಮಸಿಸ್ಟ್, ನರ್ಸ್, ಪಿಜಿಯೋಥೆರಪಿಸ್ಟ್ ಮತ್ತಿತರ ಸಿಬ್ಬಂದಿ ಇರುತ್ತಾರೆ. ಮಾನಸಿಕ ರೋಗಿಗಳಿಗೆ ಅಗತ್ಯವಾದ ಚಿಕಿತ್ಸೆ, ಸಲಹೆ, ಮಾರ್ಗದರ್ಶನ ಹಾಗೂ ಔಷಧಿ ವಿತರಿಸಲಾಗುತ್ತದೆ’ ಎಂದು ತಿಳಿಸಿದರು.

ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಮಾತನಾಡಿ, ‘ಗ್ರಾಮಸ್ಥರು ಮಾನಸಿಕ ಆರೋಗ್ಯ ಕೇಂದ್ರವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ಥಳೀಯ ಮುಖಂಡರು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ಜನರಿಗೆ ಸೇವೆ ಒದಗಿಸಬೇಕು. ಕೇಂದ್ರವನ್ನು ಉದ್ಘಾಟನೆ ಮಾಡಿ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದರು.

ಇತ್ತೀಚೆಗೆ ಕೋಲಾರದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಉತ್ತರಿಸಿ, ‘ಅದೊಂದು ಕುಟುಂಬದ ವ್ಯವಹಾರ. ಎಲ್ಲ ಕುಟುಂಬಗಳಲ್ಲೂ ಭಿನ್ನಾಭಿಪ್ರಾಯ, ವೈಮನಸ್ಸು ಇದ್ದೇ ಇರುತ್ತವೆ. ಅದನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. ಎಫ್‌ಐಆರ್ ಆದ ಮಾತ್ರಕ್ಕೆ ಮುಳುಗಿಹೋಗುವುದಿಲ್ಲ. ಎಲ್ಲರೂ ಒಂದೆಡೆ ಕುಳಿತು ಬಗೆಹರಿಸುತ್ತೇವೆ’ ಎಂದು ತಿಳಿಸಿದರು.

ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಂಪೂರ್ಣವಾಗಿ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು. ನೂತನ ಪ್ರಯೋಗ ಶಾಲೆಯ ಉದ್ಘಾಟನೆ ನೆರವೇರಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

ರಾಜೀನಾಮೆಗೆ ಯಾರ ಒತ್ತಡವೂ ಇಲ್ಲ

‘ಮುಖ್ಯಮಂತ್ರಿ ರಾಜೀನಾಮೆಗೆ ಯಾರ ಒತ್ತಡವೂ ಇಲ್ಲ. ಮುಖ್ಯಮಂತ್ರಿ ಅಧಿಕಾರ ಪೂರೈಸುತ್ತಾರೆ. ವಿರೋಧಪಕ್ಷಗಳ ನಾಯಕರು ಒತ್ತಡ ಹೇರುವುದು ಸಹಜ ಮುಖ್ಯಮಂತ್ರಿ ರಾಜೀನಾಮೆ ಕೇಳಲು ಅವರಿಗೆ ನೈತಿಕತೆ ಇದೆಯಾ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕು. 5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ಒಳ್ಳೆಯ ಆಡಳಿತ ನೀಡಿ ಮತ್ತೆ ನಾವು ಜನರ ಮುಂದೆ ಚುನಾವಣೆಗೆ ಹೋಗುತ್ತೇವೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT