ಶಿಡ್ಲಘಟ್ಟ: ಸಂತೆಗಳೆಂದರೆ ಗೌಜು-ಗದ್ದಲ. ಸಂಭ್ರಮ-ಸಡಗರ. ಗ್ರಾಮೀಣ ಸಂಸ್ಕೃತಿಯ ಅನಾವರಣ. ಕೊಡು-ಕೊಳು ಅಷ್ಟೇ ಅಲ್ಲದೇ, ಸಾಮರಸ್ಯದ ಬದುಕಿಗೆ ಆಸರೆಯಾಗುವ ಪ್ರಯತ್ನ. ಜೊತೆಜೊತೆಗೆ ಹಣ ಪ್ರಸರಣದ ಮೂಲಕ ಗ್ರಾಮೀಣ ಭಾರತದ ಆರ್ಥಿಕ ಚೇತರಿಕೆಗೆ ನಾಂದಿ ಹಾಡುವ ಕ್ರಮ. ವಾರದ ಸಂತೆಗಳು ಶಿಡ್ಲಘಟ್ಟ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಇಂದಿಗೂ ನಡೆಯುತ್ತಿದೆ.

ಸಂತೆಗಳು ಸ್ಥಳೀಯ ಸರಕುಗಳು ಅಥವಾ ಉತ್ಪನ್ನಗಳಿಗೆ ಪ್ರಾಥಮಿಕ ಮಾರುಕಟ್ಟೆಯ ಅವಶ್ಯಕತೆಯನ್ನು ಪೂರೈಸುತ್ತಾ, ಉಪಯುಕ್ತ ಉದ್ದೇಶಗಳನ್ನು ಸಾಧಿಸಲು ಸ್ಥಳೀಯ ಆಡಳಿತದಿಂದ ಸೂಕ್ತ ಮೂಲ ಸೌಲಭ್ಯಗಳನ್ನು ಒದಗಿಸಬೇಕಿದೆ.

ಪ್ರತಿ ಸೋಮವಾರ ಶಿಡ್ಲಘಟ್ಟ ನಗರದಲ್ಲಿ ಸಂತೆ ನಡೆಯುತ್ತದೆ. ತಾಲ್ಲೂಕಿನ ವಿವಿಧ ಭಾಗಗಳಿಂದ ಕೃಷಿ ಉತ್ಪನ್ನಗಳು ಸೇರಿದಂತೆ ಹತ್ತಾರು ವಸ್ತುಗಳ ಮಾರಾಟಕ್ಕೆ ವ್ಯಾಪಾರಸ್ಥರು ಹಾಗೂ ರೈತರು ಆಗಮಿಸುತ್ತಾರೆ. ಸ್ವಚ್ಛತೆ, ನೆರಳು, ರಸ್ತೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲದೆಯೇ ಸಂತೆಯಲ್ಲಿ ಕೊಳ್ಳುವವರು ಹಾಗೂ ಮಾರುವವರು ಸಂಕಷ್ಟಕ್ಕೀಡಗುತ್ತಿದ್ದಾರೆ. ಸಂತೆಯ ಸ್ಥಳದಲ್ಲಿರುವ ಅನುಪಯುಕ್ತ ಕಟ್ಟಡಗಳನ್ನು ತೆರವುಗೊಳಿಸಿ ಸಮರ್ಪಕ ನೆರಳು ವ್ಯವಸ್ಥೆಯನ್ನು ರೂಪಿಸಿದಲ್ಲಿ ಸಾಕಷ್ಟು ಅಂಗಡಿಗಳು ಒಂದೇ ಕಡೆ ಇಟ್ಟುಕೊಳ್ಳಬಹುದಾಗಿದೆ.

ಸೊಪ್ಪು, ತರಕಾರಿ, ಎಲೆ, ಅಡಕೆ, ಬೇಳೆ, ಕಾಳು, ತಿಂಡಿ ತಿನಿಸು, ಸಾಂಬಾರು ಪದಾರ್ಥ, ಮಸಾಲೆ ಪದಾರ್ಥ, ಬಟ್ಟೆ, ಕೃಷಿ ಉಪಕರಣ, ಸುಣ್ಣ, ಬಿದಿರಿನ ಬುಟ್ಟಿಗಳು, ಹೂ ಸೇರಿದಂತೆ ವಿವಿಧ ಅಂಗಡಿಗಳನ್ನು ತೆರೆಯಲಾಗುತ್ತದೆ. ಪ್ರತಿ ಅಂಗಡಿಯಿಂದ ನಿಗದಿತ ಶುಲ್ಕ ವಸೂಲಿ ಮಾಡುವ ನಗರಸಭೆಯವರು ಮೂಲ ಸೌಕರ್ಯಗಳನ್ನು ಒದಗಿಸುವತ್ತ ಗಮನ ಹರಿಸುತ್ತಿಲ್ಲ ಎಂಬುದು ವ್ಯಾಪಾರಿಗಳ ದೂರು.

ಪ್ರತಿ ವರ್ಷವೂ ನಗರಸಭೆಯಿಂದ ಸುಂಕ ವಸೂಲಿಗೆ ಹರಾಜು ನಡೆಯುತ್ತದೆ. ಹರಾಜಿನಲ್ಲಿ ನಿಗದಿಯಾಗುವ ಗುತ್ತಿಗೆದಾರರು ವರ್ಷ ಪೂರ್ತಿಯ ಸುಂಕ ವಸೂಲಿ ಮಾಡುತ್ತಾರೆ. ಆದರೆ ಇಂತಿಂತ ಅಂಗಡಿಯಿಂದ ಇಂತಿಷ್ಟೆ ಸುಂಕ ವಸೂಲಿ ಮಾಡಬೇಕೆಂದು ನಗರಸಭೆಯವರು ಗುತ್ತಿಗೆದಾರನೊಂದಿಗೆ ಕರಾರು ಮಾಡಿಕೊಂಡಿರುತ್ತಾರೆ. ಆದರೆ ಸುಂಕ ವಸೂಲಿ ಗುತ್ತಿಗೆದಾರರು ನೀತಿ ನಿಯಮಗಳನ್ನು ಗಾಳಿಗೆ ತೂರಿ ತಮಗಿಷ್ಟ ಬಂದಷ್ಟು ವಸೂಲಿ ಮಾಡುತ್ತಾರೆ. ಪಡೆದ ಹಣಕ್ಕೆ ರಸೀದಿ ಕೊಡುವುದಿಲ್ಲ ಎಂದು ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಸಂತೆಯಲ್ಲಿ ಮಾರಾಟಗಾರರಿಗೆ ನೆರಳಿಗಾಗಿ ನಿರ್ಮಿಸಲಾದ ಹಳೆಯ ತಂಗುದಾಣದ ಶೀಟ್ಗಳು ಒಡೆದಿವೆ. ವ್ಯಾಪಾರಸ್ಥರು ತಾವೇ ಪ್ಲಾಸ್ಟಿಕ್ ಶೀಟ್ ತಂದು ಹಾಕಿಕೊಳ್ಳಬೇಕಾದ ಸ್ಥಿತಿ ಇದೆ. ವ್ಯವಸ್ಥೆ ಇಲ್ಲದ ಕಾರಣ ಜನರು ರಸ್ತೆ ಬದಿಯಲ್ಲಿ ತಮ್ಮ ಅಂಗಡಿ ಇಟ್ಟುಕೊಳ್ಳುವಂತಾಗಿದೆ. ಇತ್ತ ವಾಸವಿ ಶಾಲೆಯಿಂದ ಅತ್ತ ದರ್ಗಾದವರೆಗೂ ಜನರು ರಸ್ತೆಯಲ್ಲೇ ಅಂಗಡಿ ಇಟ್ಟುಕೊಳ್ಳುವುದರಿಂದ ಈ ರಸ್ತೆಯಲ್ಲಿ ಸೋಮವಾರ ವಾಹನ ಓಡಾಡಲು ಸಾಧ್ಯ ವಾಗುವುದಿಲ್ಲ.

‘ಇಲ್ಲಿ ಹರಾಜು ವ್ಯವಸ್ಥೆ ಸರಿ ಇಲ್ಲದೇ ರೈತರಿಗೆ ತೊಂದರೆಯಾಗುತ್ತಿದೆ. ಹರಾಜು ಕಟ್ಟೆ ಮತ್ತು ಗೋದಾಮು ಹಾಳು ಬಿದ್ದ ಕಟ್ಟಡವಾಗಿದೆ. ರೈತರ ಉತ್ಪನ್ನಗಳನ್ನು ತೂಕ ಮಾಡಲು ಸ್ಕೇಲು ಮತ್ತು ಯಾರ್ಡ್ನಲ್ಲಿ ಅಧಿಕಾರಿಯನ್ನು ಇರಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ನಿರ್ಮಿಸಿ ಬೀಗ ಹಾಕಿಡಲಾಗಿದೆ. ಸಂತೆಯಲ್ಲಿ ಹಾದು ಹೋಗುವ ಚರಂಡಿಯಲ್ಲಿ ಊರಿನ ತ್ಯಾಜ್ಯ ನೀರು ಹೋಗುವುದರಿಂದ ರೋಗ ರುಜಿನಗಳಿಗೆ ಕಾರಣವಾಗಿದೆ. ಹೋಬಳಿ ಮಟ್ಟದಲ್ಲಿದ್ದರೂ ಜಂಗಮಕೋಟೆಯಲ್ಲಿ ಅತ್ಯುತ್ತಮ ಸಂತೆಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಶಿಡ್ಲಘಟ್ಟದ ಸಂತೆ ನಗರಸಭೆ ವ್ಯಾಪ್ತಿಗೆ ಬರುತ್ತದೆ. ಆದರೂ ಕನಿಷ್ಠ ಸೌಲಭ್ಯಗಳನ್ನು ಕೂಡ ಸಂತೆಯಲ್ಲಿ ಒದಗಿಸದೇ ಇರುವುದು ಇಲ್ಲಿನ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಅಸಡ್ಡೆ ತೋರಿಸುತ್ತದೆ’ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಬೂದಾಳ ರಾಮಾಂಜಿ ಬೇಸರ ವ್ಯಕ್ತಪಡಿಸಿದರು.

ಸಂತೆ ಮೈದಾನದಲ್ಲಿ ಸ್ವಚ್ಛತೆ ಇಲ್ಲ. ಚಾವಣಿಯ ಶೀಟುಗಳಲ್ಲಿ ರಂಧ್ರಗಳದ್ದೆ ದರ್ಬಾರು, ಸಂಜೆಯಾದರೆ ಕತ್ತಲು ಆವರಿಸುತ್ತದೆ, ಗ್ರಾಹಕರು ಬರೋದಿಲ್ಲ, ವ್ಯಾಪಾರ ನಡೆಯೋದಿಲ್ಲ. ಸಂತೆ ಮೈದಾನದಲ್ಲಿನ ಶೌಚಾಲಯಕ್ಕೆ ಬೀಗ ಜಡಿದಿದ್ದು ಮಹಿಳಾ ವ್ಯಾಪಾರಿಗಳು ಶೌಚಕ್ರಿಯೆಗೆ ಪರದಾಡುವಂತಾಗಿದೆ.

ಈ ಸಮಸ್ಯೆ ಒಂದೆರಡು ದಿನ, ತಿಂಗಳುಗಳಿಂದಿಲ್ಲ ಬದಲಿಗೆ ವರ್ಷಗಳಿಂದಲೂ ಇದೆ. ವ್ಯಾಪಾರಿಗಳು ಸಮಸ್ಯೆಗಳ ಬಗ್ಗೆ ತಕರಾರು ತೆಗೆಯುತ್ತಲೆ ಇದ್ದಾರೆ. ಆದರೆ ನಗರಸಭೆಯವರು ಮೌನವಹಿಸಿದ್ದಾರೆ.

ಸಾಕಷ್ಟು ಗ್ರಾಹಕರು ಸಂತೆ ಮೈದಾನದಲ್ಲಿ ಕಾಲಿಡದೆ ಸಂತೆಗೂ ಮೊದಲೆ ಸಿಗುವ ರಸ್ತೆಯ ಅಕ್ಕಪಕ್ಕ ಸಿಗುವ ತರಕಾರಿ, ಸಾಂಬಾರು ಸಾಮಗ್ರಿ ಖರೀದಿಸಿ ಹೋಗುತ್ತಾರೆ ಎಂದು ಅವಲತ್ತುಕೊಳ್ಳುತ್ತಾರೆ ವ್ಯಾಪಾರಿಗಳು.

ಕಸಕಡ್ಡಿ ರಾಶಿ ನಡುವೆ ವ್ಯಾಪಾರ ಮಾಡಬಹುದು. ಆದರೆ ಮಲಮೂತ್ರ ವಿಸರ್ಜನೆ ಬಾಧೆಯನ್ನು ದಿನವಿಡೀ ಕಾಯುವುದಿದೆಯಲ್ಲ ಅದು ಹೇಳಿಕೊಳ್ಳಲಾಗದ ಪರಿಸ್ಥಿತಿ ಎನ್ನುತ್ತಾರೆ ವ್ಯಾಪಾರಸ್ಥೆ ಶಾರದಮ್ಮ.

ಶಾಸನದಲ್ಲಿ ಉಲ್ಲೇಖ

ಶಿಡ್ಲಘಟ್ಟ ತಾಲ್ಲೂಕಿನ ರಾಮೇಶ್ವರದ ಆಂಜನೇಯ ದೇವಾಲಯದ ಹಿಂಭಾಗದ ಜಮೀನಿನಲ್ಲಿ, ಈ ಭಾಗದಲ್ಲಿ ನಡೆಯುತ್ತಿದ್ದ ಸಂತೆಯ ವಿವರಗಳನ್ನು ತಿಳಿಸುವ ಸುಮಾರು 600 ವರ್ಷಗಳ ಹಿಂದಿನ ಶಿಲಾ ಶಾಸನವಿದೆ. 1378ರ ಈ ಶಾಸನದಲ್ಲಿ, ಮಹಾಮಂಡಲೇಶ್ವರ ದೇಪಣ್ಣ ಒಡೆಯರು ಸಾದಲಿ ನಾಡಿನ ರಾಮೇಶ್ವರ ಗ್ರಾಮದ ಬಯಲಿನಲ್ಲಿ ಸಂತೆಯನ್ನು ಆರಂಭಿಸಿದ್ದನ್ನು ತಿಳಿಸುತ್ತದೆ. ಅಲ್ಲದೆ ಸಂತೆಯಿಂದ ಬರುವ ರಾಜಾಯ, ನಾಡಾಯ, ಶೆಟ್ಟರ ಆಯ ಹಾಗೂ ಮಿಂಡಗುಡ್ಡ ಆಯಗಳನ್ನು ಎತ್ತುವ ಹಕ್ಕನ್ನೂ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.