ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ನವರಾತ್ರಿ ಉತ್ಸವ: ದಶಕಗಳ ಇತಿಹಾಸ

ಒಂಬತ್ತು ದಿನವೂ ಅಭಿಷೇಕ, ವಿಶೇಷ ಪೂಜೆ, ರುದ್ರಾಭಿಷೇಕ, ಹೋಮ–ಹವನಗಳು
Published : 6 ಅಕ್ಟೋಬರ್ 2024, 13:53 IST
Last Updated : 6 ಅಕ್ಟೋಬರ್ 2024, 13:53 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ದಸರಾ ಉತ್ಸವ ಎಂದರೆ ಮನೆ–ಮಂದಿರಗಳಲ್ಲಿ ಸಂಭ್ರಮದ ಆಚರಣೆಗಳು ನಡೆಯುತ್ತವೆ. ಜಿಲ್ಲೆಯ ಹಲವೆಡೆ ಸಾರ್ವಜನಿಕ ಉತ್ಸವಗಳು ನಿರಂತರವಾಗಿ ನಡೆದುಕೊಂಡು ಬಂದಿವೆ.

ಚಿಕ್ಕಮಗಳೂರು ನಗರದ ಹೊರ ವಲಯದಲ್ಲಿರುವ ಬೀಕನಹಳ್ಳಿಯಲ್ಲಿ ದೇವಿಮಹತ್ಮೆ ಎಂಬ ಪೌರಾಣಿಕ ನಾಟಕದಿಂದ ಆರಂಭವಾದ ನವರಾತ್ರಿ ಉತ್ಸವ 73 ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾಟಕದ ಮೂಲಕ ದೇವಿ ಗ್ರಾಮ ಪ್ರವೇಶ ಮಾಡಿ ನೆಲೆಯಾದಳು ಎಂಬುದು ಊರಿನವರ ನಂಬಿಕೆ. 

ಬಳಿಕ ಗ್ರಾಮದಲ್ಲಿ ದೇವಸ್ಥಾನವೊಂದನ್ನು ಕಟ್ಟಿದ ಗ್ರಾಮಸ್ಥರು, ಜನರ ಕಷ್ಟಗಳನ್ನು ದೇವಿ ಪರಿಹರಿಸುತ್ತಿದ್ದಾಳೆ ಎಂಬ ನಂಬಿಕೆಯಿಂದ ಜನರಲ್ಲಿ ಭಕ್ತಿ ಹೆಚ್ಚಾಗಿದ್ದು, 73 ವರ್ಷಗಳಿಂದ ನವರಾತ್ರಿ ಆಚರಣೆ ಮಾಡಿಕೊಂಡು ಬಂದಿದ್ದಾರೆ.

‘ಬೀಕನಹಳ್ಳಿ ಮತ್ತು ಹಂಪಾಪುರ ಗ್ರಾಮದವರು ಸೇರಿ ಈ ಉತ್ಸವ ನಡೆಸುತ್ತಿದ್ದು, ರಾಜ್ಯ ಮತ್ತು ಹೊರ ರಾಜ್ಯದಿಂದ ಇಲ್ಲಿಗೆ ಜನ ಬರುತ್ತಿದ್ದಾರೆ. ಒಂಬತ್ತು ದಿನವೂ ಅಭಿಷೇಕ, ವಿಶೇಷ ಪೂಜೆ, ರುದ್ರಾಭಿಷೇಕ, ಹೋಮ–ಹವನಗಳು ನಡೆಯುತ್ತಿವೆ. ಉತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ, ಸೈಕಲ್ ಸ್ಪರ್ಧೆ, ವಾಲಿಬಾಲ್, ಕ್ರಿಕೆಟ್ ಸೇರಿ ಹಲವು ಸ್ಪರ್ಧೆಗಳನ್ನೂ ಏರ್ಪಡಿಸಿದ್ದೇವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಕೊನೆಯ ದಿನ ಹಂಪಾಪುರ ಮತ್ತು ಬೀಕನಹಳ್ಳಿಯಲ್ಲಿ ದೇವಿಯ ಉತ್ಸವ ನಡೆಯಲಿದೆ. ಅದಕ್ಕೂ ಮುನ್ನಾ ದಿನ(ಭಾನುವಾರ) ಬನ್ನಿ ಮಂಟಪದಲ್ಲಿ ಅಂಬು ಹೊಡೆಯುವ(ಬಾಳೆ ಕಂದು ಕಡಿಯುವ) ಕಾರ್ಯಕ್ರಮ ಕೂಡ ನಡೆಯಲಿದೆ. ಪ್ರತಿದಿನ ಅನ್ನದಾಸೋಹ ಕೂಡ ನಡೆಯುತ್ತಿದೆ. ದೇವಿಮಹತ್ಮೆ ನಾಟಕದಿಂದಲೇ ಈ ಉತ್ಸವ ಆರಂಭವಾಗಿರುವುದರಿಂದ ಪ್ರತಿವರ್ಷವೂ ಉತ್ಸವದ ವೇಳೆ ದೇವಿಮಹತ್ಮೆ ನಾಟಕ ಆಯೋಜಿಸಿಕೊಂಡು ಬಂದಿದ್ದೇವೆ. ಗ್ರಾಮಸ್ಥರೇ ನಾಟಕದಲ್ಲಿ ಪಾತ್ರಧಾರಿಗಳಾಗಿ ಅಭಿನಯಿಸುತ್ತಾರೆ’ ಎಂದು ಗ್ರಾಮಸ್ಥ ಸತೀಶ್ ವಿವರಿಸಿದರು.

ಶಂಕರಮಠ, ವಿಜಯಪುರ, ಶಾರದಾ ಮಂದಿರ, ಕೊಲ್ಲಾಪುರದಮ್ಮ ದೇವಸ್ಥಾನ, ಹಳ್ಳದ ರಾಮೇಶ್ವರ, ಇಂದಾವರ, ಕೆಂಪನಹಳ್ಳಿ ಲಕ್ಕಮ್ಮದೇವಿ, ಹಳ್ಳದಮ್ಮ, ಮಾಸ್ತಮ್ಮ ದೇವಿಯ ಉತ್ಸವ, ಅರವಿಂದನಗರ, ತಿಲಕಪಾರ್ಕ್ ರಸ್ತೆ ಸೇರಿ ಹಲವೆಡೆ ಉತ್ಸವಗಳು ನಡೆಯುತ್ತಿವೆ.

ಶಾರದಾ ಪೀಠದಲ್ಲಿ ವಿಜೃಂಭಣೆಯ ‌ಮಹೋತ್ಸವ

ಶೃಂಗೇರಿ: ಇಲ್ಲಿನ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರತಿವರ್ಷ ವೈಭವದಿಂದ ನಡೆಯುತ್ತಿದೆ. ದೇವಿಗೆ ದಿನಕ್ಕೊಂದು ಅಲಂಕಾರ ಮಾಡಿ ಪೂಜಿಸುವುದು ಪ್ರತೀತಿ. ಶಾರದಾ ಪ್ರತಿಷ್ಠೆ ಹಾಗೂ ಹಂಸವಹನಾಲಂಕಾರ ಬ್ರಾಹ್ಮೀ ಅಲಂಕಾರ ವೃಷಭವಾಹನ ಅಲಂಕಾರ ಮಯೂರ ವಾಹನ ಅಲಂಕಾರ ಗರುಡವಾಹನಾಲಂಕಾರ ಮೋಹಿನೀ ಅಲಂಕಾರ ವೀಣಾಶಾರದಾಲಂಕಾರ ರಾಜರಾಜೇಶ್ವರಿ ಅಲಂಕಾರ ಸಿಂಹವಾಹನಾಲಂಕಾರ ಗಜಲಕ್ಷ್ಮಿ ಅಲಂಕಾರ ಮಾಡುತ್ತಾರೆ. ಶಾರದಾಂಬಾ ಮಹಾರಥೋತ್ಸವ ಶಾರದಾ ಪೀಠದ ಉಭಯ ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ ನಡೆಯುತ್ತಿವೆ. ಶಾರದಾ ಮಠದಲ್ಲಿ ಶತಚಂಡೀಯಾಗ ಪುರಶ್ಚರಣಾರಂಭ ಸರಸ್ವತ್ಯಾವಾಹನೆ ಶತಚಂಡೀಯಾಗ ಗಜಾಶ್ವಪೂಜೆ ಲಕ್ಷ್ಮಿನಾರಾಯಣ ಹೃದಯಹೋಮ ರಾಮಪಟ್ಟಾಭಿಷೇಕ ಸರ್ಗ ಪಾರಾಯಣೆ ವಿಜಯೋತ್ಸವ ಮತ್ತು ಶಮೀಪೂಜೆ ನಾಲ್ಕುವೇದಗಳ ಪಾರಾಯಣ ವಾಲ್ಮೀಕಿ ರಾಮಾಯಣ ದೇವೀಭಾಗವತ ದುರ್ಗಾಸಪ್ತಶತಿ ಶ್ರೀಸೂಕ್ತ ಜಪ ಭವನೇಶ್ವರಿ ಜಪ ಚಂದ್ರಮೌಳೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ ಶ್ರೀಚಕ್ರಕ್ಕೆ ನವಾಹರಣ ಪೂಜೆ ಕುಮಾರೀ ಸುವಾಸಿನೀ ಪೂಜೆ ಶಾರದಾಂಬೆಗೆ ವಿಶೇಷ ಪೂಜೆ ಸಂಜೆ ಶಾರದೆ ದೀಪೋತ್ಸವ ರಾತ್ರಿ ಶಾರದೆಯ ಸನ್ನಿಧಿಯಲ್ಲಿ ಬಂಗಾರದ ದಿಂಡೀ ಉತ್ಸವ ನಡೆಯಲಿವೆ. ತುಂಗಾ ಪೂಜೆಗಳನ್ನು ಭಾರತೀತೀರ್ಥ ಸ್ವಾಮೀಜಿ ವಿಧುಶೇಖರಭಾರತೀ ಸ್ವಾಮೀಜಿ ಮತ್ತು ಋತ್ವಿಜರಿಂದ ನೆರವೇರುತ್ತದೆ. ಕೊನೆ ದಿನ ರಥೋತ್ಸವ ಅತ್ಯಂತ ವೈಭವವಾಗಿ ನೆರವೇರುತ್ತದೆ. ಹಲವೆಡೆಯಿಂದ ಬರುವ ಭಕ್ತರು ರಥೋತ್ಸವದಲ್ಲಿ ಪಾಲ್ಗೋಳ್ಳುತ್ತಾರೆ. ವಿಧುಶೇಖರಭಾರತೀ ಸ್ವಾಮೀಜಿಗಳ ದರ್ಬಾರು ನವರಾತ್ರಿಯ ವಿಶೇಷ ಕಾರ್ಯಕ್ರಮ. ಈ ದರ್ಬಾರು ವಿದ್ಯಾರಣ್ಯರ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಇಬ್ಬರು ಗುರುಗಳು ಶಾರದಾ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ ಆಭರಣಗಳನ್ನು ಧರಿಸಿ ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗುತ್ತಾರೆ. ಪ್ರತಿದಿನ ಸಂಜೆ 6ಗಂಟೆಗೆ ತಾಲ್ಲೂಕಿನ ಒಂದೊಂದು ಗ್ರಾಮ ಪಂಚಾಯಿತಿ ಮತ್ತು ವಿವಿಧ ಸಂಘ ಸಂಸ್ಥೆಗಳಿಂದಲೂ ಬೀದಿ ಉತ್ಸವ ನಡೆಯಲಿದೆ.

ಅನ್ನಪೂರ್ಣೆಗೆ ಬಗೆಬಗೆಯ ಅಲಂಕಾರದ ವೈಶಿಷ್ಟ್ಯ

ಕಳಸ: ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಭಕ್ತರಲ್ಲಿ ಶ್ರದ್ಧಾಭಕ್ತಿ ಹೆಚ್ಚಾಗಿದೆ. ದಸರೆಯ ಪ್ರತಿದಿನವೂ ಅತ್ಯಂತ ವಿಶಿಷ್ಟ ಅಲಂಕಾರದಿಂದ ದೇವಿ ಕಂಗೊಳಿಸುತ್ತಾಳೆ. ಹಂಸಾರೂಢಾ ಸರಸ್ವತಿ ಗಜಾರೂಢಾ ಬ್ರಹ್ಮಚಾರಿಣಿ ಸಿಂಹಾರೂಢಾ ಚಂದ್ರಘಂಟಾ ಮೃಗಾರೂಢಾ ಕೂಷ್ಮಾಂಡ ಮಕರಾರೂಢಾ ಸ್ಕಂದಮಾತಾ ಮಯೂರಾರೂಢ ಕಾತ್ಯಾಯಿನಿ ಅಶ್ವಾರೂಢಾ ಗೌರಿ ವೃಷಭಾರೂಢಾ ತ್ರಿಮೂರ್ತಿ ಸಿಂಹಾರೂಢ ಸಿದ್ಧಿಧಾತ್ರಿ ಅಲಂಕಾರ ವೀಕ್ಷಿಸಲು ಭಕ್ತರು ರಾಜ್ಯದ ವಿವಿಧೆಡೆಯಿಂದ ಬರುತ್ತಾರೆ. ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನವರಾತ್ರಿ ಸಂದರ್ಭದಲ್ಲಿ ಆಯುಧ ಪೂಜೆ ಮತ್ತು ವಿಜಯ ದಶಮಿ ಕೂಡ ಇಲ್ಲಿ ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ. ಆನಂತರ ನಡೆಯುವ ಮಹಾಚಂಡಿಕಾ ಹೋಮ ಹೊರನಾಡಿಗೆ ಬಹುಕಾಲದಿಂದ ಹೆಸರು ತಂದಿರುವ ವಿಶಿಷ್ಟವಾದ ಧಾರ್ಮಿಕ ವಿಧಿ. ಕೊನೆಯ ದಿನ ನಡೆಯುವ ಜೀವ ಭಾವ ಕಾರ್ಯಕ್ರಮದಲ್ಲಿ ನಾಡಿನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ‘ಶ್ರೀಮಾತಾ ಪ್ರಶಸ್ತಿ ಪ್ರದಾನ’ ಮಾಡುವ ಸಂಪ್ರದಾಯವನ್ನು ಧರ್ಮದರ್ಶಿ ಜಿ.ಭೀಮೇಶ್ವರ ಜೋಷಿ ಪಾಲಿಸುತ್ತಿದ್ದಾರೆ.

ಜಂಗಿ ಕುಸ್ತಿಯೇ ವಿಶೇಷ

ತರೀಕೆರೆ: ದಸರಾ ಹಬ್ಬದ ವೇಳೆ ತರೀಕೆಯಲ್ಲಿ ನಡೆಯುವ ಜಂಗಿ ಕುಸ್ತಿ ವಿಶೇಷವಾಗಿದ್ದು ಇದಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಪಟ್ಟಣದ ಬಯಲು ರಂಗಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಮತ್ತು ಕಣ್ತುಂಬಿಕೊಳ್ಳಲು ಜನ ಸಾಗರವೇ ಸೇರುತ್ತದೆ. ಮೈಸೂರಿನಲ್ಲಿ ಮಹಾರಾಜರು ಪ್ರಾರಂಭಿಸಿದ ಬಯಲು ಜಂಗಿ ಕುಸ್ತಿ ರಾಜ್ಯದಲ್ಲಿಯೇ ಮೊದಲನೆಯದಾದರೆ ನಂತರ ತರೀಕೆರೆ ಪಾಳೆಗಾರರು ಈ ಜಂಗಿ ಕುಸ್ತಿ ಸ್ಪರ್ಧೆ ಪ್ರಾರಂಭಿಸಿದರು. ಈ ಸ್ಪರ್ಧೆಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುವ ಜಗಜಟ್ಟಿಗಳ ಕುಸ್ತಿ ಕಸರತ್ತುಗಳನ್ನು ಕಣ್ತುಂಬಿಕೊಳ್ಳಲು ತರೀಕೆರೆ ಪಟ್ಟಣ ಹಾಗೂ ತಾಲ್ಲೂಕಿನ ಜನರು ಕಾತುರದಿಂದ ಕಾಯುತ್ತಾರೆ. ನವರಾತ್ರಿಯ ಕೊನೆ ದಿನ ವಿಜಯದಶಮಿಯಂದು ಅಂಬು ಒಡೆಯುವುದರ ಮೂಲಕ ಚಾಲನೆ ನೀಡಲಾಗುತ್ತದೆ. ಮಾರನೇ ದಿನ ಕುಸ್ತಿ ಪ್ರಾರಂಭವಾಗುತ್ತದೆ. ಈ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಚಿನ್ನ-ಬೆಳ್ಳಿ ಪದಕ ಬೆಳ್ಳಿ ಕಿರೀಟ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಕೊನೆಯ ದಿನ ವಿಜೇತರಿಗೆ ಬೆಳ್ಳಿ ಗದೆಯನ್ನು ನೀಡಿ ಗೌರವಿಸಲಾಗುತ್ತದೆ. ಈ ಎಲ್ಲಾ ವ್ಯವಸ್ಥೆಯನ್ನು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ನಿರ್ವಹಿಸುತ್ತದೆ.

26 ವರ್ಷಗಳಿಂದ ಶರನ್ನವರಾತ್ರಿ ಉತ್ಸವ

ನರಸಿಂಹರಾಜಪುರ: ಇಲ್ಲಿನ ಶರನ್ನವರಾತ್ರಿ ಸೇವಾ ಸಮಿತಿಯಿಂದ 26 ವರ್ಷಗಳಿಂದ ಶರನ್ನವರಾತ್ರಿ ಉತ್ಸವವು ಸಾರ್ವಜನಿಕ ಉತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ತಾಲ್ಲೂಕು ಕೇಂದ್ರ ಐತಿಹಾಸಿಕ ನಾಡಹಬ್ಬ ದಸರಾ ಹಾಗೂ ವಿಜಯದಶಮಿ ಆಚರಿಸಲಾಗುತ್ತಿದೆ. ಹಿಂದೆ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸದೆ ಇದ್ದರೂ ಸಹ ಗ್ರಾಮ ದೇವತೆಗಳಾದ ಗುತ್ತ್ಯಮ್ಮ ಅಂತರಘಟ್ಟಮ್ಮ ಕೊಟ್ಟೊರು ಬಸವೇಶ್ವರ ದೇವತೆಗಳೊಂದಿಗೆ ಸುಗ್ಗಪ್ಪನ ಮಠದಲ್ಲಿರುವ ಮಾರನವಮಿ ಬಯಲಿಗೆ (ಬನ್ನಿಮಂಟಪಕ್ಕೆ) ತೆರಳಿ ಅಂಬು ಹೊಡೆಯುವ (ಮರಕ್ಕೆ ತೆಂಗಿನ ಕಾಯಿಕಟ್ಟಿ ಕೋವಿಯಿಂದ ಹೊಡೆಯುವ) ಮತ್ತು ಬನ್ನಿ ಮುರಿಯುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿತ್ತು. ವರ್ಷಗಳು ಕಳೆದಂತೆ ದೇವಿಯನ್ನು ಪ್ರತಿಷ್ಠಾಪಿಸಿ ಮೈಸೂರು ದಸರಾ ಮಾದರಿಯಲ್ಲಿ ಆಚರಸಿಲು ಊರಿನವರು ನಿರ್ಧರಿಸಿದರು. 1998ರಲ್ಲಿ ಎಚ್.ಎಸ್.ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಶರನ್ನವರಾತ್ರಿ ಉತ್ಸವ ಆಚರಣೆಗೆ ಬಂದಿದೆ. ಅಂದಿನಿಂದ 9 ದಿನಗಳ ಕಾಲ ವಿದ್ಯಾಗಣಪತಿ ಪೆಂಡಾಲ್‌ನಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದೆ. ಮಂಡಗದ್ದೆ ಸಮೀಪ ಬೇಗೂಳ್ಳಿ ಗ್ರಾಮದಲ್ಲಿ ಗಣಪತಿ ವಿಗ್ರಹವನ್ನು ತೆಪ್ಪೋತ್ಸವದ ಮೂಲಕ ವಿಸರ್ಜನೆ ಮಾಡುವುದನ್ನು ನೋಡಿಕೊಂಡು ಬಂದ ಸಮಿತಿಯ ಮಾಜಿ ಅಧ್ಯಕ ಕೆ.ಎಸ್.ಸಂತೋಷ್ ಕುಮಾರ್ ಅವರು ಇಲ್ಲಿಯೂ ಭದ್ರಾ ಹಿನ್ನೀರಿನಲ್ಲಿ ತೆಪ್ಪೋತ್ಸವ ಆಚರಿಸಿ ದೇವಿಯ ವಿಗ್ರಹ ವಿಸರ್ಜನೆ ಮಾಡುವ ಚಿಂತನೆ ಮುಂದಿಟ್ಟರು. 2018ರಲ್ಲಿ ಎಚ್.ಕೆ.ಸುನಿಲ್ ಕುಮಾರ್ ಅಧ್ಯಕ್ಷತೆಯ ಸಮಿತಿ ಸಮ್ಮತಿ ಸೂಚಿಸಿತು. ಆ ವರ್ಷದಿಂದ ಮೆಣಸೂರು ಗ್ರಾಮದ ಭದ್ರಾ ಹಿನ್ನೀರಿನಲ್ಲಿ ತೆಪ್ಪೋತ್ಸವ ಆಚರಿಸಿ ದೇವಿಯ ವಿಗ್ರಹ ವಿಸರ್ಜನೆ ಕಾರ್ಯಕ್ರಮ ನಡೆಕೊಂಡು ಬಂದಿದೆ.

ಗಣೇಶ– ದುರ್ಗಾ ಮಹೋತ್ಸವ

ಕೊಪ್ಪ: ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿನ ಬಲಮುರಿ ವೀರಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಕಳೆದ 47 ವರ್ಷಗಳ ಹಿಂದೆ ಚಾಲನೆ ಸಿಕ್ಕಿತು. 1978ರಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಸಮುದಾಯದ ಯುವಕರು ಒಗ್ಗೂಡಿ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ ಕಟ್ಟಿಕೊಂಡು ಕಾರ್ಯಕ್ರಮಕ್ಕೆ ಮುಂದಡಿ ಇಟ್ಟರು. ಅದಾಗಿ 5 ವರ್ಷಗಳ ಬಳಿಕ ನವರಾತ್ರಿ ಉತ್ಸವ ಆರಂಭಿಸಿದರು. ಗೌರಿ-ಗಣೇಶ ಹಬ್ಬದಂದು ಪ್ರತಿಷ್ಠಾಪಿಸುವ ಗಣಪತಿ ಮೂರ್ತಿ ನವರಾತ್ರಿ ಆರಂಭದಂದು ಪ್ರತಿಷ್ಠಾಪಿಸುವ ದುರ್ಗಾದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ವಿಸರ್ಜಿಸಲಾಗುತ್ತದೆ. ರಾಜ್ಯದಲ್ಲಿ ಕೆಲವೇ ಕಡೆಗಳಲ್ಲಿ ಆಯೋಜಿಸುವ ಗಣೇಶ ದುರ್ಗಾ ಮಹೋತ್ಸವ ಪೈಕಿ ಇದು ಹೆಸರುವಾಸಿ. ನವರಾತ್ರಿಯಂದು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಲ್ಲದೆ ಎಸ್‌ಎಸ್‌ಎಲ್‌ಸಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಂಕಷ್ಟದಲ್ಲಿ ಇರುವ ಬಡವರಿಗೆ ಧನಸಹಾಯ ಇತರೆ ಸಂಘ–ಸಂಸ್ಥೆಗಳ ಜತೆಗೂಡಿ ಆರೋಗ್ಯ ಶಿಬಿರ ರಕ್ತದಾನ ಶಿಬಿರ ಮುಂತಾದ ಸಮಾಜಮುಖಿ ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ ತೊಡಗಿಸಿಕೊಂಡಿದೆ.  ನವರಾತ್ರಿಯ 9 ದಿನಗಳಲ್ಲಿ ಪ್ರತಿದಿನ ವಿಶೇಷ ಪೂಜೆ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದೆ. ಪ್ರತಿದಿನ 1500 ಮಂದಿ ಊಟ ಮಾಡುತ್ತಾರೆ. ದಾನಿಗಳ ಸಹಕಾರ ಸಾರ್ವಜನಿಕರಿಂದ ವಂತಿಗೆ 80 ಮಂದಿ ಸದಸ್ಯರಿರುವ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗದ ಶ್ರಮದಿಂದ ವೈಭವದ ಗಣೇಶ-ದುರ್ಗಾ ಮಹೋತ್ಸವ ಯಶಸ್ವಿಯಾಗಿ ನಡೆಯುತ್ತಿದೆ.

50 ವರ್ಷಗಳ ಇತಿಹಾಸ

ಕಡೂರು: ತಾಲ್ಲೂಕಿನ ಮಲ್ಲೇಶ್ವರದ ಶಕ್ತಿ ದೇವತೆ ಸ್ವರ್ಣಾಂಭ ದೇವಿ ಶರನ್ನವರಾತ್ರಿ ಉತ್ಸವಕ್ಕೆ 50 ವರ್ಷಗಳ ಇತಿಹಾಸವಿದೆ. ವಲ್ಮೀಕದಲ್ಲಿ(ಹುತ್ತ) ಇರುವ ಸ್ವರ್ಣಾಂಭ ದೇವಿ ದೇವಸ್ಥಾನಕ್ಕೆ ಪ್ರತಿನಿತ್ಯ ವಿಶೇಷವಾಗಿ ಶುಕ್ರವಾರ ಸಾವಿರಾರು ಜನ ಭೇಟಿ ನೀಡುತ್ತಾರೆ. ಸನ್ನಿಧಿಯಲ್ಲಿ ವರ್ಷ ಪೂರ್ತಿ ನಡೆಯುವ ಧಾರ್ಮಿಕ‌ ಕಾರ್ಯಕ್ರಮಗಳಲ್ಲಿ ನವರಾತ್ರಿಗೆ ವಿಶೇಷ ಸ್ಥಾನವಿದೆ. ನವರಾತ್ರಿಯ ಪ್ರಥಮ ದಿನ ದೇವಿಯ ಮೂಲಸ್ಥಾನದಲ್ಲಿ ವಿಶೇಷ ಪೂಜೆ ಅಭಿಷೇಕ ಸಂಕಲ್ಪ ನಡೆಸಿದ ನಂತರ ಉತ್ಸವ ಮೂರ್ತಿಯನ್ನು ಪಟ್ಟಕ್ಕೆ ಕೂರಿಸಲಾಗುತ್ತದೆ. ಸ್ವರ್ಣಾಂಭ ದೇವಿಯ ಜೊತೆ ಅರಳೀಮರದಮ್ಮ ಎಂಬ ದೇವತೆಯನ್ನೂ ಪಟ್ಟಕ್ಕೆ ಕೂರಿಸಲಾಗುತ್ತದೆ. 9 ದಿನವೂ ಬೆಳಿಗ್ಗೆ ಕುಂಕುಮಾರ್ಚನೆ ಲಲಿತಾ ಸಹಸ್ರನಾಮಾರ್ಚನೆ ಸಪ್ತಶತಿ ಪಾರಾಯಣ ವಿಷ್ಣು ಸಹಸ್ರನಾಮ ಪಠಣ ಪೂಜೆ ನೆರವೇರಿಸಲಾಗುತ್ತದೆ. ನಿತ್ಯ ಒಂದೊಂದು ಅಲಂಕಾರ ಇಲ್ಲಿನ ವಿಶೇಷ. ಸಂಜೆ ಅಷ್ಟಾವಧಾನ ಸೇವೆ ನಡೆಯುತ್ತದೆ. ದುರ್ಗಾಷ್ಟಮಿಯಂದು ಚಂಡಿಕಾ‌ಹೋಮ ನಡೆಸುವುದು ವಾಡಿಕೆ.   ಕೊನೆ ದಿನ ಎರಡೂ ದೇವಿಯರನ್ನು ಉತ್ಸವದಲ್ಲಿ ಕರೆದೊಕೊಂಡು ಹೋಗಿ ಅಂಬು ಹೊಡೆಯುವುದರೊಂದಿಗೆ ನವರಾತ್ರಿ ಉತ್ಸವಕ್ಕೆ ತೆರೆಬೀಳುತ್ತದೆ. ಇಲ್ಲಿ ಧರ್ಮಾಧಿಕಾರಿಯಾಗಿದ್ದ ಎಂ.ಟಿ.ಶ್ರೀನಿವಾಸ ಅವರು ಸಾಂಕೇತಿಕವಾಗಿ ನಡೆಯುತ್ತಿದ್ದ ಶರನ್ನವರಾತ್ರಿ ಉತ್ಸವವನ್ನು 50 ವರ್ಷಗಳ ಹಿಂದೆ ಕ್ರಮಬದ್ಧವಾಗಿ ನಡೆಸಲಾರಂಭಿಸಿದರು. ಅದೇ ಸಂಪ್ರದಾಯ ಮುಂದುವರೆದಿದೆ ಎಂದು ಧರ್ಮದರ್ಶಿ ಮಂಡಳಿ‌ ಅಧ್ಯಕ್ಷ ಎಂ.ಟಿ.ಸತ್ಯನಾರಾಯಣ ತಿಳಿಸಿದರು.

ಶ್ರದ್ಧಾಭಕ್ತಿಗೆ ಹೆಸರುವಾಸಿಯಾದ ದುರ್ಗಾಮಾತೆ ಆಚರಣೆ

ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಪ್ರತಿ ವರ್ಷವೂ ಪ್ರತಿಷ್ಠಾಪಿಸುವ ಜನನ ದುರ್ಗಾಮಾತೆಯು ಶ್ರದ್ಧಾಭಕ್ತಿ ಆಚರಣೆಗೆ ಹೆಸರುವಾಸಿಯಾಗಿದೆ. 21 ವರ್ಷಗಳ ಹಿಂದೆ ಸಮಾನ ಮನಸ್ಕರೆಲ್ಲ ಸೇರಿ ಕಾಂಗ್ರೆಸ್ ಮುಖಂಡರಾದ ಮೋಟಮ್ಮ ನೇತೃತ್ವದಲ್ಲಿ ದುರ್ಗಾಮಾತೆ ಪ್ರತಿಷ್ಠಾಪನೆಗೆ ಮುಂದಾಗಿದ್ದು ಇಂದಿಗೂ ವಿಶಿಷ್ಟವಾಗಿ ಆಚರಣೆ ನಡೆಸಲಾಗುತ್ತದೆ. ಪ್ರಸ್ತುತ ಅಧ್ಯಕ್ಷರಾಗಿ ಮಾಜಿ ಸಚಿವೆ ಮೋಟಮ್ಮ ಗೌರವಾಧ್ಯಕ್ಷರಾಗಿ ಶಾಸಕಿ ನಯನಾ ಮೋಟಮ್ಮ ಹಾಗೂ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಕೆ. ಮಂಚೇಗೌಡ ಉಸ್ತುವಾರಿಯಲ್ಲಿ ಕಾರ್ಯಕ್ರಮ‌ ನಡೆಯುತ್ತಿದ್ದು ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರೂ ಹೆಗಲಾಗಿ ದುಡಿಯುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕ ಆಚರಣೆಗಳಿಗೆ ನಿಯಂತ್ರಣ ಹಾಕಿದ್ದರಿಂದ ದುರ್ಗಾಮಾತೆಯನ್ನು ಕೆ.ಎಂ. ರಸ್ತೆಯಲ್ಲಿರುವ ಹಿರೇದೇವಿರಮ್ಮನ ಬನದಲ್ಲಿ ಪ್ರತಿಷ್ಠಾಪಿಸಿ ವಿಸರ್ಜಿಸಲಾಗಿತ್ತು. ಬಳಿಕ ಪುನಃ ಅಡ್ಯಂತಾಯ ರಂಗಮಂದಿರದಲ್ಲಿಯೇ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಒಂಬತ್ತು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಭಕ್ತಿ ಪ್ರಧಾನವಾದ ಚಟುವಟಿಕೆಗಳಿಗೆ ಆದ್ಯತೆ ನೀಡುವುದು ವಿಶೇಷವಾಗಿದ್ದು ಸ್ಥಳೀಯ ಕಲಾವಿದರು ಶಾಲಾ‌ಮಕ್ಕಳು ತಮ್ಮ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುವುದು ಸಹ ಸಾರ್ವಜನಿಕ ಶ್ಲಾಘನೆಗೆ ಕಾರಣವಾಗಿದೆ. ಕಡೆಯ ದಿನದಂದು ಲಯನ್ಸ್ ವೃತ್ತದಲ್ಲಿ ದುಷ್ಟಶಕ್ತಿ ಸಂಹಾರ ಎಂಬ‌ ಹೆಸರಿನಲ್ಲಿ ರಾತ್ರಿ ನಡೆಯುವ ದುಷ್ಟ ಶಕ್ತಿಯ ದಹನವನ್ನು ನೋಡಲು ಪಟ್ಟಣ ಮಾತ್ರವಲ್ಲದೇ ಗ್ರಾಮೀಣ ಭಾಗದಿಂದಲೂ ಜನರು ಬರುತ್ತಾರೆ. ಧಾರ್ಮಿಕ ಚಟುವಟಿಕೆಯಾಗಿ ಪ್ರತಿದಿನವೂ ದೀಪ ನಮಸ್ಕಾರ ನಡೆಸಲಾಗುತ್ತದೆ. ದುರ್ಗಾಹೋಮ ಅನ್ನಸಂತರ್ಪಣೆ ನಡೆಯುವುದರಿಂದ ಹಾಗೂ ಪೂಜೆಯಲ್ಲಿ ತಾಲ್ಲೂಕಿನ ಸಂಘ–ಸಂಸ್ಥೆ ಭಾಗವಹಿಸುವಂತೆ ಮಾಡಿರುವುದು ಆಚರಣೆಗೆ ವಿಶಿಷ್ಟತೆ ತಂದುಕೊಟ್ಟಿದೆ. ಪ್ರತಿ ವರ್ಷವೂ ವಿಗ್ರಹ ಹಾಗೂ ಅನ್ನಸಂತರ್ಪಣೆ ದಾನಿಗಳಾಗಿ ಚಂದನ್ ಗ್ರೂಪ್ಸ್ ಮಾಲೀಕ ಕೆ. ಮಂಚೇಗೌಡ ಕುಟುಂಬ ಸೇವೆ ಸಲ್ಲಿಸುತ್ತಿದೆ.

ವಿಧುಶೇಖರಭಾರತೀ ಸ್ವಾಮೀಜಿಗಳ ದರ್ಬಾರು ಕಾರ್ಯಕ್ರಮ
ವಿಧುಶೇಖರಭಾರತೀ ಸ್ವಾಮೀಜಿಗಳ ದರ್ಬಾರು ಕಾರ್ಯಕ್ರಮ
ತರೀಕೆರೆಯಲ್ಲಿ ದಸರಾ ಅಂಗವಾಗಿ ನಡೆಯುವ ಜಂಗಿ ಕುಸ್ತಿ
ತರೀಕೆರೆಯಲ್ಲಿ ದಸರಾ ಅಂಗವಾಗಿ ನಡೆಯುವ ಜಂಗಿ ಕುಸ್ತಿ
ಹೊರನಾಡು ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಿರುವುದು
ಹೊರನಾಡು ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಿರುವುದು
ನರಸಿಂಹರಾಜಪುರದ ಶರನ್ನವರಾತ್ರಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿರುವ ದೇವಿಯ ವಿಗ್ರಹ
ನರಸಿಂಹರಾಜಪುರದ ಶರನ್ನವರಾತ್ರಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿರುವ ದೇವಿಯ ವಿಗ್ರಹ
ಶಾರದೆ ಅಲಂಕಾರದಲ್ಲಿ ಸ್ಚರ್ಣಾಂಭ ದೇವಿ
ಶಾರದೆ ಅಲಂಕಾರದಲ್ಲಿ ಸ್ಚರ್ಣಾಂಭ ದೇವಿ
ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾಮಾತೆ
ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾಮಾತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT