ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದುಕನ ಮದುವೆ ನಾಟಕ 28ರಂದು

ಮೂಗು ಸುರೇಶ್‌ ಮತ್ತು ತಂಡ ಅಭಿನಯ
Published 25 ಜುಲೈ 2024, 15:29 IST
Last Updated 25 ಜುಲೈ 2024, 15:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪಿ.ಬಿ.ದುತ್ತರಗಿ ವಿರಚಿತ ಮುದುಕನ ಮದುವೆ ನಾಟಕವನ್ನು ಮೂಗು ಸುರೇಶ್‌ ಮತ್ತು ತಂಡದ ಕಲಾವಿದರು ಮೊದಲಬಾರಿಗೆ ಚಾಮರಾಜನಗರದಲ್ಲಿ ಅಭಿನಯಿಸುತ್ತಿದ್ದಾರೆ. ಜುಲೈ 28ರಂದು ಮಧ್ಯಾಹ್ನ 2 ಹಾಗೂ ಸಂಜೆ 6 ಗಂಟೆಗೆ ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ.ನರಸಿಂಹ ಮೂರ್ತಿ ತಿಳಿಸಿದರು.

ಗುರುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವು ದಶಕಗಳಿಂದ ರಾಜ್ಯದಾದ್ಯಂತ ಪ್ರೇಕ್ಷಕರನ್ನು ರಂಜಿಸುತ್ತಿರುವ ಮುದುಕನ ಮದುವೆ ನಾಟಕವನ್ನು ಮೂಗು ಸುರೇಶ್‌ ನೇತೃತ್ವದ ತಂಡ ಅಭಿನಯಿಸುತ್ತಿದ್ದು ರಂಗಾಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಬೇಕು ಎಂದು ಮನವಿ ಮಾಡಿದರು.

ರಂಗ ಕಲಾವಿದ ಹಾಗೂ ಸಿನಿಮಾ ನಟ ಮೂಗು ಸುರೇಶ್ ಮಾತನಾಡಿ, ಹವ್ಯಾಸಿ ರಂಗಭೂಮಿಯಲ್ಲಿ 8,000 ಪ್ರದರ್ಶನ ನೀಡಿದ್ದೇನೆ. ಸಿನಿಮಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಾ ಬಂದಿದ್ದೇನೆ. ವೃತ್ತಿರಂಗ ಭೂಮಿಯಲ್ಲಿ ಅತಿಥಿ ನಟನಾಗಿ ಪಾತ್ರಗಳನ್ನು ಮಾಡಿದ್ದೇನೆ. ಮೊದಲ ಬಾರಿಗೆ ಸ್ವತಂತ್ರವಾಗಿ ಮುದುಕನ ಮದುವೆ ನಾಟಕ ಪ್ರದರ್ಶಿಸುತ್ತಿದ್ದು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಮಂಕಾಗಿರುವ ರಂಗಕಲೆಗಳು ಉಳಿಯಬೇಕು, ಬೆಳೆಯಬೇಕು, ನಾಟಕ ನೋಡುವ ಸಂಸ್ಕೃತಿಯನ್ನು ಮತ್ತೆ ರೂಢಿಸುವ ಉದ್ದೇಶದಿಂದ ಎಂಬ ಉದ್ದೇಶದಿಂದ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

ರಂಗಭೂಮಿ ಕಲಾವಿದರು ಸಂಕಷ್ಟದಲ್ಲಿದ್ದಾರೆ, ಅವಕಾಶಗಳು ಸಿಗದೆ ಹತಾಶರಾಗಿದ್ದಾರೆ. ಅಂಥಹ ಕಲಾವಿದರನ್ನು ಗುರುತಿಸಿ ನಾಟಕಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ನಾಟಕ ಪ್ರದರ್ಶನ ಆರ್ಥಿಕವಾಗಿ ಬಹಳ ವೆಚ್ಚದಾಯಕ ಎಂಬ ಅರಿವಿದ್ದರೂ ರಂಗಭೂಮಿ ಹಿತದೃಷ್ಟಿಯಿಂದ ಸವಾಲು ಸ್ವೀಕರಿಸಿದ್ದೇನೆ ಎಂದು ಮೂಗು ಸುರೇಶ್ ಹೇಳಿದರು.

ಗಟ್ಟಿಸಾಹಿತ್ಯ ಹಾಗೂ ಕಥಾವಸ್ತು ಹೊಂದಿರುವ ಮದುಕನ ಮದುವೆ ನಾಟಕ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಚಾಮರಾಜನಗರದಲ್ಲೂ ಯಶಸ್ಸಿನ ಅಭಿಯಾನ ಮುಂದುವರಿಯುವ ವಿಶ್ವಾಸವಿದೆ. ಟಿಕೆಟ್‌ ದರವನ್ನು ₹ 150, ₹ 200 ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ ಉಮ್ಮತ್ತೂರು ಬಸವರಾಜ್‌, ಸಮಾಜ ಸೇವಕರಾದ ಸುರೇಶ್ ಗೌಡ್ರು, ಡಾ.ಪರಮೇಶ್ವರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT