ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ವೈಭವ

ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಮಠ, 9 ದಿನ ಹತ್ತಾರು ಕಾರ್ಯಕ್ರಮ
Published : 4 ಅಕ್ಟೋಬರ್ 2024, 15:31 IST
Last Updated : 4 ಅಕ್ಟೋಬರ್ 2024, 15:31 IST
ಫಾಲೋ ಮಾಡಿ
Comments

ಚಿತ್ರದುರ್ಗ: ಮಧ್ಯ ಕರ್ನಾಟಕದ ದಸರಾ ಎಂದೇ ಖ್ಯಾತಿಗಳಿಸಿರುವ ಮುರುಘ ಮಠದ ಶರಣ ಸಂಸ್ಕೃತಿ ಉತ್ಸವ ಈ ಬಾರಿ ಜಯದೇವ ಸ್ವಾಮೀಜಿಯ 150ನೇ ಜಯಂತ್ಯುತ್ಸವದೊಂದಿಗೆ ಆಚರಣೆಗೊಳ್ಳುತ್ತಿದೆ. ಮಠದ ಅಂಗಳದಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ವಿದ್ಯುತ್‌ ದೀಪಾಲಂಕಾರದಿಂದ ಮಠ ಕಂಗೊಳಿಸುತ್ತಿದೆ.

ಈ ಬಾರಿಯ ಉತ್ಸವವು ಅಧ್ಯಾತ್ಮ, ಆರೋಗ್ಯ, ಶಿಕ್ಷಣ, ವಚನ, ಕೃಷಿಯ ಸಂಗಮವಾಗಿದೆ. ಅ. 5ರಿಂದ 13ರವರೆಗೆ ಸರತಿಯಂತೆ ಕಾರ್ಯಕ್ರಮ ನಡೆಯಲಿವೆ. ಉತ್ಸವದ ಗೌರವ ಅಧ್ಯಕ್ಷರಾದ ಹೆಬ್ಬಾಳು ರುದ್ರೇಶ್ವರ ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ನೇತೃತ್ವದಲ್ಲಿ 9 ದಿನ ಕಾರ್ಯಕ್ರಮಗಳು ಸಾಗಲಿವೆ.

ಪ್ರತಿದಿನ ಬಳಿಗ್ಗೆ ಸಹಜ ಶಿವಯೋಗ ನಡೆಯಲಿದ್ದು, ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಅ. 5ರಂದು ವಚನಕಮ್ಮಟ ಗೋಷ್ಠಿ, ಸಾಮೂಹಿಕ ವಿವಾಹ, ವಚನ ಕಮ್ಮಟ ಪರೀಕ್ಷೆ ರ‍್ಯಾಂಕ್‌ ವಿಜೇತರಿಗೆ ಬಹುಮಾನ ವಿತರಣೆ, ಜಯದೇವ ಕಪ್ ಕ್ರೀಡಾಕೂಟ ಅಂಗವಾಗಿ ಬೈಕ್‌ ಜಾಥಾ, ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಹೊನಲು ಬೆಳಕಿನ ಕ್ರೀಡಾಕೂಟ ಉದ್ಘಾಟನೆಯಾಗಲಿದೆ.

6ರಂದು ಮಹಿಳಾ ಕ್ರೀಡಾಕೂಟ, 7ರಂದು ಸಂಜೆ 6 ಗಂಟೆಗೆ ಜಯದೇವ ಕಪ್ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆ.

8ರಂದು ಬೆಳಿಗ್ಗೆ 7.30ಕ್ಕೆ ಅನುಭವ ಮಂಟಪದ ಮುಂಭಾಗ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಬಸವತತ್ವ ಧ್ವಜಾರೋಹಣ ನೆರವೇರಿಸುವರು. 10 ಗಂಟೆಗೆ ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಉದ್ಘಾಟಿಸುವರು. ಸಂಜೆ 6 ಗಂಟೆಗೆ ಜಯದೇವ ಸ್ವಾಮೀಜಿಯ 150ನೇ ಜಯಂತ್ಯುತ್ಸವ ನಡೆಯಲಿದೆ.

9ರಂದು ಬೆಳಿಗ್ಗೆ 10 ಗಂಟೆಗೆ ಜಯದೇವ ಸ್ವಾಮೀಜಿಯ ಜೀವನ ಮತ್ತು ಸಾಧನೆ ಕುರಿತು ವಿಷಯ ಚಿಂತನೆ ನಡೆಯಲಿದೆ. 10ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಜಯದೇವ ದಿಗ್ವಿಜಯ’ ಸಂಸ್ಮರಣ ಸಂಪುಟ ಬಿಡುಗಡೆ ಮಾಡಲಿದ್ದಾರೆ. 11ರಂದು ಮಹಿಳಾ ಸಮಾವೇಶ, 12ರಂದು ಬೆಳಿಗ್ಗೆ 10.30ಕ್ಕೆ ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾಮೇಳ ಆರಂಭವಾಗಲಿದೆ. ಸಂಜೆ 4.30ಕ್ಕೆ ಮೇಲುದುರ್ಗದ ಮುರುಘಾಮಠದ ಆವರಣದಲ್ಲಿ ಶ್ರೀಗಳಿಗೆ ಭಕ್ತಿ ಸಮರ್ಪಣೆ, 6ಗಂಟೆಗೆ ಮಕ್ಕಳ ಸಂಭ್ರಮ ನಡೆಯಲಿದೆ.

13ರಂದು ಬೆಳಿಗ್ಗೆ 11.30ಕ್ಕೆ ಜಯದೇವ ಜಂಗೀ ಕುಸ್ತಿ, ಶ್ವಾನ ಪ್ರದರ್ಶನ ಹಾಗೂ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಸಮಾರಂಭದ ಮೂಲಕ ಉತ್ಸವಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.

ಭಕ್ತರ ಸೆಳೆಯುತ್ತಿರುವ ಚಿತ್ರದುರ್ಗದ ಮುರುಘ ಮಠದ ಮಹಾದ್ವಾರ 
ಭಕ್ತರ ಸೆಳೆಯುತ್ತಿರುವ ಚಿತ್ರದುರ್ಗದ ಮುರುಘ ಮಠದ ಮಹಾದ್ವಾರ 

ಮಠದ ಆವರಣದಲ್ಲಿ ಸಂಭ್ರಮದ ವಾತಾವರಣ ಜಯದೇವ ಶ್ರೀಗಳ ಜಯಂತಿ ಆಚರಣೆ ವಿಶೇಷ ರಾಜ್ಯದ ವಿವಿಧೆಡೆಯಿಂದ ಬರುವ ಭಕ್ತರಿಗೆ ಸೌಲಭ್ಯ

13ರಂದು ಶೂನ್ಯ ಪೀಠಾರೋಹಣ

ಅ. 13ರಂದು ಬೆಳಿಗ್ಗೆ 9.30ಕ್ಕೆ ಶ್ರೀಮಠದ ರಾಜಾಂಗಣದಲ್ಲಿ ಶೂನ್ಯಪೀಠ ಪರಂಪರೆಯ ಮುರಿಗೆ ಶಾಂತವೀರ ಸ್ವಾಮಿಗಳ ಮೂರ್ತಿಯ ಶೂನ್ಯ ಪೀಠಾರೋಹಣ ನಡೆಯಲಿದೆ. ನಂತರ ಶ್ರೀಮಠದ ಆವರಣದಲ್ಲಿ ಧರ್ಮಗುರು ಬಸವಣ್ಣ ಮತ್ತು ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಸಾಗಲಿದೆ.

ಯೋಗಾಭ್ಯಾಸದಿಂದ ಆರೋಗ್ಯ ಸುಧಾರಣೆ

ಅತಿಯಾದ ಅವಸರ ಕೆಲಸದೊತ್ತಡ ಕಲುಷಿತ ಗಾಳಿ ನೀರು ಆಹಾರ ಸೇವೆನೆಯಿಂದಾಗಿ ಆರೋಗ್ಯ ಹಾಳಾಗುತ್ತಿದೆ. ಇಂಥ ಸಂದಿಗ್ಧತೆಯಲ್ಲಿ ಯೋಗಾಭ್ಯಾಸದಿಂದ ಮಾತ್ರ ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯ ಎಂದು ಯೋಗಗುರು ಚೆನ್ನಬಸವಣ್ಣ ಹೇಳಿದರು. ಮುರುಘ ಮಠದಲ್ಲಿ ಜಯದೇವ ಸ್ವಾಮೀಜಿಯ 150ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿದ ಅವರು ‘ಸರಳ ಆರೋಗ್ಯಕ್ಕಾಗಿ ಯೋಗದ ಅಭ್ಯಾಸ ಮುಖ್ಯವಾಗುತ್ತದೆ’ ಎಂದರು. ಎಸ್‌ಜೆಎಂ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT