ಭರಮಸಾಗರ: ಸುಡು ಬಿಸಿಲಲ್ಲಿ ತಣ್ಣನೆಯ ನೀರಿಗಿಳಿದು ಈಜುವ ಮೋಜೇ ಬೇರೆ. ಒಮ್ಮೆ ನೀರಿನಲ್ಲಿ ಮುಳುಗೆದ್ದು ಕೈ-ಕಾಲು ಆಡಿಸಿದರೆ ಸಾಕು, ಬಿಸಿಲ ಬೇಗೆಯಲಿ ಬಳಲಿದ ದೇಹ, ಮನಸ್ಸು ಮುದಗೊಳ್ಳುತ್ತವೆ.

ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿ ಕೆರೆ, ಕಟ್ಟೆ, ಬಾವಿ, ಹೊಂಡಗಳು ತುಂಬಿದಾಗ ಇಂತಹ ದೃಶ್ಯ ಎಲ್ಲೆಡೆ ಕಂಡುಬರುತ್ತದೆ. ಹಿಂದೆಲ್ಲ ಮಳೆ ಸಮೃದ್ಧವಾಗಿದ್ದಾಗ ಎಲ್ಲೆಡೆ ಹಳ್ಳಗಳು ಹರಿದು ಕೆರೆ–ಬಾವಿಗಳು ತುಂಬಿರುತ್ತಿದ್ದವು. ಆಗ ಗ್ರಾಮೀಣ ಪ್ರದೇಶದಲ್ಲಿ ಈಜು ಬಾರದವರೇ ವಿರಳ. ಎಷ್ಟೋ ಮಹಿಳೆಯರು ಕೂಡ ಈಜು ಬಲ್ಲವರಾಗಿರುತ್ತಿದ್ದರು. ಪೇಟೆ ಹುಡುಗರೂ ಅಷ್ಟೇ, ಬೇಸಿಗೆ ರಜೆಗೆ ಅಜ್ಜನ ಮನೆಗೆ ಬಂದವರು ಹಳ್ಳಿ ಹೈಕುಳಗಳ ಜತೆ ಸೇರಿ ಕೆರೆಗಳಲ್ಲಿ ಜಾನುವಾರುಗಳ ಮೈತೊಳೆಯುತ್ತ ಅವುಗಳ ಬಾಲ ಹಿಡಿದುಕೊಂಡು ಮೊಣಕಾಲುದ್ದ ನೀರಿಗೆ ಬಿದ್ದು ಸ್ವಾಭಾವಿಕವಾಗಿಯೇ ಈಜು ಕಲಿತು ಬಿಡುತ್ತಿದ್ದರು ಎಂದು ಜ್ಞಾಪಿಸಿಕೊಳ್ಳುತ್ತಾರೆ ಗ್ರಾಮದ ಎನ್.ಟಿ. ಶಿವರಾಜ್.

‘ಆದರೆ ಈಗ ಕಾಲ ಬದಲಾಗಿದೆ. ಕೆರೆ ಬಾವಿಗಳು ಬತ್ತಿ ಎಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರವಾಗಿರುವಾಗ ಇನ್ನು ಈಜಲು ನೀರೆಲ್ಲಿ. ಬೇಸಿಗೆ ಬಂತೆಂದರೆ ಬಳ್ಳಾರಿ, ರಾಯಚೂರು, ಕಲಬುರ್ಗಿ ಜಿಲ್ಲೆಗಳ ಬಿಸಿಲ ತಾಪಮಾನ, ಒಣಹವೆ, ಅಲ್ಲಿಯ ಜನರ ಸಂಕಷ್ಟಗಳ ಬಗ್ಗೆ ಮಾತನಾಡುತ್ತಿದ್ದ ಇಲ್ಲಿಯ ಮಂದಿ ಈಗ ತಾವೇ ಸ್ವತ ಅಂತಹ ಅನುಭವಕ್ಕೊಳಗಾಗುವ ಪರಿಸ್ಥಿತಿ ಬಂದಿದೆ. ನಗರ ಪ್ರದೇಶದ ಮಕ್ಕಳಿಗೆ ಈಜು ಕಲಿತು ಅದರ ಮೋಜು ಅನುಭವಿಸಲು ಕೆಲವಾದರೂ ಅವಕಾಶಗಳಿವೆ. ಆರ್ಥಿಕ ಅನುಕೂಲವುಳ್ಳವರು ಸಮ್ಮರ್ ಕ್ಯಾಂಪ್ಗಳಿಗೆ, ದೊಡ್ಡದೊಡ್ಡ ಹೋಟೆಲ್ಗಳಲ್ಲಿ ಈಜು ತರಬೇತಿ ಶಿಬಿರಕ್ಕೆ ಸೇರಿಸಿ ಈಜು ಕಲಿಸುತ್ತಾರೆ. ಇನ್ನು ಶ್ರೀಮಂತರ ಪಾಲಿಗಾಗಿಯೇ ಸಾಕಷ್ಟು ವಾಟರ್ಪಾರ್ಕ್ಗಳು ತಲೆಎತ್ತಿವೆ. ಆದರೆ ಹಳ್ಳಿ ಮಕ್ಕಳ ಪಾಲಿಗೆ ಈ ಸೌಲಭ್ಯಗಳು ಮರೀಚಿಕೆ ಮಾತ್ರ’ ಎನ್ನುತ್ತಾರೆ ಶಿವರಾಜ್.

ಈ ಬಾರಿ ಉತ್ತಮ ಮಳೆಯಿಂದ ಅನೇಕ ಕಡೆ ಚೆಕ್ಡ್ಯಾಂ, ಗೋಕಟ್ಟೆಗಳು ತುಂಬಿವೆ. ಕೆಲವು ಕೆರೆಗಳಿಗೂ ಸ್ವಲ್ಪ ಪ್ರಮಾಣ ನೀರು ಬಂದಿದೆ. ಸಿರಿಗೆರೆ ಶ್ರೀಗಳ ಶ್ರಮದಿಂದ ಸರ್ಕಾರ ನೀರಾವರಿ ಯೋಜನೆಯ ಅಡಿ ಇಲ್ಲಿಯ ಭರಮಣ್ಣನಾಯಕನ ದೊಡ್ಡಕೆರೆಗೆ ನೀರುಬಂದಿದೆ. ಇದರಿಂದಾಗಿ ಸಕಲ ಅವಯವಗಳಿಗೂ ವ್ಯಾಯಾಮ ನೀಡುವ ಈಜಿನ ಮೋಜಿನಲ್ಲಿ ಬೇಸಿಗೆ ಕಳೆಯಲು ಇಲ್ಲಿಯ ಯುವಕರಿಗೆ, ಚಿಣ್ಣರಿಗೆ ಅವಕಾಶ ಸಿಕ್ಕಿದೆ. ಪೋಷಕರು ನಿಯಂತ್ರಣ ಹೇರಿದರೂ ಅವರಲ್ಲಿಯ ತುಂಟತನ, ಬಾಲ್ಯ ಸಹಜ ಚೇಷ್ಟೆಗಳ ಅಭಿವ್ಯಕ್ತಿಗೆ ಅಡ್ಡಿಯಾಗಿಲ್ಲ. ಕೆರೆ ಬಾವಿ, ಚೆಕ್ಡ್ಯಾಮ್, ಹೊಲಗಳಲ್ಲಿನ ವಡ್ಡುಗಳೇ ಇವರ ಪಾಲಿಗೆ ನ್ಯಾಚುರಲ್ ಸ್ವಿಮಿಂಗ್ಪೂಲ್ಗಳು. ಕೆರೆ ಏರಿ, ಕೋಡಿ, ತೂಬಿನಕಟ್ಟೆಗಳೇ ಇವರಿಗೆ ಡೈವಿಂಗ್ ಬೋರ್ಡ್ಗಳು. ಮನೆಯವರ ಕಣ್ಣುತಪ್ಪಿಸಿ ಗೆಳೆಯರೊಟ್ಟಿಗೆ ಕೆರೆಯಲ್ಲಿಯ ಅವರ ಜಲಕ್ರೀಡೆ ಅಡೆತಡೆ ಇಲ್ಲದೇ ಸಾಗಿದೆ.

ಈಜುಬುರುಡೆ, ಟ್ಯೂಬು, ಮರದತುಂಡು ಹೊಟ್ಟೆಗೆ ಕಟ್ಟಿಕೊಂಡು ನೀರಿಗೆ ಧುಮುಕುತ್ತಾರೆ. ಪರಿಣಿತ ಈಜುಗಾರರು ತೂಬಿನ ಕಟ್ಟೆಯಿಂದ ವಿವಿಧ ರೀತಿಯಲ್ಲಿ ನೀರಿಗೆ ಹಾರಿ ಈಜಿ ಸಂಭ್ರಮಿಸಿ ಮೈ, ಮನಸ್ಸು ಹಗುರಾಗಿಸಿಕೊಳ್ಳುತ್ತಾರೆ. ಪೇಟೆ ಮಂದಿಯಂತೆ ಈಜುಡುಗೆ, ಶುಭ್ರತೆ, ತರಬೇತುದಾರ ಇವ್ಯಾವುದರ ಹಂಗೂ ಇವರಿಗಿಲ್ಲ. ಅವರು, ಇವರು ಎನ್ನದೇ ಎಲ್ಲ ಹೇಗಿರುತ್ತಾರೋ ಹಾಗೆಯೇ ನೀರಿಗಿಳಿದು ಮುಳುಗೆದ್ದು ನೋಡಿ ಸ್ವಾಮಿ ನಾವಿರೋದು ಹೀಗೆ ಎನ್ನುತ್ತಾರೆ. ಅಲ್ಲೇ ಕೆರೆಯೆಂಬ ವಾಷಿಂಗ್ ಮೇಶಿನ್ನಲ್ಲಿ ಬಟ್ಟೆ ಅದ್ದಿ ತೆಗೆದು ಒಣಗಿ ಹಾಕುವ ಹೆಂಗಸರು ಇವರಾಟ ನೋಡಿ ಕೊಂಚ ಆಯಾಸ ಪರಿಹರಿಸಿಕೊಳ್ಳುತ್ತಾರೆ.

ಎಚ್ಚರಿಕೆ ವಹಿಸಿ

ಈಚೆಗೆ ಗ್ರಾಮದ ಯುವಕನೊಬ್ಬ ದೊಡ್ಡಕೆರಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿರುವ ಘಟನೆ ಇನ್ನೂ ಹಸಿಯಾಗಿದೆ. ಹುಡುಗರು ಈಜಲು ನೀರಿಗಿಳಿಯುವ ಮುನ್ನ ಎಚ್ಚರಿಕೆ ವಹಿಸಬೇಕು. ಅಗತ್ಯ ಸುರಕ್ಷತಾ ಕ್ರಮ ಅನುಸರಿಸಿ ಹೆಚ್ಚು ಆಳವಿರದ ಅಪಾಯಕಾರಿಯಲ್ಲದ ಜಾಗದಲ್ಲಿ ಈಜುವುದು ಸೂಕ್ತ.

–ಸಿ.ಟಿ. ಮಹಂತೇಶ್. ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.