ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು | ಬಿರು ಬಿಸಿಲು: ಜಾನುವಾರುಗಳಿಗೆ ನೀರಿನ ಸಮಸ್ಯೆ

Published 2 ಮೇ 2024, 5:01 IST
Last Updated 2 ಮೇ 2024, 5:01 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಪಮಾನ ದಿನೇ ದಿನೇ ಏರುತ್ತಿರುವ ಪರಿಣಾಮ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಜಾನುವಾರುಗಳ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ. 

ಅಂತರ್ಜಲ ಕುಸಿತದಿಂದಾಗಿ ಕೊಳವೆಬಾವಿಗಳು ಬತ್ತುತ್ತಿವೆ. ಇದರಿಂದ ಬಹುತೇಕ ಕಡೆ 2 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ವಾರಕ್ಕೆ ಒಮ್ಮೆ ನೀರು ನೀಡಲಾಗುತ್ತಿದೆ. 

ಜನರು ಇದೇ ನೀರನ್ನು ಶೇಖರಣೆ ಮಾಡಿಕೊಂಡು ಮತ್ತೆ ನೀರು ಬಿಡುವ ತನಕ ಬಳಕೆ ಮಾಡಿಕೊಳ್ಳಬೇಕಿದೆ. ಕುರಿ, ಕೋಳಿ, ಜಾನುವಾರು ಸಾಕಣೆದಾರರಿಗೆ ಇದರಿಂದ ಕಷ್ಟವಾಗುತ್ತಿದೆ. 

50-100 ಕುರಿಗಳು, ಹತ್ತಾರು ಜಾನುವಾರುಗಳನ್ನು ಸಾಕಿರುವವರು ಕಡ್ಡಾಯವಾಗಿ ಪ್ರತಿನಿತ್ಯ ಗೋಮಾಳ ಅಥವಾ ಅರಣ್ಯ ಪ್ರದೇಶಕ್ಕೆ ಮೇಯಿಸಲು ಅವುಗಳನ್ನು ಹೊಡೆದುಕೊಂಡು ಹೋಗುತ್ತಾರೆ. 2-3 ಕಿ.ಮೀ. ದೂರ ಹೋಗಿ ಮೇಯಿಸಬೇಕಿದೆ. 
ಆದರೆ, ಗೋಮಾಳ ಅಥವಾ ಅರಣ್ಯ ಪ್ರದೇಶ ಸಂಪರ್ಕ ರಸ್ತೆ ಬದಿಗಳಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಿಸದ ಕಾರಣ ಮತ್ತೆ ಊರಿಗೆ ಹೊಡೆದುಕೊಂಡು ಬಂದು ನೀರು ಕುಡಿಸಬೇಕಿದೆ. ನೀರಿರುವ ಕಡೆ ಮೇವಿಲ್ಲ,
ಮೇವಿರುವ ಕಡೆ ನೀರು ಸಿಗಲ್ಲʼ ಎಂಬ ಸ್ಥಿತಿಯಲ್ಲಿ ನಾವು ಸಿಲುಕಿದ್ದೇವೆ ಎಂದು ಜಾನುವಾರು ಸಾಕಿರುವ ನೇರ್ಲಹಳ್ಳಿಯ ಪರಮೇಶ್ವರಪ್ಪ ದೂರಿದರು. 

‘ಹಿಂದೆ ತೋಟಗಳಿಗೆ ಹೋಗಿ ಜಾನುವಾರುಗಳಿಗೆ ನೀರು ಕುಡಿಸಿಕೊಂಡು ಬರುತ್ತಿದ್ದೆವು. ಅನೇಕ ತೋಟದವರು ಹೊರಗಡೆ ಒಂದೆರಡು ತೊಟ್ಟಿ ನಿರ್ಮಿಸಿ ಅಲ್ಲಿಗೆ ನೀರು ಹಾಯಿಸುತ್ತಿದ್ದರು. ಇದರಿಂದ ಮೇಯಿಸಲು ಹೋದ ನಮಗೆ
ಸ್ಥಳೀಯವಾಗಿ ನೀರು ಸಿಗುತ್ತಿತ್ತು. ಈಗಿನ ಬಿಸಿಲಿಗೆ ಸಣ್ಣ ಮರಿಗಳನ್ನು ಜತೆಯಲ್ಲಿ ಕರೆದುಕೊಂಡು ಹೋಗದಂತಹ ಸ್ಥಿತಿಯಿದೆ. ಬಿಸಿಲು ಹೆಚ್ಚಳದಿಂದ ಕುರಿಗಳು ಅನಾರೋಗ್ಯಕ್ಕೀಡಾಗುವುದೂ ಹೆಚ್ಚಿದೆ’ ಎಂದು ಕುರಿಗಾಹಿ ಪಾಪಣ್ಣ ಹೇಳಿದರು.

‘ಈ ಹಿಂದೆ ಉದ್ಯೋಗಖಾತ್ರಿ ಯೋಜನೆಯಲ್ಲಿ ರಸ್ತೆಬದಿ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಅವಕಾಶವಿತ್ತು. ಇದರಿಂದ ಜನ, ಜಾನುವಾರುಗಳಿಗೆ ಅನುಕೂಲವಾಗುತ್ತಿತ್ತು. ಈಗ ಯೋಜನೆಯಲ್ಲಿ ನಿರ್ಮಿಸಲು ಅವಕಾಶವಿಲ್ಲ. ಇರುವ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಸೇವೆಗೆ ನೀಡುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.‌ಪ್ರಕಾಶ್‌ ತಿಳಿಸಿದರು. 

ವಿಪತ್ತು ನಿರ್ವಹಣಾ ಯೋಜನೆ ಅಡಿಯಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಅವಕಾಶವಿದೆ. ಕಂದಾಯ ಇಲಾಖೆ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಂಡಲ್ಲಿ ಅನುಕೂಲವಾಗಲಿದೆ
- ಕೆ.ಆರ್.‌ ಪ್ರಕಾಶ್‌ ತಾ.ಪಂ. ಇ.ಒ. ಮೊಳಕಾಲ್ಮುರು
ಹಳ್ಳಿಗಳ ನೀರಿನ ತೊಟ್ಟಿಯಲ್ಲಿ ಬಟ್ಟೆ ವಾಹನಗಳನ್ನು ತೊಳೆದು ಬಿಟ್ಟ ಕಲುಷಿತ ನೀರನ್ನೇ ಜಾನುವಾರುಗಳಿಗೆ ಕುಡಿಸಬೇಕಿದೆ. ಜಾನುವಾರುಗಳಿಗೆ ಪ್ರತ್ಯೇಕವಾಗಿ ಹುಲ್ಲುಗಾವಲು ಸ್ಥಳದಲ್ಲಿ ತೊಟ್ಟಿ ನಿರ್ಮಿಸಿದರೆ ಅನುಕೂಲವಾಗುತ್ತದೆ
ತಿಪ್ಪೇಸ್ವಾಮಿ ಕೃಷಿಕ ಸೂರಮ್ಮನಹಳ್ಳಿ

‘ನೀತಿಸಂಹಿತೆ ಅಡ್ಡಿ’ 

‘ಸಮಸ್ಯೆಯನ್ನು ಜನಪ್ರತಿನಿಧಿಗಳ ಬಳಿ ಹೇಳಿದರೆ ನೀತಿಸಂಹಿತೆ ಮುಗಿದ ಮೇಲೆ ನೋಡೋಣ ಎನ್ನುತ್ತಾರೆ. ಚುನಾವಣೆಗೆ ನಿಯೋಜನೆಯಾಗಿರುವ ಅಧಿಕಾರಿಗಳು ಸಹ ಬರಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಮ್ಮ ಕಷ್ಟಕ್ಕೆ ಬೆಲೆ ಇಲ್ಲದಂತಾಗಿದೆ. ಇರುವ ಗೋಶಾಲೆಗಳು ನೆರಳು ಮೇವು ಎದುರು ನೋಡುತ್ತಿವೆ. ಹೊಸ ಗೋಶಾಲೆ ಆರಂಭಕ್ಕೂ ಚುನಾವಣೆ ಗ್ರಹಣ ಬಡಿದಿದೆ’ ಎಂದು ರೈತಸಂಘ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT