ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ

Published 19 ಜುಲೈ 2024, 4:12 IST
Last Updated 19 ಜುಲೈ 2024, 4:12 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮಳೆ ಬಿರುಸುಗೊಂಡಿದೆ. ಮಂಗಳೂರು ನಗರದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, 9 ಗಂಟೆ‌ ಕಳೆದರೂ ಬೆಳಗಿನ 6 ಗಂಟೆಯ ವಾತಾವರಣದ ಅನುಭವವಾಗುತ್ತಿದೆ. ವಾಹನ ಸವಾರರು ಲೈಟ್ ಹಾಕಿಕೊಂಡು ವಾಹನ ಚಲಾಯಿಸುತ್ತಿದ್ದಾರೆ.

ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲ್ಲೂಕುಗಳಲ್ಲಿ ಶಾಲೆ- ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಮಂಗಳೂರು, ಉಳ್ಳಾಲ, ಮೂಲ್ಕಿ, ಮೂಡುಬಿದಿರೆ ತಾಲ್ಲೂಕುಗಳಿಗೆ ರಜೆ‌ ನೀಡಲಾಗಿಲ್ಲ. ಆದರೆ, ಈ ಎಲ್ಲ ತಾಲ್ಲೂಕುಗಳಲ್ಲೂ ಧಾರಾಕಾರ‌‌ ಮಳೆಯಾಗುತ್ತಿದೆ.

'ವಿಪರೀತ ಮಳೆಯ ಸಂದರ್ಭದಲ್ಲಿ ಮಕ್ಕಳ ಹಾಜರಾತಿ ಕಡ್ಡಾಯವಲ್ಲ. ಪರಿಸ್ಥಿತಿ ನೋಡಿಕೊಂಡು ಅನುಕೂಲ ಇದ್ದರೆ ಮಾತ್ರ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಬಹುದು . ಎಲ್ಲ ಶಾಲೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಮಂಗಳೂರು ಉತ್ತರದ ಕ್ಷೇತ್ರಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಧರೆ ಕುಸಿತ: ಸಂಚಾರ ಸ್ಥಗಿತ

ಬಂಟ್ವಾಳ: ಇಲ್ಲಿನ ರಾಯಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುರಾಲು ಎಂಬಲ್ಲಿ ಶುಕ್ರವಾರ ಧರೆ ಕುಸಿದು ಗ್ರಾಮೀಣ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಇಲ್ಲಿನ ರಾಯಿ, ಕೊಯಿಲ ಮತ್ತು ಪಂಜಿಕಲ್ಲು ಗ್ರಾಮಗಳನ್ನು ಬೆಸೆಯುವ ಸಂಪರ್ಕ ಕೊಂಡಿ ರಸ್ತೆ 10 ವರ್ಷಗಳ ಹಿಂದೆ ನಿರ್ಮಾಣಗೊಂಡಿತ್ತು. ಈ ರಸ್ತೆಯ ಒಂದು ಭಾಗ ಮಾತ್ರ ಉದ್ಯೋಗ ಖಾತರಿ ಯೋಜನೆಯಡಿ ಕಾಂಕ್ರಿಟೀಕರಣಗೊಂಡಿದೆ. ರಸ್ತೆಯಲ್ಲೇ ಮಳೆನೀರು ಹರಿದು ಹೊಂಡಮಯ ಮಣ್ಣಿನ ರಸ್ತೆಯಾಗಿದೆ. ಈಚೆಗಷ್ಟೇ ಇದೇ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಡೈರಿಗೆ ಹಾಲು ಕೊಂಡೊಯ್ಯುತ್ತಿದ್ದ ಹೈನುಗಾರರೊಬ್ಬರು ಬಿದ್ದು, ಕೈ ಮೂಳೆ ಮುರಿದುಕೊಂಡಿದ್ದರು.

ಪ್ರತಿ ಚುನಾವಣೆ ವೇಳೆ ರಸ್ತೆ ಕಾಂಕ್ರಿಟೀಕರಣಗೊಳಿಸುವುದಾಗಿ ಭರವಸೆ ನೀಡುವ ರಾಜಕಾರಣಿಗಳು ಬಳಿಕ ಈ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯತಿ ಮತ್ತು ಶಾಸಕರು ಸಹಿತ ಜನಪ್ರತಿನಿಧಿಗಳಿಗೆ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ‌ .

ಈಗ ಮಳೆಗೆ ಪ್ರತಿದಿನ ಗುಡ್ಡದ ಮಣ್ಣು ಕುಸಿದು ಬೀಳುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದಾಗಿ ಕೆಳಭಾಗದ ಕೆರೆ ಮತ್ತು ಮನೆಗಳಿಗೂ ಮಣ್ಣು ಕುಸಿಯುವ ಆತಂಕ ಉಂಟಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಸ್ಥಳೀಯ ಕೃಷಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT