ಮಂಗಳೂರಿನ ಪಾಲಿಕೆಯ ಬಳಿ ಪಳೆಯುಳಿಕೆಯಂತಿರುವ ಇ–ಟಾಯ್ಲೆಟ್
ಮಂಗಳೂರಿನ ಪಿವಿಎಸ್ ವೃತ್ತದ ಬಳಿ ಇರುವ ಶೌಚಾಲಯ
ಪಂಪ್‌ವಲ್ ಬಳಿ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿರುವ ಶೌಚಾಲಯ
ಶೌಚಾಲಯ ಸಮೀಕ್ಷೆ
ಮೂರು ತಿಂಗಳು ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿತ್ತು. ಇದಕ್ಕಾಗಿ ಎಲ್ಲ ಕೆಲಸಗಳಿಗೆ ಸ್ವಲ್ಪ ಹಿನ್ನಡೆಯಾಗಿದೆ. ಇ– ಟಾಯ್ಲೆಟ್ ನಿರುಪಯುಕ್ತ ಆಗಿರುವ ಬಗ್ಗೆ ಪಾಲಿಕೆ ಪರಿಸರ ಅಧಿಕಾರಿಗಳಿಂದ ಮಾಹಿತಿ ಪಡೆದು ಅದನ್ನು ಬಳಕೆಗೆ ಯೋಗ್ಯ ಆಗುವಂತೆ ಮಾಡಲು ಸೂಚಿಸಲಾಗುವುದು. ಸಾರ್ವಜನಿಕ ಶೌಚಾಲಯ ಎಲ್ಲೆಲ್ಲಿ ಅಗತ್ಯ ಇದೆ ಎಂದು ಸಮೀಕ್ಷೆ ನಡೆಸಿ ಸಾಧ್ಯವಿದ್ದಲ್ಲಿ ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಲ್ಲಿ ಅಥವಾ ವಿವಿಧ ಸಂಸ್ಥೆಗಳ ಸಿಎಸ್‌ಆರ್ ಅನುದಾನ ಪಡೆದು ಶೌಚಾಲಯ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿದರು.
ಗಬ್ಬು ನಾರುವ ಶೌಚಾಲಯ
ನಗರದ ಸರ್ವಿಸ್ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಇದೆ. ಇದರ ಸುತ್ತ ಬಸ್‌ಗಳು ನಿಲ್ಲುವುದರಿಂದ ಶೌಚಾಲಯಕ್ಕೆ ಹೋಗುವ ದಾರಿಯೇ ಬಂದ್ ಆಗಿದೆ. ಬಸ್ ಕಾಯುವ ಪುರುಷರಲ್ಲಿ ಹೆಚ್ಚಿನವರು ರಸ್ತೆ ಬದಿಯಲ್ಲಿ ಮೂತ್ರ ಮಾಡುವುದರಿಂದ ಇಡೀ ಪರಿಸರ ಗಬ್ಬು ನಾರುತ್ತಿದೆ. ಬಸ್ ಕಾಯುವವರು ಮೂಗು ಮುಚ್ಚಿ ನಿಲ್ಲುವ ಪರಿಸ್ಥಿತಿ ಇದೆ. ಸ್ವಚ್ಛತೆಯ ಕೊರತೆ ಕಾರಣಕ್ಕೆ ಇಲ್ಲಿನ ಶೌಚಾಲಯ ಬಳಕೆ ಮಾಡುವವರೂ ಕಡಿಮೆಯಾಗಿದ್ದಾರೆ.
ನಾಲ್ಕು ಹೊಸ ಶೌಚಾಲಯ ನಿರ್ಮಾಣ
ಕದ್ರಿ ಪಾರ್ಕ್ ಹಂಪನಕಟ್ಟೆ ಅಳಕೆ ಮಾರ್ಕೆಟ್ ಬಂದರು ಮೀನು ಮಾರುಕಟ್ಟೆ ಪಾಂಡೇಶ್ವರ ಸರ್ವಿಸ್ ಬಸ್ ನಿಲ್ದಾಣ ಪಡೀಲ್ ಜಂಕ್ಷನ್ ಮಂಗಳಾದೇವಿ ಬಸ್ ತಂಗುದಾಣ ಸುರತ್ಕಲ್ ಸೇರಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 23 ಸಾರ್ವಜನಿಕ ಶೌಚಾಲಯಗಳು ಇವೆ. ಕೆಲವು ಶೌಚಾಲಯಗಳ ದುರಸ್ತಿ ಆಗಬೇಕಾಗಿದ್ದು ತಾತ್ಕಾಲಿಕವಾಗಿ ಬಾಗಿಲು ಹಾಕಲಾಗಿದೆ. ಉಳಿದವುಗಳನ್ನು ಹೊರಗುತ್ತಿಗೆ ನೀಡಲಾಗಿದೆ. ವಾರ್ಡ್ ಸಂಖ್ಯೆ 46ರಲ್ಲಿ ಮುಖ್ಯ ಬಸ್ ನಿಲ್ದಾಣದ ಸಮೀಪ 9ನೇ ವಾರ್ಡ್‌ನಲ್ಲಿ ಕುಳಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ 44ನೇ ವಾರ್ಡ್‌ನಲ್ಲಿ ಹೂ ಮಾರುಕಟ್ಟೆ ಸಮೀಪ ಉರ್ವ ಆಟದ ಮೈದಾನದ ಸಮೀಪ ಈ ನಾಲ್ಕು ಕಡೆಗಳಲ್ಲಿ ಶೌಚಾಲಯಗಳು ನಿರ್ಮಾಣ ಹಂತದಲ್ಲಿವೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಮೂಲೆ ಸೇರಿದ ಇ– ಟಾಯ್ಲೆಟ್
ಸ್ವಚ್ಛ ಹಾಗೂ ಸುಂದರ ಮಂಗಳೂರು ಯೋಜನೆಯಡಿ ನಗರದಲ್ಲಿ ನಿರ್ಮಿಸಿದ್ದ ಇ–ಟಾಯ್ಲೆಟ್‌ಗಳು ನಿರುಪಯುಕ್ತವಾಗಿವೆ. ಕದ್ರಿ ಪಾರ್ಕ್ ಎದುರು ಮಹಾನಗರ ಪಾಲಿಕೆ ಸಮೀಪ ಎಕ್ಕೂರು ಸುರತ್ಕಲ್‌ನಲ್ಲಿ ತಲಾ ಎರಡು ಹಂಪನಕಟ್ಟೆಯಲ್ಲಿ ಒಂದು ಇ–ಟಾಯ್ಲೆಟ್ ವ್ಯವಸ್ಥೆಗೊಳಿಸಲಾಗಿತ್ತು. ಕೆಲವು ತಿಂಗಳು ಮಾತ್ರ ಇವು ಬಳಕೆಯಾಗಿದ್ದವು. ನಾಣ್ಯ ಹಾಕಿ ಬಳಕೆ ಮಾಡುವ ಇವು ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ರಸ್ತೆ ಬದಿಯಲ್ಲಿ ಪಳೆಯುಳಿಕೆಯ ಕಾಣುವ ಇ– ಟಾಯ್ಲೆಟ್‌ಗಳು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿವೆ.