ಸಾಮಾನ್ಯವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಅಡಿಕೆ ಸಸಿ ಮತ್ತು ಸಣ್ಣ ಮರಗಳನ್ನು ಎಲೆಚುಕ್ಕಿ ರೋಗ ಬಾಧಿಸುತ್ತದೆ. ಮರ ಗಿಡಗಳ ಕೆಳಭಾಗದ ಸೋಗೆಗಳಲ್ಲಿ ಚುಕ್ಕಿಗಳು ಕಂಡುಬರುತ್ತವೆ. ಇತ್ತೀಚೆಗೆ ಈ ರೋಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು ತಕ್ಷಣ ನಿರ್ವಹಣಾ ಕ್ರಮ ಕೈಗೊಳ್ಳಬೇಕಿದೆ. ಗಾಳಿ ಮೂಲಕ ಹರಡುವುದರಿಂದ ಪ್ರಾಥಮಿಕ ಹಂತದಲ್ಲೇ ನಿಯಂತ್ರಣ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್. ನಾಯ್ಕ ತಿಳಿಸಿದರು. ರೋಗಾಣು: ಈ ರೋಗಕ್ಕೆ ಫಿಲೋಸ್ಟಿಕಾ ಅರೆಕೆ ಮತ್ತು ಕೊಲೆಟೋಟ್ರೈಕಮ್ ಸ್ಪಿಸಿಸ್ ಎಂಬ ಶಿಲೀಂಧ್ರಗಳೇ ಕಾರಣ. ಎಲೆ ಚುಕ್ಕಿ ರೋಗದಿಂದ ಪತ್ರಹರಿತ್ತು ಕಡಿಮೆಯಾಗಿ ಉತ್ಪಾದನೆ ಕುಂಠಿತವಾಗುತ್ತದೆ. ಇದು ಮರದ ಬೆಳವಣಿಗೆ ಮತ್ತು ಇಳುವರಿಯ ಮೇಲೆ ದೀರ್ಘಕಾಲ ಪರಿಣಾಮ ಬೀರುತ್ತದೆ. ರೋಗಲಕ್ಷಣ: ಅಡಿಕೆ ಸೊಗೆಯಲ್ಲಿ ಕಂದುಬಣ್ಣದ ಚುಕ್ಕೆ ಮೂಡಿ ಹಳದಿ ಬಣ್ಣದಿಂದ ಆವೃತವಾಗಿದ್ದರೆ ಅದು ಎಲೆಚುಕ್ಕಿ ರೋಗ ಎಂದರ್ಥ. ಕೆಲವೊಮ್ಮೆ ಕಪ್ಪುಬಣ್ಣದ ಅಂಚು ಇರುವ ಬೂದು ಬಣ್ಣದ ಸಣ್ಣ ಚುಕ್ಕೆಗಳನ್ನೂ ಕಾಣಬಹುದು. ಈ ರೀತಿಯ ಸಣ್ಣ ಚುಕ್ಕೆಗಳು ದೊಡ್ಡದಾಗಿ ಒಂದಕ್ಕೊಂದು ಸೇರಿ ಸೋಗೆಗೆ ಹಬ್ಬಿ ಸೋಗೆ ಒಣಗುತ್ತದೆ. ನಿರ್ವಹಣೆ ಹೇಗೆ: ಅಧಿಕ ರೋಗ ಬಾಧೆ ಇರುವ ತೋಟಗಳಲ್ಲಿ ಅಡಿಕೆ ಗೊನೆಗೆ ಬೋರ್ಡೋ ದ್ರಾವಣ ಸಿಂಪಡಿಸುವಾಗ ಎಲೆಗಳಿಗೂ ಸಿಂಪಡಿಸಬೇಕು. ರೋಗ ಹೆಚ್ಚಾಗಿರುವ ತೋಟಗಳಲ್ಲಿ ಆಗಸ್ಟ್–ಸೆಪ್ಟೆಂಬರ್ ಸಮಯದಲ್ಲಿ ಮಳೆ ಇಲ್ಲದಾಗ ಪ್ರೊಪಿಕೊನಝೋಲ್ ಶಿಲೀಂಧ್ರ ನಾಶಕವನ್ನು ಎಲೆಗಳಿಗೆ ಸಿಂಪಡಿಸಬೇಕು. ರೋಗಬಾಧೆ ಇರುವ ಕೆಲವು ತೋಟಗಳಲ್ಲಿ ಪೊಟಾಶಿಯಂ ಅಂಶ ಕಡಿಮೆ ಇರುವುದನ್ನು ಗುರುತಿಸಲಾಗಿದೆ. ಮಣ್ಣು ಪರೀಕ್ಷೆ ಆಧಾರದಲ್ಲಿ ಗೊಬ್ಬರ ನೀಡುವುದು ಉತ್ತಮ. ಸಾಮಾನ್ಯವಾಗಿ ಅಡಿಕೆ ಮರಕ್ಕೆ 12 ಕೆ.ಜಿ. ಹಟ್ಟಿಗೊಬ್ಬರ ಮತ್ತು ಹಸಿರೆಲೆ ಯೂರಿಯ (220 ಗ್ರಾಂ) ರಾಕ್ ಫಾಸ್ಫೇಟ್ (200 ಗ್ರಾಂ) ಪೊಟ್ಯಾಷ್ (240– 350 ಗ್ರಾಂ) ನೀಡಬೇಕು. ರಸಗೊಬ್ಬರಗಳನ್ನು ಕನಿಷ್ಠ ಎರಡು ಕಂತುಗಳಲ್ಲಿ ನೀಡಬೇಕು. ಜತೆಗೆ ಲಘು ಪೋಷಕಾಂಶಗಳಾದ ಸತುವಿನ ಸಲ್ಫೇಟ್ (5 ಗ್ರಾಂ) ಮತ್ತು ಬೊರಾಕ್ಸ್ (5 ಗ್ರಾಂ) ನೀಡಬಹುದು.
‘ಸಾಮುದಾಯಿಕ ಕ್ರಮ ಅಗತ್ಯ’
ಎಲೆ ಚುಕ್ಕಿ ರೋಗ ಬಾಧಿಸಿದಾಗ ಮರಗಳಲ್ಲಿರುವ ರೋಗ ನಿರೋಧಕ ಶಕ್ತಿ ಸಂಪೂರ್ಣವಾಗಿ ಕ್ಷೀಣವಾಗುತ್ತದೆ. ಇದರಿಂದ ರೋಗ ಶೀಘ್ರವಾಗಿ ಹರಡುತ್ತದೆ. ಇಳುವರಿಯಲ್ಲೂ ಶೇ 90ರಷ್ಟು ವ್ಯತ್ಯಾಸವಾಗಿದೆ. ಸಾಮುದಾಯಿಕವಾಗಿ ರೋಗ ನಿಯಂತ್ರಣ ಕ್ರಮ ಅನುಸರಿಸಿದರೆ ಮಾತ್ರ ಬೆಳೆ ರಕ್ಷಿಸಬಹುದು ಎಂದು ವಿಶ್ವಾಸ್ ಮಾಪಲತೋಟ ಹೇಳಿದರು. ‘ಪಂಚಾಯಿತಿ ಮಟ್ಟದಲ್ಲಿ ಪ್ರಾತ್ಯಕ್ಷಿಕೆ ನಡೆಸಲಿ’ ರೋಗ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಪ್ರಾತ್ಯಕ್ಷಿಕೆಯನ್ನು ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳು ಜಂಟಿಯಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಡಬೇಕು. ರೋಗದ ಸಮಸ್ಯೆಯಿಂದ ಅಡಿಕೆ ಇಳುವರಿಗೆ ಹೊಡೆತ ಬಿದ್ದಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು ಎನ್ನುತ್ತಾರೆ ಚಾರ್ಮಾಡಿಯ ರೈತ ಕೃಷ್ಣಪ್ಪ ಗೌಡ.