ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೀನುಗಾರಿಕೆ | ಬೇಡಿಕೆ ಜೋರು: ದರ ಏರುಪೇರು

Published 4 ಜುಲೈ 2024, 7:07 IST
Last Updated 4 ಜುಲೈ 2024, 7:07 IST
ಅಕ್ಷರ ಗಾತ್ರ

ಮಂಗಳೂರು: ಆಳಸಮುದ್ರದಲ್ಲಿ ಟ್ರಾಲ್ ಬೋಟ್‌ಗಳನ್ನು ಬಳಸಿ ಮೀನುಗಾರಿಕೆ ಮಾಡುವುದರ ಮೇಲೆ ನಿಷೇಧ ಹೇರಿ ಒಂದು ತಿಂಗಳು ಕಳೆದಿದೆ. ಆದರೂ ಮಂಗಳೂರಿನಲ್ಲಿ ಈ ಬಾರಿ ಮೀನಿಗೆ ಬರ ಕಾಡಲಿಲ್ಲ. ಹೀಗಾಗಿ ದರವೂ ವಿಪರೀತ ಆಗಲಿಲ್ಲ. ಆದರೆ ಲಾಭ–ನಷ್ಟದ ಲೆಕ್ಕದಲ್ಲಿ ಒಂದೊಂದು ಕಡೆ ಒಂದೊಂದು ಥರಾ ಇದೆ.

ಜೂನ್ ಮತ್ತು ಜುಲೈ ತಿಂಗಳು ಮೀನುಗಳ ಸಂತಾನೋತ್ಪತ್ತಿ ನಡೆಯುವ ಕಾಲವಾದ್ದರಿಂದ ಪ್ರತಿ ವರ್ಷ ಟ್ರಾಲ್ ಬೋಟಿಂಗ್ ನಿಷೇಧ ಹೇರಲಾಗುತ್ತದೆ. ಈ ಸಂದರ್ಭದಲ್ಲಿ ‘ಓಡ’ಗಳಲ್ಲಿ (ದೋಣಿ) ಮಾತ್ರ ಮೀನು ಹಿಡಿಯಲು ಅವಕಾಶ ಇರುತ್ತದೆ. ಮಳೆಗಾಲವಾದ್ದರಿಂದ ಈ ಸಂದರ್ಭದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ. ಆದ್ದರಿಂದ ದೋಣಿಗಳು ಕೂಡ ತುಂಬ ದೂರ ಹೋಗುವುದಕ್ಕಾಗುವುದಿಲ್ಲ. ಹೀಗಾಗಿ ಮೀನಿನ ಅಭಾವ ಕಾಡುತ್ತದೆ. 

ಈ ಬಾರಿ ಮೀನುಗಾರಿಕೆ ನಿಷೇಧಕ್ಕೆ ಕೆಲವೇ ದಿನ ಇರುವಾಗ ಉತ್ತಮ ಶಿಕಾರಿ ಆಗಿದ್ದು ಸಾಕಷ್ಟು ಮೀನು ಲಭಿಸಿದೆ. ಅದನ್ನು ಸಂಸ್ಕರಿಸಿ ಇರಿಸಿದ್ದರಿಂದ ಈಗ ಮಾರಾಟಕ್ಕೆ ಲಭ್ಯ ಇದೆ. ಹೀಗಾಗಿ ಮೀನಿನ ಅಭಾವ ಹೆಚ್ಚೇನೂ ಕಾಡಲಿಲ್ಲ ಎಂದು ಹೇಳುತ್ತಾರೆ ಬೋಟ್ ಮಾಲೀಕ ಡೊನಾಲ್ಡ್ ಪಿಂಟೊ.

ಮಳೆ ತೀವ್ರವಾಗಿಲ್ಲದ ಕಾರಣ ದೋಣಿಗಳಿಗೆ ಸಮುದ್ರಕ್ಕೆ ಇಳಿಯಲು ಹೆಚ್ಚು ತೊಂದರೆ ಆಗುತ್ತಿಲ್ಲ. ಹೀಗಾಗಿ ಫ್ರೆಶ್ ಮೀನು ಕೂಡ ಸಾಕಷ್ಟು ಸಿಗುತ್ತಿದೆ ಎಂದು ದೋಣಿಯಲ್ಲಿ ಮೀನು ಹಿಡಿಯುವವರು ಕೂಡ ಹೇಳುತ್ತಿದ್ದಾರೆ. ಮೀನು ಮಾರಾಟ ಗಾರರ ಬಳಿಗೆ ಹೋದರೆ ‘ಮುಂಜಾನೆ ಬಂದು ನೋಡಿ, ಬೇಕಾದಷ್ಟು ಮೀನು ಇರುತ್ತದೆ. ಈ ಬಾರಿ ಮೀನು ಇಲ್ಲ ಎಂದು ಹೇಳುವಂಥ ಪರಿಸ್ಥಿತಿ ಒದಗಲಿಲ್ಲ’ ಎಂದು ಹೇಳುತ್ತಾರೆ.

ಬಂದರಿಗೆ ಹೋಗಿ ಕೊಂಡರೆ ಎಂದಿನಂತೆ ತೀರಾ ಕಡಿಮೆ ಬೆಲೆಗೆ ಮೀನು ಸಿಗುತ್ತದೆ. ಆದರೆ ಹೊರಗೆ ಅದಕ್ಕಿಂತ ಎಷ್ಟೋ ಹೆಚ್ಚು ದರ ಇರುತ್ತದೆ. ಉದಾಹರಣೆಗೆ ಗುರುವಾರ ದೊಡ್ಡ ಬಂಗುಡೆಗೆ ಅಲ್ಲಿ ₹ 180 ಇದ್ದರೆ ಹೊರಗೆ ₹ 250ರ ವರೆಗೂ ಇತ್ತು. ಕಲ್ಲೂರು ಬಂದರ್‌ನಲ್ಲಿ ₹ 180 ಇದ್ದರೆ ಹೊರಗೆ ₹ 200 ಇತ್ತು. ಆನ್‌ಲೈನ್ ಮಾರುಕಟ್ಟೆಯ ದರದಲ್ಲಿ ಇನ್ನು ವ್ಯತ್ಯಾಸವಿದೆ. ‘ಮೀನಿನ ಮಾರುಕಟ್ಟೆಯಲ್ಲಿ ದರ ನಿಗದಿಗೆ ಯಾವ ಮಾನದಂಡವೂ ಇಲ್ಲ. ಮೀನಿನ ಲಭ್ಯತೆ, ಬೇಡಿಕೆ ಇತ್ಯಾದಿಗಳ ಮೇಲೆ ಪ್ರತಿದಿನವೂ ಬದಲಾಗುತ್ತದೆ. ಮೀನು ಹಿಡಿದುಕೊಂಡು ಬಂದು ದಡಕ್ಕೆ ತಲುಪಿದಾಗಲೇ ಏಲಂ ಮಾಡಲಾಗುತ್ತದೆ. ಅಲ್ಲಿ ಯಾವ ದರಕ್ಕೆ ಹೋಗುತ್ತದೆಯೋ ಅದರ ಆಧಾರದಲ್ಲಿ ಮಾರುಕಟ್ಟೆಯಲ್ಲಿ ದರ ಇರುತ್ತದೆ’ ಎಂದು ಮೀನುಗಾರಿಕೆ ಇಲಾಖೆಯ ಬಂದರು ವಿಭಾಗದ ಉಪ ಆಯುಕ್ತ ದಿವಾಕರ್ ಖಾರ್ವಿ ತಿಳಿಸಿದರು.

ಕೇರಳದಲ್ಲಿ ಮೀನು ಲಭ್ಯತೆಯಿಂದಲೂ ಪರಿಣಾಮ

‘ಮೀನಿನ ದರಕ್ಕೆ ಬೇರೆ ಬೇರೆ ಆಯಾಮಗಳು ಇವೆ. ಕೇರಳದಲ್ಲಿ ಮೀನು ಹೆಚ್ಚು ಲಭಿಸಿದಾಗಲೂ ಕೆಲವೊಮ್ಮೆ ಇಲ್ಲಿನ ಮೀನಿನ ದರದಲ್ಲಿ ಏರುಪೇರು ಆಗುತ್ತದೆ. ಅಲ್ಲಿ ಮೀನು ಹೆಚ್ಚು ಲಭಿಸಿದರೆ ಇಲ್ಲಿಂದ ಸಾಗಾಟಕ್ಕೆ ಬೇಡಿಕೆ ಕುಸಿಯುತ್ತದೆ. ಆಗ ಇಲ್ಲಿ ಬೆಲೆ ಕಡಿಮೆಯಾಗುತ್ತದೆ. ಈ ಬಾರಿ ಜೂನ್‌ ಆರಂಭಕ್ಕೆ ಮೊದಲು ಸಮುದ್ರದಲ್ಲಿ ತಂಪು ವಾತಾವರಣ ಇತ್ತು. ಆಗ ಮೀನು ಯಥೇಚ್ಛವಾಗಿ ಲಭಿಸಿದೆ. ಅದು ಈಗ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ’ ಎಂದು ಡೊನಾಲ್ಡ್ ಪಿಂಟೊ ಹೇಳಿದರು.

‘ನಾಡದೋಣಿಯಲ್ಲಿ ಈ ಬಾರಿ ಮೀನು ಚೆನ್ನಾಗಿ ಸಿಗುತ್ತಿದೆ. ಟ್ರಾಲ್ ಬೊಟಿಂಗ್ ನಿಷೇಧ ಆಗುತ್ತಿದ್ದಂತೆ ನಾಡದೋಣಿಗಳ ಸಂಖ್ಯೆ ಹೆಚ್ಚುತ್ತದೆ. ಸಾಮಾನ್ಯ ದಿನಗಳಲ್ಲಿ 300ರಿಂದ 400 ದೋಣಿಗಳು ಇದ್ದರೆ ಈಗ ಸಾವಿರದಷ್ಟು ದೋಣಿಗಳು ಇವೆ. ಆದರೂ ಮೀನಿಗೆ ಬರ ಕಾಡುತ್ತಿಲ್ಲ’ ಎಂದು ಮೀನು ಹಿಡಿದು ತಂದು ಬಲೆಯಿಂದ ಬಿಡಿಸುತ್ತಿದ್ದ ಲತೀಶ್ ಬೆಂಗ್ರೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT