ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ಇಂಟರ್ಸೆಪ್ಟರ್ ಮತ್ತು ಹೆಲಿಕಾಪ್ಟರ್ ಬಳಸಿ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ, ಕಡಲ ನಡುವೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಹಡಗನ್ನು ರಕ್ಷಿಸಿದರು.

ಭಾರತೀಯ ಕೋಸ್ಟ್ ಗಾರ್ಡ್ ದಿನಾಚರಣೆ ಅಂಗವಾಗಿ ಪಣಂಬೂರಿನ ನವ ಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಶಿಪ್ ಯಾರ್ಡ್ನಿಂದ 15 ನಾಟಿಕಲ್ ಮೈಲು ದೂರದಲ್ಲಿ ಶುಕ್ರವಾರ ನಡೆದ ಅಣಕು ಕಾರ್ಯಾಚರಣೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಸಾಕ್ಷಿಯಾದರು.

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತ್ವರಿತ ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ, ಕಡಲುಗಳ್ಳರ ಹಡಗು ಪತ್ತೆ ಹಚ್ಚಿದರು. ಸಮುದ್ರದ ನಡುವೆ ಹಡಗೊಂದು ಬೆಂಕಿ ಅವಘಡಕ್ಕೆ ಸಿಲುಕಿದಾಗ, ಐಸಿಜಿಎಸ್ ವಿಕ್ರಂ ನೌಕೆಯಿಂದ ದೂರಕ್ಕೆ ನೀರು ಹಾಯಿಸಿ, ಬೆಂಕಿ ನಂದಿಸಲಾಯಿತು. ಹೆಲಿಕಾಪ್ಟರ್, ಡಾರ್ನಿಯರ್ಗಳ ಅಬ್ಬರದ ಹಾರಾಟ, ಸುತ್ತುವರಿದ ನೌಕೆಗಳು, ಶರವೇಗದಲ್ಲಿ ಸಾಗಿದ ಇಂಟರ್ಸೆಪ್ಟರ್ ನೋಡುಗರನ್ನು ನಿಬ್ಬೆರಗಾಗಿಸಿದವು. ನೆತ್ತಿಸುಡುವ ಬಿಸಿಲನ್ನೂ ಮರೆತು ಕೋಸ್ಟ್ ಗಾರ್ಡ್ ಸಿಬ್ಬಂದಿ, ಅವರ ಕುಟುಂಬದ ಸದಸ್ಯರು, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ವೀಕ್ಷಿಸಿದರು.

ಕಡಲ ನಡುವೆ ಅಲೆಗಳನ್ನು ಸೀಳಿ ವಿಕ್ರಂ ವೇಗವಾಗಿ ಸಾಗುತ್ತಿದ್ದರೆ, ಅದರೊಳಗೆ ನಿಂತಿದ್ದ ಜನರು ಅತ್ತಿತ್ತ ಓಲಾಡುತ್ತಿದ್ದರು. ಕುಳಿತುಕೊಳ್ಳಲು ಕುರ್ಚಿ ಸಿಗದವರು, ಹಡಗಿನ ಎರಡೂ ಬದಿಗಳಲ್ಲಿ ಕಟ್ಟಿದ್ದ ಹಗ್ಗವನ್ನು ಆಶ್ರಯಿಸಿ, ಬಾನೆತ್ತರಕ್ಕೆ ಗಿರಿಗಿರಿ ಸುತ್ತುತ್ತಿದ್ದ ಹೆಲಿಕಾಪ್ಟರ್ ಅನ್ನು ನೋಡುತ್ತಿರುವಾಗ, ಒಮ್ಮೆಲೇ ಬಾಂಬ್ ಬಿದ್ದ ಸದ್ದಿಗೆ ಬೆಚ್ಚಿದರು. ಅದು ಕಡಲ್ಗಳ್ಳರ ಹಡಗನ್ನು ಪತ್ತೆ ಮಾಡಿ ವಶಕ್ಕೆ ಪಡೆಯುವ ವೇಳೆ ಹಾರಿಸಿದ ಗುಂಡು ಎಂದು ವೀಕ್ಷಕ ವಿವರಣೆ ನೀಡಿದ ಸಿಬ್ಬಂದಿ ಹೇಳಿದಾಗ ನಿರಾಳರಾದರು.

ಬೆಳಿಗ್ಗೆ ಸುಮಾರು 10.30ರಿಂದ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನ 1.30ರವರೆಗೆ ನಡೆಯಿತು. ಕಾರ್ಯಾಚರಣೆಯಲ್ಲಿ ಮೂರು ಎಫ್ಪಿವಿ (ಫಾಸ್ಟ್ ಪ್ಯಾಟ್ರೋಲ್ ವೆಸೆಲ್), ಒಪಿವಿ (ಆಫ್ ಶೋರ್ ಪ್ಯಾಟ್ರೋಲ್ ವೆಸೆಲ್) ಎರಡು ಇಂಟರ್ ಸೆಪ್ಟರ್ ಬೋಟ್ಗಳು, ಎರಡು ಡಾರ್ನಿಯರ್, ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್, ಭಾರತೀಯ ತಟ ರಕ್ಷಕ್ ಹಡಗುಗಳು ಭಾಗಿಯಾದವು.

ಎನ್ಎಂಪಿಎ ತಟದಲ್ಲಿ ಬಂದು ನಿಂತಿದ್ದ ಕಡಲಾಚೆಯ ಗಸ್ತು ಹಡಗು ‘ಐಸಿಜಿಎಸ್ ವಿಕ್ರಂ’ಗೆ ಭೇಟಿ ನೀಡಿದ ರಾಜ್ಯಪಾಲರಿಗೆ ಕೋಸ್ಟ್ ಗಾರ್ಡ್ ಗೌರವ ಸಲ್ಲಿಸಲಾಯಿತು. ಈ ಹಡಗು 2018ರಿಂದ ಕಾರ್ಯಾಚರಣೆಯಲ್ಲಿದೆ.

ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ, ಕಮಾಂಡಿಂಗ್ ಆಫೀಸರ್ ಮತ್ತು ಡಿಐಜಿ ಅಶೋಕ್ ಕುಮಾರ್ ಭಾಮ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಇದ್ದರು.

‘ದೇಶದ ಕಡಲ ತಟದ ರಕ್ಷಣೆ, ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸುವ ಶ್ರೇಷ್ಠ ಕಾರ್ಯವನ್ನು ಕೋಸ್ಟ್ ಗಾರ್ಡ್ ಮಾಡುತ್ತಿದೆ. ಇಂತಹ ರಕ್ಷಣಾ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಹೆಮ್ಮೆ ಇದೆ’ ಎಂದು ಬೆಂಗಳೂರು ಮೂಲದ ಕೋಸ್ಟ್ ಗಾರ್ಡ್ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಭಾರತೀಯ ಕೋಸ್ಟ್ ಗಾರ್ಡ್ ದಿನಾಚರಣೆಯಂದು ಪ್ರತಿವರ್ಷ ಅಣಕು ಕಾರ್ಯಾಚರಣೆ ಮಾಡಲಾಗುತ್ತದೆ. ಈ ವರ್ಷವೂ ಯಶಸ್ವಿಯಾಗಿ ನಡೆದಿದೆ.

-ಅಶೋಕ್ ಕುಮಾರ್ ಭಾಮ ಕಮಾಂಡಿಂಗ್ ಆಫೀಸರ್

ಮೊದಲ ಬಾರಿ ಅಣಕು ಕಾರ್ಯಾಚರಣೆಯನ್ನು ವೀಕ್ಷಿಸಿದೆ. ಕಡಲ ರಕ್ಷಣಾ ಕಾರ್ಯದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಪಾತ್ರದ ಬಗ್ಗೆ ಹೆಮ್ಮೆಯೆನಿಸಿತು.

-ಅಮಿತಾ ಶರ್ಮ

‘ನಿಷ್ಠೆಯಿಂದ ನಿರ್ವಹಣೆ’

ಭಾರತೀಯ ಕೋಸ್ಟ್ ಗಾರ್ಡ್ ವಿಶ್ವದ ಅತಿದೊಡ್ಡ ಕರಾವಳಿ ಕಾವಲು ಪಡೆಗಳಲ್ಲಿ ಒಂದಾಗಿದ್ದು ಸಂಪೂರ್ಣ ಸಮರ್ಪಣೆ ನಿಷ್ಠೆ ಮತ್ತು ಧೈರ್ಯದಿಂದ ಕರ್ತವ್ಯ ನಿರ್ವಹಿಸುತ್ತಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು. 48ನೇ ಭಾರತೀಯ ಕೋಸ್ಟ್ ಗಾರ್ಡ್ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕಡಲ ಗಡಿಗಳನ್ನು ರಕ್ಷಿಸುವಲ್ಲಿ ಕೋಸ್ಟ್ ಗಾರ್ಡ್ ಕೊಡುಗೆ ಶ್ಲಾಘನೀಯ. ಭಾರತೀಯ ಕೋಸ್ಟ್ ಗಾರ್ಡ್ ದೇಶದ ಸುಮಾರು 7500 ಕಿಲೋ ಮೀಟರ್ ಕಡಲ ಗಡಿಗಳ ರಕ್ಷಣೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊಂದಿದೆ ಎಂದರು. ಸಮುದ್ರ ಮಾಲಿನ್ಯ ಕಡಲ ಭಯೋತ್ಪಾದನೆ ಅಕ್ರಮ ಕಳ್ಳಸಾಗಣೆ ಸೇರಿದಂತೆ ಹಲವು ಸವಾಲುಗಳೊಂದಿಗೆ ಕಡಲ ವ್ಯಾಪಾರ ಮತ್ತು ಭದ್ರತೆಯು ಹೆಚ್ಚು ಸವಾಲಾಗಿದೆ. ಈ ಕ್ಷೇತ್ರಗಳಲ್ಲಿ ಕೋಸ್ಟ್ ಗಾರ್ಡ್ನ ಪಾತ್ರವು ಹೆಚ್ಚು ಮಹತ್ವದ್ದಾಗಿದೆ. ಅಂತರರಾಷ್ಟ್ರೀಯ ಮಾತುಕತೆಗಳ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ದೇಶದ ಹಿತಾಸಕ್ತಿಗಳನ್ನು ಖಾತ್ರಿಪಡಿಸಿ ದೇಶಕ್ಕೆ ಖ್ಯಾತಿ ತಂದಿದೆ. ಭಾರತೀಯ ಕರಾವಳಿಯುದ್ದಕ್ಕೂ ಎಲೆಕ್ಟ್ರಾನಿಕ್ ಕಣ್ಗಾವಲು ಜಾಲಗಳನ್ನು ಸ್ಥಾಪಿಸುವಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಗಮನಾರ್ಹ ಪ್ರಗತಿ ಸಾಧಿಸಿದೆ. ಈ ದಿಸೆಯಲ್ಲಿ ನಾಲ್ಕು ರಾಡಾರ್ ಕೇಂದ್ರಗಳು ಕರ್ನಾಟಕದಲ್ಲಿ ಸುರತ್ಕಲ್ ಭಟ್ಕಳ ಬೇಲಿಕೇರಿ ಮತ್ತು ಕುಂದಾಪುರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.