ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ: ಹಳ್ಳಿಗಳ ‘ಜೀವ’ ಹಿಂಡುತ್ತಿರುವ ಮಣ್ಣು ‘ಲಾಬಿ’

ಗ್ರಾಮ ಪಂಚಾಯಿತಿಗಳ ಜೈವಿಕ ವೈವಿಧ್ಯ ಉಪಸಮಿತಿ ಲೆಕ್ಕಕ್ಕಷ್ಟೆ; ಹೆದ್ದಾರಿ ಬದಿಯಲ್ಲೂ ಕರಗುತ್ತಿವೆ ಗುಡ್ಡಗಳು
Published 22 ಜುಲೈ 2024, 8:23 IST
Last Updated 22 ಜುಲೈ 2024, 8:23 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡ: ಧಾರಾಕಾರ ಮಳೆಯಾಗುತ್ತಿರುವ ಈಗ ಎಲ್ಲ ಕಡೆ ಕುಸಿತದ್ದೇ ಮಾತು–ಸುದ್ದಿ. ಗುಡ್ಡ ಕುಸಿತ, ಧರೆ ಕುಸಿತ, ರಸ್ತೆ ಕುಸಿತದಿಂದಾಗಿ ಪ್ರಾಣ ಕಳೆದುಕೊಂಡವರು, ಅವರ ಅಗಲಿಕೆಯಿಂದಾಗಿ ಬದುಕು ಕಳೆದುಕೊಂಡವರ ದಾರುಣ ಕಥೆಗಳು ನಿತ್ಯವೂ ಕೇಳಿಬರುತ್ತಿವೆ. ಇವೆಲ್ಲ ಪ್ರಕೃತಿಯ ಮೇಲೆ ಮನುಷ್ಯ ಹೇರುತ್ತಿರುವ ಭಾರದಿಂದ ಆಗುತ್ತಿರುವ ದುರಂತಗಳು. ಹೆಚ್ಚಾಗಿ ಮಳೆಗಾಲದಲ್ಲೇ ನಡೆಯುವ ಅವಘಡಗಳು.

ಆದರೆ ಮಾನವ ನೇರವಾಗಿ ಭಾಗಿಯಾಗಿ ಎಲ್ಲ ಕಾಲದಲ್ಲೂ ನಡೆಸುವ ‘ಗುಡ್ಡ ಕೊರೆತ’ ಎಂಬ ದುರಂತದ ಬಗ್ಗೆ ಚರ್ಚೆಗಳೇ ಆಗುವುದಿಲ್ಲ. ಬಡಾವಣೆ, ಮನೆ, ರಸ್ತೆ ಇತ್ಯಾದಿಗಳ ನಿರ್ಮಾಣದ ಸಂದರ್ಭದಲ್ಲಿ ಸಮತಟ್ಟು ಮಾಡುವುದಕ್ಕಾಗಿ ಮಣ್ಣಿನ ಮೂಲ ಹುಡುಕುವವರು ಮೊದಲು ಕಣ್ಣು ಹಾಕುವುದು ಗುಡ್ಡಗಳ ಮೇಲೆ. ಅಡಿಕೆ, ರಬ್ಬರ್‌ನತ್ತ ಪರಿವರ್ತನೆಗೊಳ್ಳುವ ಕೃಷಿಕರು ಕೂಡ ದೃಷ್ಟಿ ಹಾಯಿಸುವುದು ಗುಡ್ಡಗಳತ್ತ. ಇದೆಲ್ಲದರ ಪರಿಣಾಮ ಮಣ್ಣಿನ ಲಾಬಿ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಜೀವವೈವಿಧ್ಯಕ್ಕೆ ಅಪಾಯ ಒಡ್ಡಿದೆ.‌ 

ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವೂ ಸೇರಿದಂತೆ ಎಲ್ಲ ಭಾಗಗಳಲ್ಲೂ ಅಪಾರ ಜೀವವೈವಿಧ್ಯವಿದೆ. ಗಿಡ–ಮರಗಳು, ಔಷಧೀಯ ಗುಣ ಇರುವ ಬಳ್ಳಿ–ಸಸ್ಯಗಳು, ಪಕ್ಷಿಗಳು, ಸಣ್ಣ ಪ್ರಾಣಿಗಳು, ಉರಗಗಳು ಅದರಲ್ಲಿ ಇವೆ. ಇದೆಲ್ಲವನ್ನೂ ಕೆಲವೇ ತಾಸುಗಳಲ್ಲಿ ಇಲ್ಲದಂತೆ ಮಾಡುವ ಸಾಮರ್ಥ್ಯ ಬುಲ್‌ಡೋಜರ್‌ಗಳಿಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವರ್ಷದ ಬಹುತೇಕ ಎಲ್ಲ ತಿಂಗಳಲ್ಲೂ ಬುಲ್‌ಡೋಜರ್‌ಗಳು, ಹಿಟಾಚಿಗಳು, ಟಿಪ್ಪರ್‌ಗಳ ಎಡೆಬಿಡದ ಓಡಾಟ. ಪ್ರದೇಶವಾರು ವಿಭಿನ್ನ ಉದ್ದೇಶಕ್ಕೆ ಇವು ಬಳಕೆಯಾಗುತ್ತಿವೆ. ಸುಳ್ಯ–ಪುತ್ತೂರು ಭಾಗದಲ್ಲಿ ಗುಡ್ಡಗಳು ಅಡಿಕೆ, ರಬ್ಬರ್‌ ತೋಟಗಳಾಗಿ ಪರಿವರ್ತನೆ ಆಗಿದ್ದರೆ ಮಂಗಳೂರು, ಬಂಟ್ವಾಳ ಮತ್ತಿತರ ತಾಲ್ಲೂಕುಗಳಲ್ಲಿ ಗುಡ್ಡ ಸಮತಟ್ಟಾಗಿ ಮನೆಗಳು ಅಥವಾ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಕೆಲವು ಪ್ರದೇಶಗಳಲ್ಲಿ ಎಕರೆಗಟ್ಟಲೆ ಬತ್ತದ ಗದ್ದೆಗಳ ಒಡಲಿಗೆ ಮಣ್ಣು ತುಂಬಿದ್ದು ಅವು ಈಗ ನಿವೇಶನಗಳಾಗಿ ಪರಿವರ್ತನೆಯಾಗಿವೆ.  

ಉಪ್ಪಿನಂಗಡಿ ಭಾಗದಲ್ಲಿ ಕೆಲವು ವರ್ಷಗಳ ಹಿಂದೆ ಇದ್ದ ಬಹುತೇಕ ಗುಡ್ಡಗಳು ಈಗ ನಾಶವಾಗಿವೆ. ಅಲ್ಲಿ ಗುಡ್ಡ ಇತ್ತು ಎಂದೇ ಹೇಳಲು ಸಾಧ್ಯವಾಗದ ರೀತಿಯಲ್ಲಿ ಪರಿಸರ ಬದಲಾಗಿದೆ. ಜೀವವೈವಿಧ್ಯವನ್ನು ಸಾರುತ್ತ ಎತ್ತರಕ್ಕೆ ಎದ್ದುನಿಂತಿದ್ದ ಗುಡ್ಡಗಳ ಜಾಗದಲ್ಲಿ ಈಗ ರಬ್ಬರ್ ತೋಟಗಳೇ ಕಾಣುತ್ತಿವೆ ಎನ್ನುತ್ತಾರೆ, ಸ್ಥಳೀಯ ಪರಿಸರದ ಜೊತೆ ವರ್ಷಗಳಿಂದ ಒಡನಾಟ ಹೊಂದಿರುವ ಅಲ್ಲಿನ ಜನರು.

‘ಇಷ್ಟು ಕಾಲ ರಬ್ಬರ್ ಪ್ಲಾಂಟರ್‌ಗಳು, ಭೂಮಾಲೀಕರು ಗುಡ್ಡಗಳನ್ನು ಕೊರೆದರು. ಈಗ ರಾಷ್ಟ್ರೀಯ ಹೆದ್ದಾರಿಯವರು ಯಾವ ಮಾನದಂಡವೂ ಇಲ್ಲದೆ ಗುಡ್ಡಗಳನ್ನು ಅಗೆದು ರಸ್ತೆ ಅಗಲೀಕರಣ ಮಾಡುತ್ತಿದ್ದಾರೆ. ಎಲ್ಲವೂ ಮುಗಿದಾಗ ಇದೊಂದು ಮಿನಿ ಮರುಭೂಮಿ ಆಗುತ್ತದೆಯೋ ಎಂಬ ಆತಂಕ ಕಾಡುತ್ತದೆ’ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಬಂಟ್ವಾಳ ತಾಲ್ಲೂಕಿನ ನರಹರಿ ಪರ್ವತದ ಬಳಿಯೂ ಇದೇ ರೀತಿ ಗುಡ್ಡವನ್ನು ಬಗೆದಿದ್ದಾರೆ. ಇದನ್ನು ವೈಜ್ಞಾನಿಕವಾಗಿ ಮಾಡುವ ಕಾಳಜಿಯನ್ನು ಕೂಡ ಸಂಬಂಧಪಟ್ಟವರು ಪ್ರದರ್ಶಿಸಲಿಲ್ಲ ಎಂದು ಅಲ್ಲಿನ ಪ್ರಜ್ಞಾವಂತರು ದೂರುತ್ತಾರೆ.

ಅಧಿಕಾರ ಇಲ್ಲದ ಉಪಸಮಿತಿ

ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಜೈವಿಕ ವೈವಿಧ್ಯ ಉಪಸಮಿತಿ ಎಂಬುದೊಂದು ಇದೆ. ಜೀವವೈವಿಧ್ಯಕ್ಕೆ ಧಕ್ಕೆಯಾಗುವ ಚಟುವಟಿಕೆಯನ್ನು ಖಾಸಗಿ ಜಮೀನಿನಲ್ಲಿ ಕೂಡ ಮಾಡುವಂತಿಲ್ಲ ಎಂಬುದು ಈ ಸಮಿತಿಗೆ ತಿಳಿದಿದೆ. ಆದರೆ ಯಾರೂ ತಡೆಯಲು ಮುಂದಾಗುವುದಿಲ್ಲ ಎಂದು ಬಹುತೇಕ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ದೂರುತ್ತಾರೆ.

‘ಬೇಜವಾಬ್ದಾರಿ ಸದಸ್ಯರಿಂದಾಗಿ ಈ ಉಪಸಮಿತಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ನಾವೇ ಮುಂದೆ ನಿಂತು ಪ್ರಕರಣ ದಾಖಲಿಸಿಕೊಂಡರೆ ಲಾಬಿಯಲ್ಲಿ ಭಾಗಿಯಾದವರು ತಡೆಯಾಜ್ಞೆ ತರುತ್ತಾರೆ. ಅಕ್ರಮದಲ್ಲಿ ಎಲ್ಲರೂ ಕೈಜೋಡಿಸಿರುವುದರಿಂದ ಇವೆಲ್ಲವೂ ಸುಲಭವಾಗುತ್ತದೆ’ ಎಂದು ಪಿಡಿಒ ಒಬ್ಬರು ಬೇಸರ ತೋಡಿಕೊಂಡರು.

‘ಸುಳ್ಯ ತಾಲ್ಲೂಕಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ಗುಡ್ಡ ಕತ್ತರಿಸುವ ಪ್ರವೃತ್ತಿ ಸ್ವಲ್ಪ ಕಡಿಮೆ. ಇಲ್ಲಿ ತೋಟ ಮಾಡುವುದಕ್ಕಾಗಿ ಸಮತಟ್ಟು ಮಾಡಲಾಗುತ್ತದೆ. ಈಗಾಗಲೇ ಹಲವು ಪ್ರದೇಶಗಳು ಹೀಗೆ ಪರಿವರ್ತನೆ ಆಗಿವೆ. ಗುಡ್ಡ ಕಡಿಯುವುದು, ಅಲ್ಲಿ ಒಂದೋ ಎರಡೋ ಬೋರ್ ಹಾಕುವುದು, ತೋಟ ಮಾಡುವುದು. ಕೆಲವು ಕಡೆಗಳಲ್ಲಿ ಸಮತಟ್ಟು ಮಾಡಿ ಹಾಗೆಯೇ ಬಿಟ್ಟಿದ್ದಾರೆ. ಬೇರು ಸಮೇತ ಗಿಡ–ಮರಗಳನ್ನು ಕಿತ್ತಿರುವ ಕಾರಣ ಅಲ್ಲಿ ಮತ್ತೆ ಜೀವ ಕಳೆ ಇರುವುದಿಲ್ಲ. ಹೆಚ್ಚೆಂದರೆ ಅಕೇಶಿಯಾ ಗಿಡಗಳು ಬೆಳೆಯುತ್ತವೆ. ಅಲ್ಲಿಗೆ, ಜೀವವೈವಿಧ್ಯದ ಒಂದು ಕೊಂಡಿಯೇ ನಾಶವಾದಂತೆ ಆಗುತ್ತದೆ. ಈ ಭಾಗದ ಅನೇಕ ಕಡೆಗಳಲ್ಲಿ ಹೀಗೆ ಗುಡ್ಡ ಕಡಿದ ಮಣ್ಣು ಕೊಚ್ಚಿಕೊಂಡು ಹೋಗಿ ನದಿ ಸೇರಿದೆ. ಎಲ್ಲವನ್ನೂ ಕಂಡು ಕಾಣದಂತೆ ಇರಬೇಕಾದ ಪರಿಸ್ಥಿತಿ’ ಎಂದು ಗ್ರಾಮ ಪಂಚಾಯಿತಿಯೊಂದರ ಪಿಡಿಒ ಹೇಳಿದರು.

ಗುಡ್ಡ ಅಥವಾ ಮಣ್ಣಿನ ಅಗಾಧ ರಾಶಿಯ ಮೇಲೆ ಬೀಳುವ ಮಳೆನೀರು ಅವುಗಳ ಒಡಲಿಗೆ ಇಳಿಯುತ್ತದೆ. ಒಳಗಿನ ಮಣ್ಣಿನ ಪದರಗಳ ಮೂಲಕ ಸಾಗಿ ನೀರಿನ ಸೆಲೆಯಾಗಿ ರೂಪುಗೊಳ್ಳುತ್ತದೆ. ಆದರೆ ಗುಡ್ಡವನ್ನು ಮನಸೋ ಇಚ್ಛೆ ಪ್ರಕಾರ ಅವೈಜ್ಞಾನಿಕವಾಗಿ ನಾಶ ಮಾಡುವುದರಿಂದ ನೈಸರ್ಗಿಕ ಪ್ರಕ್ರಿಯೆಯ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ. ಬೆಟ್ಟಗಳ ಮೇಲ್ಮೈ ಇಳಿಜಾರು ಪ್ರದೇಶದಲ್ಲಿ ಸಹಜವಾಗಿ ಬೆಳೆದ ಗಿಡ,ಮರ, ಹುಲ್ಲುಗಳನ್ನು ಕಿತ್ತು ಅಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆದಾಗ ಹೊರಮೈ ಮಣ್ಣನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುವುದಿಲ್ಲ. ಅವೈಜ್ಞಾನಿಕವಾಗಿ ಇಳಿಜಾರು ಪ್ರದೇಶವನ್ನು ಅಗೆದು ಹಾಕಿದರೆ ಮಣ್ಣಿನ ಸಮತೋಲನವೂ ತಪ್ಪುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಜೀವವೈವಿಧ್ಯದ ಆಗರವನ್ನು ಬಗೆದಿರುವುದು
ಜೀವವೈವಿಧ್ಯದ ಆಗರವನ್ನು ಬಗೆದಿರುವುದು
ನಕಾಶೆಯ ತುಂಬ ‘ಪ್ಯಾಚ್‌’ಗಳು
ಗುಡ್ಡಗಳನ್ನು ಕೊರೆಯುವುದು ಅವ್ಯಾಹತವಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲು ಹೊರಟ ಪಕ್ಷಿಕೆರೆಯ ತಂಡವೊಂದು ಗೂಗಲ್ ಅರ್ಥ್‌ನಲ್ಲಿ ಪರಿಶೀಲಿಸಿದಾಗ ನಕಾಶೆಯ ತುಂಬ ‘ಪ್ಯಾಚ್‌’ಗಳೇ ಕಾಣಿಸಿಕೊಂಡಿವೆ. ಸುರತ್ಕಲ್ ಸುತ್ತಮುತ್ತ ನೂರಾರು ಎಕರೆ ಭೂಮಿಯಲ್ಲಿ ಇಂಥ ಕಪ್ಪುಬೊಟ್ಟುಗಳು ಕಂಡುಬಂದಿವೆ ಎಂದು ತಂಡದ ಪ್ರಮುಖ ನಿತಿನ್ ವಾಜ್ ಹೇಳುತ್ತಾರೆ. ‘ಗುಡ್ಡ ಉರುಳಿಸುವುದರಿಂದ ಹಸಿರು ನಾಶವಾಗುತ್ತದೆ. ಮಣ್ಣು ಕೂಡ ಇಲ್ಲದಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಶವಾದ ಭಾಗವನ್ನು ಸರಿಪಡಿಸಲು ಪ್ರಯತ್ನ ನಡೆಯುತ್ತಿದೆ. ಚೇಳಾಯ್ರು ಸಮೀಪ ಇಂಥ ಪ್ರದೇಶವೊಂದನ್ನು ಗುರುತಿಸಿ ಜೈವಿಕ ವೈವಿಧ್ಯ ಉದ್ಯಾನ ನಿರ್ಮಿಸಲಾಗುತ್ತಿದೆ. ನೀರು ಹರಿಯುವ ಈ ಪ್ರದೇಶದಲ್ಲಿ ಚಿಕ್ಕದಾದ ಅಣೆಕಟ್ಟೆಯೊಂದನ್ನು ನಿರ್ಮಿಸಿ ನೀರು ನಿಲ್ಲಿಸುವ ಯೋಜನೆಯೂ ಇದೆ. ಇದರಿಂದ ಬೇಸಿಗೆಯಲ್ಲಿ ಒಂದಷ್ಟು ನೀರು ಸಿಗಲಿದೆ. ಈ ಪ್ರದೇಶದಲ್ಲಿ ಅಂತರ್ಜಲವೂ ಹೆಚ್ಚಲಿದೆ’ ಎಂದು ನಿತಿನ್ ತಿಳಿಸಿದರು.
ಭೂ ಪ್ರದೇಶದಕ್ಕೆ ಧಕ್ಕೆ
ಪ್ರಕ್ರತಿದತ್ತ ಗುಡ್ಡಗಳನ್ನು ಅಗೆದು ಸಮತಟ್ಟು ಮಾಡುವುದರಿಂದ ಭೂಪ್ರದೇಶದ ಅಂದಕ್ಕೆ ಧಕ್ಕೆಯಾಗುತ್ತದೆ. ನೈಸರ್ಗಿಕ ಪರಿಸರಕ್ಕೂ ತೊಂದರೆಯಾಗುತ್ತದೆ. ಇದರೊಂದಿಗೆ ಮಣ್ಣು ಕೊಚ್ಚಿಕೊಂಡು ಹೋಗಿ ಅನಾಹುತಗಳಾಗುತ್ತವೆ. ಮಣ್ಣಿನ ಫಲವತ್ತತೆ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ. ಈ ಎಲ್ಲ ಕಾರಣಗಳಿಂದ ಗುಡ್ಡ ಅಗೆಯುವುದರ ಮೇಲೆ ನಿರ್ಬಂಧ ಹೇರಬೇಕು. ಗುಡ್ಡಗಳಿಂದ ಮಣ್ಣು ತೆಗೆಯಬೇಕಾದರೆ ಸಂಬಂಧಪಟ್ಟವರ ಅನುಮತಿ ಬೇಕೇಬೇಕು. ಆದರೆ ನಮ್ಮ ಜಿಲ್ಲೆಯಲ್ಲಿ ಗುಡ್ಡ ಖಾಲಿ ಮಾಡುವ ಚಟುವಟಿಕೆ ಲಂಗು ಲಗಾಮು ಇಲ್ಲದೆ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಇನ್ನಷ್ಟು ಅಪಾಯಗಳು ಆಗಬಹುದು. ಎಚ್‌. ಶಶಿಧರ ಶೆಟ್ಟಿ ಎನ್‌ಇಸಿಎಫ್‌ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT