ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬರದ ನಂತರ ಈಗ ಅತಿವೃಷ್ಟಿ ಸರದಿ

3 ವಾರಗಳಿಂದ ಬಿಡದ ಮಳೆ; ಬೆಳೆಹಾನಿ ಆತಂಕದಲ್ಲಿ ರೈತ
ರಾಮಮೂರ್ತಿ ಪಿ.
Published 27 ಜುಲೈ 2024, 0:36 IST
Last Updated 27 ಜುಲೈ 2024, 0:36 IST
ಅಕ್ಷರ ಗಾತ್ರ

ದಾವಣಗೆರೆ: ಕಳೆದ ವರ್ಷ ಅನಾವೃಷ್ಟಿಯಿಂದ ನಷ್ಟ ಅನುಭವಿಸಿದ್ದ ಜಿಲ್ಲೆಯ ರೈತರು, ಇದೀಗ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯ ಭೀತಿಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಅತೀವ ತೇವಾಂಶದಿಂದ ಮೆಕ್ಕೆಜೋಳ, ಹತ್ತಿ, ಜೋಳದ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಜಿಲ್ಲೆಯಲ್ಲಿ ಮೂರು ವಾರಗಳಿಂದ ಬಿಟ್ಟೂ ಬಿಡದೇ ಸತತ ಮಳೆ ಸುರಿಯುತ್ತಿದೆ. ಬಿಸಿಲೇ ಇಲ್ಲದ್ದರಿಂದ ಬೆಳೆಗಳು ಕೊಳೆಯಲಾರಂಭಿಸಿವೆ. ಮಳೆ ಇದೇ ರೀತಿ ಮುಂದುವರಿದರೆ ಈ ವರ್ಷವೂ ಸಂಕಷ್ಟ ತಪ್ಪಿದ್ದಲ್ಲ ಎಂಬ ಆತಂಕ ರೈತರಲ್ಲಿ ಆವರಿಸಿದೆ.

ಜಿಲ್ಲೆಯಲ್ಲಿ ಜೂನ್ 1ರಿಂದ ಜುಲೈ 26ರ ವರೆಗೆ 274 ಮಿ.ಮೀ ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು. ಈ ಬಾರಿಯ ಮುಂಗಾರು ಚುರುಕು ಪಡೆದಿದ್ದರಿಂದ 396 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ವಾಡಿಕೆಗಿಂತ ಅಧಿಕ ಮಳೆಯಾಗಿದೆ.

ಜೋರು ಮಳೆ ಸುರಿದು, ಆಗಾಗ ಬಿಡುವು ನೀಡಿದ್ದರೆ, ಬೆಳೆಗಳಿಗೆ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ. ಆದರೆ, ಒಂದು ದಿನವೂ ಬಿಡುವು ನೀಡದೇ ಮಳೆ ಸುರಿಯುತ್ತಿರುವುದರಿಂದ ಬೆಳೆಗಳು ಹಾಳಾಗುತ್ತಿವೆ.

‘ಜೂನ್‌ ಆರಂಭದಲ್ಲಿ ಬಿತ್ತಿದ ಬೆಳೆಗಳು ತೇವಾಂಶವನ್ನು ಸಹಿಸಿಕೊಳ್ಳುತ್ತಿವೆ. ತಡವಾಗಿ ಬಿತ್ತನೆ ನಡೆಸಿದ ಬೆಳೆಗಳು ಬೇರು ಗಟ್ಟಿಗೊಳ್ಳದೇ ಕೊಳೆಯಲಾರಂಭಿಸಿವೆ. ಅದರಲ್ಲೂ ಮೆಕ್ಕೆಜೋಳ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ತಗ್ಗುಪ್ರದೇಶಗಳಲ್ಲಿರುವ ಜಮೀನುಗಳಲ್ಲಿನ ಬೆಳೆಯು ಪೂರ್ತಿ ಹಾಳಾಗುವ ಭೀತಿ ಉಂಟಾಗಿದೆ’ ಎಂದು ಚನ್ನಗಿರಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ರೈತ ಮುನಿ ಎಸ್.ಎಂ. ಆತಂಕ ವ್ಯಕ್ತಪಡಿಸಿದರು.

‘ನಮ್ಮ ತಾಲ್ಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆ ಬೆಳೆದಿದ್ದೇವೆ. ನಿರಂತರ ಮಳೆಯಿಂದ ಹತ್ತಿ ಬೆಳೆಗೆ ಹೆಚ್ಚಿನ ಹಾನಿಯುಂಟಾಗಿದೆ. ಹತ್ತಿ ಗಿಡದಲ್ಲಿ ಕಾಯಿ ಬಿಡುತ್ತಿದ್ದು, ಮಳೆ ನೀರು ಸೇರಿಕೊಳ್ಳುತ್ತಿರುವುದರಿಂದ ಕೊಳೆಯುತ್ತಿವೆ. ಜಮೀನುಗಳಲ್ಲಿ ನೀರು ನಿಂತಿರುವುದರಿಂದಲೂ ಗಿಡಗಳು ಸಾಯುತ್ತಿವೆ’ ಎಂದು ಜಗಳೂರು ತಾಲ್ಲೂಕಿನ ಅಸಗೋಡು ಗ್ರಾಮದ ರೈತ ಕೆ.ಬಿ.ರವಿ ಸಂಕಷ್ಟ ತೋಡಿಕೊಂಡರು.

‘ಮೆಕ್ಕೆಜೋಳ ಮಾತ್ರವಲ್ಲದೇ ಸೊಪ್ಪು, ತರಕಾರಿ ಬೆಳೆಗೂ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿದೆ. ತೇವಾಂಶದಿಂದಾಗಿ ಬೇರುಗಳು ಸದೃಢವಾಗಿಲ್ಲ. ಬೆಳೆಗಳಿಗೆ ರಸಗೊಬ್ಬರ ನೀಡಲಾಗುತ್ತಿಲ್ಲ. ರಸಗೊಬ್ಬರ ಹಾಕಿದರೂ, ಸಹಿಸಿಕೊಳ್ಳುವ ಶಕ್ತಿ ಗಿಡಗಳಿಗಿಲ್ಲ. ಬೆಳೆಗಳು ಉಳಿಯಲು ಬಿಸಿಲಿನ ವಾತಾವರಣ ತುರ್ತು ಅವಶ್ಯವಾಗಿದೆ’ ಎಂದು ನ್ಯಾಮತಿ ತಾಲ್ಲೂಕಿನ ರೈತ ಜಿ.ನಿಜಲಿಂಗಪ್ಪ ಹೇಳಿದರು.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದೊಡ್ಡಬ್ಬಿಗೆರೆ ಗ್ರಾಮದ ಮೆಕ್ಕೆಜೋಳದ ಜಮೀನೊಂದರಲ್ಲಿ ಮಳೆ ನೀರು ನಿಂತಿರುವುದು
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದೊಡ್ಡಬ್ಬಿಗೆರೆ ಗ್ರಾಮದ ಮೆಕ್ಕೆಜೋಳದ ಜಮೀನೊಂದರಲ್ಲಿ ಮಳೆ ನೀರು ನಿಂತಿರುವುದು

ಮಳೆ ಮುಂದುವರಿದಂತೆ ಬೆಳೆಗಳಿಗೆ ದಿನದಿಂದ ದಿನಕ್ಕೆ ಹಳದಿ ರೋಗವೂ ಹೆಚ್ಚಾಗುತ್ತಿದೆ. ಕೆಲವು ದಿನ ಮಳೆ ಬಿಡುವು ನೀಡಿದರೆ ಮಾತ್ರ ಅಲ್ಪಸ್ವಲ್ಪ ಫಸಲು ಕೈಸೇರಲಿದೆ. ಇಲ್ಲವಾದರೆ ಈ ವರ್ಷವೂ ಹಾಕಿದ ಬಂಡವಾಳ ಕೈಸೇರುವುದಿಲ್ಲ

-ಸುಂಕದಕಟ್ಟೆ ಕರಿಬಸಪ್ಪ ರೈತ ಹೊನ್ನಾಳಿ

ಮಳೆ ಮುಂದುವರಿದರೆ ಮೆಕ್ಕೆಜೋಳದ ತೆನೆಗಳಲ್ಲಿ ಅಧಿಕ ಕಾಳು ಕಟ್ಟುವುದಿಲ್ಲ. ಈಗಾಗಲೇ ಮಳೆಯಿಂದಾಗಿ ಸಾಂಬಾರ್ ಸೌತೆ ಬೆಳೆಯ ಬಳ್ಳಿಯೂ ಕೊಳೆತಿದೆ. ಸೌತೆ ಬೆಳೆ ನಾಶಪಡಿಸಿ ಬೇರೆ ಬೆಳೆ ಬಿತ್ತನೆ ಮಾಡುವ ಚಿಂತನೆಯಲ್ಲಿದ್ದೇವೆ

-ಕೆ.ಬಿ.ರವಿ ರೈತ ಅಸಗೋಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT