ಬೆಣ್ಣೆ ದೋಸೆಗೆ ಹೆಚ್ಚಿನ ದರ: ಆಕ್ಷೇಪ
ದಾವಣಗೆರೆ: ದಾವಣಗೆರೆ ಬೆಣ್ಣೆದೋಸೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡಿಂಗ್ ಮಾಡುವ ಉದ್ದೇಶದಿಂದ ಆರಂಭಿಸುವ ದೋಸೆ ಉತ್ಸವದಲ್ಲಿ ಒಂದು ಬೆಣ್ಣೆಗೆ ₹60 ದರ ವಿಧಿಸಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬ್ರಾಂಡಿಂಗ್ ಮಾಡುವಾಗ ಕಡಿಮೆ ದರಕ್ಕೆ ನೀಡಬೇಕು. ಈಗಾಗಲೇ ಹೋಟೆಲ್‌ಗಳಲ್ಲಿ ಒಂದು ಬೆಣ್ಣೆ ದೋಸೆಗೆ ₹ 50 ದರವಿದೆ. ಆದರೆ ಇಲ್ಲಿ ₹60 ದರ ವಿಧಿಸಲಾಗಿದೆ. ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಬರುವ ಜನರಿಗೆ ಬೆಣ್ಣೆದೋಸೆ ದುಬಾರಿ ಎಂಬ ಸಂದೇಶ ರವಾನೆಯಾಗುತ್ತದೆ. ₹ 50ಕ್ಕೆ ಒಂದು ಬೆಣ್ಣೆದೋಸೆ ನೀಡಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ ಆಗ್ರಹಿಸಿದ್ದಾರೆ. ದೋಸೆ ಉತ್ಸವಕ್ಕೆ ಡಿ.23ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಚಾಲನೆ ನೀಡಲಿದ್ದಾರೆ.