ದಾವಣಗೆರೆ: ‘ಕೆಫೆ ಕಾಫಿ ಡೇ’ ಸಾಮ್ರಾಜ್ಯದ ‘ಸೂರ್ಯ’ ಅಸ್ತಂಗತವಾದ ಸುದ್ದಿ ಕೇಳುತ್ತಿದ್ದಂತೆ ಇತ್ತ ಸಿಬ್ಬಂದಿಗೆ ತಮ್ಮನ್ನು ಪೊರೆಯುತ್ತಿದ್ದ ‘ದೇವರು’ ಇಲ್ಲವಲ್ಲ ಎಂಬ ದುಃಖ ಒಂದೆಡೆಯಾದರೆ, ತಮ್ಮ ಬದುಕಿನಲ್ಲಿ ಇನ್ನು ಕತ್ತಲೆ ಆವರಿಸೀತೆ ಎಂಬ ಆತಂಕ ಇನ್ನೊಂದೆಡೆ ಕಾಡುತ್ತಿತ್ತು.

ಬುಧವಾರ ಬೆಳಿಗ್ಗೆ ಎಂದಿನಂತೆ ಅಂಗಡಿ ತೆರೆದು ಗ್ರಾಹಕರಿಗಾಗಿ ಕಾಯುತ್ತಿದ್ದ ಸಿಬ್ಬಂದಿಗೆ, ಮಾಲೀಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಸಾವಿನ ಸುದ್ದಿ ಕೇಳಿ ಹೃದಯವೇ ಕಿತ್ತು ಬಂದಂತಾಗಿತ್ತು.

ವಿದ್ಯಾನಗರದ ‘ಕಾಫಿ ಡೇ’ಯ ಬಾಗಿಲನ್ನು ಎಂದಿನಂತೆ ಬುಧವಾರ ಬೆಳಿಗ್ಗೆ 9ಕ್ಕೇ ತೆರೆದಿದ್ದರೂ ಗ್ರಾಹಕರು ಮಾತ್ರ ಇತ್ತ ಸುಳಿದಿರಲಿಲ್ಲ. ಹೀಗಾಗಿ ಅಲ್ಲಿ ‘ಸ್ಮಶಾನ ಮೌನ’. ಬೆಳಿಗ್ಗೆ 11 ಗಂಟೆ ವೇಳೆಗೆ ಕೇಂದ್ರ ಕಚೇರಿಯಿಂದ ಕರೆ ಮಾಡಿದ ಕಂಪನಿಯ ಅಧಿಕಾರಿಗಳು, ‘ಕಾಫಿ ಡೇ’ಯನ್ನು ಸಂಜೆ 6ರವರೆಗೂ ಮುಚ್ಚುವಂತೆ ಸೂಚಿಸಿದರು. ರಾತ್ರಿ ಪಾಳಿಯವರು ಹೊರತುಪಡಿಸಿ ಉಳಿದ ಎಲ್ಲಾ ಸಿಬ್ಬಂದಿ ಮಾಲೀಕರ ಅಂತಿಮ ದರ್ಶನ ಪಡೆಯಲು ಚಿಕ್ಕಮಗಳೂರಿನಲ್ಲಿರುವ ಅವರ ಎಸ್ಟೇಟ್ಗೆ ಬರಬೇಕೆಂದು ನಿರ್ದೇಶನ ನೀಡಿದರು.

‘ಸಿದ್ಧಾರ್ಥ ಅವರು ನಮಗೆಲ್ಲ ತಂದೆ ಸಮಾನರಾಗಿದ್ದರು. ಇಂದು ನಾವು ಸ್ವಾವಲಂಬಿ ಬದುಕು ಸಾಗಿಸುತ್ತಿರಲು ಅವರೇ ಕಾರಣ. ಅವರು ಕಾಫಿ ಡೇ ನಡೆಸದಿದ್ದರೆ ನಮ್ಮಂತಹ ಎಷ್ಟೋ ಹೆಣ್ಣು ಮಕ್ಕಳು ಬೀದಿ ಪಾಲಾಗುತ್ತಿದ್ದರು. ಅವರ ಸಾವಿನ ಸುದ್ದಿ ಕೇಳಿದಾಗ ನಮ್ಮ ಪಾಲಿನ ದೇವರನ್ನೇ ಕಳೆದುಕೊಂಡಂತಾಯಿತು’ ಎಂದು ವಿದ್ಯಾನಗರದ ‘ಕೆಫೆ ಕಾಫಿ ಡೇ’ ಶಾಪ್ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಿವಮ್ಮ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎಸ್ಸೆಸ್ಸೆಲ್ಸಿ, ಪಿಯುಸಿ ಓದಿದ ಗ್ರಾಮೀಣ ಭಾಗದ ಹಲವು ಹೆಣ್ಣು ಮಕ್ಕಳಿಗೆ ಕಾಫಿ ಡೇಯಲ್ಲಿ ಕೆಲಸ ಕೊಟ್ಟಿದ್ದಾರೆ. ಆರು ತಿಂಗಳ ತರಬೇತಿ ನೀಡಿ, ಪ್ರಮಾಣಪತ್ರವನ್ನೂ ನೀಡಿದ್ದಾರೆ. ಇಂಗ್ಲಿಷ್ ಕಲಿಸಿಕೊಡುವ ಮೂಲಕ ಗ್ರಾಮೀಣ ಭಾಗದ ಹೆಣ್ಣುಮಕ್ಕಳೂ ಧೈರ್ಯವಾಗಿ ಗ್ರಾಹಕರೊಂದಿಗೆ ವ್ಯವಹರಿಸುವಂತೆ ಮಾಡಿದ್ದಾರೆ. ನಮಗೆ ಇಎಸ್ಐ, ಪಿಎಫ್ ಸೌಲಭ್ಯಗಳನ್ನೂ ಕಲ್ಪಿಸಿಕೊಟ್ಟಿದ್ದಾರೆ. ಪ್ರತಿ ತಿಂಗಳ 7ನೇ ತಾರೀಖಿಗೆ ತಪ್ಪದೇ ಸಂಬಳವಾಗುತ್ತಿದೆ. ಬದುಕು ಕಟ್ಟಿಕೊಟ್ಟ ನಮ್ಮ ಮಾಲೀಕರೇ ಈಗ ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ’ ಎನ್ನುವಾಗ ಶಿವಮ್ಮ ಅವರ ಕಣ್ಣಾಲಿಗಳು ತೇವಗೊಂಡವು.

ಎಸ್ಸೆಸ್ಸೆಲ್ಸಿ ಓದಿರುವ ಶಿವಮ್ಮ ಎರಡು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ‘ನಮ್ಮ ಸೇವೆಯನ್ನು ಪರಿಗಣಿಸಿ ಬಡ್ತಿ ನೀಡುವ ವ್ಯವಸ್ಥೆಯನ್ನೂ ಕಲ್ಪಿಸಿದ್ದರು. ಪರೀಕ್ಷೆ ಬರೆದು ಪಾಸಾದರೆ ಮ್ಯಾನೇಜರ್ ಹುದ್ದೆಗೂ ಬಡ್ತಿ ಪಡೆಯಲು ಅವಕಾಶವಿತ್ತು’ ಎಂದು ಹೇಳುತ್ತ ಶಿವಮ್ಮ ಕಾಫಿ ಶಾಪ್ನ ಷಟರ್ಗಳನ್ನು ಎಳೆದು, ಚಿಕ್ಕಮಗಳೂರಿಗೆ ಹೊರಡಲು ಅಣಿಯಾದರು.

‘ಒಂದೂವರೆ ವರ್ಷದಿಂದ ನಾನೂ ಇಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಬದುಕಿಗೂ ಕಾಫಿ ಡೇ ಆಸರೆಯಾಗಿದೆ’ ಎಂದು ಶಿಲ್ಪಾ ಧ್ವನಿಗೂಡಿಸಿದರು.

ದಿನಾಲೂ ಬೆಳಿಗ್ಗೆ 9ರಿಂದ ರಾತ್ರಿ 11.30ರವರೆಗೆ ‘ಕೆಫೆ ಕಾಫಿ ಡೇ’ನಲ್ಲಿ ವಹಿವಾಟು ನಡೆಯುತ್ತದೆ. ಸಿಬ್ಬಂದಿ ಎರಡು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಾರೆ. ವೈದ್ಯಕೀಯ, ಡೆಂಟಲ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳೇ ಹೆಚ್ಚಾಗಿ ಇಲ್ಲಿಗೆ ಬಂದು ರುಚಿಕರವಾದ ಕಾಫಿ, ಉಪಾಹಾರ ಸೇವಿಸುತ್ತ ಹರಟೆ ಹೊಡೆಯುತ್ತಾರೆ.

ತಾಲ್ಲೂಕಿನ ಕಲಪನಹಳ್ಳಿಯಲ್ಲಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೂ ‘ಕೆಫೆ ಕಾಫಿ ಡೇ’ ಶಾಪ್ ಇದೆ. ಅದು ದಿನದ 24 ಗಂಟೆಯೂ ತೆರೆದಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.