ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾವೀರ ನಗರ | ಸಮಸ್ಯೆಗಳ ಸರಮಾಲೆ.. ಹೇಳತೀರದ ಯಾತನೆ..

ಸಂಜೆಯಾಗುತ್ತಲೇ ಸೊಳ್ಳೆಗಳ ವಿಪರೀತ ಹಾವಳಿ; ರೋಗ ರುಜಿನಗಳ ಭೀತಿಯೊಂದಿಗೇ ವಾಸ
Published : 29 ಸೆಪ್ಟೆಂಬರ್ 2024, 7:02 IST
Last Updated : 29 ಸೆಪ್ಟೆಂಬರ್ 2024, 7:02 IST
ಫಾಲೋ ಮಾಡಿ
Comments

ದಾವಣಗೆರೆ: ‘ಮನೆಯ ಬಾಗಿಲು ತೆರೆದೊಡನೆಯೇ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ. ಚರಂಡಿಯೊಳಗಿನ ಕಡುಗಪ್ಪು ನೀರು ಕಣ್ಣಿಗೆ ರಾಚುತ್ತದೆ. ಇದು ಹೆಸರಿಗಷ್ಟೇ ಚರಂಡಿ. ಇದರೊಳಗಿನ ಗಲೀಜು ನೀರು ಸರಾಗವಾಗಿ ಹರಿದುಹೋಗದೆ ನಿಂತಲ್ಲಿಯೇ ನಿಂತಿರುತ್ತದೆ. ಕತ್ತಲು ಕವಿಯುತ್ತಿದ್ದಂತೆಯೇ ಸೊಳ್ಳೆಗಳ ದಂಡು ದಾಳಿಗಿಳಿಯುತ್ತವೆ! ರೋಗ ರುಜಿನಗಳ ಭೀತಿ ಕಾಡುತ್ತಿದೆ. ದಶಕಗಳೇ ಉರುಳಿದರೂ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಅವುಗಳ ನಡುವೆಯೇ ಬದುಕು ಸಾಗಿಸುವುದು ಅನಿವಾರ್ಯವಾಗಿದೆ’.. 

ದಾವಣಗೆರೆಯ ಮಹಾವೀರ ನಗರದ 16ನೇ ಕ್ರಾಸ್‌ ನಿವಾಸಿ ಫರೀದಾ ಬಾನು ಅವರ ಅಸಹಾಯಕ ಮಾತುಗಳಿವು. 

ಮಹಾವೀರ ನಗರವು ಮಹಾನಗರ ಪಾಲಿಕೆಯ 12ನೇ ವಾರ್ಡ್‌ ವ್ಯಾಪ್ತಿಗೊಳಪಡುತ್ತದೆ. ಇಲ್ಲಿನ ನಿವಾಸಿಗಳು ಸಮಸ್ಯೆಯ ಸರಮಾಲೆಗಳೊಂದಿಗೇ ಜೀವಿಸುತ್ತಿದ್ದಾರೆ. ಅವರನ್ನು ಮಾತಿಗೆಳೆದರೆ ತಾವು ಅನುಭವಿಸುತ್ತಿರುವ ಯಾತನೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.  

‘ಇಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ಅದ್ಯಾವ ಕಾಲವಾಯಿತೋ ಗೊತ್ತಿಲ್ಲ. ಕೊಳೆತ ವಾಸನೆ ಬೀರುವ ಈ ನೀರು ಸರಾಗವಾಗಿ ಹರಿದುಹೋಗುವಂತಹ ವ್ಯವಸ್ಥೆಯೂ ಇಲ್ಲ. ಮಳೆಗಾಲ ಬಂದರೆ ಸಾಕು, ಗಲೀಜು ನೀರೆಲ್ಲಾ ರಸ್ತೆ ಮೇಲೆ ಹರಿಯುತ್ತದೆ. ಚರಂಡಿ ನೀರು ಎಲ್ಲೆಂದರಲ್ಲಿ ಕಟ್ಟಿಕೊಳ್ಳುತ್ತದೆ. ನಮ್ಮ ಈ ಗೋಳು ಕೇಳುವವರೇ ಇಲ್ಲ’ ಎಂದು ಫರೀದಾ ಬಾನು ಬೇಸರ ವ್ಯಕ್ತಪಡಿಸಿದರು.

ಫರೀದಾ ಅವರ ಮಾತುಗಳು ದಾವಣಗೆರೆಯ ಕೊಳೆ ಗೇರಿಗಳ (ಸ್ಲಂ) ಜನರ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವಂತಿವೆ. ಕೊಳೆಗೇರಿ ನಿವಾಸಿಗಳ ಬದುಕು ಅಕ್ಷರಶಃ ನರಕದಂತಿದೆ. ಕೊಳೆಗೇರಿಗಳಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಎಸ್‌ಜೆಎಂ (ಶ್ರೀ ಜಗದ್ಗುರು ಮಲ್ಲಿಕಾರ್ಜುನ್) ನಗರ, ಬೀಡಿ ಲೇಔಟ್‌, ಬಾಷಾನಗರ, ಪಾರ್ವತಮ್ಮ ಕಾಲೊನಿ, ಸಿದ್ದರಾಮೇಶ್ವರ ನಗರ, ಮಂಡಕ್ಕಿ ಬಟ್ಟಿ ಲೇಔಟ್ ಬಡಾವಣೆಗಳಲ್ಲಿ ಚರಂಡಿ ಸಮಸ್ಯೆ ತೀವ್ರವಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಕಂಗೆಟ್ಟುಹೋಗಿದ್ದಾರೆ. 

‘ಬಾಷಾ ನಗರದ 2ನೇ ಕ್ರಾಸ್ ಬಳಿ ಆಗಾಗ ಒಳಚರಂಡಿ ಮುಚ್ಚಳಗಳು ತೆರೆದುಕೊಂಡು ಗಲೀಜು ನೀರು ರಸ್ತೆಯ ಮೇಲೆ ಹರಿಯುತ್ತದೆ. ಮನೆಯಿಂದ ಹೊರಗೆ ಬಂದರೆ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ. ಇದರಿಂದಾಗಿ ನಾವು ಮನೆಗಳಲ್ಲೇ ಬಂಧಿಯಾಗುವಂತಾಗಿದೆ. ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ತಲೆದೋರಿದೆ’ ಎಂದು ಸ್ಥಳೀಯರು ದೂರುತ್ತಾರೆ. 

‘ಸುಸಜ್ಜಿತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿಲ್ಲ. ಮನೆಗಳ ಮುಂದೆ ಚರಂಡಿ ಕಟ್ಟಿಕೊಂಡು ಗಬ್ಬು ನಾರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ’ ಎಂದು ಎಸ್‌ಜೆಎಂ ನಗರದ 2ನೇ ಮೇನ್‌ 2ನೇ ಕ್ರಾಸ್‌ ನಿವಾಸಿಗಳಾದ ರೋಷನ್ ಹಾಗೂ ಅಸ್ಮಾ ಹೇಳುತ್ತಾರೆ. 

ರೋಗ ರುಜಿನಗಳ ಭೀತಿ:  ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರ ಪೈಕಿ ಬಹುಪಾಲು ಜನ ಹೊಟ್ಟೆಪಾಡಿಗಾಗಿ ಕೂಲಿಯನ್ನೇ ಆಶ್ರಯಿಸಿದ್ದಾರೆ. 

‘ಚರಂಡಿ ಹಾಗೂ ಅನೈರ್ಮಲ್ಯದ ಕಾರಣ ಆಗಾಗ ಒಂದಿಲ್ಲೊಂದು ರೋಗಗಳು ಬಾಧಿಸುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಎಡತಾಕಬೇಕು. ದುಡಿದ ಹಣವನ್ನೆಲ್ಲ ಆಸ್ಪತ್ರೆಗಳಿಗೇ ಖರ್ಚು ಮಾಡುವ ಪರಿಸ್ಥಿತಿ ತಲೆದೋರಿದೆ. ಚರಂಡಿ ನೀರಿನ ಕೆಟ್ಟ ವಾಸನೆ, ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದೇವೆ. ಚುನಾವಣೆಯಲ್ಲಿ ಮಾತ್ರ ಪ್ರತ್ಯಕ್ಷರಾಗುವ ಜನಪ್ರತಿನಿಧಿಗಳು ಆ ಬಳಿಕ ಇತ್ತ ತಲೆ ಕೂಡ ಹಾಕುವುದಿಲ್ಲ’ ಎಂದು ಮಹಾವೀರ ನಗರದ ನಿವಾಸಿಗಳಾದ ಜಾಕೀರಾ ಅಬೀ, ಫಾತಿಮಾ ಬಾನು, ರಾಜಾಸಾಬ್ ಹಾಗೂ ಸೈಯೀದಾ ಬಾನು ಆಕ್ರೋಶ ವ್ಯಕ್ತಪಡಿಸಿದರು.

ಜೆಜೆಎಂ ನಳ ಇವೆ, ನೀರಿಲ್ಲ:

ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೊಳೆಗೇರಿಗಳಲ್ಲೂ ಪೈಪ್‌ಲೈನ್‌ ಕಾಮಗಾರಿ ನಡೆಸಿ ನಳ ಅಳವಡಿಸಲಾಗಿದೆ. ಆದರೆ, ನೀರು ಪೂರೈಕೆ ಇನ್ನೂ ಶುರುವಾಗಿಲ್ಲ. ಹಲವೆಡೆ ಪಾಲಿಕೆಯಿಂದ ಪೂರೈಸುತ್ತಿರುವ ನೀರನ್ನೇ ನಿವಾಸಿಗಳು ಕುಡಿಯಲು ಹಾಗೂ ನಿತ್ಯದ ಬಳಕೆಗೆ ಉಪಯೋಗಿಸುತ್ತಿದ್ದಾರೆ.

‘ಪೈಪ್‌ಗಳ ಸೋರಿಕೆಯಿಂದಾಗಿ ಕುಡಿಯುವ ನೀರಿನ ಪೈಪ್‌ಗಳಲ್ಲಿ ಚರಂಡಿ ನೀರು ಸೇರಿಕೊಳ್ಳುತ್ತಿದೆ. ಹೀಗಾಗಿ ಕೆಲವು ನಲ್ಲಿಗಳಲ್ಲಿ ಕೊಳಚೆ ನೀರು ಬರುತ್ತದೆ. ಜೆಜೆಎಂ ಅಡಿ ಅಳವಡಿಸಿರುವ ನಳಗಳಲ್ಲಿ ಆದಷ್ಟು ಶೀಘ್ರವೇ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡರೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಮಹಾವೀರ ನಗರ ಕಾಲೊನಿಯ ಫಾತಿಮಾ ಬಾನು ಒತ್ತಾಯಿಸಿದರು.

‘ವ್ಯವಸ್ಥಿತ ಯೋಜನೆ ರೂಪಿಸುವುದು ಅಗತ್ಯ’

‘ಕೊಳೆಗೇರಿಗಳಲ್ಲಿ ವಾಸಿಸುವ ಸಮಾಜದ ಕಟ್ಟಕಡೆಯ ನಿವಾಸಿಗೂ ಮೂಲಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ. ಕೊಳೆಗೇರಿಗಳಲ್ಲಿ ಸದ್ಯ ಚರಂಡಿ ವ್ಯವಸ್ಥೆಯೇ ಸರಿ ಇಲ್ಲ. ಓಣಿಗಳಲ್ಲಿ ಚರಂಡಿ ನಿರ್ಮಿಸಿದ್ದರೂ, ಅದರೊಳಗೆ ಸಂಗ್ರಹವಾಗುವ ನೀರು ಸರಾಗವಾಗಿ ಹರಿದು ರಾಜಕಾಲುವೆ ಸೇರುತ್ತಿಲ್ಲ. ಇದೇ ಕಾರಣಕ್ಕೆ ಸ್ಲಂಗಳಲ್ಲಿ ಎಲ್ಲೆಂದರಲ್ಲಿ ಗಲೀಜು ನೀರು ನಿಲ್ಲುತ್ತಿದೆ’ ಎನ್ನುತ್ತಾರೆ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಎಸ್‌.ಎಲ್‌. ಆನಂದಪ್ಪ.  ‘ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಬಂದಿದ್ದ ಅನುದಾನವನ್ನು ಆದ್ಯತೆ ಮೇರೆಗೆ ಕೊಳೆಗೇರಿಗಳ ಅಭಿವೃದ್ಧಿಗೆ ಬಳಸಬಹುದಿತ್ತು. ಆ ಮೂಲಕ ಸ್ಲಂ ನಿವಾಸಿಗಳಿಗೆ ಕನಿಷ್ಠ ಮೂಲಸೌಲಭ್ಯ ಕಲ್ಪಿಸಬಹುದಾಗಿತ್ತು. ಸದ್ಯ ಕೊಳಗೇರಿಗಳಲ್ಲಿನ ಚರಂಡಿಗಳಿಂದ ಕಸ, ಕಡ್ಡಿಯನ್ನೂ ಯಾರೂ ತೆಗೆಯುತ್ತಿಲ್ಲ. ಹಾಗಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಚರಂಡಿ ನೀರು ರಾಜಕಾಲುವೆ ಸೇರುವಂತಹ ವ್ಯವಸ್ಥಿತ ಯೋಜನೆ ರೂಪಿಸಿ ಕಾಮಗಾರಿ ಕೈಗೊಳ್ಳಬೇಕು. ಆಗ ಮಾತ್ರ ಈ ಸಮಸ್ಯೆಗೆ ಮುಕ್ತಿ ದೊರೆಯಲಿದೆ’ ಎಂದು ತಿಳಿಸಿದರು.

ವಾರ್ಡ್‌ ವ್ಯಾಪ್ತಿಯ ಕೊಳೆಗೇರಿ ಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಚರಂಡಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಆದಷ್ಟು ಬೇಗ ಚಾಲನೆ ನೀಡಲಾಗುವುದು.
ಹೂರ್ ಬಾನು, ಪಾಲಿಕೆ ಸದಸ್ಯೆ, 12ನೇ ವಾರ್ಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT