ಸಂತೇಬೆನ್ನೂರು: ಸಂತೇಬೆನ್ನೂರು ಗ್ರಾಮವು 16ನೇ ಶತಮಾನದಲ್ಲಿ ಪಾಳೇಗಾರರ ರಾಜಧಾನಿಯಾಗಿತ್ತು ಎಂದು ಜನರಲ್ ಮೆಕೆಂಜಿ ಕೈಫಿಯತ್ನಲ್ಲಿ ದಾಖಲಿಸಿದ್ದಾರೆ. ಗತಕಾಲದ ವೈಭವಕ್ಕೆ ಸಾಕ್ಷಿಯಾಗಿರುವ ಕಲಾತ್ಮಕ ಪುಷ್ಕರಣಿ ಇಂದಿಗೂ ಗಮನ ಸೆಳೆಯುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಪಟ್ಟಣದ ಸ್ವರೂಪ ಪಡೆದಿರುವ ಈ ಗ್ರಾಮದ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಈಡೇರುತ್ತಲೇ ಇಲ್ಲ.

ಪ್ರವಾಸಿ ತಾಣ, ಬಿರುಸಿನ ವ್ಯಾಪಾರ- ವಹಿವಾಟು, ಕಲೆ, ಸಾಹಿತ್ಯ, ಕ್ರೀಡಾ ಕ್ಷೇತ್ರಗಳ ಸಾಧಕರಿಂದಲೂ ಈ ಗ್ರಾಮ ಗುರುತಿಸಿಕೊಂಡಿದೆ. ಅಂತೆಯೇ ಇಲ್ಲಿನ ಸ್ಥಳೀಯ ಸಂಸ್ಥೆಗೆ ಪಟ್ಟಣ ಪಂಚಾಯಿತಿ ಸ್ಥಾನಮಾನ ನೀಡುವಂತೆ ಗ್ರಾಮಸ್ಥರು ದಶಕಗಳಿಂದ ಹೋರಾಟದ ಮೂಲಕವೂ ಗಮನ ಸೆಳೆದಿದ್ದಾರೆ. ಮೇಲ್ದರ್ಜೆಗೆ ಏರಲು ಅಗತ್ಯವಿರುವ ಕನಿಷ್ಠ ಅರ್ಹತೆಗಳನ್ನು ಗ್ರಾಮ ಹೊಂದಿದೆಯಾದರೂ ಬೇಡಿಕೆ ಈಡೇರುತ್ತಿಲ್ಲ.

ಇಲ್ಲಿ ಜನಸಂಖ್ಯೆ 18,000 ದಾಟಿದೆ. 3,000ಕ್ಕೂ ಅಧಿಕ ಮನೆಗಳಿವೆ. ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಗ್ರಾಮದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಅಂತರರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಇದೆಲ್ಲಕ್ಕೂ ಮೂಲ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯಿತಿಗೆ ಅನುದಾನ ಕೊರತೆ ಇದೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮ ಪಂಚಾಯಿತಿಯ ವೆಚ್ಚ ನಿರ್ವಹಣೆಗೆ 15ನೇ ಹಣಕಾಸು ಆಯೋಗದಿಂದ ಜನಸಂಖ್ಯೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಗ್ರಾಮದ ವ್ಯಾಪ್ತಿ ಹೆಚ್ಚುತ್ತಿರುವುದರಿಂದ ನಿರ್ವಹಣೆ ಕಷ್ಟವಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಕೊರತೆ ಇಲ್ಲ. ಆದರೆ, ಕಸ ವಿಲೇವಾರಿ, ಸ್ವಚ್ಛತೆ ನಿರ್ವಹಣೆ ಸಿಬ್ಬಂದಿಗೆ ಸ್ವಂತ ಸಂಪನ್ಮೂಲದಿಂದ ವೇತನ ಭರಿಸಬೇಕಾಗಿದೆ. ಇಲ್ಲಿ 26 ಸದಸ್ಯರನ್ನೊಳಗೊಂಡ ದೊಡ್ಡ ಗ್ರಾಮ ಪಂಚಾಯಿತಿ ಇದೆ ಎನ್ನುತ್ತಾರೆ ಪಿಡಿಒ ಮಾರುತಿ.

ರಾಜ್ಯದಲ್ಲಿ ಸಂತೇಬೆನ್ನೂರು 5ನೇ ದೊಡ್ಡ ಹೋಬಳಿ ಕೇಂದ್ರ. ಶಾಸಕರಾದ ವಡ್ನಾಳ್ ರಾಜಣ್ಣ, ಮಾಡಾಳ್ ವಿರೂಪಾಕ್ಷಪ್ಪ ಅವರ ಅವಧಿಯಲ್ಲಿ ಪಟ್ಟಣ ಪಂಚಾಯಿತಿಗೆ ಮೇಲ್ಜರ್ಜೆಗೇರಿಸಲು ಪ್ರಯತ್ನ ನಡೆದವು. ಸಾಕಾರಗೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಈಗಿನ ಶಾಸಕ ಬಸವರಾಜು ಶಿವಗಂಗಾ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಜನಗಣತಿ ವರದಿ ಪಡೆದು ಶೀಘ್ರವೇ ಸ್ಥಳೀಯ ಸಂಸ್ಥೆಯನ್ನು ಪರಿವರ್ತಿಸಬೇಕು ಎನ್ನುತ್ತಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಸಿದ್ದಪ್ಪ.

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಲು ಕನಿಷ್ಠ 12,000 ಜನಂಖ್ಯೆ ಇರಬೇಕು ಎಂಬ ನಿಯಮ ಇದ್ದುದರಿಂದ ಹಿನ್ನಡೆ ಉಂಟಾಗಿತ್ತು. 2021ರ ಜನಗಣತಿ ವರದಿ ವಿಳಂಬ ಆಗಿರುವುದರಿಂದ ಪರಿವರ್ತನೆ ಪ್ರಕ್ರಿಯೆ ತಡವಾಗಿದೆ. ಜನಗಣತಿ ವರದಿ ದೊರೆತ ಬಳಿಕ ಪಟ್ಟಣ ಪಂಚಾಯಿತಿ ರೂಪುಗೊಂಡು, ಹೆಚ್ಚುವರಿ ಅನುದಾನ ಸಿಗಲಿದೆ. ಆಗ ಅಗತ್ಯ ಸಿಬ್ಬಂದಿ ನೇಮಕ, ಕಸ ವಿಲೇವಾರಿ, ರಸ್ತೆ, ಚರಂಡಿ ಅಭಿವೃದ್ಧಿಗೆ ವೇಗ ಸಿಗುತ್ತದೆ ಎನ್ನುತ್ತಾರೆ ಗ್ರಾಮದ ಮುಖಂಡ ಕೆ.ಬಸವರಾಜ್.

ಗ್ರಾಮದಲ್ಲಿ ನಾಡಕಚೇರಿ, ಪೊಲೀಸ್ ಇನ್ಸ್ಪೆಕ್ಟರ್ ಕಚೇರಿ, ರೈತ ಸಂಪರ್ಕ ಕೇಂದ್ರ, ಸರ್ಕಾರಿ ಪದವಿ ಕಾಲೇಜು, ಕೆಪಿಎಸ್ ಶಾಲೆ, 5 ಪ್ರೌಢಶಾಲೆಗಳು, 8 ಪ್ರಾಥಮಿಕ ಶಾಲೆಗಳು, ಮೌಲಾನಾ ಅಜಾದ್ ಅಲ್ಪಸಂಖ್ಯಾತರ ಶಾಲೆ ಸೇರಿದಂತೆ ಅಂದಾಜು 3,500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳು, ಸಮುದಾಯ ಆರೋಗ್ಯ ಕೇಂದ್ರ, ಬಸ್ ನಿಲ್ದಾಣ ಸೌಲಭ್ಯಗಳಿರುವ ಗ್ರಾಮದ ಸ್ಥಳೀಯ ಸಂಸ್ಥೆಯನ್ನು

ಮೇಲ್ದರ್ಜೆಗೇರಿಸಲು ಚುನಾಯಿತ ಜನಪ್ರತಿನಿಧಿಗಳಿಂದ ಪ್ರಯತ್ನ ನಡೆಯಬೇಕಿದೆ ಎಂಬುದು ಗ್ರಾಮಸ್ಥರ ಕೋರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.