ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಪೊಲೀಸ್‌ ಇಲಾಖೆಗೆ ‘ತುಂಗಾ 2’ ಬಲ

10 ತಿಂಗಳ ಸೇವಾವಧಿಯಲ್ಲಿ 9 ಅಪರಾಧ ಪ್ರಕರಣಗಳ ಆರೋಪಿಗಳ ಬಗ್ಗೆ ಸುಳಿವು
Published 18 ಜುಲೈ 2024, 6:56 IST
Last Updated 18 ಜುಲೈ 2024, 6:56 IST
ಅಕ್ಷರ ಗಾತ್ರ

ದಾವಣಗೆರೆ: ಕೊಲೆ, ಕೊಲೆ ಯತ್ನ, ಕಳವು ಹಾಗೂ ಇನ್ನಿತರ ಅಪರಾಧ ಕೃತ್ಯಗಳನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆಗೆ ಜಿಲ್ಲಾ ಪೊಲೀಸ್‌ ಶ್ವಾನ ದಳಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಶ್ವಾನ ‘ತುಂಗಾ–2’ ಭಾರಿ ಬಲ ನೀಡಿದೆ. 

ಜಿಲ್ಲೆಯಲ್ಲಿ ಎಲ್ಲೇ ಅಪರಾಧ ಕೃತ್ಯ ನಡೆದರೂ, ಕೆಲವೇ ಗಂಟೆಗಳಲ್ಲಿ ತರಬೇತುದಾರರೊಂದಿಗೆ (ಹ್ಯಾಂಡ್ಲರ್‌) ಸ್ಥಳಕ್ಕೆ ಧಾವಿಸುವ ಡಾಬರ್ಮನ್ ತಳಿಯ ಈ ಹೆಣ್ಣು ಶ್ವಾನವು ಆರೋಪಿಗಳ ಪತ್ತೆಗಾಗಿ ತನಿಖಾಧಿಕಾರಿಗಳಿಗೆ ನೆರವು ನೀಡುತ್ತಿದೆ.

2022ರ ಸೆ.30ರಂದು ಗದಗದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ತುಂಗಾ ಜನಿಸಿತ್ತು. 2–3 ತಿಂಗಳ ಮರಿ ಇದ್ದಾಗಲೇ ಅವಳನ್ನು ಜಿಲ್ಲಾ ಶ್ವಾನ ದಳಕ್ಕೆ ಸೇರ್ಪಡೆ ಮಾಡಲಾಗಿದೆ.

2023ರ ಮಾ. 26ರಂದು ಬೆಂಗಳೂರಿಗೆ ತರಬೇತಿಗೆ ಕರೆದೊಯ್ದು, 6 ತಿಂಗಳು ತರಬೇತಿ ಮುಗಿಸಿಕೊಂಡು ಬಂದ ತುಂಗಾ 2023ರ ಸೆ.17ರಿಂದ ಅಪರಾಧ ವಿಭಾಗದಲ್ಲಿ ಸೇವೆ ಪ್ರಾರಂಭಿಸಿದೆ. ಸೇವಾರಂಭದ ಹತ್ತು ತಿಂಗಳಲ್ಲೇ 9 ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸಿದೆ.

ಹರಿಹರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ತುಂಗಾ ಯಶಸ್ವಿಯಾಗಿ ಭೇದಿಸಿತ್ತು. ಅನೈತಿಕ ಸಂಬಂಧದ ಶಂಕೆಯಿಂದ ಹೆಂಡತಿಯ ಕೊಲೆ ಮಾಡಿದ್ದ ಆರೋಪಿಯ ಬಗ್ಗೆ ಖಚಿತ ಸುಳಿವು ನೀಡಿತ್ತು.

ಜನವರಿ 18ರಂದು ಕೆ.ಟಿ.ಜೆ ನಗರ ಠಾಣೆ ವ್ಯಾಪ್ತಿಯ ಫೈನಾನ್ಸ್‌ವೊಂದರಲ್ಲಿ ₹ 10.88 ಲಕ್ಷ ನಗದು ಕಳವು ಮಾಡಲಾಗಿತ್ತು. ಕಳವು ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಬಾರ್‌ವೊಂದರಲ್ಲಿ ಕುಳಿತಿದ್ದ ಆರೋಪಿಯನ್ನು ತುಂಗಾ ಬಾರ್‌ಗೆ ನುಗ್ಗಿ ಪತ್ತೆ ಹಚ್ಚಿತ್ತು.

ಏಪ್ರಿಲ್‌ 22ರಂದು ಬಸವನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಪ್ರಕರಣದ ಆರೋಪಿಯನ್ನೂ ತುಂಗಾ ಪತ್ತೆ ಮಾಡಿದ್ದಳು. ಕೆ.ಟಿ.ಜೆ ನಗರ ಠಾಣೆಯ ಮನೆಗಳ್ಳತನ ಪ್ರಕರಣದಲ್ಲೂ ಬಾರ್‌ನಲ್ಲಿ ಮದ್ಯದ ನಶೆಯಲ್ಲಿದ್ದ ಆರೋಪಿಯ ಚಲನಲನದ ಬಗ್ಗೆ ಈಕೆ ಸುಳಿವು ನೀಡಿದ್ದಳು.

‘ತುಂಗಾ’ ಅತೀ ಕಡಿಮೆ ಅವಧಿಯಲ್ಲೇ 4 ಕೊಲೆ ಪ್ರಕರಣ, 4 ಕಳವು ಪ್ರಕರಣ, 1 ಕೊಲೆ ಯತ್ನ ಪ್ರಕರಣಗಳನ್ನು ಭೇದಿಸಿದೆ ಎಂದು ತರಬೇತುದಾರರಾದ (ಹ್ಯಾಂಡ್ಲರ್‌) ಶಫೀವುಲ್ಲಾ ಎಂ.ಡಿ., ದರ್ಗಾ ನಾಯ್ಕ ಹೆಮ್ಮೆಯಿಂದ ಹೇಳಿಕೊಂಡರು.

ಅಪರಾಧ ವಿಭಾಗದಲ್ಲೇ ಕಾರ್ಯ ನಿರ್ವಹಿಸುತ್ತಿರುವ ಶ್ವಾನ ‘ತಾರಾ’ ಸಹ 4ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸಿದೆ. ಪ್ರವೀಣ್ ಎ. ಹಾಗೂ ಚನ್ನೇಗೌಡ ಪಾಟೀಲ ಅದರ ತರಬೇತುದಾರರಾಗಿದ್ದಾರೆ.

ಜಿಲ್ಲಾ ಪೊಲೀಸ್‌ ಶ್ವಾನ ದಳದಲ್ಲಿ ಸಿಂಧೂ ಹಾಗೂ ದೃತಿ ಹೆಸರಿನ ಇನ್ನೆರಡು ಶ್ವಾನಗಳು ಬಾಂಬ್‌ ಪತ್ತೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಜಿಲ್ಲೆಯ ಸಂತೇಬೆನ್ನೂರಿನಲ್ಲಿ ಸೋಮವಾರ ರಾತ್ರಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ತುಂಗಾ–2 ಶ್ವಾನವು ಪತ್ತೆ ಹಚ್ಚಿದೆ. ಧಾರಾಕಾರ ಮಳೆಯಲ್ಲೇ ತುಂಗಾ-2 ಶ್ವಾನವು 8 ಕಿ.ಮೀ. ಕ್ರಮಿಸಿ ಆರೋಪಿಯ ಖಚಿತ ಸುಳಿವು ನೀಡಿತ್ತು. ಇದರಿಂದಾಗಿ ಘಟನೆ ನಡೆದ 6 ಗಂಟೆಯಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿ, ಸಂಭವಿಸುತ್ತಿದ್ದ ಮತ್ತೊಂದು ಕೊಲೆಯನ್ನೂ ತಡೆದಿದ್ದರು.

ಈ ಪ್ರಕರಣದಲ್ಲಿ ತುಂಗಾ–2 ಶ್ವಾನವು ತೋರಿದ ಚಾತುರ್ಯದ ಬಗ್ಗೆ ಪೊಲೀಸರು ಹಾಗೂ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ತುಂಗಾ–2
ತುಂಗಾ–2
ತುಂಗಾ–2
ತುಂಗಾ–2
ಚಳಿ ಮಳೆ ಬಿಸಿಲು ಕತ್ತಲು... ಎಂಥದ್ದೇ ವಾತಾವರಣ ಇದ್ದರೂ ‘ವಾಸನೆ’ ಹಿಡಿದು ಆರೋಪಿಗಳತ್ತ ಹೆಜ್ಜೆ ಹಾಕುವಲ್ಲಿ ತುಂಗಾ–2 ಶ್ವಾನವು ಇದುವರೆಗೂ ಹಿಂದೆ ಬಿದ್ದಿಲ್ಲ
ಶಫೀವುಲ್ಲಾ ಎಂ.ಡಿ. ದರ್ಗಾನಾಯ್ಕ ತರಬೇತುದಾರರು
650 ಪ್ರಕರಣದಲ್ಲಿ ‘ತುಂಗಾ’ ಸಾಧನೆ
ಜಿಲ್ಲಾ ಪೊಲೀಸ್‌ ಶ್ವಾನ ದಳದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಶ್ವಾನ ‘ತುಂಗಾ’ ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದಿತ್ತು. 2011ರಲ್ಲಿ ಅಪರಾಧ ವಿಭಾಗಕ್ಕೆ ಸೇರಿದ್ದ ಡಾಬರ್ಮನ್ ಫಿಂಚರ್ ತಳಿಯ ತುಂಗಾ ತನ್ನ ಸೇವಾವಧಿಯಲ್ಲಿ 71 ಕೊಲೆ ಪ್ರಕರಣ 35ಕ್ಕೂ ಹೆಚ್ಚು ಕಳವು ಪ್ರಕರಣಗಳನ್ನು ಭೇದಿಸಿತ್ತು. 650ಕ್ಕೂ ಹೆಚ್ಚು ಪ್ರಕರಣಗಳಲ್ಲಿ ತನ್ನ ಚಾತುರ್ಯ ಪ್ರದರ್ಶಿಸಿತ್ತು. 2019ರಲ್ಲಿ ಸೂಳೆಕೆರೆ ಬಳಿ ನಡೆದಿದ್ದ ಕೊಲೆ ಪ್ರಕರಣದಲ್ಲಿ 11 ಕಿ.ಮೀ. ಓಡಿ ಆರೋಪಿಯನ್ನು ಗುರುತಿಸಿತ್ತು. 2018ರಲ್ಲಿ ನ್ಯಾಮತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜನರ ಮಧ್ಯದಲ್ಲೇ ಇದ್ದ ಆರೋಪಿಯನ್ನು ಗುರುತಿಸಿತ್ತು. ‘ತುಂಗಾ’ ಭೇದಿಸಿದ 2 ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಹಾಗೂ 4 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿದೆ. 2022ರಲ್ಲಿ ಅನಾರೋಗ್ಯದಿಂದ ತುಂಗಾ ಮೃತಪಟ್ಟಿತ್ತು. ಸೇವೆಗೆ ಸೇರಿದ ಮತ್ತೊಂದು ಶ್ವಾನಕ್ಕೆ ಅದರ ಸ್ಮರಣಾರ್ಥ ತುಂಗಾ– 2 ಎಂಬ ಹೆಸರಿಡಲಾಗಿದ್ದು ಆ ಹೆಸರಿನ ಈ ಶ್ವಾನವೂ ಸಾಧನೆಯ ಹಾದಿಯಲ್ಲೇ ಮುನ್ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT