ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

270ಕ್ಕೂ ಹೆಚ್ಚು ನಕಲಿ ಖಾತೆ ಸೃಷ್ಟಿಸಿ ಅವ್ಯವಹಾರ: ಪೊಲೀಸ್ ಬಲೆಗೆ ಸೈಬರ್ ವಂಚಕರು

ದೇಶದ ವಿವಿಧ ಬ್ಯಾಂಕುಗಳ 270ಕ್ಕೂ ಹೆಚ್ಚು ನಕಲಿ ಖಾತೆ ಸೃಷ್ಟಿಸಿ ಅವ್ಯವಹಾರ
Published 16 ಜುಲೈ 2024, 21:08 IST
Last Updated 16 ಜುಲೈ 2024, 21:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸೈಬರ್ ವಂಚಕರ ಜಾಲವನ್ನು ಪತ್ತೆ ಮಾಡಿರುವ ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆ ಪೊಲೀಸರು, ದೆಹಲಿಯಲ್ಲಿ ಇಬ್ಬರು ಮತ್ತು ಮುಂಬೈಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೊಬೈಲ್, ಲ್ಯಾಪ್‌ಟಾಪ್ ಸೇರಿ ಕೆಲ  ದಾಖಲೆ ವಶಪಡಿಸಿಕೊಂಡು, ಕೆಲ ಬ್ಯಾಂಕ್‌ಗಳ ಖಾತೆಗಳನ್ನು ನಿಷ್ಕ್ರಿಯಗೊಳಿಸಿ ₹ 60 ಲಕ್ಷ ಬಳಕೆಯನ್ನು ತಡೆ ಹಿಡಿದಿದ್ದಾರೆ.

ದೆಹಲಿಯ ನಿಖಿಲಕುಮಾರ್‌ ರೌನಿ ಮತ್ತು ಸಚಿನ್‌ ಬೋಲಾ ಹಾಗೂ ಮುಂಬೈಯ ನಿಗಮ್ ಬಂಧಿತ ಆರೋಪಿಗಳು. ಮೂವರನ್ನು ಹುಬ್ಬಳ್ಳಿಗೆ ಕರೆ ತಂದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

‘ಇಬ್ಬರು ಆರೋಪಿಗಳು ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದು, ಡಾರ್ಕ್‌ನೆಟ್‌ಲ್ಲಿ ಸಕ್ರಿಯರಾಗಿ ಕೋಡಿಂಗ್ ಮತ್ತು ಡಿ-ಕೋಡಿಂಗ್ ಮಾಡುವಲ್ಲಿ ಪರಿಣತರು. ಈ ಹಿಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡಿ, ಹೊರಬಂದವರು. ಇನ್ನೊಬ್ಬ ಆರೋಪಿ ಬಟ್ಟೆ ವ್ಯಾಪಾರಿ. ಈ ಮೂವರು ಕರ್ನಾಟಕ ಸೇರಿ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ತಮಿಳುನಾಡು, ದೆಹಲಿ ಹಾಗೂ ಇತರ ರಾಜ್ಯಗಳಲ್ಲಿ ಸಂಪರ್ಕ ಜಾಲ ವಿಸ್ತರಿಸಿಕೊಂಡು, ಆನ್‌ಲೈನ್ ಮೂಲಕ ವಂಚಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ಹಂತದ ತನಿಖೆ ಪ್ರಕಾರ, ಸಾರ್ವಜನಿಕರನ್ನು ವಂಚಿಸಿ ಗಳಿಸಿದ ಹಣವನ್ನು ಆರೋಪಿಗಳು ಸರ್ಕಾರಿ ಮತ್ತು ಖಾಸಗಿಯ ವಿವಿಧ ಬ್ಯಾಂಕ್‌ಗಳ 37 ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಅದನ್ನು ದೇಶದ ವಿವಿಧ ಬ್ಯಾಂಕ್‌ಗಳಲ್ಲಿನ  270ಕ್ಕೂ ನಕಲಿ ಖಾತೆಗೆ ವರ್ಗಾಯಿಸಿಕೊಂಡು, ಡ್ರಾ ಮಾಡಿಕೊಳ್ಳುತ್ತಿದ್ದರು. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಅಂದಾಜು ನೂರಾರು ಕೋಟಿಗೂ ಅಧಿಕ ಹಣ ವರ್ಗಾವಣೆಯಾದ ಬಗ್ಗೆ ಶಂಕೆಯಿದೆ.

‘ಕೆಲ‌ ದಿನಗಳ ಹಿಂದೆ ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಆನ್‌ಲೈನ್ ವಂಚನೆ ಕುರಿತು ಪ್ರಕರಣ ದಾಖಲಾಗಿತ್ತು. ಅದರ ಜಾಡು ಹಿಡಿದ ಪೊಲೀಸರಿಗೆ, ವಂಚಕರ ಜಾಲ ದೇಶದೆಲ್ಲೆಡೆ ವಿಸ್ತರಿಸಿರುವುದು ಗೊತ್ತಾಯಿತು. ಹಣ ವರ್ಗಾವಣೆಯಾದ ಬ್ಯಾಂಕ್, ಸ್ಥಳ, ಖಾತೆ ವಿವರ, ವಿಳಾಸ, ಮೊಬೈಲ್ ಸಂಪರ್ಕ ಸಂಖ್ಯೆ ಮಾಹಿತಿ ಕಲೆಹಾಕಿ, ವಿಚಾರಣೆ ತೀವ್ರಗೊಳಿಸಿದ್ದರು. ಆಗ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ಸಕಾರಣವಿಲ್ಲದೆ ಹಣ ವಹಿವಾಟು ಆಗಿರುವುದು ಕಂಡು ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರ್ ವಂಚನೆಯ ಆರೋಪಿಗಳ ಬಂಧನವಾಗುವುದು ಅಪರೂಪ. ನಮ್ಮ ಪೊಲೀಸರು ಮೊಬೈಲ್ ನೆಟ್‌ವರ್ಕ್ ಜಾಡು ಹಿಡಿದು ಮೂರು–ನಾಲ್ಕು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ
–ಎನ್. ಶಶಿಕುಮಾರ್ ಪೊಲೀಸ್ ಕಮಿಷನರ್ ಹು-ಧಾ ಮಹಾನಗರ

ಯಾರದ್ದೋ ಖಾತೆಗೆ ಇನ್ಯಾರದ್ದೋ ಮೊಬೈಲ್ ನಂಬರ್!

ಆರೋಪಿಗಳು ಯಾರದ್ದೋ ಹೆಸರಲ್ಲಿರುವ ಬ್ಯಾಂಕ್‌ ಖಾತೆಗೆ ಇನ್ಯಾರದ್ದೋ ಹೆಸರಲ್ಲಿ ಇರುವ ಮೊಬೈಲ್‌ ನಂಬರ್‌ ಜೋಡಣೆ ಮಾಡಿದ್ದರು. ಬ್ಯಾಂಕ್‌ ಖಾತೆ ವಿಳಾಸ ಅಸ್ಸಾಂ ರಾಜ್ಯದ್ದಾಗಿದ್ದರೆ ಮೊಬೈಲ್ ಸಂಖ್ಯೆ ವಿಳಾಸ ಕರ್ನಾಟಕದ್ದಾಗಿದೆ. ಹೀಗೆ ಬೇರೆ ಬೇರೆ ರಾಜ್ಯಗಳ ನಿವಾಸಿಗಳ ಹೆಸರಲ್ಲಿ ಬ್ಯಾಂಕ್‌ಗಳಲ್ಲಿ ನಕಲಿ ಖಾತೆ ತೆರೆದು ಹಣ ವರ್ಗಾಯಿಸಿಕೊಂಡಿರುವುದು ಗೊತ್ತಾಗಿದೆ. 270ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳಿಂದ ಹಣ ವಹಿವಾಟು ನಡೆದಿದೆ. ಹೀಗಾಗಿ ಮೊತ್ತದ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ತನಿಖೆ ನಡೆದಿದೆ’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT