ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಿಬಿಸಿಲು; ಕೃಷಿ ಕಾರ್ಯಕ್ಕೆ ತೊಡಕು

ಜಮೀನಿಗೆ ತೆರಳಲಾಗದೆ ರೈತರಿಗೆ ಸಮಸ್ಯೆ; ಅಳಿದುಳಿದ ಬೆಳೆ ರಕ್ಷಣೆಯೇ ಸವಾಲು
Published 4 ಮೇ 2024, 8:11 IST
Last Updated 4 ಮೇ 2024, 8:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಧಗೆ ಹೆಚ್ಚುತ್ತಿದೆ. ಇದರಿಂದ ಹೊಲದಲ್ಲಿ ಅಳಿದುಳಿದ ಬೆಳೆ ಕಮರುತ್ತಿದೆ. ಅತಿ ಬಿಸಿಲಿನಿಂದ ಬೆಳೆ ರಕ್ಷಣೆ ಜೊತೆಗೆ ಇನ್ನಿತರ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ತೊಡಕಾಗಿದೆ.

ಕಳೆದ ವರ್ಷ ಮಳೆ ಕೈಕೊಟ್ಟ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ಹಿಂಗಾರು ಬೆಳೆ ಕೈಹಿಡಿಯಲಿಲ್ಲ ಎಂಬ ಕೊರಗು ಇದೆ. ಮಳೆ ಇಲ್ಲದೆ ಬಾಡಿದ ಬೆಳೆ ಕಿತ್ತು, ಕೆಲ ರೈತರು ಭೂಮಿ ಹದಗೊಳಿಸಿದ್ದಾರೆ; ಇನ್ನೂ ಕೆಲವರು ಹದಗೊಳಿಸಬೇಕಿದೆ. ಉಳಿದ ಬೆಳೆಯನ್ನಾದರೂ ರಕ್ಷಿಸಿಕೊಳ್ಳಬೇಕಿದ್ದು, ತೀವ್ರ ಗತಿಯಲ್ಲಿ ಏರುತ್ತಿರುವ ಬಿಸಿಲು ಇದಕ್ಕೆ ಆಸ್ಪದ ನೀಡುತ್ತಿಲ್ಲ. 

‘ಕೃಷಿ ಚಟುವಟಿಕೆ ಕೈಗೊಳ್ಳಲು ಬೆಳಿಗ್ಗೆ ಹಾಗೂ ಸಂಜೆ ಹೊಲಕ್ಕೆ ಹೋಗಬೇಕು. ಬಿಸಿಲಿದ್ದಾಗ ಕೆಲಸ ಮಾಡಲು ಆಗಲ್ಲ. ನಸುಕಿನ 5ಕ್ಕೆ ಹೊಲಕ್ಕೆ ಹೋದರೆ, ಮಧ್ಯಾಹ್ನ 12 ಗಂಟೆಗೆ ಸುಸ್ತಾಗಿ, ವಿಶ್ರಾಂತಿ ಪಡೆಯಬೇಕು. ಸಂಜೆ ಹೆಚ್ಚು ಸಮಯ ಕೆಲಸ ಮಾಡಲು ಆಗಲ್ಲ. ಸುಡು ಬಿಸಿಲಲ್ಲಿ ಕೆಲಸ ಮಾಡಿದರೆ ಆರೋಗ್ಯ ಹಾಳಾಗುತ್ತದೆ’ ಎಂದು ಅಗಡಿಯ ರೈತ ಬಸಯ್ಯ ಮಂಟೆಯ್ಯನವರ ತಿಳಿಸಿದರು. 

‘8 ಎಕರೆಯಲ್ಲಿ ಕಬ್ಬು ಬಿತ್ತನೆ ಮಾಡಿದ್ದೆ. ಬೆಳೆ ಕೈಸೇರಲು ಇನ್ನೂ 6 ತಿಂಗಳು ಬೇಕಿದೆ. ಈ ಮೊದಲು 20 ದಿನಕ್ಕೆ ನೀರು ಹಾಯಿಸಬೇಕಿತ್ತು. ಈಗ 10 ದಿನದೊಳಗೇ ನೀರು ಹಾಯಿಸಬೇಕಿದೆ. ಬೋರ್‌ವೆಲ್ ನೀರು ಸಹ ಕಡಿಮೆಯಾಗಿದೆ. ಎಷ್ಟೇ ನೀರು ಹಾಯಿಸಿದರೂ, ಕಬ್ಬು ಬಾಡುತ್ತಿದೆ ಹಾಗೂ ಬೆಳವಣಿಗೆ ಕುಂಟಿತವಾಗುತ್ತಿದೆ. ನಮ್ಮ ಊರಿನಲ್ಲಿ ಹಲವರು ಬೆಳೆದ ತರಕಾರಿ ಬೆಳೆಗಳ ಪರಿಸ್ಥಿತಿಯೂ ಹೀಗೆಯೇ ಇದೆ. ಇಳುವರಿ ಕಡಿಮೆಯಾಗುವ ಆತಂಕವಿದೆ’ ಎಂದು ಅವರು ತಿಳಿಸಿದರು.

‘ರೈತರು ಸದ್ಯಕ್ಕಂತೂ ಹೊಲಕ್ಕೇ ಹೋಗುವಂತಿಲ್ಲ. ಅಷ್ಟು ಬಿಸಿಲಿದೆ. ಬಿರು ಬಿಸಿಲಿಗೆ ಭೂಮಿ ಬಿಸಿಯಾಗಿ, ಒಂದು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಮೂಲಂಗಿ, ಮಂತ್ಯ, ಸಬ್ಸೀಗೆ ಬೀಜ ಹುಟ್ಟಲೇ ಇಲ್ಲ. ಎಲ್ಲವನ್ನೂ ತೆರವು ಮಾಡಿ, ಮಳೆಗಾಗಿ ಕಾಯುತ್ತಿರುವೆ. ಮುಂಗಾರಿನ ಆರಂಭದಲ್ಲಿ ಎರಡು ಮಳೆ ಚೆನ್ನಾಗಾದರೆ ಹೆಸರು ಬಿತ್ತನೆ ಮಾಡುವೆ’ ಎಂದು ಗಾಮನಗಟ್ಟಿಯ ರೈತ ಬಸವರಾಜ ಶಿಗ್ಗಾವಿ ಹೇಳಿದರು. 

ಹೈನುಗಾರಿಕೆಗೂ ಹೊಡೆತ

‘ಮೂರು ಆಕಳು ಎರಡು ಎತ್ತು ಸಾಕಿದ್ದೇನೆ. ಬಿಸಿಲಿಗೆ ಆಕಳುಗಳು ಬಳಲುವುದರಿಂದ ಹಾಲೂ ನೀಡುವ ಪ್ರಮಾಣ ಸಹ ಕಡಿಮೆ ಆಗಿದೆ. ಈ ಮೊದಲು ದಿನಕ್ಕೆ 4 ಲೀಟರ್‌ ಹಾಲು ನೀಡುತ್ತಿದ್ದ ಆಕಳೊಂದು ಸದ್ಯ 2.5 ಲೀಟರ್‌ ಅಷ್ಟೇ ನೀಡುತ್ತಿದೆ’ ಎಂದು ರೈತ ಬಸಯ್ಯ ಮಂಟೆಯ್ಯನವರ ತಿಳಿಸಿದರು. ‘ಕೊಟ್ಟಿಗೆಯಲ್ಲಿ ಧಗೆ ಹೆಚ್ಚಿರುವುದದರಿಂದ ಎತ್ತುಗಳನ್ನು ಹೊಲದಲ್ಲೇ  ಕಟ್ಟಿಹಾಕುತ್ತೇವೆ. ಮೇವು ನೀರಿನ ಸಂಗ್ರಹ ಇದ್ದು ಈಗ ಅಷ್ಟೇನೂ ಸಮಸ್ಯೆ ಇಲ್ಲ. ಬಿಸಿಲಿನ ಕಾರಣಕ್ಕೆ ಕೂಲಿ ಕಾರ್ಮಿಕರೂ ಕೆಲಸಕ್ಕೆ ಬರುತ್ತಿಲ್ಲ’ ಎಂದು ಸಮಸ್ಯೆ ಬಿಚ್ಚಿಟ್ಟರು. 

ಮಾವು ಸಪೋಟಾ ಬೆಳೆಗೆ ಹಾನಿ 

‘ಅತಿಯಾದ ಬಿಸಿಲಿನಿಂದ ಮಾವಿನಕಾಯಿ ಸಪೋಟಾ ಹೂವು ಕಾಯಿಗಳು ಉದುರುತ್ತಿವೆ. ಬೆಳೆ ಮಾರಾಟ ಸಂಬಂಧ ಕಂಪನಿಯೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೆ. ಉತ್ತಮ ಇಳುವರಿ ಸಿಗದೆ ಅವರಿಗೂ ನಷ್ಟವಾಗಿದೆ. ಲಾಭವಾಗಿದ್ದರೆ ಮುಂದಿನ ಬಾರಿ ನಮಗೂ ಹೆಚ್ಚು ದರ ನೀಡುತ್ತಿದ್ದರು’ ಗಾಮನಗಟ್ಟಿ ರೈತ ಬಸವರಾಜ ಮನಗುಂಡಿ ಹೇಳಿದರು. ‘ಹೊಲದಲ್ಲಿ  ಶೇ 25ರಷ್ಟು ಮಾವು ಸಪೋಟಾ ಬೆಳೆ ಇದೆ. ಬಿಸಿಲಿಗೆ ಸುಟ್ಟ ಹಣ್ಣುಗಳು ವ್ಯರ್ಥವಾಗುತ್ತಿವೆ. ಹಣ್ಣುಗಳ ಗಾತ್ರವೂ ಕಡಿಮೆಯಾಗಿದೆ. ಈಗಾಗಲೇ ಈರುಳ್ಳಿ ಬೆಳೆ ಸಂಪೂರ್ಣ ನಷ್ಟವಾಗಿದೆ. ನಂತರ ಹಾಕಿದ್ದ ಪಾಲಕ್‌ ಸಹ ಸೊರಗಿದೆ. ಅಗತ್ಯವಿರುವಷ್ಟು ಮಳೆಯಾದರೆ ಒಣಬೇಸಾಯ ತೋಟಗಾರಿಕೆ ಬೆಳೆ ಬೆಳೆಯುವ ಜಮೀನು ತಂಪು ಹಿಡಿದಿಡುತ್ತದೆ. ಇಲ್ಲದಿದ್ದರೆ ನೀರು ಹಾಯಿಸಲು ಮಾಡಬೇಕಾದ ಖರ್ಚು ರೈತರಿಗೆ ಹೊರೆಯಾಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT