ವಿಮಾನ ನಿಲ್ದಾಣ ಸ್ಥಾಪನೆ
1954ರ ಪೂರ್ವದಲ್ಲಿ ಬಾಂಬೆ ಪ್ರಾಂತದ ಭಾಗವಾಗಿದ್ದ ಹುಬ್ಬಳ್ಳಿಯು ರಾಜ್ಯಗಳ ಪುನರವಿಂಗಡನೆ ಕಾಯ್ದೆ ಜಾರಿಯಾದ ಬಳಿಕ ಈ ಕಡೆಗೆ ಬಂತು. ಈ ಸಂದರ್ಭದಲ್ಲಿಯೇ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವೊಂದನ್ನು ಸ್ಥಾಪಿಸಬೇಕೆನ್ನುವ ವಿಚಾರ ಅಧಿಕಾರಿಗಳ ಮಟ್ಟದಲ್ಲಿ ಮೊಳಕೆ ಒಡೆಯಿತು. 1974ರಲ್ಲಿ ವಿಮಾನ ನಿಲ್ದಾಣಕ್ಕಾಗಿ ಒಟ್ಟು 588 ಎಕರೆ ಸ್ವಾಧೀನ ಮಾಡಿಕೊಂಡು, ರಾಜ್ಯ ಲೋಕೋಪಯೋಗಿ ಇಲಾಖೆಯು ವಿಮಾನ ನಿಲ್ದಾಣ ನಿರ್ಮಾಣ ಮಾಡಿತು. 1996 ರಲ್ಲಿ ವಿಮಾನ ನಿಲ್ದಾಣಗಳ ಪ್ರಾಧಿಕಾರವು ತನ್ನ ವಶಕ್ಕೆ ಪಡೆಯಿತು. 2003ರಲ್ಲಿ ಏರ್ ಡೆಕ್ಕನ್ ವಿಮಾನ ಕಂಪೆನಿಯು ಸೇವೆ ಆರಂಭಿಸಿತು. ಆನಂತರ ಕಿಂಗ್‌ಫಿಶರ್ ಕಂಪನಿಯು ಬೆಂಗಳೂರು–ಮುಂಬೈ ವಯಾ ಹುಬ್ಬಳ್ಳಿ ವಿಮಾನಸೇವೆ ಆರಂಭಿಸಿತು. 2014–2019ರ ಮಧ್ಯೆ ಸ್ಪೈಸ್‌ಜೆಟ್ ಕಂಪೆನಿಯ ವಿಮಾನಗಳು ಸಂಚಾರಸೇವೆ ನೀಡಿದವು. ರನ್‌ವೇ ದುರಸ್ತಿ ಕಾರಣದಿಂದ ವಿಮಾನ ಸಂಚಾರ ಸೇವೆ ಎಲ್ಲವೂ ಸ್ಥಗಿತವಾದವು. 2018 ರಲ್ಲಿ ಇಂಡಿಗೋ ವಿಮಾನ ಕಂಪನಿಯು ಸೇವೆ ಆರಂಭಿಸಿ, ಮುಂದುವರಿಸಿಕೊಂಡು ಹೋಗುತ್ತಿದೆ. ಪ್ರತಿದಿನ ಐದು ಆಗಮನ ಮತ್ತು ಐದು ನಿರ್ಗಮನ ವಿಮಾನಗಳಿವೆ. ರಾಜ್ಯ ಸರ್ಕಾರವು ಒಟ್ಟು 615 ಎಕರೆ ಭೂಮಿಯನ್ನು ಎಎಐಗೆ ಹಸ್ತಾಂತರಿಸಿದೆ.