ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ನಿರ್ವಹಣೆಯಿಲ್ಲದೆ ಸೊರಗಿದ ಬಸ್ ನಿಲ್ದಾಣಗಳು

Published : 22 ಜುಲೈ 2024, 6:10 IST
Last Updated : 22 ಜುಲೈ 2024, 6:10 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿನ ಗ್ರಂಥಾಲಯ ಬಾಗಿಲು ಮುಚ್ಚಿದೆ –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿನ ಗ್ರಂಥಾಲಯ ಬಾಗಿಲು ಮುಚ್ಚಿದೆ –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ನವೀಕರಣ ಕಾಮಗಾರಿ ಪ್ರಗತಿಯಲ್ಲಿದೆ –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ನವೀಕರಣ ಕಾಮಗಾರಿ ಪ್ರಗತಿಯಲ್ಲಿದೆ –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ಹೆಸರು ಮಾತ್ರ ಹೊಸ ಬಸ್ ನಿಲ್ದಾಣ
ಗೋಕುಲ ರಸ್ತೆಯಲ್ಲಿನ ‘ಹೊಸ ಬಸ್ ನಿಲ್ದಾಣ’ ನಿರ್ಮಾಣವಾಗಿ ಎರಡು ದಶಕಗಳೇ ಕಳೆದರೂ ಈಗಲೂ ಅದು ಹೆಸರಿಗೆ ಹೊಸ ಬಸ್ ನಿಲ್ದಾಣವೇ. ಸೌಕರ್ಯಗಳು ಮಾತ್ರ ಗಬ್ಬೆದ್ದಿವೆ. ನಿತ್ಯ 1600ಕ್ಕೂ ಅಧಿಕ ಟ್ರಿಪ್ ಇಲ್ಲಿಂದ ನಿರ್ವಹಣೆ ಮಾಡಲಾಗುತ್ತದೆ. ಬಸ್ ಪ್ರವೇಶ ಮತ್ತು ನಿರ್ಗಮನಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಅಗತ್ಯದಷ್ಟು ಪ್ಲಾಟ್‌ಫಾರ್ಮ್‌ಗಳೂ ಇಲ್ಲ. ದಿನದ 24 ಗಂಟೆಯೂ ಕಾರ್ಯಾಚರಿಸುವ ಬಸ್ ನಿಲ್ದಾಣಕ್ಕೆ ಭದ್ರತಾ ಸಿಬ್ಬಂದಿ ಕೊರತೆ ಇದೆ. ಸಾಕಷ್ಟು ನೀರು ಲಭ್ಯವಿಲ್ಲ. ಕಸ ವಿಲೇವಾರಿ ಅಸಮರ್ಪಕವಾಗಿದೆ. ಚಾವಣಿ ಸೋರುತ್ತಿದೆ. ಶೌಚಾಲಯದ ಚರಂಡಿಗಳು ಕಟ್ಟಿಕೊಂಡಿದ್ದು ಕೊಳಚೆ ನೀರು ಆವರಣದಲ್ಲಿ ಹರಿದು ವಾಸನೆ ಹರಡಿದೆ. ಗ್ರಂಥಾಲಯ ತೆರೆಯುವುದೇ ಇಲ್ಲ. ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತದೆ. ತಾಯಂದಿರು ಮಗುವಿಗೆ ಎದೆಹಾಲು ಕುಡಿಸಲು ಕೊಠಡಿ ಇದ್ದರೂ ಅದಕ್ಕೆ ಬಾಗಿಲೇ ಇಲ್ಲ. ಹೋಟೆಲ್‌ಗಳಲ್ಲಿ ಸ್ವಚ್ಛತೆ ಇಲ್ಲ ದರ ಮಾತ್ರ ದುಪ್ಪಟ್ಟು. ರಾತ್ರಿಯಾದರೆ ಕುಡುಕರ ಹಾವಳಿ. ಬೈಕ್ ಪಾರ್ಕಿಂಗ್ ಜಾಗದಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತದೆಯಾರೂ ಅದಕ್ಕೆ ಭದ್ರತೆ ಇಲ್ಲ. ಐದಾರು ವರ್ಷಗಳಿಂದ ನೇಮಕಾತಿ ನಡೆಯದ ಕಾರಣ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಗೆ ಕಾರ್ಯಭಾದ ಹೆಚ್ಚಿದೆ. ಇನ್ನಷ್ಟು ಸಾರಿಗೆ ನಿಯಂತ್ರಕರ ಅಗತ್ಯ ನಿಲ್ದಾಣಕ್ಕಿದೆ. ಸಿಬ್ಬಂದಿಗಾಗಿ ಇರುವ ವಿಶ್ರಾಂತಿ ಕೊಠಡಿಗೆ ಹೋದರೆ ಖಂಡಿತವಾಗಿಯೂ ವಿಶ್ರಾಂತಿ ಸಿಗುವುದಿಲ್ಲ. ಅಲ್ಲಿ ಸ್ವಚ್ಛತೆ ಇಲ್ಲ ಫ್ಯಾನ್ ಇಲ್ಲ ನೀರು ಇಲ್ಲ. ಇದು ದೂರದ ಊರುಗಳಿಂದ ಬಸ್ ಚಲಾಯಿಸಿಕೊಂಡು ಬರುವ ಚಾಲಕರಿಗೆ ತಲೆ ನೋವಾಗಿದೆ. ನವೀಕರಣ: ‘ಈ ನಿಲ್ದಾಣವನ್ನು ₹23 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ತಗಡಿನ ಚಾವಣಿ ಮಾಡುವುದರಿಂದ ಸೋರುವ ಸಮಸ್ಯೆ ಕೊನೆಗಾಣಲಿದೆ. ಹೆಚ್ಚುವರಿಯಾಗಿ ಹೊಸ ಶೌಚಾಲಯ ನಿರ್ಮಿಸಲಾಗುವುದು. ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಒಳ್ಳೆಯ ಆಸನಗಳು ಡಿಜಿಟಲ್ ಬೋರ್ಡ್ ಅಳವಡಿಸಲಾಗುವುದು. ಇದೀಗ 425 ಹೊಸ ಬಸ್‌ಗಳು ಸಿಕ್ಕಿವೆ. ಕಾರ್ಯಾಚರಣೆ ಇನ್ನಷ್ಟು ಸಲೀಸಾಗಲಿದೆ’ ಎಂದು ರಾಮನಗೌಡರ ಹೇಳಿದರು.
ಹೊಸ ಬಸ್‌ ನಿಲ್ದಾಣ; ಆವರಣ ಗುಂಡಿಮಯ
ಧಾರವಾಡ: ನಗರದ ಹೊಸ ಬಸ್‌ (ಎನ್‌ಡಬ್ಲುಕೆಆರ್‌ಟಿಸಿ) ನಿಲ್ದಾಣ ಆವರಣದ ಒಂದು ಭಾಗದಲ್ಲಿ ಡಾಂಬರು ಹಾಳಾಗಿ ದೊಡ್ಡ ಗುಂಡಿಗಳಾಗಿವೆ. ಗುಂಡಿಮಯ ಆವರಣದಲ್ಲೇ ಪ್ರಯಾಣಿಕರು ಬಸ್‌ಗಳು ಓಡಾಡಬೇಕಾದ ಸ್ಥಿತಿ ಇದೆ. ಡಾಂಬರು ಹಾಳಾಗಿರುವ ಭಾಗದಲ್ಲಿ ಜೆಲ್ಲಿ ನುಚ್ಚುಕಲ್ಲು ಇದೆ. ಗುಂಡಿಗಳಲ್ಲಿ ಮಳೆ ನೀರು ಆವರಿಸಿದೆ. ಈ ನಿಲ್ದಾಣದಿಂದ ಹೊರ ಜಿಲ್ಲೆ ಹೊರ ರಾಜ್ಯಗಳಿಗೆ ಬಸ್‌ಗಳು ಪ್ರತಿನಿತ್ಯ ಸಂಚರಿಸುತ್ತವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಕರು ವಿವಿಧ ಊರುಗಳಿಗೆ ಸಂಚರಿಸುತ್ತಾರೆ. ’ನಿಲ್ದಾಣದ ಆವರನದ ಮತ್ತೊಂದು ಭಾಗದಲ್ಲಿ ಕ್ರಾಂಕ್ರಿಟ್‌ ಹಾಸು ನಿರ್ಮಿಸಲಾಗಿದೆ. ಡಾಂಬರು ಕಿತ್ತು ಗುಂಡಿಗಳಾಗಿರುವ ಭಾಗದಲ್ಲೂ ಕಾಂಕ್ರಿಟ್‌ ಹಾಸು ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎಂದು ಎನ್‌ಡಬ್ಲುಕೆಆರ್‌ಟಿಸಿ ಬಸ್‌ ಚಾಲಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ’ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಸಂಬಂಧಪಟ್ಟವರು ಗಮನ ಹರಿಸಬೇಕು. ನಿಲ್ದಾಣದೊಳಗೆ ನಾಯಿಗಳು ಓಡಾಡವುದನ್ನು ತಪ್ಪಿಸಬೇಕು’ ಎಂದು ವಿದ್ಯಾರ್ಥಿನಿ ಕಾವ್ಯಾ ಶೆಟ್ಟಣ್ಣನವರ ಹೇಳುತ್ತಾರೆ. ನಿಲ್ದಾಣ ಆವರಣದಲ್ಲಿ ವಾಹನ ನಿಲುಗಡೆ ನಿರ್ಬಂಧ ಫಲಕದ ಬಳಿಯೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಾರೆ. ನಿಲ್ದಾಣ ಅವರಣದ ಹಲವೆಡೆ ದಿಚಕ್ರ ವಾಹನಗಳನ್ನು ನಿಂತಿರುತ್ತವೆ. ಕಟ್ಟಡದ ಮುಂಭಾಗದಲ್ಲಿ ದ್ವಿಚಕ್ರವಾಹನ ನಿಲುಗಡೆ ಭಾಗದಲ್ಲಿ ಸೂರಿನ ವ್ಯವಸ್ಥೆ ಇಲ್ಲ. ವಾಹನಗಳು ಮಳೆ ಬಿಸಿಲಿನಲ್ಲೇ ನಿಲ್ಲುವ ಸ್ಥಿತಿ ಇದೆ. ನಿಲ್ದಾಣ ಆವರಣದ ಬದಿಯಲ್ಲಿ ಹಲವೆಡೆ ಕ‌ಸ ರಾಶಿ ಬಿದ್ದಿದೆ. ಕುಡಿಯುವ ನೀರಿನ ನಲ್ಲಿ ಇರುವ ತೊಟ್ಟಿ ಭಾಗದಲ್ಲಿ ಕಸ ಪ್ಲಾಸ್ಟಿಕ್‌ ಪೊಟ್ಟಣ ಬಿದ್ದಿವೆ. ನಲ್ಲಿಯಲ್ಲಿ ನೀರು ಬರುತ್ತಿಲ್ಲ. ’ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಆಸನಗಳನ್ನು ಹೆಚ್ಚು ಅಳವಡಿಸಬೇಕು. ಆವರಣದಲ್ಲಿ ಎಲ್ಲೆಂದರಲ್ಲಿ ದ್ವಿಚಕ್ರವಾಹನ ನಿಲ್ಲಿಸುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಪ್ರಯಾಣಿಕ ರವಿಚಂದ್ರ ಮುಮ್ಮಿಗಟ್ಟಿ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT