ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಂಬಳ: ಬಸ್‌ ಸೌಕರ್ಯವಿಲ್ಲದ ನಾರಾಯಣಪೂರ ಗ್ರಾಮ

ನಿತ್ಯವೂ ಗ್ರಾಮಸ್ಥರಿಂದ ಮೂರು ಕಿ.ಮೀ ಕಾಲ್ನಡಿಗೆ
Published 23 ಜುಲೈ 2024, 4:14 IST
Last Updated 23 ಜುಲೈ 2024, 4:14 IST
ಅಕ್ಷರ ಗಾತ್ರ

ಡಂಬಳ: ಹೋಬಳಿ ವ್ಯಾಪ್ತಿಯ ನಾರಾಯಣಪೂರ ಗ್ರಾಮವು ಮೂಲಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೆ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿತ್ಯ ಮೂರು ಕಿ.ಮೀ ಕಾಲ್ನಡಿಗೆ ನಡೆದುಕೊಂಡು ಹೋಗುವ ಅನಿವಾರ್ಯತೆ ಇದೆ.

ನಾರಾಯಣಪೂರ, ಡಂಬಳ ಮತ್ತು ಹಿರೇವಡ್ಡಟ್ಟಿ ಗ್ರಾಮದ ಮುಖ್ಯರಸ್ತೆಯಿಂದ 3 ಕಿಮೀ ದೂರದಲ್ಲಿದೆ. ಯಾವುದೇ ಸೌಲಭ್ಯ ಬೇಕಾದರೂ 7 ಕಿ.ಮೀ ದೂರದ ಡಂಬಳ ಗ್ರಾಮಕ್ಕೆ ಬರಬೇಕು. ಬಸ್ ಸೌಲಭ್ಯ ಕೊರತೆಯ ಪರಿಣಾಮ ಕಾಲ್ನಡಿಗೆಯೇ ಅನಿವಾರ್ಯವಾಗಿದೆ. ಪ್ರಾಥಮಿಕ ಆರೋಗ್ಯ, ಸಂತೆ, ಗಿರಣಿ ಸೇರಿದಂತೆ ಅಗತ್ಯ ಪ್ರಾಥಮಿಕ ಸೌಲಭ್ಯಗಳು ಗ್ರಾಮದಲ್ಲಿ ಇಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ನಿತ್ಯ ತಮ್ಮ ಬದುಕಿನ ನಿರ್ವಹಣೆಗಾಗಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.

‘ಯಾರಿಗಾದರು ಗ್ರಾಮದಲ್ಲಿ ತುರ್ತಾಗಿ ಆರೋಗ್ಯ ಸಮಸ್ಯೆ ಎದುರಾದರೆ ಹೇಳ ತೀರದು ಸಾರಿಗೆ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಶಾಶ್ವತ ಪರಿಹಾರ ನೀಡಬೇಕು’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಮಲ್ಲಪ್ಪ ಯಳವತ್ತಿ.

ಗ್ರಾಮದಲ್ಲಿ ಅಂದಾಜು 80ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು ಅಂದಾಜು 700 ಜನಸಂಖ್ಯೆಯನ್ನು ಹೊಂದಿದೆ. ಬಹುತೇಕ ಜನ ಕೃಷಿ ಚಟುವಟಿಕೆಯನ್ನು ಅವಲಂಭಿಸಿದ್ದಾರೆ. ಬೆಳಿಗ್ಗೆ 10.30ಕ್ಕೆ ಮುಂಡರಗಿ ಘಟಕದಿಂದ ಬಸ್‌ ಹಿರೇವಡ್ಡಟ್ಟಿ ಮಾರ್ಗವಾಗಿ ಡಂಬಳ ಗ್ರಾಮಕ್ಕೆ ಹೋಗುತ್ತದೆ. ಗದಗ ನಗರದಿಂದ ಹಿರೇವಡ್ಡಟ್ಟಿ ಗ್ರಾಮಕ್ಕೆ ಬೆಳಗ್ಗೆ 9.15ಕ್ಕೆ ಸಾರಿಗೆ ಬಸ್ ಬರುತ್ತದೆ. ಸಂಜೆ 5.30ಕ್ಕೆ ಗದಗ ಮತ್ತು ಮುಂಡರಗಿ ಭಾಗದಿಂದಲು ಎರಡು ಬಸ್ ಆಗಮಿಸುತ್ತವೆ.

‘ಎಲ್ಲಾ ಸಾರಿಗೆ ಬಸ್‌ಗಳು ನಮ್ಮ ಗ್ರಾಮದ ಒಳಗೆ ಪ್ರವೇಶ ಮಾಡದೇ ಹಿರೇವಡ್ಡಟ್ಟಿ ಮತ್ತು ಡಂಬಳ ಮಾರ್ಗದ ರಸ್ತೆಯಲ್ಲೆ ನಿತ್ಯ ಸಂಚಾರ ಮಾಡುವುದರಿಂದ ನಮಗೆ ನಿತ್ಯ ಕಾಲ್ನಡಿಗೆಯಲ್ಲಿ ಹೋಗುವುದು ತಪ್ಪಿಲ್ಲ. ಹಿರೇವಡ್ಡಟ್ಟಿ ಗ್ರಾಮದಿಂದ ನಮ್ಮ ಗ್ರಾಮಕ್ಕೆ ಒಳರಸ್ತೆ ಉತ್ತಮವಾಗಿ ಇದ್ದರೂ ಬಸ್ ನಮ್ಮ ಗ್ರಾಮಕ್ಕೆ ಬರುತ್ತಿಲ್ಲ. ಇದರಿಂದ ತುಂಬಾ ತೊಂದರೆಯಾಗಿದೆ. ಶಾಲಾ ಕಾಲೇಜಿಗೆ ಹೋಗದಂತೆ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಳಲು ತೊಡಿಕೊಳ್ಳುತ್ತಾರೆ ಗದಗ ನಗರದ ತೋಂಟದಾರ್ಯ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಅನ್ನಪೂರ್ಣ ಯಳವತ್ತಿ.

ನಿತ್ಯ ಡಂಬಳ ಗ್ರಾಮದ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯ ಶಾಲಾ ಕಾಲೇಜುಗಳಿಗೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗಿ ಬರುತ್ತಾರೆ. ಮಳೆಗಾಲದಲ್ಲಿಯೂ ನಡೆದುಕೊಂಡು ಹೋಗಬೇಕು. ಸಾರಿಗೆ ತೊಂದರೆಯಿಂದ ಬಹುತೇಕ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರಾರ್ಥನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಿತ್ಯ ತಡವಾಗಿ ಶಾಲೆಗೆ ಹೋಗುವುದರಿಂದ ಶಿಕ್ಷಕರಿಂದಗೂ ಬೈಯಿಸಿಕೊಳ್ಳಬೇಕು. ಶಾಲೆಯಲ್ಲಿ ಶಿಕ್ಷಣ ಕಲಿಯುವುದಕ್ಕಿಂತ ಬಸ್ ಬರುವಿಕೆಗಾಗಿ ಹೆಚ್ಚಿನ ಸಮಯ ನೀಡುವ ಸ್ಥಿತಿ ಇದೆ. ನಮ್ಮ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗಾಗಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದ ವತಿಯಿಂದ ಒಂದು ಶಾಲಾ ಬಸ್ ನೀಡಿದರೆ ನಮ್ಮ ಗ್ರಾಮದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಡಂಬಳದ ಜಗದ್ಗುರು ತೋಂಟದಾರ್ಯ ಪ್ರೌಢಶಾಲೆಯಲ್ಲಿ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿನಿ ರಾಜೇಶ್ವರಿ ಗುಡ್ಲಾನೂರ ಲಕ್ಷ್ಮೀ ಪಾಳೇಗಾರ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಮುಂಡರಗಿ ಸಾರಿಗೆ ಘಟಕದ ವ್ಯವಸ್ಥಾಪಕ ಶೇಖರ ನಾಯಕ ಅವರು, ‘ನಾರಾಯಣಪೂರ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಸಾರಿಗೆ ಬಸ್ ತೊಂದರೆಯಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ.  ಎಂದು ಭರವಸೆ ನೀಡಿದರು.

ಡಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಯಣಪೂರ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ  ಡಂಬಳ ಹಿರೇವಡ್ಡಟ್ಟಿ  ಮುಖ್ಯ ರಸ್ತೆಯ ಬಸ್ ತಂಗುದಾಣಕ್ಕೆ  ನಡೆದು ಹೋಗುತ್ತಿರುವ ವಿದ್ಯಾರ್ಥಿಗಳು.
ಡಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಯಣಪೂರ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ  ಡಂಬಳ ಹಿರೇವಡ್ಡಟ್ಟಿ  ಮುಖ್ಯ ರಸ್ತೆಯ ಬಸ್ ತಂಗುದಾಣಕ್ಕೆ  ನಡೆದು ಹೋಗುತ್ತಿರುವ ವಿದ್ಯಾರ್ಥಿಗಳು.

ಹಿರೇವಡ್ಡಟ್ಟಿ ಗ್ರಾಮದಿಂದ ನಾರಾಯಣಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಸುವ ಒಳರಸ್ತೆಯಲ್ಲೆ ಬಸ್ ಸಂಚಾರ ಮಾಡುವಂತೆ ಶೀಘ್ರದಲ್ಲೆ ಕ್ರಮ ತಗೆದುಕೊಳ್ಳುತ್ತೇನೆ

-ಶೇಖರ ನಾಯಕ ಮುಂಡರಗಿ ಸಾರಿಗೆ ಘಟಕದ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT