ಶುಕ್ರವಾರ, 6 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ | ನೂತನ ರೈಲು ಮಾರ್ಗ ಮಂಜೂರಾತಿಗೆ ಆಗ್ರಹ

Published 20 ಜುಲೈ 2024, 15:40 IST
Last Updated 20 ಜುಲೈ 2024, 15:40 IST
ಅಕ್ಷರ ಗಾತ್ರ

ಮುಂಡರಗಿ: ಗದಗ, ಮುಂಡರಗಿ, ಹೂವಿನಹಡಗಲಿ ಮಾರ್ಗವಾಗಿ ಹರಪನಹಳ್ಳಿಗೆ ನೂತನ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ದೇಸಾಯಿ ಅವರ ನೇತೃತ್ವದಲ್ಲಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಬಳಿ ಶನಿವಾರ ದೆಹಲಿ ಚಲೋ ಹೋರಾಟದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ಮುಂಡರಗಿ ಮಾರ್ಗವಾಗಿ ಹರಪನಹಳ್ಳಿಗೆ ನೂತನ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ಹಲವಾರು ವರ್ಷಗಳಿಂದ ವಿವಿಧ ಸಂಘಟನೆಗಳ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮುಂಡರಗಿ, ಹೂವಿನಹಡಗಲಿ ಮೊದಲಾದವುಗಳು ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಾಗಿದ್ದು, ಈ ಭಾಗಗಳಲ್ಲಿ ರೈಲು ಸಂಚಾರ ಆರಂಭವಾದರೆ ತುಂಬಾ ಅನುಕೂಲವಾಗುತ್ತದೆ. ಬಡವರು, ರೈತರು, ಸಣ್ಣ ವ್ಯಾಪಾರಸ್ಥರು, ಉದ್ಯಮಿಗಳು, ವಿದ್ಯಾರ್ಥಿಗಳು, ನೌಕರರಿಗೆ ನೂತನ ರೈಲು ಮಾರ್ಗ ತುಂಬಾ ಉಪಯೋಗವಾಗಲಿದೆ. ಸರ್ಕಾರ ತಕ್ಷಣ ಈ ಭಾಗಕ್ಕೆ ನೂತನ ರೈಲು ಮಾರ್ಗ ಮಂಜೂರು ಮಾಡಬೇಕು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಒತ್ತಾಯಿಸಲಾಗುವುದು’ ಎಂದು ಭರವಸೆ ನೀಡಿದರು.

ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ದೇಸಾಯಿ ಮಾತನಾಡಿ, ‘ನೂತನ ರೈಲು ಮಾರ್ಗಕ್ಕೆ ಆಗ್ರಹಿಸಿ ಈಗಾಗಲೇ ಹಲವಾರು ಬಾರಿ ಹೋರಾಟ ಮಾಡಲಾಗಿದೆ. ಈಗ ಕೈಗೊಂಡಿರುವ ದೆಹಲಿ ಚಲೋ ಹೋರಾಟಕ್ಕೆ ಪಟ್ಟಣದ ಬೀದಿ ವ್ಯಾಪಾರಸ್ಥರ ಸಂಘ ಹಾಗೂ ಮತ್ತಿತರ ಸಂಘಗಳು ಬೆಂಬಲ ಸೂಚಿಸಿದ್ದು, ಸದ್ಯದಲ್ಲಿಯೇ ಹೊರಾಟದ ರೂಪರೇಷೆಗಳನ್ನು ತಯಾರಿಸಲಾಗುವುದು’ ಎಂದು ತಿಳಿಸಿದರು.

ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಮಹ್ಮದರಫೀ ಹವಾಲ್ದಾರ, ಸಂತೋಷ ಹಿರೇಮನಿ ಮಾತನಾಡಿದರು. ಪುರಸಭೆ ಸದಸ್ಯರಾದ ಶಿವಪ್ಪ ಚಿಕ್ಕಣ್ಣವರ, ರಾಜೇಸಾಬ್ ಬೆಟಗೇರಿ, ಮುಖಂಡರಾದ ಕೊಟ್ರಗೌಡ ಪಾಟೀಲ, ಧ್ರುವಕುಮಾರ ಹೂಗಾರ, ಶಂಕರ ಉಳ್ಳಾಗಡ್ಡಿ, ದಾವಲಸಾಬ ಕಾತರಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT